ವೇಯ್ಟ್​​ ಲಿಫ್ಟಿಂಗ್​​ಗೂ ಜೈ, ಬುಲೆಟ್ ಓಡಿಸೋಕು ಸೈ - ಯಾವ ಮಿಸ್ ಇಂಡಿಯಾಗೂ ಕಡಿಮೆ ಇಲ್ಲ ಈ ಐರನ್ ವುಮೆನ್

ಟೀಮ್​ ವೈ.ಎಸ್​. ಕನ್ನಡ

ವೇಯ್ಟ್​​ ಲಿಫ್ಟಿಂಗ್​​ಗೂ ಜೈ, ಬುಲೆಟ್ ಓಡಿಸೋಕು ಸೈ - ಯಾವ ಮಿಸ್ ಇಂಡಿಯಾಗೂ ಕಡಿಮೆ ಇಲ್ಲ ಈ ಐರನ್ ವುಮೆನ್

Saturday May 28, 2016,

4 min Read

ಅದೊಂದು ಕಾಲದಲ್ಲಿ ಆಕೆಯನ್ನು ನೋಡಿ ಜನ ನಕ್ಕಿದ್ದುಂಟು. ಕುರೂಪಿ ದೇಹ ನೋಡಿ ಸ್ನೇಹಿತರು ಗೇಲಿ ಮಾಡಿದ್ದುಂಟು. ಆದ್ರೆ ಈಗ ಕಾಲ ಬದಲಾಗಿದೆ. ಆಕೆಯ ಸೌಂದರ್ಯದ ಜೊತೆಗೆ ಸಾಧನೆಯನ್ನು ಹಾಡಿ ಹೊಗಳ್ತಿದ್ದಾರೆ ಅದೇ ಜನ. ಬೇಡ ಬೇಡ ಎಂದ ಕ್ಷೇತ್ರವನ್ನು ಆಯ್ದುಕೊಂಡು ಛಲ ಬಿಡದೆ ಪ್ರಯತ್ನ ಮಾಡಿ ವೈಟ್ ಲಿಫ್ಟಿಂಗ್ ನಲ್ಲಿ ಪುರುಷರ ದಾಖಲೆಗಳನ್ನೂ ಮುರಿದ ಈ ಐರನ್ ಮಹಿಳೆ ಯಾಸ್ಮಿನ್ ಮನಕ್ ಯುವರ್ ಸ್ಟೋರಿಯ ಇಂದಿನ ಪ್ರೇರಣೆ.

image


ಕಷ್ಟದಲ್ಲಿ ಕಳೆಯಿತು ಬಾಲ್ಯ

36 ವರ್ಷದ ಯಾಸ್ಮಿನ್ ಮನಕ್ ಈಗ ಬಹು ಚರ್ಚಿತ ಮಹಿಳೆಯರಲ್ಲಿ ಒಬ್ಬರು. ಆದ್ರೆ ಅವರ ಬಾಲ್ಯ ಮಾತ್ರ ಸುಂದರವಾಗಿರಲಿಲ್ಲ.ಅನೇಕ ಕಷ್ಟಗಳನ್ನು ಯಾಸ್ಮಿನ್ ಎದುರಿಸಿದ್ರು. ಯಾಸ್ಮಿನ್ ಎರಡು ವರ್ಷದವರಿದ್ದಾಗ ಅವರ ತಂದೆ-ತಾಯಿ ವಿಚ್ಛೇದನ ಪಡೆದು ಬೇರೆಯಾದ್ರು. ಹಾಗಾಗಿ ಅವರನ್ನು ಬೆಳೆಸುವ ಜವಾಬ್ದಾರಿ ಹೊತ್ತವರು ಅಜ್ಜ-ಅಜ್ಜಿ. ಗುರ್ಗಾಂವ್ ನ ರೋಟರಿ ಪಬ್ಲಿಕ್ ಸ್ಕೂಲ್ ಪಿಯುಸಿ ಮುಗಿಸಿದ ಯಾಸ್ಮಿನ್,ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ಣಗೊಳಿಸಿದರು. ಇದರ ಬಗ್ಗೆ ಮಾತನಾಡಿದ ಯಾಸ್ಮಿನ್ ಹೀಗೆ ಹೇಳ್ತಾರೆ.

``ನಾನು ಏಳನೇ ತರಗತಿಯಲ್ಲಿರುವಾಗ ನನಗೆ ಟೈಪೈಡ್ ಬಂದಿತ್ತು. ಇದರ ಬಗ್ಗೆ ವೈದ್ಯರಿಗೆ ತಡವಾಗಿ ತಿಳಿದಿದ್ದರಿಂದ ವೈದ್ಯರು ಸ್ಟೆರಾಯ್ಡ್ ನೀಡಿದ್ರು. ಇದರಿಂದಾಗಿ ನನ್ನ ತೂಕ ಬಹಳಷ್ಟು ಏರಿಬಿಡ್ತು. ದೇಹ ಕೂಡ ಆಕಾರ ಕಳೆದುಕೊಂಡ್ತು. ಮುಖದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದವು. ನನ್ನ ಸ್ನೇಹಿತರು ಹಾಗೂ ಸಂಬಂಧಿಕರು ನನ್ನನ್ನು ಗೇಲಿ ಮಾಡ್ತಾ ಇದ್ದರು.ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳಲು ನನಗೆ ಕಷ್ಟವಾಗ್ತಾ ಇತ್ತು’’

17ನೇ ವರ್ಷದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತ್ರ ತಮ್ಮ ದೇಹಕ್ಕೊಂದು ಸುಂದರ ಆಕಾರ ನೀಡುವ ನಿರ್ಧಾರಕ್ಕೆ ಬಂದರು ಯಾಸ್ಮಿನ್. ಆ ಸಮಯದಲ್ಲಿ ಜಿಮ್ ಇಷ್ಟು ಫೇಮಸ್ ಆಗಿರಲಿಲ್ಲ. ಯಾಸ್ಮಿನ್ ಮನೆ ಬಳಿಯಲ್ಲಿಯೇ ಒಂದು ಜಿಮ್ ಇತ್ತು. ಅಲ್ಲಿಗೆ ಹೋಗಲು ಪ್ರಾರಂಭಿಸಿದರು ಯಾಸ್ಮಿನ್. ಹೊಟ್ಟೆಗಾಗಿ ಗುರ್ಗಾಂವ್ ನಲ್ಲಿರುವ ಶಿಶುವಿಹಾರದಲ್ಲಿ ಶಿಕ್ಷಕಿಯಾಗಿ ಕೆಲಸ ಶುರುಮಾಡಿದರು. ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದ ಯಾಸ್ಮಿನ್ ಯಾರಿಗೂ ಹೊಣೆಯಾಗಲು ಬಯಸುತ್ತಿರಲಿಲ್ಲ.

image


ಬೆಳಗ್ಗೆ ಹಾಗೂ ಸಂಜೆ ಜಿಮ್ ಗೆ ಹೋಗ್ತಾ ಇದ್ದ ಯಾಸ್ಮಿನ್ ಉಳಿದ ಸಮಯದಲ್ಲಿ ಶಿಶುವಿಹಾರಕ್ಕೆ ಹೋಗ್ತಾ ಇದ್ದರು. ದಿನ ಕಳೆದಂತೆ ಉಳಿದವರಿಗಿಂತ ಹೆಚ್ಚು ವ್ಯಾಯಾಮ ಮಾಡಲು ಶುರುಮಾಡಿದರು ಯಾಸ್ಮಿನ್. ಇದನ್ನು ನೋಡಿದ ಜಿಮ್ ತರಬೇತುದಾರರು, ಉಳಿದವರಿಗಿಂತ ಯಾಸ್ಮಿನ್ ಗೆ ಹೆಚ್ಚಿನ ಶಕ್ತಿ ಇದೆ.ಹಾಗಾಗಿ ಉಳಿದವರಿಗೆ ತರಬೇತಿ ನೀಡುವಂತೆ ಯಾಸ್ಮಿನ್ ಗೆ ಸಲಹೆ ನೀಡಿದ್ರು. ಹೀಗೆ ಶುರುವಾಯ್ತು ಯಾಸ್ಮಿನ್ ಜಿಮ್ ತರಬೇತಿ ವೃತ್ತಿ.

``ವರ್ಕ್ ಔಟ್ ಮಾಡುವ ಕೆಲವೊಂದು ಉಪಕರಣಗಳನ್ನು ನಾನು ಖರೀದಿಸಿದೆ. ಅದನ್ನು ಮೊದಲು ನಾನು ಬಳಸಿ,ಕಲಿಯುತ್ತಿದ್ದೆ. ನಂತ್ರ ಜಿಮ್ ನಲ್ಲಿರುವ ನನ್ನ ಗುಂಪಿನವರಿಗೆ ತರಬೇತಿ ನೀಡುತ್ತಿದ್ದೆ’’ 
          - ಯಾಸ್ಮಿನ್

ಈ ನಡುವೆ ಗುರ್ಗಾಂವ್ ನಲ್ಲಿ ಎನರ್ಜಿಕ್ ಪ್ಲಾಜಾ ಹೆಸರಿನ ದೊಡ್ಡ ಜಿಮ್ ಆರಂಭವಾಯ್ತು. ಅಲ್ಲಿ ಅವರ ಸ್ನೇಹಿತರೊಬ್ಬರು ಕೆಲಸ ಮಾಡ್ತಾ ಇದ್ದರು. ಅವರ ನೆರವಿನಿಂದ ಯಾಸ್ಮಿನ್ ಕೂಡ ಅಲ್ಲಿ ಕೆಲಸ ಗಿಟ್ಟಿಸಿಕೊಂಡರು. ಜಿಮ್ ನಲ್ಲಿ ಒಂದೊಂದು ಗುಂಪಿಗೆ ತರಬೇತಿ ನೀಡಲು ಶುರುಮಾಡಿದರು. ಶಿಶುವಿಹಾರದ ಕೆಲಸ ಬಿಟ್ಟು,ಫುಲ್ ಟೈಂ ಜಿಮ್ ನಲ್ಲಿ ಕೆಲಸ ಮಾಡಲು ಆರಂಭಿಸಿದ್ರು. ದಿನಕಳೆದಂತೆ ಯಾಸ್ಮಿನ್ ಅನುಭವಿಯಾಗ್ತಾ ಹೋದ್ರು. ಹೊಸದನ್ನು ಮಾಡಬೇಕೆಂಬ ನಿರ್ಧಾರಕ್ಕೆ ಬಂದ ಯಾಸ್ಮಿನ್ 2003ರಲ್ಲಿ sculpt ಹೆಸರಿನ ಏರೋಬಿಕ್ ಸ್ಟುಡಿಯೋ ತೆರೆದ್ರು.

ಏರೋಬಿಕ್ ಸ್ಟುಡಿಯೋ ಶುಭಾರಂಭಗೊಂಡಿತು. ಅವರ ಕ್ಲೈಂಟ್ ಗಳೆಲ್ಲ ಅಲ್ಲಿಗೆ ಬರಲಾರಂಭಿಸಿದ್ರು. 2007ರಲ್ಲಿ ಇದನ್ನು ವಿಸ್ತಾರಗೊಳಿಸಿದ ಯಾಸ್ಮಿನ್ ಅಲ್ಲಿಯೇ ಜಿಮ್ ಕೂಡ ಶುರುಮಾಡಿದ್ರು. ಯಾಸ್ಮಿನ್ ಜಿಮ್ ನಲ್ಲಿ ಪ್ರತಿ ತಿಂಗಳು ಮುನ್ನೂರಕ್ಕೂ ಹೆಚ್ಚು ಹುಡುಗ-ಹುಡುಗಿಯರಿಗೆ ಟ್ರೈನಿಂಗ್ ಪಡೆಯುತ್ತಿದ್ದಾರೆ. ಕೆಲವರಿಗೆ ವೈಯಕ್ತಿಕ ಟ್ರೈನಿಂಗ್ ನೀಡುವುದಲ್ಲದೇ,ಆನ್ಲೈನ್ ಗ್ರಾಹಕರನ್ನು ಹೊಂದಿದ್ದಾರೆ ಯಾಸ್ಮಿನ್. ಆನ್ಲೈನ್ ಮೂಲಕ ಗ್ರಾಹಕರಿಗೆ ವ್ಯಾಯಾಮದ ತರಬೇತಿ ನೀಡುತ್ತಾರೆ.

image


ತಮ್ಮ ದೇಹಕ್ಕೊಂದು ಸುಂದರ ಆಕಾರ ನೀಡುವ ಉದ್ದೇಶದಿಂದ ಯಾಸ್ಮಿನ್ ಜಿಮ್ ಗೆ ಹೋಗಿದ್ದರು. ಆದ್ರೆ ಕೆಲ ವರ್ಷಗಳವರೆಗೆ ಗ್ರಾಹಕರಿಗೆ ಸಾಮಾನ್ಯ ತರಬೇತಿ ನೀಡಿದ ಯಾಸ್ಮಿನ್ ತೆಳ್ಳಗಾಗಿದ್ದರು. ಸ್ಲಿಮ್ ಆಗಿದ್ದ ಅವರ ದೇಹಕ್ಕೊಂದು ಸುಂದರ ಆಕಾರವಿರಲಿಲ್ಲ. ಹಾಗಾಗಿ 2013ರಲ್ಲಿ ಅವರು ಬಾಡಿ ಬಿಲ್ಡಿಂಗ್, ಪವರ್ ಲಿಫ್ಟಿಂಗ್ ಮತ್ತು ವೇಟ್ ಲಿಫ್ಟಿಂಗ್ ಕ್ಷೇತ್ರಕ್ಕೆ ಧುಮುಕಲು ನಿರ್ಧರಿಸಿದ್ರು. ಆರು ದಿನಗಳ ಕಾಲ ಇವುಗಳ ಬಗ್ಗೆ ಬೇಸಿಕ್ ಟ್ರೈನಿಂಗ್ ಪಡೆದ ನಂತ್ರ ಬಾಡಿ ಬಿಲ್ಡರ್ ಆಗುವ ಪಣ ತೊಟ್ಟರು.

ಓಪನ್ ಪವರ್ ಲಿಪ್ಟಿಂಗ್ ನಲ್ಲಿ ಯಾಸ್ಮಿನ್ ಉತ್ತಮ ಪ್ರದರ್ಶನ ತೋರಿದ್ದರಂತೆ. ಪವರ್ ಲಿಪ್ಟಿಂಗ್ ಹಾಗೂ ಬಾಡಿ ಬಿಲ್ಡಿಂಗ್ ಎರಡೂ ಬೇರೆ ಬೇರೆ. ಬಾಡಿ ಬಿಲ್ಡಿಂಗ್ ನಲ್ಲಿ ದೇಹದ ಆಕಾರವನ್ನು ನೋಡಲಾಗುತ್ತದೆ. ಪವರ್ ಲಿಫ್ಟಿಂಗ್ ನಲ್ಲಿ ಎಷ್ಟು ತೂಕವನ್ನು ಎತ್ತಲಾಯ್ತು ಎಂಬುದು ಮಹತ್ವ ಪಡೆಯುತ್ತದೆ. ಇಷ್ಟೇ ಅಲ್ಲ ಪವರ್ ಲಿಫ್ಟಿಂಗ್ ಮಾಡುವವರು ದಪ್ಪವಾಗ್ತಾರೆ ಎನ್ನುತ್ತಾರೆ ಯಾಸ್ಮಿನ್.

`` ನಾನು 66 ಕೆಜಿ ತೂಕವಿದ್ದರೂ ನನ್ನ ದೇಹ ಆಕಾರ ಕಳೆದುಕೊಂಡಿಲ್ಲ. ಹಾಗೆ ಬಾರೀ ಗಾತ್ರದ ತೂಕವನ್ನು ನಾನು ಎತ್ತುತ್ತೇನೆ. ಇದು ನನ್ನ ವಿಶೇಷತೆ. ಹಾಗಾಗಿಯೇ ನಾನು ಓಪನ್ ಪವರ್ ಲಿಪ್ಟಿಂಗ್ ನಲ್ಲಿ 150 ಕೆಜಿ ಎತ್ತಿದೆ. ಆದ್ರೆ 180 ಕೆಜಿ ಎತ್ತಿದವರ ತೂಕ 95 ಕೆಜಿಯಾಗಿತ್ತು.’’

ಕಳೆದ ವರ್ಷ ಮುಂಬೈನಲ್ಲಿ ಆಯೋಜಿಸಿದ್ದ ಫಿಟ್ ಫ್ಯಾಕ್ಟರ್ ದೇಹದಾಢ್ಯ ಸ್ಪರ್ಧೆಯಲ್ಲಿ ಯಾಸ್ಮಿನ್ ಪಾಲ್ಗೊಂಡಿದ್ದರು. ಇದರಲ್ಲಿ ಯಾಸ್ಮಿನ್ ಫಸ್ಟ್ ರನ್ನರಪ್ ಆಗಿ ಹೊರಹೊಮ್ಮಿದ್ದರು. ಆದ್ರೆ ಈ ವರ್ಷ ಮಾರ್ಚ್ ನಲ್ಲಿ ಎರಡು ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಇದರಲ್ಲಿ ಎರಡು ಹಂತಗಳಿರುತ್ತವೆ. ಮೊದಲನೆಯ ಹಂತದಲ್ಲಿ ಮಹಿಳೆಯ ಮಸಲ್ ಜೊತೆ ದೇಹದ ಆಕಾರವನ್ನು ನೋಡಲಾಗುತ್ತದೆ. ಎರಡನೇ ಕೆಟಗರಿಯಲ್ಲಿ ಮಹಿಳೆಯ ಫಿಟ್ನೆಸ್ ನೋಡಲಾಗುತ್ತದೆ. ಈ ಸ್ಪರ್ಧೆಯಲ್ಲಿ 20 ಹುಡುಗಿಯರ ಜೊತೆ ಯಾಸ್ಮಿನ್ ಸೆಣೆಸಾಡಿದ್ದಾರೆ.

ಇದನ್ನು ಓದಿ: ಜೇಬಲ್ಲಿ ದುಡ್ಡಿಲ್ಲ...ಮೊಬೈಲ್​ನಲ್ಲಿ ಕರೆನ್ಸಿ ಇಲ್ಲ.. ಡೋಂಟ್​ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ

ಈ ಸ್ಪರ್ಧೆಯನ್ನು IIBF ಫೆಡರೇಷನ್ ನಡೆಸುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದ ನಂತ್ರ ಒಲಂಪಿಯಾಗೆ ಆಯ್ಕೆಯಾಗ್ತಾರೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಬಾಡಿ ಬಿಲ್ಡರ್ ಕನಸಾಗಿರುತ್ತದೆ. ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಯಾಸ್ಮಿನ್, ಅಕಾಲದಲ್ಲಿ ಪವರ್ ಲಿಫ್ಟಿಂಗ್ ಗೆ ಗಮನ ನೀಡ್ತಾರಂತೆ. ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ನಡೆಯುವ ಎರಡು ಸ್ಪರ್ಧೆ ಮೇಲೆ ಯಾಸ್ಮಿನ್ ಕಣ್ಣಿಟ್ಟಿದ್ದಾರೆ. ಆಗಸ್ಟ್ ನಲ್ಲಿ ಹಾಂಗ್ ಕಾಂಗ್ ನಲ್ಲಿ ಮೊದಲ ಸ್ಪರ್ಧೆ ನಡೆಯಲಿದ್ದು, ಸೆಪ್ಟೆಂಬರ್ ನಲ್ಲಿ ಭೂತಾನ್ ನಲ್ಲಿ ಎರಡನೇ ಸ್ಪರ್ಧೆ ನಡೆಯಲಿದೆ. ಎರಡೂ ಸ್ಪರ್ಧೆಯಲ್ಲಿಯೂ ಅವರು ದೇಶವನ್ನು ಪ್ರತಿನಿಧಿಸಲಿದ್ದಾರೆ.

image


ಈ ಹಂತಕ್ಕೆ ಬರಲು ಯಾಸ್ಮಿನ್ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ವೇಟ್ ಲಿಫ್ಟರ್ ಆಗಿ ವೃತ್ತಿ ಪ್ರಾರಂಭಿಸಲು ನಿರ್ಧರಿಸಿದಾಗ ಅನೇಕ ಇದನ್ನು ನಿರಾಕರಿಸಿದ್ದರಂತೆ. ಆದ್ರೆ ಮನಸ್ಸಿನ ಮಾತಿನಂತೆ ಮುನ್ನೆಡೆದ ಯಾಸ್ಮಿನ್ ಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸಹಾಯ ಮಾಡಿದ್ದಾರಂತೆ. ಗ್ಲ್ಯಾಡ್ರ್ಯಾಗ್ಸ್ ಮಿಸಸ್ ಇಂಡಿಯಾ -2005 ಕಿರೀಟವನ್ನೂ ಮುಡಿಗೇರಿಸಿಕೊಂಡಿದ್ದಾರೆ.

ವ್ಯಾಯಾಮದ ಜೊತೆಗೆ ಯಾಸ್ಮಿನ್ ಗೆ ಇನ್ನೊಂದು ಹವ್ಯಾಸ ಕೂಡ ಇದೆ. ಬೈಕ್ ಓಡಿಸೋದು. ಅವರ ಬೈಕ್ ಗ್ರೂಪ್ ಕೂಡ ಇದೆ. ಅವರು ಒಮ್ಮೆ ಗೋವಾಕ್ಕೆ ಹೋಗಿದ್ದರಂತೆ. ಅಲ್ಲಿ ಬೈಕ್ ಬಾಡಿಗೆಗೆ ಸಿಗುತ್ತದೆ. ಅದನ್ನು ನೋಡಿದ ಯಾಸ್ಮಿನ್ ಬೈಕ್ ಕಲಿಯುವ ಮನಸ್ಸು ಮಾಡಿದ್ದಾರೆ. ಸ್ನೇಹಿತರ ಸಹಾಯದಿಂದ ಬೈಕ್ ಕಲಿತಿದ್ದಾರೆ. ನಂತ್ರ ಗುರ್ಗಾಂವ್ ಗೆ ಬಂದು ಅಲ್ಲಿ ಬುಲೆಟ್ ಖರೀದಿಸಿದ್ರು. ಯಾಸ್ಮಿನ್ ಬೈಕ್ ಗ್ರೂಪ್ ನಲ್ಲಿ 20 ಜನರಿದ್ದಾರೆ.ಅದ್ರಲ್ಲಿ ಯಾಸ್ಮಿನ್ ಒಬ್ಬರೆ ಮಹಿಳೆ ಎನ್ನುವುದು ವಿಶೇಷ. ಈ ಗ್ರೂಪ್ ಆಗಾಗ ಟ್ರಿಪ್ ಗೆ ಹೋಗ್ತಾ ಇರುತ್ತಂತೆ. ಕೌಸನಿ, ಮನಾಲಿ, ಉದಯ್ಪುರ, ಜೈಪುರ, ಋಷಿಕೇಶ್ ಹೀಗೆ ಅನೇಕ ಕಡೆ ಬೈಕ್ ನಲ್ಲಿ ಸುತ್ತಿದ್ದಾರೆ ಯಾಸ್ಮಿನ್.

ಲೇಖಕಿ : ಗೀತಾ ಬಿಸ್ತ್​​

ಇದನ್ನು ಓದಿ:

1. ಪ್ರಾಣಿಗಳ ಧ್ವನಿ ಕೇಳಿಸುವ ಗೂಗಲ್..!

2. ಹಿರೇಗೌಡರ ಮಂಡ್ಯ ಟು ಇಂಟರ್​ನ್ಯಾಷನಲ್​ ಸ್ಟೋರಿ

3. ಇದು ಫೋಟೋಗಳು ಕಥೆ ಹೇಳೊ ಸಮಯ