ಕೆಲಸ ಹುಡುಕುವವರಿಗಾಗಿಯೇ ಇರೋದು "ಆಸಾನ್ ಜಾಬ್ಸ್"

ಟೀಮ್​​ ವೈ.ಎಸ್​​.

0

ನನ್ನ ಅಪ್ಪ-ಅಮ್ಮ ಬೇರೆ ಬೇರೆಯಾದಾಗ, ನಾನು ಅಮ್ಮನ ಪಾಲಾದೆ. ನನಗೆ ಮೂರು ವರ್ಷವಾಗಿದ್ದಾಗ ಅಪ್ಪ ತೀರಿಕೊಂಡರು. ಕೆಲವು ವರ್ಷಗಳ ಬಳಿಕ ಅಮ್ಮ ಕೂಡಾ ತೀರಿಕೊಂಡರು. ಅಂದಿನಿಂದ ನನ್ನ ಬದುಕಿಗೆ ಯಾವುದೇ ಶಾಶ್ವತ ನೆಲೆ ಇರಲಿಲ್ಲ. ಒಬ್ಬ ಗೆಳೆಯನ ಮನೆಯಿಂದ ಮತ್ತೊಬ್ಬನ ಮನೆಗೆ… ಹೀಗೆ ಅವರೆಲ್ಲರ ಪ್ರೀತಿಯಿಂದ ಕೆಲವರ್ಷಗಳ ಕಾಲ ನಾನು ಬದುಕಿದೆ.

ಕೆಲವೊಮ್ಮೆ ಮನೆಗೆ ತಡವಾಗಿ ಬಂದಾಗ, ತುಂಬಾ ಯೋಚನೆಯಾಗುತ್ತಿತ್ತು. ಶಾಶ್ವತ ನೆಲೆಯಿಲ್ಲದ ಬದುಕಿನಿಂದ ನಾನು ಹೈರಾಣಾಗಿ ಹೋಗಿದ್ದೆ. ಆದರೆ, ಬರುಬರುತ್ತಾ, ನಾನು ನನ್ನ ಸ್ವಂತ ಕಾಲ ಮೇಲೆ ನಿಂತುಕೊಳ್ಳಲು ಒಂದೇ ಹೆಜ್ಜೆ ಬಾಕಿ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳತೊಡಗಿದೆ.

ಹೀಗೆ ಬದುಕಿನ ಹೋರಾಟದ ಕಥೆಗಳನ್ನು ಹೇಳಿಕೊಳ್ಳುವ ಹಲವು ಮಂದಿ ಆಸಾನ್ ಜಾಬ್ಸ್​​ನ ಆಸಾನ್ ನಹೀಂ ಹೈ ಎಂಬ ಫೇಸ್‍ಬುಕ್ ಕ್ಯಾಂಪೇನ್‍ನಲ್ಲಿ ಕಾಣಸಿಗುತ್ತಾರೆ.

ಟೀಮ್​​ ಆಸಾನ್​​ ಜಾಬ್​​.ಕಾಮ್​​
ಟೀಮ್​​ ಆಸಾನ್​​ ಜಾಬ್​​.ಕಾಮ್​​

2014ರ ನವೆಂಬರ್‍ನಲ್ಲಿ ಐಐಟಿ-ಪೋವೈನ ಪದವೀಧರ ದಿನೇಶ್ ಗೋಯಲ್ ಅವರು ತಮ್ಮ ಕಾಲೇಜಿನ ಸಹಪಾಠಿಗಳಾದ ಗೌರವ್ ತೋಷ್ನಿವಾಲ್ ಮತ್ತು ಕುನಾಲ್ ಜಾಧವ್ ಜೊತೆಗೂಡಿ ಆಸಾನ್‍ಜಾಬ್ಸ್.ಕಾಂ ಸ್ಥಾಪಿಸಿದರು. ಈಗ ಮುಂಬೈ ಮೂಲದ ಈ ನವ್ಯೋದ್ಯಮ ಗ್ರೇ-ಕಾಲರ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕಿಕೊಡುತ್ತಿದೆ.

ಜನರನ್ನು ಸ್ವಂತ ಶಕ್ತಿಮೇಲೆ ನಿಲ್ಲುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ ಎನ್ನುತ್ತಾರೆ ಸಂಸ್ಥಾಪಕರು. ಅಲ್ಲದೆ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಪಡೆಯುವುದು ತಮ್ಮ ಗುರಿ ಎನ್ನುತ್ತಾರೆ. ನೇಮಕಾತಿ ವಲಯದಲ್ಲಿ ಎರಡಕ್ಕೂ ವಿಪುಲ ಅವಕಾಶ ಇದೆ. ಈ ಕ್ಷೇತ್ರ ವಿಶಾಲವಾಗಿದ್ದು, ಇನ್ನೂ ಸರಿಯಾಗಿ ಬಳಕೆಯಾಗಿಲ್ಲ ಎನ್ನುತ್ತಾರೆ ಸಂಸ್ಥಾಪಕರು.

ಈಗಾಗಲೇ ಈ ಕ್ಷೇತ್ರದಲ್ಲಿ ಬಾಬಾಜಾಬ್ಸ್ ಮತ್ತು ನ್ಯಾನೋಜಾಬ್ಸ್ ಇಂಡಿಯಾ ಸಂಸ್ಥೆಗಳು ಬೀಡುಬಿಟ್ಟಿದ್ದು, ಸುಮಾರು 1000ಕ್ಕೂ ಹೆಚ್ಚು ವಲಯಗಳಲ್ಲಿ ನೇಮಕಾತಿ ಮಾಡಿಕೊಡುತ್ತಿವೆ. ಡ್ರೈವರ್‍ಗಳಿಂದ ಮನೆಕೆಲಸದಾಳುಗಳವರೆಗೆ, ಗ್ರೇ-ಕಾಲರ್ ಕ್ಷೇತ್ರದ ನೇಮಕಾತಿ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿವೆ. ಬುಕ್‍ಮೈಬಾಯ್ ಮೊದಲಾದ ಸಹಸಂಸ್ಥೆಗಳ ಮೂಲಕ ಅಧಿಕೃತವಾಗಿ ಮನೆಗೆಲಸದವರ ಸೇವೆ ಕೊಡುತ್ತಿವೆ.

ಸಂಸ್ಥೆ ಸ್ಥಾಪನೆಯಾದ ಬಳಿಕ ಆಸಾನ್‍ಜಾಬ್ಸ್ ಸುಮಾರು 40ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಿದೆ. ಈ ಪೈಕಿ 220ಕ್ಕೂ ಹೆಚ್ಚು ಗ್ರಾಹಕರು ಸಕ್ರಿಯವಾಗಿದ್ದಾರೆ. ಗ್ರೋಫರ್ಸ್, ಯೂರೇಕಾ ಫೋರ್ಬ್ಸ್​​​, ಐಸಿಐಸಿಐ ಬ್ಯಾಂಕ್, ಹೋಲಾಶೆಫ್ ಅಂಡ್ ಪಾರ್ಸೆಲ್ಡ್ ಸಂಸ್ಥೆಗಳು ಇವರ ಗ್ರಾಹಕರಾಗಿವೆ. ಡೆಲಿವರಿ ಮತ್ತು ಕ್ಷೇತ್ರ ಮಾರಾಟಗಳಲ್ಲಿ ಅತೀ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರು. ಸಧ್ಯಕ್ಕೆ ಸಂಸ್ಥೆಯಲ್ಲಿ 75,000ಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರಿದ್ದು, ಪ್ರತಿದಿನವೂ ಇವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಸಂಸ್ಥೆಯು ಈಗ ಮುಂಬೈ, ನವಿಮುಂಬೈ, ಥಾಣೆಗಳಲ್ಲಿ ಸಕ್ರಿಯವಾಗಿದೆ. ಮುಂದಿನ ಮೂರು ತಿಂಗಳಲ್ಲಿ ದೆಹಲಿಯಲ್ಲೂ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ಸಂಸ್ಥೆ ಕಾರ್ಯಾರಂಭ ಮಾಡಲಿದೆ. ಇದಲ್ಲದೆ, ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ ಪ್ರತಿನಿಧಿಗಳನ್ನು ಹೊಂದಿದ್ದು, ಅವರು ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳ ಪಟ್ಟಿಯನ್ನು ಮಾಡಿ, ನೆರವಾಗುತ್ತಿದ್ದಾರೆ.

ಸಹಸಂಸ್ಥಾಪಕರಾದ ಗೌರವ್ ತೋಷ್ನಿವಾಲ್​​, ದಿನೇಶ್​ ಗೊಯೆಲ್​ ಮತ್ತು ಕುನಾಲ್​​ ಜಾಧವ್​​​​
ಸಹಸಂಸ್ಥಾಪಕರಾದ ಗೌರವ್ ತೋಷ್ನಿವಾಲ್​​, ದಿನೇಶ್​ ಗೊಯೆಲ್​ ಮತ್ತು ಕುನಾಲ್​​ ಜಾಧವ್​​​​

ಅಡೆತಡೆಗಳು

ಈ ಮಾರುಕಟ್ಟೆಯಲ್ಲಿ ಇನ್ನೂ ಅವಕಾಶಗಳಿದ್ದರೂ, ನವ್ಯೋದ್ಯಮ ಆರಂಭಿಸುವುದಕ್ಕೆ ಆಸಾನ್‍ಜಾಬ್ಸ್ ತುಂಬಾನೇ ಅಡೆತಡೆಗಳನ್ನು ಎದುರಿಸಿತು. ಮಾರುಕಟ್ಟೆ ಸಂಶೋಧನೆಗಳು ಮತ್ತು ಸಮೀಕ್ಷೆಗಳ ವೇಳೆ, ಸುಮಾರು 70% ಮಂದಿ ಆಂಡ್ರಾಯ್ಡ್ ಫೋನ್‍ಗಳನ್ನು ಬಳಕೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯಿತು. ಆದರೆ, ಅವರೆಲ್ಲರಿಗೂ ತಂತ್ರಜ್ಞಾನದ ಬಳಕೆ ಬಗ್ಗೆ ಮಾಹಿತಿ ಇರಲಿಲ್ಲ ಎನ್ನುವ ಸತ್ಯವೂ ತಿಳಿಯಿತು. ಹೀಗಾಗಿ, ತಾವು ಗುರಿಯಾಗಿಸಿಕೊಂಡಿರುವ, ಗ್ರಾಹಕರನ್ನು ಸೆಳೆಯುವುದೇ ದೊಡ್ಡ ಸವಾಲಾಗಿತ್ತು.

ಉದ್ಯೋಗದಾತರು ಆರಂಭದಲ್ಲಿ ಈ ವ್ಯವಸ್ಥೆ ಬಗ್ಗೆ ಅಷ್ಟೊಂದು ಭರವಸೆ ಇಟ್ಟಿರಲಿಲ್ಲ. ಕೆಲಸಕ್ಕಾಗಿ ಅರ್ಜಿ ಹಾಕುವ ಬಹುತೇಕ ಜನರು, ಸಂದರ್ಶನಕ್ಕೆ ಹಾಜರಾಗುತ್ತಿರಲಿಲ್ಲ. ಹೀಗಾಗಿ ಉದ್ಯೋಗದಾತರಲ್ಲಿ ನಂಬಿಕೆಯೇ ಇರಲಿಲ್ಲ.

ಬಂಡವಾಳ ಹೂಡಿಕೆ

ಜನವರಿಯಲ್ಲಿ ಆಸಾನ್‍ಜಾಬ್ಸ್.ಕಾಮ್ ಸುಮಾರು 1.5 ದಶಲಕ್ಷ ಡಾಲರ್ ಹೂಡಿಕೆಯನ್ನು ಪಡೆಯಿತು. ಐಡಿಜಿ ವೆಂಚರ್ಸ್ ಮತ್ತು ಇನ್‍ವೆಂಟಸ್ ಕ್ಯಾಪಿಟಲ್ ಪಾರ್ಟ್​ನರ್ಸ್​ ಹೂಡಿಕೆ ಮಾಡಿದ್ದವು.

ಹೂಡಿಕೆ ಬಳಿಕ, ಸಂಸ್ಥೆಯು ಮೂರು ಮುಖ್ಯ ಗುರಿಗಳನ್ನು ಈಡೇರಿಸಲು ಹೊರಟಿತು. ಮೊದಲನೆಯದ್ದು ತಂಡದ ಪುನರಚನೆ. ಏಪ್ರಿಲ್‍ನಲ್ಲಿ ಮುಗಿದ ಈ ಕಾರ್ಯದಿಂದಾಗಿ ಐಐಟಿಯ ಬಹುತೇಕ ತಜ್ಞರು ಸಂಸ್ಥೆ ಸೇರಿಕೊಂಡರು. ಸಧ್ಯಕ್ಕೆ ಆಸಾನ್‍ಜಾಬ್ಸ್.ಕಾಂನಲ್ಲಿ ಸುಮಾರು 130 ಉದ್ಯೋಗಿಗಳಿದ್ದಾರೆ. ಈ ಪೈಕಿ ತಾಂತ್ರಿಕ ಮತ್ತು ಡಿಸೈನ್ ತಂಡದಲ್ಲೇ 30 ಪರಿಣತರಿದ್ದಾರೆ.

ಎರಡನೆಯದ್ದು ಆರಂಭಿಕ ವಹಿವಾಟು ಪಡೆಯುವುದು ಮತ್ತು ಮೂರನೆಯದ್ದು ಉತ್ಪನ್ನದ ಅಭಿವೃದ್ಧಿ.

ಉತ್ಪನ್ನ ಮಾರ್ಗಸೂಚಿ

ಉತ್ಪನ್ನ ತಯಾರಿಸುವ ವೇಳೆ, ಆಸಾನ್‍ಜಾಬ್ಸ್ ತಂಡ, ಹಲವು ಬಳಕೆಗೆ ಅರ್ಹವಾಗುವಂತಹ ಪರೀಕ್ಷೆಗಳನ್ನು ನಡೆಸಿತು. ಸುಮಾರು ಮೂರೂವರೆ ತಿಂಗಳುಗಳ ಕಾಲ ಇದಕ್ಕಾಗಿ ಶ್ರಮಿಸಿತು. ಹೀಗಾಗಿ, ಉಳಿದ ಸಂಸ್ಥೆಗಳಿಗಿಂತ ಭಿನ್ನವಾಗಿ ನಾವು ಮಾರುಕಟ್ಟೆ ಪ್ರವೇಶಿಸಿದೆವು ಎನ್ನುತ್ತಾರೆ ದಿನೇಶ್.

“ಗ್ರಾಹಕರ ಬಳಕೆಯ ಅನುಭವದ ಆಧಾರದಲ್ಲಿ ನಮ್ಮ ಹೊಸ ಉತ್ಪನ್ನದ ಯಶಸ್ಸು ನಿಂತಿದೆ. ಉದ್ದೇಶಿತ ಗ್ರಾಹಕರನ್ನು ಗುರಿಯಾಗಿರಿಸಿ, ಅವರ ನಡೆತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸಾನ್‍ಜಾಬ್ಸ್ ಹುಟ್ಟುಹಾಕಲಾಗಿದೆ. ಅವರ ನಿತ್ಯದ ನಡತೆಯನ್ನು ಪ್ರತಿಬಿಂಬಿಸಿಯೇ ಉತ್ಪನ್ನ ತಯಾರಿಸಲಾಗಿದೆ. ತಾಂತ್ರಿಕತೆಯೇ ನಮ್ಮ ಪ್ರಧಾನ ಅಸ್ತ್ರ. ಆದರೆ, ನಮ್ಮ ಗಮನವೆಲ್ಲಾ ನಾವು ಹೇಗೆ ಮಾಹಿತಿಗಳನ್ನು ಕಳುಹಿಸುತ್ತೇವೆ ಎನ್ನುವುದರತ್ತಲೇ ಇದೆ.” ಎನ್ನುತ್ತಾರೆ ದಿನೇಶ್.

ವಿಭಿನ್ನವಾಗಿ ಇರಬೇಕು ಎನ್ನುವ ಉದ್ದೇಶದಿಂದಲೇ ಲಭ್ಯವಿರುವ ಉದ್ಯೋಗವಕಾಶಗಳ ಬಗ್ಗೆ 90 ಸೆಕೆಂಡ್‍ಗಳ ಧ್ವನಿಮುದ್ರಿಕೆಯನ್ನೂ ನೀಡಲಾಗುತ್ತಿದೆ. ಇದರಿಂದಾಗಿ ಉದ್ಯೋಗ ಅರಸುತ್ತಿರುವವರಿಗೆ ತಾವು ಮಾಡಬೇಕಾದ ಕೆಲಸದ ಬಗ್ಗೆ ಸರಿಯಾದ ಮಾಹಿತಿ ದೊರಕುತ್ತದೆ.

ತೀರಾ ಇತ್ತೀಚೆಗಷ್ಟೇ ಸಂಸ್ಥೆಯು ಡಬ್ಯುಎಪಿ ವೆಬ್‍ಸೈಟನ್ನು ಆರಂಭಿಸಿದೆ. ಇದು ಸಾಮಾನ್ಯ ವೆಬ್‍ಸೈಟ್‍ಗಿಂತ 0.6% ಕಡಿಮೆ ಗಾತ್ರ ಹೊಂದಿದೆ. ಈಗಾಗಲೇ ಹಿಂದಿಯಲ್ಲಿ ವೆಬ್‍ಸೈಟ್ ಆರಂಭಿಸಿರುವ ಸಂಸ್ಥೆ, ಮರಾಠಿಯಲ್ಲೂ ವೆಬ್‍ಸೈಟ್ ಆರಂಭಿಸಲು ಚಿಂತನೆ ನಡೆಸಿದೆ. ಅದರ ಕಾರ್ಯವೂ ಪ್ರಗತಿಯಲ್ಲಿದೆ. ಇದಾದ ಬಳಿಕ ಹಿಂದಿ ಮತ್ತು ಮರಾಠಿಯಲ್ಲಿ ಆ್ಯಪ್ ಆರಂಭಿಸುವ ಉದ್ದೇಶವೂ ಸಂಸ್ಥೆಗಿದೆ.

ಗ್ರಾಹಕರ ಬೆಂಬಲಕ್ಕಾಗಿ ಸಂಸ್ಥೆಯು ವೆಬ್‍ಸೈಟ್‍ನಲ್ಲಿ ಚಾಟ್ ಸೌಲಭ್ಯವನ್ನು ಆರಂಭಿಸಿದೆ. ಈ ಸೌಲಭ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲರೂ ಪರಸ್ಪರ ಚಾಟ್ ಮಾಡಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಬಗ್ಗೆಯೂ ಸಂಸ್ಥೆ ಚಿಂತನೆ ನಡೆಸಿದೆ.

ಮುಂದಿನ ಹಾದಿ..

ಮುಂದಿನ ದಿನಗಳಲ್ಲಿ, ದೆಹಲಿ ಮೂಲದ ಸಂಸ್ಥೆಯೊಂದರ ಸಹಕಾರ ಪಡೆದು, ಉದ್ಯೋಗಾಕಾಂಕ್ಷಿಗಳ ಹಿನ್ನೆಲೆ ಪರಿಶೀಲಿಸುವ ವ್ಯವಸ್ಥೆ ಜಾರಿಗೆ ತರಲು ಸಂಸ್ಥೆ ಯೋಜನೆ ರೂಪಿಸಿದೆ.

ಈಗಿನ ಕಾಲಘಟ್ಟದಲ್ಲಿ ನೈತಿಕ ನೇಮಕಾತಿ ವಿಚಾರದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ನಾವು, ಫೀಡ್‍ಬ್ಯಾಕ್ ವ್ಯವಸ್ಥೆ ಹೊಂದಿದ್ದು, ಉದ್ಯೋಗದಾತರಿಗೆ ಅಭ್ಯರ್ಥಿಗಳ ಪೂರ್ವಾಪರ, ಉದ್ಯೋಗ ಇತಿಹಾಸ, ನಡವಳಿಕೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ವಿವರಿಸುತ್ತಾರೆ ದಿನೇಶ್.

ಕೆಲಸಕ್ಕೆ ಅರ್ಜಿ ಹಾಕಿ, ಸಂದರ್ಶನಕ್ಕೆ ಹಾಜರಾಗದ ಅಭ್ಯರ್ಥಿಗಳಿಗೆ ಕೆಂಪು ಬಾವುಟ ಪ್ರದರ್ಶಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲು ಸಂಸ್ಥೆ ನಿರ್ಧರಿಸಿದೆ. ಅದೇ ರೀತಿಯಲ್ಲಿ ಅಭ್ಯರ್ಥಿಗಳ ಜೊತೆ ಕೆಟ್ಟದಾಗಿ ವರ್ತಿಸುವ ಸಂಸ್ಥೆಗಳಿಗೂ/ಉದ್ಯೋಗದಾತರಿಗೂ ಕೆಂಪು ಬಾವುಟ ಪ್ರದರ್ಶಿಸಲು ತೀರ್ಮಾನಿಸಿದೆ.

ಸಂಸ್ಥೆಯು ಮತ್ತಷ್ಟು ಹೂಡಿಕೆಗಾಗಿ ಮಾತುಕತೆಯಲ್ಲಿ ತೊಡಗಿದೆ.

Related Stories