ಒಲಿಂಪಿಕ್ಸ್ ಅಂಚೆ ಚೀಟಿಗಳ ಸಂಗ್ರಹಕ್ಕಾಗಿ ಕಂಚಿನ ಪದಕ ಗೆದ್ದಿರುವ ಬೆಂಗಳೂರಿನ ಉದ್ಯಮಿ

ಟೀಮ್​ ವೈ.ಎಸ್​. ಕನ್ನಡ

ಒಲಿಂಪಿಕ್ಸ್ ಅಂಚೆ ಚೀಟಿಗಳ ಸಂಗ್ರಹಕ್ಕಾಗಿ ಕಂಚಿನ ಪದಕ ಗೆದ್ದಿರುವ ಬೆಂಗಳೂರಿನ ಉದ್ಯಮಿ

Sunday January 15, 2017,

2 min Read

ನೂರಾರು ರಾಷ್ಟ್ರಗಳು ಭಾಗವಹಿಸುವ ವಿಶ್ವದ ಮಹೋನ್ನತ ಕ್ರೀಡಾ ಉತ್ಸವ ಒಲಿಂಪಿಕ್ಸ್. ಹಾಗೇ ಅತೀ ಅಪರೂಪದ ಅಂಚೆ ಚೀಟಿಗಳನ್ನು ಸಂಗ್ರಹಿಸುವುದು ಬಹುತೇಕರ ನೆಚ್ಚಿನ ಹವ್ಯಾಸ. ಅಂದ ಹಾಗೆ ಕಳೆದ ಎರಡು ದಶಕಗಳಿಂದ ಇವೆರಡರ ನಡುವಿನ ಕೊಂಡಿಯಾಗಿ ತಮ್ಮ ಹವ್ಯಾಸ ಮುಂದುವರೆಸಿದ್ದಾರೆ ನಮ್ಮ ಬೆಂಗಳೂರಿನ ಒಬ್ಬರು ಉದ್ಯಮಿ. ಇವರ ಈ ಅಪರೂಪದ ವಿಭಿನ್ನ ಹಾಗೂ ವಿಶೇಷ ಹವ್ಯಾಸಕ್ಕೆ ಕಂಚಿನ ಪದಕ ಕೂಡಾ ಲಭಿಸಿದೆ. ಈ ವ್ಯಕ್ತಿ ಉದ್ಯಾನನಗರಿಯ ಬಿಸಿನೆಸ್ ಮ್ಯಾನ್ ಜಗನ್ನಾಥ್ ಮಣಿ.

image


ಬೆಂಗಳೂರಿನ ಹೃದಯ ಭಾಗವಾದ ರಾಜಾಜಿನಗರದ ನಿವಾಸಿ ಈ ಜಗನ್ನಾಥ್ ಮಣಿ. ಇವರಿಗೆ ಕ್ರೀಡಾ ಅಂಚೆ ಚೀಟಿಗಳ ಹವ್ಯಾಸ ಆರಂಭವಾಗಿದ್ದು 1996-97ರ ಸುಮಾರಿನಿಂದ. ಆಗ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ " ನ್ಯಾಷನಲ್ ಗೇಮ್ಸ್" ನಡೆಸಲಾಗಿತ್ತು. ಇದರ ಅಂಗವಾಗಿ ಕಸ್ತೂರ್ ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಅಂಚೆಚೀಟಿ ಪ್ರದರ್ಶನವನ್ನು ಏರ್ಪಾಡಿಸಲಾಗಿತ್ತು. ಅಂದು ಆ ಪ್ರದರ್ಶನವನ್ನ ನೋಡಲು ಹೋದ ಯುವಕ ಜಗನ್ನಾಥ ಮಣಿ ಅವರಿಗೆ ತಾವೂ ಸಹ ಇಂತಹ ಅಂಚೆ ಚೀಟಿಗಳನ್ನ ಸಂಗ್ರಹಿಸಬೇಕು ಅನ್ನೋ ಅದಮ್ಯ ಆಸೆ ಉಂಟಾಯ್ತು. ಅವರು ಅಂದಿನಿಂದಲೇ ಒಲಿಂಪಿಕ್ಸ್ ಕ್ರೀಡಾಕೂಟಗಳ ಅಂಚೆಚೀಟಿಗಳನ್ನು ಸಂಗ್ರಹಿಸುವ ಸೃಜನಾತ್ಮಕ ಹವ್ಯಾಸ ರೂಡಿಸಿಕೊಂಡರು.

image


ಅಂದು ಶುರುವಾದ ಈ ಹವ್ಯಾಸ ಜಗನ್ನಾಥ್ ಮಣಿಯವರಿಗೆ ಸಂಪೂರ್ಣ ಆತ್ಮತೃಪ್ತಿ ಕೊಟ್ಟಿದೆಯಂತೆ. ಪ್ರತೀ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಒಲಿಂಪಿಕ್ಸ್ ಅಂತರಾಷ್ಟ್ರೀಯ ಕ್ರೀಡಾ ಜಾತ್ರೆ ಜಗನ್ನಾಥ್ ಮಣಿಯವರಿಗೆ ಧ್ಯಾನದಂತಾಯ್ತು. ವಿವಿಧ ದೇಶಗಳಲ್ಲಿ ನೆಲೆಸಿರುವ ಕ್ರೀಡಾ ಅಂಚೆಚೀಟಿ ಸಂಗ್ರಹಿಸುವ ವ್ಯಕ್ತಿಗಳ ಗೆಳೆತನ ಬೆಳೆಸಿಕೊಂಡ ಇವರು ಅನೇಕ ವಿರಳಾತಿವಿರಳ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಇವರ ಬಳಿ ಸಾವಿರಾರು ಒಲಿಂಪಿಕ್ಸ್ ಅಂಚೆಚೀಟಿಗಳ ಸಂಗ್ರಹವಿದೆ. ಆಧುನಿಕ ಒಲಿಂಪಿಕ್ಸ್​ನ ಮೊದಲ ಕೂಟ ನಡೆದಿದ್ದ 1896ರಲ್ಲಿ. ಅದೇ ವರ್ಷವೇ ಒಲಿಂಪಿಕ್ ಕ್ರೀಡಾಕೂಟದ ಸ್ಮರಣಾರ್ಥ ಅಂಚೆಚೀಟಿಗಳ ಬಿಡುಗಡೆಯ ಪರಿಪಾಠವೂ ಶುರುವಾಯ್ತು. ಆ ಸಂದರ್ಭ ಗ್ರೀಸ್ ಅಂಚೆ ಇಲಾಖೆ 12 ಒಲಿಂಪಿಕ್ಸ್ ಸ್ಮಾರಕ ಅಂಚೆಚೀಟಿ ಸರಣಿ ಪ್ರಕಟಿಸಿತ್ತು. ಅದ್ರಲ್ಲಿ ಸುಮಾರು 8 ಅಂಚೆಚೀಟಿಗಳು ಜಗನ್ನಾಥ್ ಮಣಿ ಅವರ ಕಲೆಕ್ಷನ್​ನಲ್ಲಿದೆ.

image


ಜಗನ್ನಾಥ್ ಮಣಿಯವರು ಈ ಅಂಚೆಚೀಟಿಗಳ ಶೇಖರಣೆಗಾಗಿ ಸಾಕಷ್ಟು ಹಣ ಹಾಗೂ ಸಮಯ ವ್ಯಯಿಸಿದ್ದಾರೆ. ದೇಶವಿದೇಶಗಳಲ್ಲಿ ನಡೆಸಲಾದ ಹತ್ತು ಹಲವು ಅಂಚೆಚೀಟಿ ಪ್ರದರ್ಶನಗಳಲ್ಲಿ ಸ್ಪರ್ಧಿಸಿದ ಅನುಭವ ಕೂಡಾ ಇವರಿಗಿದೆ. ಇವರ ಈ ಅಪರೂಪದ ಹಾಗೂ ಅಪೂರ್ವ ಸಂಗ್ರಹಕ್ಕೆ ಬೀಜಿಂಗ್ ಒಲಿಂಪಿಕ್ ಸಂದರ್ಭದಲ್ಲಿ ನಡೆದ ಅಂತರಾಷ್ಟ್ರೀಯ ಅಂಚೆಚೀಟಿ ಪ್ರದರ್ಶನದಲ್ಲಿ ಕಂಚಿನ ಪದಕ ಸಹ ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಹವ್ಯಾಸ ಹಾಗೂ ಅಭಿರುಚಿಗಳಿರುತ್ತವೆ. ಇವೇ ಮನುಷ್ಯನ ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಕಾರಣ ಅನ್ನೋದು ಜಗನ್ನಾಥ ಮಣಿಯವರ ಅನುಭವ ಹಾಗೂ ಅಭಿಪ್ರಾಯ.

ಇದನ್ನು ಓದಿ:

1. ಎಲ್ಲಾ ಕಡೆ ಸಿಗುತ್ತೆ "ಅಮ್ಮ"ನ ಕೈ ಅಡುಗೆ ರುಚಿ..!

2. ಎಲ್ಲಾ ಬಸ್‍ನಿಲ್ದಾಣಗಳಲ್ಲೂ ಎ2ಬಿಯದ್ದೇ ಸವಿ

3. ಓದಿನ ಪ್ರತಿಫಲ ದಂತವೈದ್ಯೆ- ಮನಸ್ಸು ಮಾಡಿರುವುದು ಸಾಮಾಜಿಕ ಕೆಲಸಕ್ಕೆ..!