ಟೆಕ್ಕಿ ಹೈನುಗಾರನಾದ ಯಶೋಗಾಥೆ..!

ಟೀಮ್ ​ವೈ.ಎಸ್​. ಕನ್ನಡ

0

ವಿದೇಶದಲ್ಲಿ 11 ವರ್ಷಗಳ ಕಾಲ ಸಾಫ್ಟ್​​ವೇರ್ ಎಂಜಿನಿಯರ್ ಆಗಿ ದುಡಿದ ವ್ಯಕ್ತಿಯೊಬ್ಬ ಅಂತರಂಗದ ಕೂಗಿಗೆ ಓಗೊಟ್ಟು, ತಾಯ್ನಾಡಿಗೆ ಮರಳಿ ಕೃಷಿ ತಪಸ್ಸಿನಲ್ಲಿ ಯಶಸ್ವಿ ಹೈನುಗಾರನಾದ ಮಾದರಿ ಕಥನವಿದು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯ ಶಂಕರ್ ಕೊಟ್ಯಾನ್ ಕೈ ತುಂಬಾ ಸಂಬಳ ಬರುವ ಆಧುನಿಕ ಕೆಲಸವನ್ನು ಬಿಟ್ಟು ಹೊಸ ಹೆಜ್ಜೆ ಇಟ್ಟಿದ್ದಾರೆ. ಶಂಕರ್​ ಕೋಟ್ಯಾನ್​ ಈಗ ಹೈನುಗಾರನಾಗಿದ್ದರೂ, ಅವರೊಬ್ಬ ಟೆಕ್ಕಿ. ಕೆಲಸ ಬೇಕು ಅಂದ್ರೆ ಎಲ್ಲಿ ಬೇಕಾದ್ರೂ ಅದನ್ನು ಪಡೆಯಬಲ್ಲ ಪ್ರತಿಭಾವಂತ. ಕೈ ತುಂಬಾ ಸಂಬಳವನ್ನು ಈಗ ಬೇಕಾದ್ರೂ ಸಂಪಾದಿಸಬಲ್ಲರು. ಆದ್ರೆ ಶಂಕರ್​ ಕೋಟ್ಯಾನ್​ಗೆ ಅದು ಯಾವುದೂ ಕೂಡ ಇಷ್ಟವಿಲ್ಲ. ಮನಶಾಂತಿಯನ್ನು, ನೆಮ್ಮದಿಯನ್ನು ಕೆಡಿಸುವ ಕೆಲಸಕ್ಕಿಂತ, ಕಷ್ಟಪಟ್ಟು ಸಂಪಾದನೆ ಮಾಡಿದ ಮನೋಶಾಂತಿಯೇ ತುಂಬಾ ಮಹತ್ವದ್ದು ಅನ್ನೋದನ್ನ ಬಹುಬೇಗನೆ ಅರಿತುಕೊಂಡಿದ್ದಾರೆ.

2012ರಲ್ಲಿ ಶಂಕರ್​​ ಕೈ ತುಂಬಾ ಸಂಬಳ ಬರುತ್ತಿದ್ದ, ಸಮಾಜದಲ್ಲಿ ಒಂದು ವ್ಯಕ್ತಿತ್ವವನ್ನು ಬೆಳೆಸಿಕೊಡಬಲ್ಲ ಕೆಲಸಕ್ಕೆ ಗುಡ್​ ಬೈ ಹೇಳಿದ್ರು. ಆದ್ರೆ ಶಂಕರ್​ ಅವರಿಗೆ ಮುಂದೇನು ಮಾಡ್ಬೇಕು ಅನ್ನೋ ಗುರಿ ಸ್ಪಷ್ಟವಾಗಿತ್ತು. ಹೀಗಾಗಿ ಹಿಂದೆಮುಂದೆ ನೋಡದೆ ಕೆಲಸಕ್ಕೆ ರಾಜಿನಾಮೆ ನೀಡಿದ್ರು. ಶಂಕರ್​ ಕೆಲಸಕ್ಕೆ ರಾಜಿನಾಮೆ ನೀಡಿದ್ದು ಅದೆಷ್ಟೋ ಜನಕ್ಕೆ ಶಾಕ್​ ನೀಡಿತ್ತು. ಆದ್ರೆ ಶಂಕರ್​ ಇನ್ನೊಬ್ಬರ ಮಾತನ್ನು ಕೇಳೋದು ಬಿಟ್ಟು ತಾನು ಮುಂದೇನು ಮಾಡಬೇಕು ಅನ್ನೋ ಬ್ಲೂ ಪ್ರಿಂಟ್​ನ್ನು ಮೊದಲೇ ಸಿದ್ಧಪಡಿಸಿದ್ದರು. ಹೀಗಾಗಿ ಸಾಗುವ ದಾರಿಯ ಬಗ್ಗೆ ಸ್ಪಷ್ಟ ಚಿತ್ರಣವಿತ್ತು.

5ರಿಂದ 40ಕ್ಕೆ ಪ್ರಯಾಣ..!

ಸಂಬಳ ಬರುವ ಕೆಲಸಕ್ಕೆ ಗುಡ್​ ಬೈ ಹೇಳಿದ ಶಂಕರ್​, ಆರಂಭಿಸಿದ್ದು ಡೈರಿ ಫಾರ್ಮ್​ನ್ನು. ಆದ್ರೆ ಇದು ಆರಂಭದಲ್ಲಿ ಅಂದುಕೊಂಡಷ್ಟು ಉತ್ಪಾದನೆಯನ್ನು ತಂದುಕೊಡಲಿಲ್ಲ. ಆದ್ರೆ ಶಂಕರ್​ ದೈರ್ಯ ಮತ್ತು ಆತ್ಮವಿಶ್ವಾಸವನ್ನು ಕೈ ಬಿಡಲಿಲ್ಲ. 2012ರಲ್ಲಿ ಕೇವಲ 5 ಹಸುಗಳೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿದ ಟೆಕ್ಕಿ ಶಂಕರ್ ಅವರ ಡೈರಿ ಫಾರ್ಮ್​, ಬಗ್ಗೆ ನಕ್ಕವರೇ ಹೆಚ್ಚು. ಎಂಜಿನಿಯರಿಂಗ್​ ಕಲಿತವನಿಗೆ ಈ ಕೆಲಸ ಯಾಕೆ ಬೇಕಿತ್ತು ಅಂತ ಅಂದುಕೊಂಡವರೇ ಹೆಚ್ಚು. ಆದ್ರೆ ಹಠಕ್ಕೆ ಹೆಮ್ಮಾರಿ ಕೂಡ ಹೆದರುತ್ತೆ ಅನ್ನೋದನ್ನ ಶಂಕರ್​ ಮಾಡಿ ತೋರಿಸಿದ್ರು. ಇವತ್ತು ಶಂಕರ್​ ಅವರ ಡೈರಿಯಲ್ಲಿ ಬರೋಬ್ಬರಿ 40 ಹಸುಗಳಿವೆ. ಯಶಸ್ವಿ ಹೈನುಗಾರನಾದ ಶಂಕರ್ ಪ್ರತಿದಿನ ಸುಮಾರು 200 ಲೀಟರ್ ಹಾಲನ್ನು ಹಾಲು ಉತ್ಪಾದಕರ ಸಂಘಕ್ಕೆ ನೀಡುತ್ತಿದ್ದಾರೆ.

ಮೂಡುಬಿದಿರೆಯ ಜೈನ್ ಸ್ಕೂಲ್ ನಲ್ಲಿ ತನ್ನ ವಿದ್ಯಾಭ್ಯಾಸ ಮಾಡಿದ ಶಂಕರ್ ಕೋಟ್ಯಾನ್ 1996ರಲ್ಲಿ ಸುರತ್ಕಲ್ ನ ಎನ್ಐಟಿಕೆಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವಿ ಪಡೆದಿದ್ದರು. ಓದು ಮುಗಿಯುತ್ತಾ ಇದ್ದ ಹಾಗೇ,  ಶಂಕರ್ ಕೋಟ್ಯಾನ್ ಅವರನ್ನು ಇನ್​​ಫೋಸಿಸ್​​ನ ಉದ್ಯೋಗ ಅರಸಿ ಬಂತು.

ಟೆಕ್ಕಿಯಾಗಿ ಕೆಲಸ ಮಾಡುತ್ತಾ ಲಕ್ಷ ಲಕ್ಷ ಹಣ ಗಳಿಸುತ್ತಿದ್ಧಾಗಲೂ ಶಂಕರ್​​ಗೆ ಮನದ ಆಳದಲ್ಲೆಲ್ಲೋ ಕೃಷಿಯೆಡೆಗಿನ ಮೋಹವೂ ಬೆಳೆಯುತ್ತಿತ್ತು. ತನ್ನ ಊರು, ಕುಟುಂಬದವರು ಮಾಡುತ್ತಿದ್ದ ಕೃಷಿ ಎಲ್ಲವೂ ಅವರನ್ನು ಊರಿನತ್ತ ಸೆಳೆಯುತ್ತಿದ್ದವು. ಶಂಕರ್ ತಮ್ಮ 15 ವರ್ಷಗಳ ವೃತ್ತಿ ಜೀವನದ ಸುಮಾರು 11 ವರ್ಷಗಳನ್ನು ವಿದೇಶದಲ್ಲಿಯೇ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಳೆದಿದ್ದರು. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಸ್ಪೇನ್, ನೆದರ್​ಲೆಂಡ್​, ಸ್ವಿಟ್ಜರ್​ಲೆಂಡ್​, ಆಸ್ಟ್ರೇಲಿಯಾ, ಸಿಂಗಾಪುರ್, ಜಪಾನ್, ದಕ್ಷಿಣ ಕೊರಿಯಾ ಮುಂತಾದ ದೇಶಗಳಲ್ಲೇ ಕಳೆದಿದ್ದರು.

ಶಂಕರ್​ಗೆ ಕೈ ತುಂಬಾ ಸಂಬಳ ಕೊಡುವ ಕೆಲಸ ಎಲ್ಲೋ ಒಂದುಕಡೆ ಮಾನಸಿಕ ನೆಮ್ಮದಿಯನ್ನು ದೂರ ಮಾಡಿತ್ತು. ಹೀಗಾಗಿ ಆ ಕೆಲಸಕ್ಕೆ ಗುಡ್​ ಬೈ ಹೇಳಿ ಡೈರಿ ಫಾರ್ಮ್​ ಕಡೆ ಗಮನಕೊಟ್ರು. ಇವತ್ತು ಶಂಕರ್​, ಪತ್ನಿ ನಂದಿತಾ, ಪುಟ್ಟ ಕಂದಮ್ಮಗಳಾದ ಸಾನ್ವಿ ಮತ್ತು ರಿತ್ವಿ ಜತೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ವಿದೇಶದ ಮೋಹ ದಿಂದ ಬಳಲುವ ಇಂದಿನ ಯುವಜನಾಂಗಕ್ಕೆ, ಶಂಕರ್ ಕೋಟ್ಯಾನ್ ಐಟಿಯಿಂ ಹೈನುಗಾರಿಕೆಯಲ್ಲಿ ಕೆನೆಭರಿತ ಹಾಲು ಸವಿಯುತ್ತಿದ್ದಾರೆ.

ಶಂಕರ್​ ಅವರಿಗೆ 6 ಎಕರೆ ಇಳಿಜಾರಾಗಿರುವ ಜಮೀನು ಇದೆ. ಇದರ ಸದುಪಯೋಗವನ್ನು ಸರಿಯಾಗಿ ಮಾಡಿಕೊಳ್ಳುತ್ತಿದ್ದಾರೆ. ಶಂಕರ್​​ ಎತ್ತರದ ಪ್ರದೇಶದಲ್ಲಿ ಡೈರಿ ಫಾರ್ಮ್ ರೂಪಿಸಿದ್ದು, ಅಲ್ಲಿಂದ ಯಾವುದೇ ಪಂಪಿಂಗ್ ಇಲ್ಲದೆ ಗುರುತ್ವಾಕರ್ಷಣೆ ಬಲದಿಂದಲೇ ಸಗಣಿ ನೀರು  ಪೈಪುಗಳ ಮೂಲಕ ಹರಿಯುತ್ತದೆ. ದಿನವೊಂದಕ್ಕೆ ಸುಮಾರು ಒಂದು ಟನ್ ನಷ್ಟು ಹುಲ್ಲಿನ ಅಗತ್ಯವಿದ್ದು ಅದರಲ್ಲಿ ಶೇ.80ರಷ್ಟು ಹುಲ್ಲನ್ನು ತಮ್ಮ ಜಮೀನಿನಲ್ಲಿಯೇ ಬೆಳೆಯುತ್ತಿದ್ದಾರೆ. ತಮ್ಮ ಡೈರಿ ಫಾರ್ಮ್ ನಿಂದ ದಿನಕ್ಕೆ 200 ಲೀಟರ್ ಹಾಲನ್ನು ಶಂಕರ್ ಕೊಟ್ಯಾನ್ ಹಾಲು ಉತ್ಪಾದಕರ ಸಂಘಕ್ಕೆ ಹಾಕುತ್ತಾರೆ.

"ಇನ್​​ಫೋಸಿಸ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ನಾನು ಮೂಡುಬಿದರೆಯ ಕೊಣಾಜೆ ಗ್ರಾಮದಲ್ಲಿ ಬಂಜರು ಭೂಮಿಯನ್ನು ಖರೀದಿಸಿದ್ದೆ. ತೀರಾ ಗಿಡಗಂಟಿಗಳಿಂದ ಕೂಡಿದ್ದ ಜಮೀನಿಗೆ ಒಳಪ್ರವೇಶಿಸುವುದಕ್ಕೂ ಕಷ್ಟವಿತ್ತು. ಅಂತಹ ಜಮೀನಿನಲ್ಲಿ ಕೃಷಿ ಆಧಾರಿತ ಯಾವುದೇ ಅನುಭವವಿಲ್ಲದಿದ್ದರೂ, ವಿಜ್ಞಾನದ ಹಿನ್ನೆಲೆ ಇದ್ದುದ್ದರಿಂದ ಸೂಕ್ತ ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ಡೈರಿ ಫಾರ್ಮ್ ರೂಪಿಸಿದೆ. ಸಾವಯವ ಕೃಷಿ, ಹೈನುಗಾರಿಕೆ ಜತೆಗೆ ಸಾವಯವ ವಸ್ತುಗಳ ಬಳಕೆಯಿಂದ ಕೃಷಿ ಮಾಡುವ ಯೋಜನೆಯಿತ್ತು. ಈಗಾಗಲೇ ಪ್ರಾಯೋಗಿಕವಾಗಿ ಕೇವಲ 4 ಸೆಂಟ್ಸ್ ಜಮೀನಿನಲ್ಲಿ ಯಾವುದೇ ರಾಸಾಯನಿಕ ಬಳಸದೆ ಬತ್ತದ ಕೃಷಿ ಮಾಡಿ 70 ಕೆ.ಜಿ. ಭರ್ಜರಿ ಇಳುವರಿ ಪಡೆದಿದ್ದೇನೆ. " 
                              - ಶಂಕರ್ ಕೊಟ್ಯಾನ್.

ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಹೈನುಗಾರಿಕೆಯಲ್ಲಿ ಮಾತ್ರ ಶೇ.8೦ರಷ್ಟು ಹಣ ನೇರವಾಗಿ ರೈತನಿಗೇ ಸಿಗುತ್ತದೆ. ಹಾಗಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದೆ. ಸ್ವಿಟ್ಜರ್​ಲೆಂಡ್​ನಲ್ಲಿರುವಾಗಲೇ ಅಲ್ಲಿನ ವ್ಯವಸ್ಥಿತ ಹೈನುಗಾರಿಕೆ ಬಗ್ಗೆ ಅಧ್ಯಯನ ಮಾಡಿದ್ದೆ. ಅದನ್ನು ತಾಯ್ನಾಡಿನಲ್ಲಿ ಪ್ರಯೋಗಿಸಿ ಯಶಸ್ಸು ಸಾಧಿಸಿದ್ದೇನೆ. ಸ್ಥಳೀಯ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ನೆರವಾಗಬೇಕೆಂಬ ಹಂಬಲವಿದೆ ಎನ್ನುತ್ತಾರೆ ಶಂಕರ್.

ಈಗಿನ ಯುವಕರು ಸಾಫ್ಟ್​ವೇರ್ ಲೋಕದಲ್ಲೇ ಮುಳುಗಿ ಲಕ್ಷ ಲಕ್ಷ ಹಣ ಎಣಿಸಿಕೊಂಡು ಅದನ್ನೇ ಜೀವನ ಎಂದು ಬದುಕುತ್ತಿದ್ದಾರೆ. ವಿದೇಶಗಳಲ್ಲಿ ಕೆಲಸ ಮಾಡಿದ್ದರೂ ಕೃಷಿ, ಹೈನುಗಾರಿಕೆಯಿಂದ ಸಂತೃಪ್ತಿಯ ಜೀವನ ನಡೆಸುತ್ತಿರುವ ಶಂಕರ್ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.

ಇದನ್ನು ಓದಿ:

1. ಕಮಲ್​ ಹಾಸನ್​, ರಾಜಮೌಳಿಗೆ ಆಗದೇ ಇದ್ದಿದ್ದನ್ನು ಇವರು ಮಾಡಿದ್ರು: ಸಿನಿಮಾದ ಮುಂದಿನ ಭವಿಷ್ಯ ಇಂದೇ ತಿಳಿಯಿರಿ..!

2. ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ: ಉತ್ತಮ ಭಾಷಣ ಮಾಡುವ ಕಲೆ ಕಲಿತುಕೊಳ್ಳಿ

3. "ಕಬಾಲಿ’’ಗೆ ಮೆಗಾ ಬ್ರಾಂಡಿಂಗ್: ಅಧಿಕೃತ ಪಾಲುದಾರನಾದ ಏರ್ ಏಷ್ಯಾ : ಚಿತ್ರದ ಪ್ರಮೋಷನ್​​ಗೆ ಸಖತ್ ಪ್ಲಾನ್


Related Stories