ಬಡತನಕ್ಕೆ ಸೆಡ್ಡು ಹೊಡೆದ ದಿಟ್ಟ ಮಹಿಳೆ

ಟೀಮ್​​ ವೈ.ಎಸ್​​. ಕನ್ನಡ

0

ಹೆಣ್ಣು ಅಂದರೆ ಎಲ್ಲರೂ ತಾತ್ಸರದಿಂದ ಕಾಣುವುದೇ ಹೆಚ್ಚು. ಪುರುಷ ಸಮಾಜದಲ್ಲಿ ಹೆಣ್ಣನ್ನು ಕಡೆಗಣನೆ ಮಾಡುವ ಈ ದಿನಗಳಲ್ಲಿ ಇಡೀ ಸಮಾಜಕ್ಕೆ ಮಾದರಿಯಾಗಿರುವ ಹೆಣ್ಣು ಮಗಳೇ ಈ ಛಾಯಾ ಸೋನಾವಾನೆ.

ಬಡತನ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ, ಎಲ್ಲಾ ಮಹಿಳೆಯರಿಗೂ ಮಾದರಿಯಾಗುವಂತಹ ಹೆಣ್ಣು ಮಗಳು, ಮಹಿಳಾ ಸಬಲೀಕರಣ ಹಾಗೂ ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಭೋದನೆ ಮಾಡುವವರಿಗೆಲ್ಲರಿಗೂ ಮಾದರಿಯಾಗಿರುವ ಹೆಣ್ಣು ಮಗಳೇ ಛಾಯಾ ಸೋನಾವಾನೆ.

ಗುಜರಾತಿನ ಅಹಮದಾಬಾದ್ ಮೂಲದ ಛಾಯಾ ಸೋನಾವಾನೆ, ಎಲ್ಲ ಹೆಣ್ಣು ಮಕ್ಕಳಂತೆ ಮನೆ ಸೇರಿಲ್ಲ. ತನ್ನ ಬಡತನದ ಬಗ್ಗೆ ಕೊರಗಲಿಲ್ಲ. ಬದಲಿಗೆ, ಬಡತನವನ್ನೇ ಗೆದ್ದಿದ್ದಾಳೆ. ಯಾರ ಹಂಗೂ ಇಲ್ಲದೆ, ದಿನಕ್ಕೆ ಕನಿಷ್ಠ 500 ರೂಪಾಯಿಗಳನ್ನು ದುಡಿಯುವ ಪಾಠ ಹೇಳಿಕೊಡುತ್ತಾಳೆ. ಈ ಮೂಲದ ಸಮಾಜದ ಎಲ್ಲ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಮಾದರಿ ಹೆಣ್ಣಾಗಿದ್ದಾಳೆ.

ಉನ್ನತ ಶಿಕ್ಷಣ ಪಡೆಯದಿದ್ದರೂ ಕೇವಲ ಮನೆಯಲ್ಲಿದ್ದುಕೊಂಡೇ ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡಿದ್ದಾಳೆ ಈ ಛಾಯಾ ಸೋನಾವಾನೆ. ಈ ಶುದ್ದ ಗೃಹಿಣಿ ಮನೆಯಿಂದಲೇ ಉದ್ಯೋಗ ಮಾಡುತ್ತಾಳೆ. ಮಹಿಳೆಯರಿಗೆ, ಯುವತಿಯರಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಇಂದು ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾಳೆ. ತನ್ನಿಬ್ಬರನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿ ಉನ್ನತ ಶಿಕ್ಷಣ ಕೊಡಿಸಿದ್ದಾಳೆ. ಆಕೆಯ ಇಬ್ಬರು ಮಕ್ಕಳು ಇಂದು ಐಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅತ್ಯಂತ ಕಡು ಬಡತನದ ಕುಟುಂಬದಿಂದ ಆಗಮಿಸಿದ್ದ ಛಾಯಾ ಸೋನಾವಾನೆ ತನ್ನ ಮಕ್ಕಳು ತನ್ನಂತೆ ಆಗಬಾರದೆಂದು ಕನಸು ಕಂಡಿದ್ದಳು. ತಾನು ಜೀವನದಲ್ಲಿ ಅನುಭವಿಸಿದ್ದ ನೋವುಗಳು ಮಕ್ಕಳಿಗೂ ಬರಬಾರದೆಂಬುದು ಆಕೆಯ ಉದ್ದೇಶವಾಗಿದೆ. ಒಂದು ಹೆಣ್ಣಾಗಿದ್ದರೂ, ಗಂಡಿಗೆ ಸರಿಸಮಾನವಾಗಿ ದುಡಿಮೆಯಲ್ಲಿ ತೊಡಗಿದ್ದಳು. ಇಂದು ಛಾಯಾ ಸೋನಾವಾನೆ ಕಷ್ಟದ ಪ್ರತಿಫಲವಾಗಿ, ಮಕ್ಕಳು ಬೆಳೆದು ನಿಂತಿದ್ದಾರೆ. ಹೆಚ್ಚು ಹಣ ಗಳಿಕೆಯಲ್ಲಿ ತೊಡಗಿದ್ದಾರೆ. ಕುಟುಂಬದ ಸ್ಥಿತಿಯೂ ಚೆನ್ನಾಗಿದೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ.

ಛಾಯಾ ಸೋನಾವಾನೆ ಬಾಲ್ಯ

ಛಾಯಾ ಸೋನಾವಾನೆ ಮಹಾರಾಷ್ಟ್ರದ ಜಾಲ್ ಗೌನ್ ಜಿಲ್ಲೆಯ ಧರಣ್ ಗೋನ್ ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದ್ದಳು. ಛಾಯಾ ಕುಟುಂಬದಲ್ಲಿ 7 ಜನ ಮಕ್ಕಳು. ಕುಟುಂಬ ನಿರ್ವಹಣೆ ಛಾಯಾ ಅವರ ತಂದೆಯವರದ್ದಾಗಿರುತ್ತದೆ. ಛಾಯಾ ಬಾಲ್ಯ ಅಷ್ಟೇನೂ ಸುಖಕರವಾಗಿರಲಿಲ್ಲ. ಶ್ರೀಮಂತ ಕುಟುಂಬದ ಮಕ್ಕಳಂತೆ ಗೊಂಬೆಗಳು, ಆಟಿಕೆಗಳೊಂದಿಗೆ ಬೆಳೆಯಲಿಲ್ಲ. ಅವರ ಕುಟುಂಬ ಮೂಲಭೂತ ಸೌಲಭ್ಯಗಳೊಂದಿಗೆ ಸಾಧಾರಣವಾಗಿ ಸಾಗುತ್ತಿತ್ತು. ಛಾಯಾ 10ನೇ ತರಗತಿ ಓದುವವರೆಗೂ ಸಹ ಅವರ ಕುಟುಂಬದ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಂತಿರಲಿಲ್ಲ. ಇನ್ನು ಛಾಯಾಳ ಉನ್ನತ ಶಿಕ್ಷಣ ಕನಸಿನ ಮಾತಾಗಿತ್ತು.

ಮುಂದೆ ಛಾಯಾ ಗುಜರಾತ್‌ನಲ್ಲಿ ಮಿಲ್ ಕಾರ್ಮಿಕನೊಬ್ಬನನ್ನು ಮದುವೆಯಾಗುತ್ತಾಳೆ. ಮದುವೆ ಬಳಿಕ ಅಹಮದಾ ಬಾದ್‌ಗೆ ತೆರಳುತ್ತಾಳೆ. ಇದ್ ಸಮಯದಲ್ಲಿ ಛಾಯಾ ಪತಿ ಕೆಲಸ ಮಾಡುತ್ತಿದ್ದ ಮಿಲ್ ಮುಚ್ಚಿ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗುತ್ತಾನೆ. ಮುಂದೆ ಆತ ರಿಕ್ಷಾ ಡ್ರೈವರ್ ಆಗಿ ಆದಾಯ ಗಳಿಸುತ್ತಾನೆ.

ಪತಿಯ ಆದಾಯದ ಮೂಲವನ್ನು ಮೌನವಾಗಿಯೇ ವಿಕ್ಷಿಸುತ್ತಿದ್ದ ಛಾಯಾ, ಪತಿಗೆ ಸಹಾಯಕಳಾಗಿ ತನ್ನ ಸ್ವಂತ ಕುಟುಂಬದ ನಿರ್ವಹಣೆಗೆ ಮುಂದಾಗುತ್ತಾಳೆ. ಮನೆಯಲ್ಲಿಯೇ ಹೊಲಿಗೆ ಉದ್ಯೋಗದ ಬಗ್ಗೆ ಮಹಿಳೆಯರಿಗೆ ಟೀಚ್ ಮಾಡುತ್ತಾ ಅಲ್ಪ ಸ್ವಲ್ಪ ಹಣ ಗಳಿಸಲು ಮುಂದಾಗುತ್ತಾಳೆ. ವೇಳೆ ಕೆಲವು ಸಣ್ಣ ಪುಟ್ಟ ಏರಿಳಿತಗಳು ಎದುರಾದರೂ ಸಹ ಅದನ್ನು ಯಶಸ್ವಿಯಾಗಿ ಎದುರಿಸುತ್ತಾಳೆ ಛಾಯಾ ಸೋನವಾನೆ.

ಬರುಬರುತ್ತಾ ಛಾಯಾ ಹೊಲಿಗೆ ಉದ್ಯಮಕ್ಕೆ ಸಂಪೂರ್ಣವಾಗಿ ಒಗ್ಗಿಕೊಂಡಳು. ಕೆಲವೇ ದಿನಗಳಲ್ಲಿ ಉತ್ತಮ ಸಂಪರ್ಕ ಬೆಳೆಸಿದಳು. ಹೊಲಿಗೆ ಉದ್ಯಮವೂ ಬೆಳವಣಿಗೆಯಾಗುತ್ತಾ ಸಾಗಿದವು. ಛಾಯಾಳ ಧೃಡ ನಿರ್ಧಾರಗಳು ಅವಳ ಆರ್ಥಿಕ ಸ್ಥಿತಿಯನ್ನು ಎತ್ತರಕ್ಕೆ ಕೊಂಡೊಯ್ಯಿತು. ಅವಳು ಮುಂದೆ ಯುವತಿಯರು, ಮಹಿಳೆಯರು, ಬಡಕುಟುಂಬದ ಹೆಣ್ಣುಮಕ್ಕಳಿಗೆ ಹೊಲಿಗೆ ತರಭೇತಿ ನೀಡುತ್ತಾ ಬಂದಳು. ಹೆಚ್ಚು ಹೆಚ್ಚು ಜನರು ಛಾಯಾಳ ತರಭೇತಿ ತರಗತಿಗಳಿಗೆ ದಾಖಲಾದರು.

ಛಾಯಾ ಹೇಳುತ್ತಾಳೆ ನನಗೆ ನನ್ನ ತಾಯಿಯೇ ಸ್ಫೂರ್ತಿ. ಮಿತವಾದ ಸಂಪನ್ಮೂಲಗಳಿದ್ದರೂ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಸಂತೋಷ ಭರಿತವಾಗಿ ನಿರ್ವಹಿಸುತ್ತಿದ್ದಳು. ಎನ್ನುತ್ತಾಳೆ ಛಾಯಾ.

ಲೇಖಕರು: ತಾನ್ವಿ ದುಬೇ
ಅನುವಾದಕರು: ಶ್ರುತಿ

Related Stories

Stories by YourStory Kannada