ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನದಟ್ಟಣೆ ನಿಯಂತ್ರಣ- ಸಮ ಮತ್ತು ಬೆಸ ಸೂತ್ರ ನಿರ್ಣಾಯಕ ಹಾಗೂ ಸ್ವಾಗತಾರ್ಹ

ಟೀಮ್​ ವೈ. ಎಸ್​​. ಕನ್ನಡ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನದಟ್ಟಣೆ ನಿಯಂತ್ರಣ- ಸಮ ಮತ್ತು ಬೆಸ ಸೂತ್ರ ನಿರ್ಣಾಯಕ ಹಾಗೂ ಸ್ವಾಗತಾರ್ಹ

Tuesday December 08, 2015,

5 min Read

ವಾತಾವರಣ ಹಾಗೂ ನೈಸರ್ಗಿಕ ರಕ್ಷಣೆ ಬೌದ್ಧಿಕ ಸಮುದಾಯದ ಆಗ್ರಹದ ಆಧಾರದಲ್ಲಿ ಜಾರಿಯಾಗುತ್ತಿದೆ. ನಾನು ಯಾವಾಗಲೂ ಯೋಚಿಸುವಂತೆ ಸಾಮಾನ್ಯ ಮನುಷ್ಯ ಯಾವುದೇ ವಾತಾವರಣವನ್ನಾದರೂ ಆಕ್ರಮಿಸಿಕೊಳ್ಳಬಲ್ಲ. ಆದರಿಂದು ನನ್ನ ಯೋಚನೆ ತಪ್ಪು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಯಾದ ಯಾವುದೇ ವಿಚಾರಗಳಿರಲಿಲ್ಲ. ಮೊನ್ನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರಿ ಸಮ ಬೆಸ ಸಂಖ್ಯೆಯ ಖಾಸಗಿ ವಾಹನಗಳ ಫಾರ್ಮುಲಾ ಜಾರಿಯನ್ನು ಘೋಷಿಸಿದ್ದು ಹೊಸ ಚರ್ಚೆ ಹುಟ್ಟುಹಾಕಿದೆ(ಸಾರ್ವಜನಿಕ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಾತಾವರಣದ ಕಲುಷಿತಗೊಳ್ಳುವಿಕೆಯನ್ನು ತಡೆಯಲು). ದೆಹಲಿ ಹೈಕೋರ್ಟ್‌ನ ಆದೇಶದಂತೆ ಅಲ್ಲಿನ ಸರ್ಕಾರ ವಾತಾವರಣದ ತುರ್ತುಪರಿಸ್ಥಿತಿಯನ್ನು ಹೇರಬೇಕಾದ ಅನಿವಾರ್ಯತೆ ಹೊಂದಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯವನ್ನು ಗಮನಿಸಿದಾಗ ಇಂಥದ್ದೊಂದು ಕ್ರಮ ಅನಿವಾರ್ಯವೂ ಆಗಿದೆ. ಹಾಗಾಗಿ ಸಾರ್ವಜನಿಕರು ಆಮ್ ಆದ್ಮಿ ಸರ್ಕಾರದ ಕ್ರಮವನ್ನು ಚರ್ಚಿಸುತ್ತಿದ್ದಾರೆ. ಸಂಸದರೂ ಸಹ ಈ ಕ್ರಮದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

image


ದೆಹಲಿಯ ವಾತಾವರಣದ ಕಲುಷಿತಗೊಳ್ಳುವಿಕೆ ಅಪಾಯದ ಮಟ್ಟ ಮೀರುತ್ತಿದೆ. ಹಾಗಾಗಿ ತಕ್ಷಣಕ್ಕೆ ಯಾವುದಾದರೊಂದು ಕ್ರಮವನ್ನು ಕೈಗೊಳ್ಳಲೇಬೇಕಿತ್ತು. 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವಂತೆ ಜಗತ್ತಿನ 160 ಮುಖ್ಯ ಪಟ್ಟಣಗಳಲ್ಲಿ ಅತ್ಯಂತ ಕಲುಷಿತಗೊಂಡ ಪಟ್ಟಣ ದೆಹಲಿ. ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲದಲ್ಲಿ ವಿಷಕಾರಿಯಾದ ಮಾಲಿನ್ಯಯುಕ್ತ ಅನಿಲವಿರುತ್ತದೆ. ಇದು ಜೀವಹಾನಿಯೂ ಆಗಿದ್ದು ಇದರ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಸಾಕಷ್ಟು ವರ್ಷಗಳಿಂದ ಯೋಚಿಸುತ್ತಲೇ ಬಂದಿತ್ತು. ಹಾಗಾಗಿ ದೆಹಲಿ ಸರ್ಕಾರ ಖಾಸಗಿ ವಾಹನಗಳ ಮೇಲೆ ನಿಷೇಧ ಹೇರುವ ಚಿಂತನೆ ನಡೆಸಿದ್ದು ಜನವರಿ 1ರಿಂದ ಜಾರಿಯಾಗುವಂತೆ ಆದೇಶಿಸಿದೆ. ಈ ಆದೇಶದ ಅನ್ವಯ ವಾರದಲ್ಲಿ 3 ದಿನ ಮಾತ್ರ ಖಾಸಗಿ ವಾಹನಗಳು ರಸ್ತೆಗಿಳಿಯಬೇಕು. ಒಬ್ಬ ವ್ಯಕ್ತಿಯ ಬಳಿ ನೋಂದಣಿ ಸಂಖ್ಯೆ ಸರಿ ಹಾಗೂ ಬೆಸ ಎನ್ನುವ 2 ವಾಹನಗಳಿದ್ದರೆ ಒಂದು ದಿನ ಸರಿ ಸಂಖ್ಯೆಯ ವಾಹನ, ಇನ್ನೊಂದು ದಿನ ಬೆಸ ಸಂಖ್ಯೆಯ ವಾಹನವನ್ನು ರಸ್ತೆಗಿಳಿಸಬಹುದು. ಅದರ ಬದಲು ವ್ಯಕ್ತಿಯೊಬ್ಬ ಒಂದೇ ನೋಂದಣಿ ಸಂಖ್ಯೆಯ ವಾಹನ ಹೊಂದಿದ್ದರೆ ಅವನು ದಿನ ಬಿಟ್ಟು ದಿನ ತನ್ನ ವಾಹನವನ್ನು ರಸ್ತೆಗಿಳಿಸಬಹುದು.

image


ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಹೇರಲು ತನ್ಮೂಲಕ ವಾಹನ ದಟ್ಟಣೆ ಹಾಗೂ ಪರಿಸರ ನಾಶ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಸಂದರ್ಭದಲ್ಲಿ ಕೆಲವು ಸೂಕ್ಷ್ಮ ಪರಿಸ್ಥಿತಿಗಳನ್ನು ಅವಲೋಕಿಸಬೇಕಾಗಿದೆ.

1. ಒಂದು ವೇಳೆ ಒಂದು ದಿನ ಒಂದು ಖಾಸಗಿ ವಾಹನಕ್ಕೆ ಸಂಚರಿಸಲು ನಿಷೇಧವಿದ್ದಾಗ ಯಾವುದಾದರೂ ವೈದ್ಯಕೀಯ ತುರ್ತು ಇದ್ದರೆ ಆಗೇನಾಗುತ್ತದೆ?

2. ಕೇವಲ ಒಂದೇ ನೋಂದಣಿ ಸಂಖ್ಯೆ ಇರುವ ವಾಹನ ಹೊಂದಿರುವ ಅಂಗವಿಕಲ ವ್ಯಕ್ತಿಗಳ ಗತಿ ಏನು? ತಮ್ಮ ವಾಹನ ಸಂಖ್ಯೆ ಬ್ಯಾನ್ ಆಗಿರುವ ವಿಚಾರವನ್ನು ಸಾರ್ವಜನಿಕರು ತಿಳಿಯುವುದು ಹೇಗೆ? ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ನಿರ್ಲಕ್ಷಿಸಿ ತಮ್ಮ ಸ್ವಂತ ವಾಹನ ಬಳಸುವ ಕ್ಲಾಸ್ ಸಮುದಾಯದ ಜನಗಳ ಮೇಲೆ ಯಾವ ಕ್ರಮ ಕೈಗೊಳ್ಳಬಹುದು?

3. ತಡರಾತ್ರಿವರೆಗೆ ಕೆಲಸ ಮಾಡಿ ಮನೆಗೆ ಹಿಂತಿರುಗುವ ಮಹಿಳೆಯರು ತಮ್ಮ ಕಾರನ್ನು ತಾವೇ ಚಲಾಯಿಸುತ್ತಾರೆ. ಅವರ ಗತಿಯೇನು? ಅವರ ವಾಹನದ ಸಂಖ್ಯೆ ಬ್ಯಾನ್ ಆದ ದಿನ ಅವರು ಹೇಗೆ ಕಚೇರಿಗೆ ತೆರಳಬೇಕು? ಇದರಿಂದ ಮಹಿಳೆಯರ ಭದ್ರತೆಗೆ ಅಡ್ಡಿಯಾದಂತಾಗಿ ಅವರಿಗೆ ತಡರಾತ್ರಿವರೆಗೆ ಕೆಲಸ ಮಾಡಲು ಸಾಧ್ಯವಿಲ್ಲದಂತಾಗುತ್ತದೆ ಅಲ್ಲವೇ?

4. ಮುಖ್ಯವಾಗಿ ತಮ್ಮ ಮಕ್ಕಳನ್ನು ತಾವೇ ಸ್ವತಃ ತಮ್ಮ ವಾಹನಗಳಲ್ಲಿ ಶಾಲೆಗೆ ಬಿಟ್ಟು ಬರುವ ಮತ್ತೆ ಕರೆದುಕೊಂಡು ಬರುವ ಪೋಷಕರಿಗೆ ಇದರಿಂದ ತೊಡಕಾಗುವುದಿಲ್ಲವೇ?

ಇವು ಕೆಲವು ಅತೀ ಮುಖ್ಯ ಅಂಶಗಳು ಮತ್ತು ಗಮನಹರಿಸಬೇಕಾದ ಸಮಸ್ಯೆಗಳು. ಜೊತೆಗೆ ಪ್ರತಿಪಕ್ಷಗಳ ಹೇಳಿಕೆಯಲ್ಲಿ ಕಾಣಿಸಿದ ಗೊಂದಲಗಳ ಬಗ್ಗೆಯೂ ಗಮನಿಸಬೇಕಿದೆ. ಆಮ್ ಆದ್ಮಿ ಪಕ್ಷದ ಪ್ರತಿನಿಧಿಗಳು ಇಂಥದ್ದೊಂದು ಕ್ರಮವನ್ನು ಯೋಚಿಸಿದ ಕೂಡಲೇ ಮರು ಚರ್ಚೆ ನಡೆಸದಂತೆ ನೇರವಾಗಿ ದಿನಾಂಕ ಘೋಷಿಸಿ ಆದೇಶ ಜಾರಿ ಮಾಡಿದ್ದಾರೆ. ಎರಡನೆಯದಾಗಿ ಮೂರು ಜನರ ಸಮಿತಿಯ ಪಾತ್ರ. ಪ್ರಿನ್ಸಿಪಲ್ ಸೆಕ್ರಟರಿ- ಟ್ರಾಫಿಕ್ ವಿಭಾಗ, ಪರಿಸರ ವಿಭಾಗದ ಕಾರ್ಯದರ್ಶಿ, ಆದಾಯ ವಿಭಾಗದ ಕಾರ್ಯದರ್ಶಿ ಈ ಮೂವರ ಸಮಿತಿ ರಚಿಸಲಾಗಿದೆ. ಈ ಸಮಿತಿ ಎಲ್ಲಾ ಸ್ಟೇಕ್ ಹೋರ್ಡರ್‌ಗಳೊಂದಿಗೆ ಮಾತುಕತೆ ನಡೆಸಿ ಅವರಿಂದ ಸಲಹೆ ಸೂಚನೆ ಪಡೆದು ಅವರಿಂದಲೂ ಕೆಲವು ಹೊಸ ಆಲೋಚನೆಗಳನ್ನು ಚರ್ಚಿಸಿ ಈ ಫಾರ್ಮುಲಾಗೆ ಅಂತಿಮ ರೂಪ ನೀಡಿದ್ದಾರೆ. ನಾನು ಈ ಸಮಿತಿಗೆ ಸಲಹೆ ನೀಡುವುದೆಂದರೆ ಅಂತಿಮ ಯೋಜನೆ ಹೊರಬಂದ ಬಳಿಕವಷ್ಟೇ ಕ್ರಮಕ್ಕೆ ಮುಂದಾಗಿ. ಈಗಾಗಲೇ ಯೋಜನೆ ಹೆಣೆದಿರುವಂತೆ ಸಾರ್ವಜನಿಕವಲಯದಿಂದಲೂ ಸಾಕಷ್ಟು ಪ್ರತಿರೋಧಗಳು, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಎರಡು ವಾರದ ನಂತರ ಇದಕ್ಕೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಿಕೊಳ್ಳಬಹುದೇ? ಎಂದು ಯೋಚಿಸಬೇಕು.

ಇದು ಭಾರತದಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿರುವ ಯೋಜನೆಯಾದರೂ ಈಗಾಗಲೇ ಜಗತ್ತಿನ ಕೆಲವೆಡೆ ಈ ಯೋಜನೆ ಜಾರಿಯಲ್ಲಿದೆ. ಇತ್ತೀಚೆಗಷ್ಟೇ ಈ ಪ್ರಯೋಗ ಪ್ಯಾರಿಸ್ ಮತ್ತು ಬೀಜಿಂಗ್‌ನಲ್ಲಿ ಮಾಡಲಾಗಿದೆ. ಜಗತ್ತಿನ ಅತೀ ದೊಡ್ಡ ನಗರಗಳಾದ ಮೆಕ್ಸಿಕೋ, ಬೋಗೋಟಾ, ಸ್ಯಾಂಟಿಯಾಗೋ, ಸಾವೋಪೌಲೋ, ಲಂಡನ್, ಅಥೆನ್ಸ್, ಸಿಂಗಾಪುರ, ಥೆಹರನ್, ಸ್ಯಾನ್‌ಜೋಸೆ, ಹಾಂಡೊರಸ್, ಲಾಪಸ್ ಇತ್ಯಾದಿ ಈ ಫಾರ್ಮುಲಾವನ್ನು ಜಾರಿಗೊಳಿಸಿವೆ. ವರ್ಷದ 365 ದಿನಗಳೂ ಈ ಕ್ರಮ ಜಾರಿಯಲ್ಲಿರುವುದಿಲ್ಲ. ಆದರೆ ಬಹುತೇಕ ದಿನ ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಹೇರುವುದರಿಂದ ಹಾಗೂ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡುವುದರಿಂದ ವಾಯುಮಾಲಿನ್ಯದ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಖಾಸಗಿ ವಾಹನಗಳಿಂದ ಹೆಚ್ಚುವ ವಾಯುಮಾಲಿನ್ಯ ನಿಯಂತ್ರಿಸಲು ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಹೇರುವುದಷ್ಟೇ ದಾರಿ. ಬೋಗೋಟಾ ನಗರದಲ್ಲಿ ವಾರದಲ್ಲಿ 3 ದಿನ ಮಾತ್ರ ಖಾಸಗಿ ವಾಹನಗಳ ಮೇಲೆ ನಿಯಂತ್ರಣವಿರುತ್ತದೆ. 1997ರಿಂದ ಈ ಅಭ್ಯಾಸ ಅಲ್ಲಿ ಜಾರಿ ಇದೆ. ಬೀಜಿಂಗ್‌ನಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಖಾಸಗಿ ವಾಹನಗಳ ಮೇಲೆ ನಿಯಂತ್ರಣವಿರುತ್ತದೆ. 2008ರಲ್ಲಿ ಒಲಂಪಿಕ್ಸ್ ಕ್ರೀಡಾಕೂಟದ ಕಾರಣ ಚೈನಾ ಸರ್ಕಾರ 2 ತಿಂಗಳ ಮಟ್ಟಿಗೆ ಈ ಆದೇಶಕ್ಕೆ ತಡೆ ನೀಡಿತ್ತು. ಇದಕ್ಕೆ ಬದಲಾಗಿ ಚೈನಾದ ವಾಹನ ಮಾಲೀಕರು 3 ತಿಂಗಳ ಹೆಚ್ಚುವರಿ ತೆರಿಗೆ ಭರಿಸಬೇಕಿತ್ತು.

image


ಪ್ರತಿಯೊಂದು ನಗರಗಳಿಗೂ ತನ್ನದೇ ಆದ ಪ್ರತ್ಯೇಕ ಮಾದರಿ ಇರುತ್ತದೆ. ಅಥೆನ್ಸ್‌ ನಲ್ಲಿ ಭೌಗೋಳಿಕವಾಗಿ ಹೊರ ಮತ್ತು ಒಳ ವಲಯಗಳೆಂಬ 2 ವರ್ಗೀಕರಣಗಳಿವೆ. ಸಂಪೂರ್ಣ ನಗರವನ್ನು ವೀಕ್ಷಿಸಿದಾಗ ಅಲ್ಲಿ ಎರಡೂ ವಲಯದಲ್ಲಿ ವಾಯುಮಾಲಿನ್ಯ ಏರ್ಪಟ್ಟಿದ್ದು ಗೋಚರಿಸಿತ್ತು. ಈ ಮಾಲಿನ್ಯದ ಪ್ರಮಾಣ ಅಪಾಯದ ಮಟ್ಟ ಮೀರುವ ಸೂಚನೆ ಸಿಕ್ಕ ಕೂಡಲೇ ಅಲ್ಲಿನ ಆಡಳಿತ ಪಾರಿಸರಿಕ ತುರ್ತು ಪರಿಸ್ಥಿತಿ ಘೋಷಿಸಿತು. ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಕ್ರಮವನ್ನು ರೇಡಿಯೋ, ಟಿವಿ, ವೃತ್ತಪತ್ರಿಕೆಗಳ ಮೂಲಕ ಘೋಷಿಸಿತು. ಒಳವಲಯಗಳಲ್ಲಿ ಕಟ್ಟುನಿಟ್ಟಾಗಿ ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಹೇರಿತು. ಒಳವಲಯದಲ್ಲಿ ಖಾಸಗಿ ಟ್ಯಾಕ್ಸಿಗಳಾದರೂ ಸರಿ ಮತ್ತು ಬೆಸ ನೋಂದಣಿ ಸಂಖ್ಯೆಯ ಸೂತ್ರದಡಿಯಲ್ಲಿ ಸಂಚರಿಸಬೇಕಿತ್ತು. ಹೊರವಲಯದಲ್ಲಿ ಟ್ಯಾಕ್ಸಿಗಳ ಸಂಚಾರಕ್ಕೆ ನಿರ್ಬಂಧವಿಲ್ಲದಿದ್ದರೂ ಖಾಸಗಿ ವಾಹನಗಳು ಸರಿ ಮತ್ತು ಬೆಸ ಫಾರ್ಮುಲಾ ಅನುಸರಿಸಲೇಬೇಕಿತ್ತು. ಕೆಲವೊಂದು ನಗರಗಳಲ್ಲಿ ಈ ಯೋಜನೆ ದಿನವಿಡೀ ಜಾರಿಯಲ್ಲಿದ್ದರೆ ಇನ್ನೂ ಕೆಲವು ಪಟ್ಟಣಗಳಲ್ಲಿ ಪೀಕ್ ಅವಧಿಯಲ್ಲಿ ಮಾತ್ರ ಅಂದರೆ 8.30ರಿಂದ 10.30ರ ನಡುವಿನ ಬೆಳಗಿನ ಅವಧಿ ಹಾಗೂ ಸಂಜೆ 5.30ರಿಂದ 7.30ರ ನಡುವಿನ ಅವಧಿಯಲ್ಲಿ ನಿರ್ಬಂಧ ಜಾರಿಯಲ್ಲಿರುತ್ತದೆ. ಪ್ಯಾರಿಸ್‌ನಲ್ಲಿ ಪ್ರತಿದಿನ ಬೆಳಗಿನ 5.30ರಿಂದ ನಡುರಾತ್ರಿ 11.30ರವರೆಗೆ ಖಾಸಗಿ ವಾಹನಗಳ ಮೇಲೆ ನಿರ್ಬಂಧವಿರುತ್ತದೆ.

ಲಂಡನ್ ಹಾಗೂ ಸ್ಟಾಕ್ ಹೋಂ ನಗರಗಳಲ್ಲಿ ಈಗಾಗಲೇ ಸಮೂಹ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಇದನ್ನು ಎಲ್ಇಝಡ್ ಮಾದರಿ ಅಥವಾ ಕಡಿಮೆ ವಾಯುಮಾಲಿನ್ಯ ಪ್ರದೇಶ (ಲೋ ಎಮಿಷನ್ ಝೋನ್ಸ್) ಎನ್ನುತ್ತಾರೆ. ಇಂತಹ ಪಟ್ಟಣಗಳಲ್ಲಿ ವಾತಾವರಣವನ್ನು ಕಲುಷಿತಗೊಳಿಸುವ ವಾಹನಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಇದೆ. ಒಂದು ವೇಳೆ ಅಂತಹ ಯಾವುದಾದರೂ ಖಾಸಗಿ ವಾಹನದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಏರ್ಪಡುತ್ತಿದೆ ಎಂದರೆ ಅವುಗಳ ಮೇಲೆ ಹೆಚ್ಚು ಪ್ರಮಾಣದ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲಿ ಪಾರ್ಕಿಂಗ್ ಚಾರ್ಜ್‌ಗಳು ಅತ್ಯಂತ ಹೆಚ್ಚು ವಿಧಿಸಲಾಗುತ್ತದೆ. ಐದು ಪೌಂಡ್ ಇದ್ದ ಪಾರ್ಕಿಂಗ್ ಚಾರ್ಜ್‌ ಅನ್ನು ಈಗ ಗಂಟೆಗೆ 10 ಪೌಂಡ್‌ನಂತೆ ಹೆಚ್ಚಿಸಲಾಗಿದೆ. ಲಂಡನ್ ಪ್ರಾಧಿಕಾರ ಎರಡು ಬಿಲಿಯನ್ ಪೌಂಡ್ ನಷ್ಟು ನಿವ್ವಳ ಲಾಭವನ್ನು ಇಂತಹ ಸಂಚಾರಿ ಸಂಬಂಧಿ ಅನುಕೂಲಗಳಿಂದ ಪಡೆದುಕೊಳ್ಳುತ್ತಿದೆ.

ಅಂತೆಯೇ ಸಿಂಗಾಪುರದಲ್ಲಿಯೂ ಕಾರ್ ಲೈಸೆನ್ಸ್ ಮತ್ತು ಸ್ಪೇಸ್ ಲೈಸೆನ್ಸ್ ವ್ಯವಸ್ಥೆ ಇದೆ. ಅಲ್ಲಿ ಯಾರಾದರೂ ಕಾರ್ ಖರೀದಿಸಬೇಕೆಂದರೆ ಮೊದಲಿಗೆ ಕಾರ್ ಲೈಸೆನ್ಸ್ ಖರೀದಿಸಬೇಕು. ಇದು ಕಾರ್‌ಗಿಂತಲೂ ಹೆಚ್ಚಿನ ವೆಚ್ಚದ್ದಾಗಿದೆ. ಜೊತೆಗೆ ಕೆಲವು ಏರಿಯಾಗಳಲ್ಲಿ ಪ್ರವೇಶಿಸುವ ಮುನ್ನವೇ ಪಾವತಿಸಬೇಕಿದೆ. ಬೀಜಿಂಗ್‌ನಲ್ಲಿ ಲಾಟರಿ ವ್ಯವಸ್ಥೆಯಂತೆ ಕಾರ್ ಖರೀದಿ, ನೋಂದಣಿ ವ್ಯವಸ್ಥೆ ಇದೆ. ರಸ್ತೆಯ ಮೇಲೆ ಸಂಚರಿಸುವ ಕಾರ್‌ಗಳನ್ನು ಹೊಂದಬೇಕೆಂದರೆ ಲಾಟರಿಯಲ್ಲಿ ನಂಬರ್ ಬಂದಿರಬೇಕು.

ರಸ್ತೆಯಿಂದ ಖಾಸಗಿ ವಾಹನಗಳನ್ನು ದೂರವಿಡಲು ಇವು ಕೆಲವು ವಿಧಾನಗಳು. ಖಾಸಗಿ ವಾಹನಗಳ ಮೇಲೆ ತುರ್ತು ಪರಿಸ್ಥಿತಿ ಹೇರಲು ಸಮ ಮತ್ತು ಬೆಸ ಸಂಖ್ಯೆಯ ಸೂತ್ರ ಅತ್ಯಂತ ಪರಿಣಾಮಕಾರಿ ವಿಧಾನ. ವಾತಾವರಣ ಕಲುಷಿತಗೊಳ್ಳುತ್ತಿರುವ ದೆಹಲಿಯಲ್ಲಿಯೂ ಇಂತಹ ಯಾವುದಾದರೂ ವಾತಾವರಣ ಸ್ನೇಹಿ ಮಾದರಿಯನ್ನು ಜಾರಿಗೊಳಿಸಬೇಕಿದೆ. ಈ ಆರಂಭವನ್ನು ದೃಢ ಹಾಗೂ ಉದಾರ ಮನಸ್ಸಿನಿಂದ ಸ್ವೀಕರಿಸಬೇಕಿದೆ. ಈ ಯೋಜನೆಯಲ್ಲೊಂದು ಮಹತ್ವಾಕಾಂಕ್ಷೆ ಇದೆ. ಆದರೆ ದೆಹಲಿಯ ನಾಗರೀಕರು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಭವಿಷ್ಯದ ಪೀಳಿಗೆಯ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಮುಕ್ತವಾಗಿ ಸ್ವೀಕರಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕಾಗಿದೆ. ಆಮ್ ಆದ್ಮಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲಿ.

ಲೇಖಕರು: ಅಶುತೋಷ್​​, ಆಪ್​​​ ಮುಖ್ಯಸ್ಥರು

ಅನುವಾದಕರು: ವಿಶ್ವಾಸ್​​​