ಇಸ್ರೋ ವಿಜ್ಞಾನಿಯ ಕನಸಿನ ಕೂಸು ಈ ವಾಗ್ದೇವಿ ಶಾಲೆ..!

ಉಷಾ ಹರೀಶ್​

0

ಈ ಶಾಲೆಗೆ ಬಂದರೆ ನಿಮ್ಮನ್ನು ಸ್ವಾಗತಿಸುವುದು ಬರೀ ಮಕ್ಕಳಲ್ಲ ಅರಳಿ ನಿಂತಿರುವ ಹೂಗಳು, ಹೂಗಳಿಗೆ ಹಾರುತ್ತಾ ಮುತ್ತಿಕ್ಕುವ ಪಾತರಗಿತ್ತಿಗಳು, ಬಗೆ ಬಗೆಯ ಹಣ್ಣುಗಳನ್ನು ಕುಕ್ಕಿ ತಿನ್ನುತ್ತಾ ಹಾರಾಡುವ ಹಕ್ಕಿಗಳ ಕಲರವ ಅಷ್ಟೇ ಅಲ್ಲದೆ ಮುದ್ದಾದ ಮೊಲಗಳ ಓಡಾಟ, ಬೆಳೆದು ನಿಂತಿರುವ ಔಷಧೀಯ ಗಿಡಮೂಲಿಕೆಗಳು.

ಸಿಲಿಕಾನ್ ವ್ಯಾಲಿ, ಐಟಿಬಿಟಿ ಸಿಟಿ ಎಂದು ಹೆಸರು ಗಳಿಸಿರುವ ಅಷ್ಟೇ ಅಲ್ಲದೇ ಟ್ರಾಫಿಕ್ ಕಿರಿಕಿರಿ, ಧೂಳು, ಬಿಸಿಲಿನ ಧಗೆಯಲ್ಲಿ ಬೇಯುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿರುವ ಒಂದು ಖಾಸಗಿ ಶಾಲೆಯ ಆವರಣದಲ್ಲಿನ ದೃಶ್ಯವಿದು. ಈ ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿರುವುದನ್ನು ಹೇಳಿಕೊಡುವುದರ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಹಸಿರ ಸಮೃದ್ಧಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಇದಕ್ಕೆ ‘ಹಸಿರು ಶಾಲೆ’ ಎಂದೇ ಪ್ರಸಿದ್ಧಿ ಪಡೆದಿದೆ.

ಬೆಂಗಳೂರಿನ ಮಾರತ್​​ಹಳ್ಳಿ ಬಳಿಯ ಮುನ್ನೇ ಕೊಳಲುವಿನಲ್ಲಿರುವ ‘ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ’ಯು ಕೇವಲ ಪಾಠದ ಶಾಲೆಯಲ್ಲ. ಇದೊಂದು ಪ್ರಯೋಗ ಶಾಲೆ. ಇಲ್ಲಿನ ಮಕ್ಕಳಿಗೆ ಪಠ್ಯದ ಜತೆಗೆ ಜಲ ಸಂರಕ್ಷಣೆ, ಫಲ-ಪುಷ್ಪ ಬೆಳೆಯುವಿಕೆ, ಸಾವಯವ ಗೊಬ್ಬರ ತಯಾರಿಕೆ, ಮಳೆ ನೀರು ಸಂಗ್ರಹ ಮತ್ತು ವಿಜ್ಞಾನ ಪಾಠವನ್ನು ಹೇಳಿಕೊಡುವ ಕೈಂಕರ್ಯ ನಡೆಯುತ್ತಿದೆ.

ಶಾಲೆಯು ಸುಮಾರು 8 ಎಕರೆ ಇದ್ದು, ಇಲ್ಲಿ 450ಕ್ಕೂ ಹೆಚ್ಚು ಮರಗಳು, 60-70 ಬಗೆಯ ಪುಷ್ಪಗಳು, 10-12 ಜಾತಿಯ ಚಿಟ್ಟೆ ವನವಿದೆ. ಸಣ್ಣ ಗೂಡಿನಲ್ಲಿ ಹತ್ತಾರು ಮೊಲಗಳಿದ್ದು, ಮಕ್ಕಳ ಮನಸ್ಸನ್ನು ಮುದಗೊಳಿ–ಸುತ್ತಿವೆ. ಶಾಲಾ ಆವರಣಕ್ಕೆ ಕಾಲಿಟ್ಟೊಡನೆ ಮಳೆ ನೀರು ಇಂಗು ಗುಂಡಿಗಳು, ಜೈವಿಕ ಅನಿಲ ಉತ್ಪಾದನಾ ಘಟಕ, ಸೋಲಾರ್ ಮತ್ತು ಪವನ ವಿದ್ಯುತ್ ಘಟಕ, ಸಾವಯವ ಗೊಬ್ಬರ ತಯಾರಿಕಾ ಘಟಕ, ವಿಜ್ಞಾನವನ, ಹೂಗಳವನ ಮತ್ತು ಔಷಧೀಯ ಸಸ್ಯಗಳು ಈ ಆವರಣದಲ್ಲಿ ಕಾಣುತ್ತವೆ.

ಇಸ್ರೋ ವಿಜ್ಞಾನಿಯ ಕನಸಿನ ಕೂಸು 

ಮೂಲತಃ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದ ಕೆ.ಹರೀಶ್ ಎಂಬ ವ್ಯಕ್ತಿಯೇ ಇದರ ಹಿಂದಿರುವ ಕೈ. ಮಕ್ಕಳಿಗೆ ನಿಸರ್ಗದ ಸಾಂಗತ್ಯದಲ್ಲಿ ಕಲಿಯುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಈ ವಾಗ್ದೇವಿ ವಿಲಾಸ ಶಾಲೆ ಹರೀಶ್ ಅವರ ಕನಸಿನ ಕೂಸು. ಹರೀಶ್ ಅವರ ದೂರದೃಷ್ಟಿ, ಕಾಳಜಿಯೇ ಶಾಲಾ ಅಭಿವೃದ್ಧಿಗೆ ಮೂಲ ಕಾರಣ. ಹರೀಶ್ ಅವರಿಗೆ ವಿಜ್ಞಾನ, ಪರಿಸರ, ನೀರಿನ ಸಂರಕ್ಷಣೆಯ ಕುರಿತು ಸಲಹೆ-ಸೂಚನೆಗಳನ್ನು ನೀಡಲು ಹರೀಶ್ ಭಟ್, ವಿ.ಆರ್.ಕಟ್ಟಿ, ಡಾ. ಎಚ್.ಎಸ್.ಸುಬ್ರಮಣ್ಯ, ಹಾಲ್ದೊಡ್ಡೇರಿ ಸುಧೀಂದ್ರ, ಶ್ರೀಪಡ್ರೆ ಬೆಂಬಲವಾಗಿ ನಿಂತಿದ್ದಾರೆ.

ಮಳೆ ನೀರು ಕೋಯ್ಲು ಅಳವಡಿಕೆ

ಶಾಲಾ ಆವರಣದಲ್ಲಿ ಬೀಳುವ ಮಳೆ ನೀರನ್ನು ಎಲ್ಲಿಯೂ ಪೋಲಾಗದಂತೆ ತಡೆದು, ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಳೆ ನೀರು ಕೊಯ್ಲು ಮತ್ತು ಇಂಗುಗುಂಡಿ ವ್ಯವಸ್ಥೆಯನ್ನು ಮಕ್ಕಳಿಗೆ ಪ್ರತ್ಯಕ್ಷವಾಗಿ ತೋರಿಸಲಾಗುತ್ತದೆ. ವಾಗ್ದೇವಿ ಶಾಲೆಯ ವಿಶೇಷವೆಂದರೆ ಕಳೆದ 8 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಜಲಪಾಠ ಮಾಡಲಾಗುತ್ತಿದೆ. ನೀರು ನೆಲದೊಳಗೆ ಇಂಗುವ ಬಗೆ, ಅಂತರ್ಜಲ ವೃದ್ಧಿಯ ಕುರಿತ ಪ್ರಾಯೋಗಿಕ ಪಾಠ ನಡೆಯುತ್ತದೆ. ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡಿರುವ ಪರಿಣಾಮ ವರ್ಷಕ್ಕೆ 2.5 ಕೋಟಿ ಲೀಟರ್ ನೀರನ್ನು ಉಳಿತಾಯ ಮಾಡಲಾಗುತ್ತಿದೆ.

ತ್ಯಾಜ್ಯದಿಂದ ಜೈವಿಕ ಅನಿಲ

ಶಾಲೆ ಎಂದ ಮೇಲೆ ಸಾಕಷ್ಟು ಕಾಗದನ್ನು ಬಳಸಲಾಗುತ್ತದೆ ಆ ಕಾಗದವನ್ನು ಮತ್ತು ಉಳಿದ ಆಹಾರ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತದೆ. ಶಾಲಾ ಕ್ಯಾಂಟೀನ್​ನಲ್ಲಿ ಉಳಿದ ಆಹಾರದಲ್ಲಿ ಗೊಬ್ಬರ, ಇದಲ್ಲದೇ ಶೇಖರಿಸಿದ ಸಗಣಿ, ಇತರೆ ತ್ಯಾಜ್ಯಗಳಿಂದ ಜೈವಿಕ ಅನಿಲ ತಯಾರಿಸಿ, ಅದೇ ಕ್ಯಾಂಟೀನ್​​ನಲ್ಲಿ ಬಳಸಲಾಗುತ್ತಿದೆ. ಎರೆಹುಳು ಸಾಕಾಣಿಕೆಯಿಂದ ತಿಂಗಳಿಗೆ 20 ಕೆ.ಜಿ ಗೊಬ್ಬರ ದೊರಕುತ್ತಿದೆ.

ವಿದ್ಯುತ್ ಶುಲ್ಕ ಉಳಿತಾಯ

ಶಾಲಾ ಆವರಣದಲ್ಲಿ 100 ಕೆವಿ ಸಾಮರ್ಥ್ಯದ ಸೋಲಾರ್ ಪ್ಯಾನೆಲ್​​ಗಳನ್ನು ಅಳವಡಿಸಿದ್ದು, ಇದರಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಆ ಮೂಲಕ ತಿಂಗಳಿಗೆ ಒಂದೂವರೆ ಲಕ್ಷದಷ್ಟು ವಿದ್ಯುತ್ ಶುಲ್ಕವನ್ನು ಶಾಲೆ ಉಳಿಸುತ್ತದೆ.

ಪ್ರಶಸ್ತಿ ಪುರಸ್ಕಾರಗಳ ಸುರಿಮಳೆ

ಹಸಿರು ಶಾಲೆಯೆಂದೇ ಖ್ಯಾತಿ ಹೊಂದಿರುವ ವಾಗ್ದೇವಿ ವಿಲಾಸ ಶಾಲೆಗೆ 2012-13ರಲ್ಲಿ ವಂಡರ್ ಲಾ ಗ್ರೀನ್ ಸ್ಕೂಲ್ ಅವಾರ್ಡ್, ಶಿನೈಡರ್ ಎಲೆಕ್ಟ್ರಿಕ್ ಸಂಸ್ಥೆಯಿಂದ ಬೆಸ್ಟ್ ಸ್ಕೂಲ್ ಅವಾರ್ಡ್, ಮೈಸೂರು ತೋಟಗಾರಿಕಾ ಸೊಸೈಟಿ (ಲಾಲ್​ಬಾಗ್)ನಿಂದ 4 ಬಾರಿ ಬೆಸ್ಟ್ ಗಾರ್ಡನ್ ಅವಾರ್ಡ್, 2 ಬಾರಿ ಬೆಸ್ಟ್ ಅವೆನ್ಯೂ ಆಫ್ ಗಾರ್ಡನ್ ಅವಾರ್ಡ್ ಮತ್ತು ಬೆಸ್ಟ್ ಆರ್ನಮೆಂಟಲ್ ಗಾರ್ಡನ್ ಅವಾರ್ಡ್ ಲಭಿಸಿದೆ. ಹಾಗೆಯೇ ಅಗಸ್ತ್ಯ ಇಂಟರ್​​ನ್ಯಾಷನಲ್ ಫೌಂಡೇಶನ್ ‘ಎಕೋ ಫ್ರೆಂಡ್ಲಿ ಏರ್​ಕಂಡೀಷನರ್’ ಪ್ರಾಜೆಕ್ಟ್​​ಗೆ ಪ್ರಥಮ ಬಹುಮಾನ ನೀಡಿದೆ. ಬೆಂಗಳುರಿನಲ್ಲಿರುವ ಎಲ್ಲಾ ಶಾಲೆಗಳು ಈ ಶಾಲೆ ಮಾಡುತ್ತಿರುವ ಕೆಲಸದ ಅರ್ಧದಷ್ಟು ಕಾಳಜಿ ತೋರಿಸಿದ್ರೆ ಪರಿಸರ ಮಾಲಿನ್ಯ ಕೊಂಚ ಮಟ್ಟಿಗಾದ್ರೂ ಕಡಿಮೆ ಆಗಬಹುದು.

Related Stories