ಶಿಕ್ಷಣ ಲೋಕದಲ್ಲಿ ಹೊಸ ಬದಲಾವಣೆಯ ಅಲೆ... ಡಿಜಿಟಲ್ ಇಂಡಿಯಾ ಕನಸು ನನಸಾಗಿಸುವತ್ತ ಗೀತಾಂಜಲಿ ಖನ್ನಾ

ಟೀಮ್​​ ವೈ.ಎಸ್​​. ಕನ್ನಡ

ಶಿಕ್ಷಣ ಲೋಕದಲ್ಲಿ ಹೊಸ ಬದಲಾವಣೆಯ ಅಲೆ... ಡಿಜಿಟಲ್ ಇಂಡಿಯಾ ಕನಸು ನನಸಾಗಿಸುವತ್ತ ಗೀತಾಂಜಲಿ ಖನ್ನಾ

Wednesday December 02, 2015,

3 min Read

ಭಾರತದ ಶೈಕ್ಷಣಿಕ ಸನ್ನಿವೇಶ ಇನ್ನೂ ಅಸಂಬದ್ಧ ಆಕಾರದಲ್ಲಿದೆ. ವಿಶ್ವದರ್ಜೆಯ ಶಿಕ್ಷಣ ಸಿಗುವವರೆಗೂ ನಾವು ಸುಮ್ಮನೆ ಕೂರುವಂತಿಲ್ಲ. ಭಾರತದ ಬಹುತೇಕ ಶಾಲೆಗಳಲ್ಲಿ ಪರೀಕ್ಷೆ ಹತ್ತಿರ ಬಂದಿದ್ರೂ ಇನ್ನು ಪುಸ್ತಕ ಹಾಗೂ ಪಠ್ಯಕ್ರಮವೇ ಸಿಕ್ಕಿರುವುದಿಲ್ಲ. ಹೆಚ್ಚುವರಿ ಅಧ್ಯಯನ ವಸ್ತುಗಳ ಪ್ರಶ್ನೆಯೇ ಎದುರಾಗುವುದಿಲ್ಲ. ಡಿಜಿಟಲ್ ಇಂಡಿಯಾ ಹಾಗೂ ಶಿಕ್ಷಣವನ್ನು ಒಗ್ಗೂಡಿಸಿ, ಮಹತ್ವಾಕಾಂಕ್ಷಿ ಮಹಿಳಾ ವಾಣಿಜ್ಯೋದ್ಯಮಿಯೊಬ್ರು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಯೋಧನ ಮಗಳಾಗಿದ್ದ ಗೀತಾಂಜಲಿ ಖನ್ನಾ ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ, ಭಾರತದ ಶಿಕ್ಷಣ ವ್ಯವಸ್ಥೆಯ ವಿಸ್ತಾರವನ್ನೂ ಅರಿತಿದ್ದಾರೆ. 12 ವರ್ಷಗಳಲ್ಲಿ ಗೀತಾಂಜಲಿ, 8 ನಗರಗಳಲ್ಲಿ 8 ಶಾಲೆಗಳನ್ನು ಬದಲಾಯಿಸಿದ್ದಾರೆ. ಆ ಅನುಭವ ಗೀತಾಂಜಲಿ ಅವರಿಗೆ ಭಾರತದ ಶಾಲೆಗಳ ಒಳನೋಟದ ಪರಿಚಯ ಮಾಡಿಕೊಟ್ಟಿತ್ತು. ಕೇಂದ್ರೀಯ ವಿದ್ಯಾಲಯದಿಂದ ಹಿಡಿದು ಆರ್ಮಿ ಪಬ್ಲಿಕ್ ಸ್ಕೂಲ್‍ನಲ್ಲೂ ಅವರು ವ್ಯಾಸಂಗ ಮಾಡಿದ್ದಾರೆ.

image


ನಮ್ಮ ಸುತ್ತ ಇರುವ ಬಹುತೇಕ ಐಐಟಿ ಪದವೀಧರರು ಪರಿಶ್ರಮ ಹಾಗೂ ಪ್ರತಿಭೆಯ ಫಲಿತಾಂಶವಲ್ಲ. ಕೆಲವರಿಗೆ ಶಿಕ್ಷಣಕ್ಕೆ ಸರಿಯಾದ ಮಾಧ್ಯಮ, ಮಾಹಿತಿ ಸರಿಯಾದ ಸಮಯಕ್ಕೆ ದೊರೆತಿರುತ್ತದೆ ಅನ್ನೋದು ಗೀತಾಂಜಲಿ ಅವರ ಅಭಿಪ್ರಾಯ. ಅವರು ಜಮ್ಮುವಿನಲ್ಲಿದ್ದಾಗ ಗಣಿತ ಪುಸ್ತಕವನ್ನು ದೆಹಲಿಯಿಂದ ಕೊರಿಯರ್ ಮೂಲಕ ತರಿಸಿಕೊಳ್ಳುವಂತಹ ಪರಿಸ್ಥಿತಿ ಇತ್ತು. ತಾವು ಶೇ.99ರಷ್ಟು ಅಂಕ ಪಡೆಯಲು ಆ ಪುಸ್ತಕವೇ ಕಾರಣ ಎನ್ನುತ್ತಾರೆ ಅವರು. ಕೆಲ ವರ್ಷಗಳ ಬಳಿಕವೂ ವಿದ್ಯಾರ್ಥಿಗಳು ಹಾಗೂ ಪೋಷಕರು ಅವರಿಗಿಷ್ಟವಾದ ಪುಸ್ತಕ, ಇನ್ನಿತರ ಸಾಮಾಗ್ರಿಗಳು, ಶಿಕ್ಷಕರ ನೇಮಕಕ್ಕೆ ಇಂಥದ್ದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂಬುದು ಗೀತಾಂಜಲಿ ಖನ್ನಾರ ಅರಿವಿಗೆ ಬಂದಿತ್ತು.

ಗೀತಾಂಜಲಿ ಎಂಜಿನಿಯರಿಂಗ್‍ಗೆ ಪ್ರವೇಶ ಪಡೆದಿದ್ರು. ಡೆನಿಮ್ ಧರಿಸಿ ಕಾಲೇಜಿಗೆ ಬಂದವರು ಅವರೊಬ್ಬರೇ. ಹರಿಯಾಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಏಕೈಕ ವಿದ್ಯಾರ್ಥಿನಿ. ಅಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಲಿಂಗಾನುಪಾತ 1:100ರಷ್ಟಿತ್ತು. ಪದವಿ ಬಳಿಕ ಗೀತಾಂಜಲಿ ಖನ್ನಾ ಕಾರ್ಪೊರೇಟ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ರು. ಅವರ ವೃತ್ತಿ ಜೀವನ ಚೆನ್ನಾಗಿತ್ತು, ಶೀಘ್ರವೇ ಗೀತಾಂಜಲಿ ಉನ್ನತ ಹುದ್ದೆಗೆ ಬಡ್ತಿಯನ್ನೂ ಪಡೆದ್ರು. 70 ಸದಸ್ಯರ ತಂಡವನ್ನು ಮುನ್ನಡೆಸುತ್ತಿದ್ರು. 25ರ ಹರೆಯದಲ್ಲೇ ಅವರ ವೇತನ 4 ಮಿಲಿಯನ್ ಡಾಲರ್‍ನಷ್ಟಿತ್ತು. ತಮ್ಮ 7 ವರ್ಷಗಳ ಕಾರ್ಪೊರೇಟ್ ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನೆಲ್ಲ ಅವರು ಸಾಧಿಸಿದ್ದಾರೆ. ವರ್ಷಕ್ಕೆರಡು ಪ್ರಮೋಷನ್, ಶೇ.100ರಷ್ಟು ವೇತನ ಹೆಚ್ಚಳ, ಎಲ್ಲವೂ ದಕ್ಕಿತ್ತು.

ಆದ್ರೆ ಬಹುತೇಕ ವಿದ್ಯಾರ್ಥಿಗಳು ಇವತ್ತಿಗೂ ಹೊರಜಗತ್ತಿಗೆ ಹೆಗಲುಕೊಡಲು ಪ್ರಯಾಸಪಡುತ್ತಿದ್ದಾರೆ. ತಮಗೂ ಹಿಂದೊಮ್ಮೆ ಆ ಅನುಭವವಾಗಿದ್ದು, ಅದನ್ನು ಬದಲಾಯಿಸಬೇಕೆಂಬುದು ಗೀತಾಂಜಲಿ ಅವರ ಗುರಿಯಾಗಿತ್ತು. ದೇಶದ ಮೂಲೆ ಮೂಲೆಯಲ್ಲಿರುವ ವಿದ್ಯಾರ್ಥಿಗಳೆಲ್ಲರಿಗೂ ವಿಶ್ವದರ್ಜೆಯ ಅಧ್ಯಯನ ವಸ್ತುಗಳನ್ನು ಪೂರೈಸಬೇಕೆಂಬುದು ಅವರ ಕನಸು. ಇದಕ್ಕಾಗಿಯೇ ಗೀತಾಂಜಲಿ ಖನ್ನಾ `ಫಾಸ್ಟುಡೆಂಟ್' ಅನ್ನು ಆರಂಭಿಸಿದ್ದಾರೆ. ಇಲ್ಲಿ ಅಧ್ಯಯನ ವಸ್ತುಗಳು, ಹೆಚ್ಚುವರಿ ನೋಟ್ಸ್, ಶಿಕ್ಷಣಕ್ಕೆ ಬೇಕಾದ ಎಲ್ಲವೂ ದೊರಕುತ್ತವೆ. ಶಿಕ್ಷಣಕ್ಕೆ ಮೀಸಲಾದ ಮೊಟ್ಟಮೊದಲ ಮಾರುಕಟ್ಟೆ ಸ್ಥಳ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ವಿಶೇಷ ಅಂದ್ರೆ 6 ತಿಂಗಳ ಪುಟ್ಟ ಕಂದಮ್ಮನ ತಾಯಿಯಾಗಿದ್ದ ಗೀತಾಂಜಲಿ, ಅದೇ ಸಮಯದಲ್ಲೇ ಈ ಪ್ರಯತ್ನಕ್ಕೆ ಕೈಹಾಕಿದ್ರು. `ಫಾಸ್ಟುಡೆಂಟ್' ಅನ್ನು ಗೀತಾಂಜಲಿ ತಮ್ಮ ಎರಡನೇ ಮಗುವಿನಂತೆ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಮೊದಲ ಬಾರಿ ಉದ್ಯಮ ಕ್ಷೇತ್ರ ಪ್ರವೇಶಿಸಿದ್ದ ಅವರಲ್ಲಿ ಸಿಂಹದಂತಹ ಉತ್ಸಾಹ ಮತ್ತು ಹಠವಿತ್ತು, ಜೊತೆಗೆ ಮಕ್ಕಳಂಥ ಮುಗ್ಧತೆ ಮತ್ತು ಕುತೂಹಲವೂ ಇತ್ತು.

ಪುರುಷ ಪ್ರಧಾನ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಳು ಯಶಸ್ವಿಯಾಗಿ ಉದ್ಯಮ ನಡೆಸುವುದು ಸುಲಭದ ಮಾತಲ್ಲ. ಕಚೇರಿ ಸಿಬ್ಬಂದಿ ಕೂಡ ತಡರಾತ್ರಿ ಗೀತಾಂಜಲಿ ಅವರಿಗೆ ಕರೆ ಮಾಡಲು ಹಿಂಜರಿಯುತ್ತಿದ್ರು. ದೀರ್ಘಕಾಲಿಕ ಬಿಕ್ಕಟ್ಟಿನ ಹೊರತಾಗಿಯೂ, ಪೂರೈಕೆ ಸರಣಿ ನಿರ್ವಹಣೆ-ಗ್ರಾಹಕರ ಅನುಭವ ಮುಂತಾದ ವ್ಯಾಪಾರದ ವಿವಿಧ ಅಂಶಗಳ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಅನುಭವ ಅವರಿಗಾಗಿತ್ತು. ಈ ಎಲ್ಲ ಅಡಚಣೆಗಳ ನಡುವೆಯೂ ಮೊದಲ ದಿನದಿಂದ್ಲೇ ಅವರಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಪೋರ್ಟಲ್ ಬಿಡುಗಡೆ ಮಾಡಿದ ಒಂದೇ ಒಂದು ಕ್ಷಣದೊಳಗೆ 40,000 ಮೊತ್ತದ ಆರ್ಡರ್ `ಫಾಸ್ಟುಡೆಂಟ್'ಗೆ ಸಿಕ್ಕಿತ್ತು. ಇದೀಗ ಹಂತಹಂತವಾಗಿ ಗೀತಾಂಜಲಿ ಯಶಸ್ಸಿನ ಮೆಟ್ಟಿಲೇರುತ್ತಿದ್ದಾರೆ.

image


ಚಿಕ್ಕದಾಗಿ ಆರಂಭವಾದ ಉದ್ಯಮ ಈಗ 12 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ ಶೇ.100 ರಷ್ಟು ಪ್ರಗತಿ ಹೊಂದಿದೆ. ಒಟ್ಟು ಗ್ರಾಹಕರಲ್ಲಿ ಶೇ.65ರಷ್ಟು ಮಂದಿ ಪುನರಾವರ್ತಿತ ಗ್ರಾಹಕರೇ ಇರುವುದು ವಿಶೇಷ. ಈ ವರ್ಷ ಒಂದು ಮಿಲಿಯನ್ ಆದಾಯ ಗಳಿಸುವ ಗುರಿ ಗೀತಾಂಜಲಿ ಖನ್ನಾ ಅವರ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಉದ್ಯಮಿಗಳು ಮುಂಚೂಣಿಯಲ್ಲಿರುವುದು ಸಂತೋಷದ ಸಂಗತಿ ಎನ್ನುತ್ತಾರೆ ಅವರು. ಸರ್ಕಾರ ಕೂಡ ಮಹಿಳೆಯರನ್ನು ಪ್ರೋತ್ಸಾಹಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ. ಭಾರತೀಯ ಮಹಿಳಾ ಬ್ಯಾಂಕ್‍ನಂತಹ ಸಂಸ್ಥೆಗಳು ಮಹಿಳಾ ಉದ್ಯಮಿಗಳಿಗೆ ಹಣಕಾಸಿನ ನೆರವು ನೀಡುತ್ತಿವೆ. ಗೀತಾಂಜಲಿ ಖನ್ನಾ ಅವರಂತಹ ಪ್ರತಿಭಾವಂತ ಉದ್ಯಮಿಗಳು ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಲೇಖಕರು: ಬಿಂಜಾಲ್​​ ಶಾ

ಅನುವಾದಕರು: ಭಾರತಿ ಭಟ್​​​​​​