ಗರ್ಭಿಣಿಯಾಗಿದ್ದಾಗ ಉದ್ಯಮ ಆರಂಭಿಸಿ ಸಾಧನೆಯ ಪಥದಲ್ಲಿ ಮುಂದುವರೆಯುತ್ತಿರುವ ಶಾರದಾ ಸೂದ್ ಯಶೋಗಾಥೆ

ಟೀಮ್​ ವೈ.ಎಸ್​. ಕನ್ನಡ

ಗರ್ಭಿಣಿಯಾಗಿದ್ದಾಗ ಉದ್ಯಮ ಆರಂಭಿಸಿ ಸಾಧನೆಯ ಪಥದಲ್ಲಿ ಮುಂದುವರೆಯುತ್ತಿರುವ ಶಾರದಾ ಸೂದ್ ಯಶೋಗಾಥೆ

Wednesday December 16, 2015,

4 min Read

ಎಲ್ಲಾ ಹೆಣ್ಣುಮಕ್ಕಳೂ ತಾಯ್ತನವನ್ನು ಅನುಭವಿಸುವ ಸಂತಸದ ಕ್ಷಣಗಳಿಗಾಗಿ ತಮ್ಮ ಸಮಯವನ್ನು ಮೀಸಲಿಡಬಯಸುತ್ತಾರೋ, ಆ ಸಮಯದಲ್ಲಿ ಶಾರದಾ ಸೂದ್ ಅವರು ಎರಡು ಜವಾಬ್ದಾರಿಗಳನ್ನು ಒಮ್ಮೆಲೇ ತೆಗೆದುಕೊಂಡು ಅದರ ಚುಕ್ಕಾಣಿಯನ್ನು ಹಿಡಿಯುವ ಮೂಲಕ ತಮ್ಮನ್ನು ತಾವು ಕಂಡುಕೊಳ್ಳಬಯಸಿದರು. ಒಬ್ಬ ಯುವ ತಾಯಿಯಾಗಿ ಅವರ ಹೆಣ್ಣುಮಗುವಿಗಾಗಿ ಮಾಮಾಕೌಟರ್ ಎಂಬ ಉದ್ಯಮವನ್ನು ಆರಂಭಿಸುವ ಮೂಲಕ ಉದ್ಯಮ ಜಗತ್ತಿನಲ್ಲಿ ತನ್ನ ಮೊದಲ ಹೆಜ್ಜೆಗಳನ್ನು ಇಟ್ಟರು. ಮಾಮಾ ಕೌಟರ್ ಎಂಬ ತಾಯಂದಿರಿಗಾಗಿ ಮೆಟರ್ನಿಟಿ ಉಡುಗೆಗಳನ್ನು ನಿರ್ಮಿಸುವ ಒಂದು ಸಂಸ್ಥೆಯನ್ನು ಆರಂಭಿಸಿದರು.

ಆದರೆ ಶಾರದಾ ಸೂದ್ ಉದ್ಯಮ ಕ್ಷೇತ್ರಕ್ಕೆ ಬೇರೆ ರೀತಿಯಿಂದ, ಬೇರೆ ಯಾವುದಾದರೂ ವೇಳೆಯಲ್ಲಿ ಆರಂಭಿಸಬಹುದಿತ್ತು. ಶಾರದಾ ಅವರಿಗೆ ತಾವು ಗರ್ಭಿಣಿಯಾಗಿದ್ದಾಗ ಎದುರಿಸಿದ ಸಮಸ್ಯೆಗಳನ್ನು ಇತರ ಮಹಿಳೆಯರೂ ಸಹ ಅನುಭವಿಸುವುದು ಇಷ್ಟವಿರಲಿಲ್ಲ. ಆ ಸಮಯದಲ್ಲಿ ಅವರಿಗೆ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿತ್ತು. ಆದರೆ ಸುಂದರವಾಗಿ ಕಾಣಲು ಅಗತ್ಯವಿದ್ದು ಉಡುಪುಗಳೇ ಅವರ ಬಳಿ ಇರಲಿಲ್ಲ. “ನನ್ನ 8ನೇ ತಿಂಗಳಿನಲ್ಲಿ ಆಫೀಸ್‌ಗೆ ಹೋಗುವಾಗ ಧರಿಸಲು ನಾನು ಮೆಟರ್ನಿಟಿ ಉಡುಪುಗಳಿಗಾಗಿ ಹುಡುಕಾಡುತ್ತಿದ್ದೆ. ಆದರೆ ನನ್ನ ಶೈಲಿಗೆ ಹೊಂದುವ ಅಥವಾ ಇಂದಿನ ಮಹಿಳೆ ಬಯಸುವ ಶೈಲಿಯ ಯಾವುದೇ ಉಡುಪುಗಳೂ ನನಗೆ ದೊರೆಯಲಿಲ್ಲ.” ಎನ್ನುತ್ತಾರೆ ಶಾರದಾ ಸೂದ್.

ಹೀಗಾಗಿ ಈ ಮಾಜಿ ಲಾಯರ್ ಶಾರದಾ ಸೂದ್ ಅವರು ಉಡುಪುಗಳನ್ನು ತಯಾರಿಸುವ ಪ್ರಪಂಚಕ್ಕೆ ಕಾಲಿಟ್ಟರು. ಅದರಲ್ಲೂ ಮಹಿಳೆಯರ ಮೆಟರ್ನಿಟಿ ಉಡುಪುಗಳನ್ನು ನಿರ್ಮಿಸುವ ಉದ್ಯಮವನ್ನು ಆರಂಭಿಸಿದರು. ಗರ್ಭಿಣಿಯರ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಲು ಇಂತಹ ಒಂದು ಉದ್ಯಮ ಅತ್ಯವಶ್ಯಕವಾಗಿತ್ತು. ಯಾರೂ ತಾವು ಗರ್ಭಿಣಿ ಎಂಬುದನ್ನು ಮುಚ್ಚಿಡಬೇಕಾದ ಅಗತ್ಯವಿಲ್ಲ ಅಥವಾ ಅವರ ದೇಹ ಪಡೆದುಕೊಳ್ಳುತ್ತಿರುವ ಹೊಸ ಆಕಾರದಿಂದ ಹಿಂಜರಿಕೆ ಅನುಭವಿಸಬೇಕಾದ ಅಗತ್ಯವಿಲ್ಲ. ಮೊದಲಿನಂತೆ ಆತ್ಮವಿಶ್ವಾಸದಿಂದ ಸುಂದರವಾಗಿರುವತ್ತ ಗಮನ ಹರಿಸಿದರೆ ಉತ್ತಮವಾಗಿರುತ್ತದೆ ಎಂಬುದು ಶಾರದಾ ಸೂದ್ ಅವರ ಅಭಿಪ್ರಾಯ.

image


ಮಹಿಳೆಯರು ಸಾಮಾನ್ಯವಾಗಿ ಗರ್ಭಿಣಿಯಾದಾಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಏಕೆಂದರೆ ಅವರಿಗೆ ಬದಲಾಗುತ್ತಿರುವ ತಮ್ಮ ದೇಹ ವ್ಯವಸ್ಥೆ, ಚರ್ಮದ ಕುರಿತು ಕೀಳರಿಮೆ ಮೂಡಿರುತ್ತದೆ. ಮಹಿಳೆಯರ ಈ ಮನಸ್ಥಿತಿಯ ಬಗ್ಗೆ ಶಾರದಾ ಸೂದ್ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಗರ್ಭಿಣಿಯಾಗಿರುವುದು ಅತ್ಯಂತ ಸಂತೋಷದಾಯಕ ಸಮಯ. ಆದರೆ ಈ ಸಮಯವನ್ನು ತಾವು ಪರದೇಶಗಳಿಂದ ತಮಗೆ ಹೊಂದುವ ಉಡುಪುಗಳನ್ನು ಖರೀದಿಸಲಿಕ್ಕಾಗಿ ಮೀಸಲಿಡಬೇಕಾಯಿತು. ಆಗ ತಾವು ವ್ಯಯಿಸಿದ ಹಣ ಮತ್ತು ಸಮಯ ಎರಡಕ್ಕೂ ಬೆಲೆಯೇ ಇಲ್ಲವಾಗಿದೆ ಎಂಬುದು ಶಾರದಾರ ಅಳಲು.

ಹೊಸ ಆರಂಭ

ಗರ್ಭಿಣಿಯರ ಉಡುಪಿನ ಸಮಸ್ಯೆಯ ಅರಿವಿದ್ದ ಶಾರದಾ ಸ್ವಲ್ಪ ಮಾರ್ಕೆಟ್ ರೀಸರ್ಚ್ ಮಾಡಿದರು. ಭಾರತದಲ್ಲಿ ಪ್ರತಿನಿಮಿಷಕ್ಕೆ ಸುಮಾರು 51 ಮಕ್ಕಳ ಜನನವಾಗುತ್ತವೆ. ಈ ಪೈಕಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವ ನಗರಗಳಲ್ಲೇ ಶೇ.20ರಷ್ಟು ಮಹಿಳೆಯರು ಮಕ್ಕಳಿಗೆ ಜನ್ಮ ನೀಡುತ್ತಾರೆ. ಹೀಗಾಗಿ ಮೆಟರ್ನಿಟಿ ಉಡುಪುಗಳ ಮಾರುಕಟ್ಟೆ ಸುಮಾರು 2500 ಕೋಟಿಯಷ್ಟು ದೊಡ್ಡದು ಎಂಬುದನ್ನು ಶಾರದಾ ಕಂಡುಕೊಂಡರು. ಹೀಗಾಗಿ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲು ಇದೇ ಸರಿಯಾದ ಸಂದರ್ಭವೆಂದು ಶಾರದಾ ನಿರ್ಧರಿಸಿದರು. ಈ ವೇಳೆ ಶಾರದಾರಿಗೆ 8 ತಿಂಗಳುಗಳು ತುಂಬಿದ್ದವು ಎಂಬುದು ಗಮನಾರ್ಹ ವಿಚಾರ.

ಇದೊಂದು ದೊಡ್ಡ ನಿರ್ಧಾರವಾಗಿತ್ತು. ಆದರೆ ಈ ಯೋಜನೆ ನನ್ನನ್ನು ತುಂಬಾ ಆವರಿಸಿಬಿಟ್ಟಿತ್ತು. ಈ ಅವಕಾಶವನ್ನು ಬಳಸಿಕೊಳ್ಳುವುದರ ಮೂಲಕ ಪ್ರಪಂಚಕ್ಕೆ ತಮ್ಮ ಬಗ್ಗೆ ತಿಳಿಸುವುದು ಒಳ್ಳೆಯದು ಎಂದು ನನಗನ್ನಿಸಿತ್ತು ಎನ್ನುತ್ತಾರೆ ಶಾರದಾ ಸೂದ್. ಶಾರದಾರ ನಿರ್ಣಯದ ಕುರಿತು ಅನೇಕರು ಆಕ್ಷೇಪಣೆ ಎತ್ತಿದ್ದರು. ಏಕೆಂದರೆ ಉದ್ಯಮವನ್ನು ಆರಂಭಿಸುವ ನಿರ್ಧಾರ ಕೈಗೊಂಡಾಗ ಶಾರದಾ 8 ತಿಂಗಳ ಗರ್ಭಿಣಿಯಾಗಿದ್ದರು. ಅವರ ಸ್ಫೂರ್ತಿಯ ಮಟ್ಟ ದೊಡ್ಡದಿತ್ತು.

ಉದ್ಯಮದ ಆರಂಭಕ್ಕಾಗಿ ನಾನು ಕಾಯುವ ಪ್ರಶ್ನೆಯೇ ಇರಲಿಲ್ಲ. ಕಾಯುತ್ತಾ ಕುಳಿತರೆ ಸರಿಯಾದ ಸಮಯ ಬರುವುದೇ ಇಲ್ಲ. ಉದ್ಯಮಶೀಲತೆಯನ್ನು ಆಯ್ದುಕೊಳ್ಳುವ ನಿರ್ಧಾರ ಮಾಡಿಯಾಗಿತ್ತು. ಆದರೆ ಸರಿಯಾದ ಯೋಜನೆ ಮತ್ತು ಸಮರ್ಪಕ ಎನರ್ಜಿ ಎರಡೂ ಒಂದೇ ಬಾರಿಗೆ ದೊರಕುವುದು ನಿಜಕ್ಕೂ ಒಟ್ಟಿಗೆ ದೊರಕುವುದಿಲ್ಲ. ಅದು ನನ್ನ ಅನುಭವಕ್ಕೆ ಬಂದಾಗ ನಾನು ಈ ಅವಕಾಶವನ್ನು ಕಳೆದುಕೊಳ್ಳಲು ಇಚ್ಛಿಸಲಿಲ್ಲ. ಬಹಳಷ್ಟು ಜನ ತಮಗೆ ತಾವೇ ಅನೇಕ ಸಮರ್ಥನೆಗಳನ್ನು ಕೊಟ್ಟು ಕೊಳ್ಳುವ ಮೂಲಕ ಬಹಳಷ್ಟು ಯೋಜನೆಗಳನ್ನು ಬಿಟ್ಟುಕೊಟ್ಟು ಬಿಡುತ್ತಾರೆ. ಅವರಿಗೆ ಏನೂ ಮಾಡದಿರಲು ಸದಾ ಏನಾದರೊಂದು ಕಾರಣ ದೊರಕುತ್ತಲೇ ಇರುತ್ತದೆ. ಆದರೆ ಯಾವಾಗಲೂ ನೀವೇಕೆ ಒಂದು ಕೆಲಸವನ್ನು ಮಾಡಲೇಬೇಕೆಂದು ಯೋಚಿಸುತ್ತಲೇ ಇದ್ದರೇ ಯಶಸ್ಸು ಖಂಡಿತಾ ಸಾಧ್ಯ ಎಂಬುದು ಶಾರದಾರ ಅಭಿಮತ.

ಮಗು ಮತ್ತು ಉದ್ಯಮ

ಗರ್ಭಿಣಿ ಮಹಿಳೆ ಎದುರಿಸಬೇಕಾದ ಸವಾಲುಗಳ ಕಲ್ಪನೆ ಶಾರದಾರಿಗಿತ್ತು. ಆದರೆ ಅದನ್ನು ಶಾರದಾ ಕಡಿಮೆ ಮಾಡಿಕೊಂಡರು ಎಂದೇ ಹೇಳಬಹುದು. ಉದ್ಯಮದ ಕುರಿತು ಶಾರದಾರಿಗಿದ್ದ ಆಸಕ್ತಿ, ಉತ್ಸಾಹ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ. ತಮ್ಮ ಗರ್ಭಿಣಿಯಾಗಿದ್ದ ಅವಧಿಯಲ್ಲಿ ಶಾರದಾ ವಿನ್ಯಾಸಕಾರರನ್ನು ಹುಡುಕಲು ಮತ್ತು ಯೋಜನೆಯ ಪೂರ್ಣರೂಪವನ್ನು ಮೂಡಿಸಿಕೊಳ್ಳುವಲ್ಲಿ ಕಳೆದರು. ಆ ಸಮಯದಲ್ಲಿ ಅವರು ಒಂದೇ ಒಂದು ದಿನದ ರಜೆಯನ್ನೂ ಪಡೆದುಕೊಂಡಿರಲಿಲ್ಲ. ಆದರೆ ನಿಜವಾದ ಸವಾಲು ಎದುರಾಗಿದ್ದು ಅವರ ಮಗಳು ಜನಿಸಿದ ಬಳಿಕ.

ಮಗಳು ಜನಿಸಿದ ಬಳಿಕ ನನಗೆ ಅವಳಿ ಮಕ್ಕಳನ್ನು ಹೆತ್ತ ಅನುಭವವಾಗಿತ್ತು. ಒಂದು ಯೋಜನೆ ಮತ್ತು ಮಗು ಎರಡೂ ನನ್ನ ಗರ್ಭದಲ್ಲಿದ್ದವು. ಆದರೆ ಅವೆರಡೂ ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಜನಿಸಿದ್ದವು. ಎರಡಕ್ಕೂ ಸಮರ್ಪಕವಾಗಿ ಸಮಯ ನೀಡುವುದು ನನ್ನ ಆದ್ಯತೆಯಾಗಿತ್ತು ಎನ್ನುತ್ತಾರೆ ಶಾರದಾ. ಮಗು ಮತ್ತು ಉದ್ಯಮ ಎರಡಕ್ಕೂ ಸಮಯ ನೀಡಲು ಶಾರದಾ ನಿಜಕ್ಕೂ ಬಹಳಷ್ಟು ಶ್ರಮಿಸಿದ್ದಾರೆ.

“ಎಲ್ಲವನ್ನೂ ಒಬ್ಬಳೇ ನಿರ್ವಹಿಸಬೇಕೆಂದರೆ ಅದಕ್ಕೆ ವಿಶೇಷ ಶಕ್ತಿಯ ಅವಶ್ಯಕತೆ ಇರುತ್ತದೆ. ಯಾವ ಕುಟುಂಬವೂ ಇಂತಹ ಒಂದು ಸಮಸ್ಯೆಯನ್ನು ಎದುರಿಸಿರಲಿಕ್ಕಿಲ್ಲ. ಆದರೆ ನನ್ನ ಕುಟುಂಬ ಇಂತಹ ಸಮಸ್ಯೆಯನ್ನು ಎದುರಿಸಿತ್ತು. ಕುಟುಂಬದ ಪ್ರತಿಯೊಬ್ಬರೂ ನನ್ನನ್ನು ಅರ್ಥಮಾಡಿಕೊಂಡು ಸಹಕರಿಸಿದರು. ಕುಟುಂಬದವರು ಮನೆ ಮತ್ತು ಮಗು ಎರಡನ್ನೂ ನಿಭಾಯಿಸುತ್ತಿದ್ದರು. ಅವರ ಕೆಲಸಗಳನ್ನು ನನ್ನ ಸಮಯಕ್ಕೆ ಅನುಕೂಲವಾಗುವಂತೆ ನಿಗದಿಪಡಿಸಿಕೊಂಡರು. ಅವರ ಸಹಕಾರ ಇಲ್ಲದಿದ್ದರೆ ನಿಜವಾಗಿಯೂ ನನಗೆ ಹುಚ್ಚು ಹಿಡಿದಂತಾಗುತ್ತಿತ್ತು” ಎನ್ನುತ್ತಾರೆ ಶಾರದಾ ಸೂದ್.

ಮಹಿಳೆಯರ ದೃಷ್ಟಿಕೋನದಿಂದ ಹೇಳುವುದಾದರೆ ಮಹಿಳೆಯರು ಹೆಚ್ಚಿನ ಸಹಾಯವನ್ನು ಯಾರಿಂದಲೂ ಪಡೆಯುವುದು ಸಾಧ್ಯವಿಲ್ಲ. ಅದರಲ್ಲೂ ಮಗುವಿರುವಾಗ ಉದ್ಯಮವೊಂದನ್ನು ನಡೆಸಿಕೊಂಡು ಹೋಗುವುದು ನಿಜಕ್ಕೂ ಅಗ್ನಿಪರೀಕ್ಷೆಯ ಸಮಯ. ನೀವು ವೃತ್ತಿಪರವಾಗಿ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ನೀವು ನಿಮ್ಮ ಆಪ್ತರಿಂದ ಸಹಾಯ ಪಡೆದುಕೊಳ್ಳಲೇಬೇಕಾಗುತ್ತದೆ. ಆರಂಭವಾದ ಮೂರೇ ತಿಂಗಳಲ್ಲಿ ಮಾಮಾಕೌಟರ್ ನ ಮೆಟರ್ನಿಟಿ ಕಲೆಕ್ಷನ್ ಅಮೇಜಾನ್, ಫ್ಲಿಪ್‌ಕಾರ್ಟ್‌, ಜಬಾಂಗ್, ಲೈಮ್‌ರೋಡ್ ಮತ್ತು ಫಸ್ಟ್ ಕ್ರೈ ಮುಂತಾದ ಆನ್‌ಲೈನ್ ಮಾರುಕಟ್ಟೆಯಲ್ಲಿ ಶೇ.30 ರಿಂದ ಶೇ.60 ರವರೆಗೆ ಆವರಿಸಿಕೊಂಡಿದೆ.

ತುಂಬಾ ಕಡಿಮೆ ಸಮಯದಲ್ಲೇ ಹೆಸರು ಮಾಡಿರುವ ಮಾಮಾ ಕೌಟರ್ ಸಂಸ್ಥೆ, ಈಗ ತಿಂಗಳಿಗೆ 1 ಲಕ್ಷ ಆದಾಯ ಹೊಂದಿದೆ. ಆರಂಭದಲ್ಲೇ ಸುರಕ್ಷಿತ ಮಟ್ಟವನ್ನು ತಲುಪುವ ಮೂಲಕ ಸಂಸ್ಥೆ ಉದ್ಯಮಿಗಳ ಸಮುದಾಯದಲ್ಲೂ ಗುರುತಿಸಿಕೊಂಡಿದೆ.

ಉದ್ಯಮಿಗಳ ಸಮುದಾಯ ಮಹಿಳೆಯರಿಗೂ ಉತ್ತಮ ಸ್ವಾಗತ ಬಯಸುತ್ತಿದೆ. ಉದ್ಯಮಕ್ಕೆ ಸಹಕಾರಿಯಾಗುವಂತಹ ಎಷ್ಟೋ ವಿಚಾರಗಳಲ್ಲಿ ಈ ಸಮುದಾಯ ಹೊಸ ಉದ್ಯಮಿಗಳಿಗೆ ಮಾರ್ಗದರ್ಶನ ಮಾಡುತ್ತಿದೆ. ಅಲ್ಲದೇ ನಿಮ್ಮ ಸಾಮರ್ಥ್ಯವನ್ನು ಕೆಳಮಟ್ಟದೆಂದು ಅವರೆಂದೂ ಪರಿಗಣಿಸುವುದಿಲ್ಲ. ನಿಮ್ಮನ್ನು ಅವರು ಸಮಾನವಾಗಿಯೇ ಕಾಣುತ್ತಾರೆ ಎಂಬುದು ಶಾರದಾ ಉದ್ಯಮ ವಲಯದ ತಮ್ಮ ಸ್ನೇಹಿತರ ಬಗ್ಗೆ ಹೇಳಿಕೊಳ್ಳುವ ಮಾತುಗಳು.


ಲೇಖಕರು: ಬಿಂಜಾಲ್​ ಷಾ

ಅನುವಾದಕರು: ವಿಶ್ವಾಸ್​​