ಶರಣೋತ್ಸವ!- ಕನ್ನಡ ಹಬ್ಬದ ಬಗ್ಗೆ "ಚಿತು" ಸಂಘದ "ಅಧ್ಯಕ್ಷ"ರ ಮಾತು

ವಿಶಾಂತ್​​ಸೆಲೆಬ್ರಿಟಿ: ಶರಣ್​​​, ನಟನಿರೂಪಣೆ: ವಿಶಾಂತ್​​​

0

ಶರಣ್. ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ಕಾಮಿಡಿ ಹೀರೋ. ತಮ್ಮ 100ನೇ ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ ಈ ‘Rambo’, ನಂತರ ಕಂಡಿದ್ದೆಲ್ಲಾ ‘ವಿಕ್ಟರಿ’ಯೇ. ‘ಜೈ ಲಲಿತಾ’ ಆಗಿ ಜೈ ಎನಿಸಿಕೊಂಡು, ‘ಅಧ್ಯಕ್ಷ’ನಾಗಿ ಸೈ ಎನಿಸಿಕೊಂಡು, ‘ರಾಜರಾಜೇಂದ್ರ’ನಾಗಿ ಗಾಂಧಿನಗರದಲ್ಲಿ ಮೆರೆದು, ‘ಬುಲೆಟ್ ಬಸ್ಯಾ’ಆಗಿ ಹುರಿ ಮೀಸೆ ತಿರುವಿಕೊಂಡು ಓಡಾಡ್ತಿರೋ ಶರಣ್ ಸದ್ಯ ‘ಜೈಮಾರುತಿ 800’ ನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ಸಕ್ಸಸ್‍ಫುಲ್ ಸಂಚಾರ ಮುಂದುವರಿಸಿದ್ದಾರೆ. ಇಂತಹ ಹಾಸ್ಯ ನಾಯಕ ಕನ್ನಡ ರಾಜ್ಯೋತ್ಸವವನ್ನು ಹೇಗೆ ಆಚರಿಸುತ್ತಿದ್ದಾರೆ? ಕನ್ನಡ ನಾಡು- ನುಡಿ ಕುರಿತು ಏನ್ ಹೇಳ್ತಾರೆ? ಈ ಎಲ್ಲಾ ವಿಷಯಗಳು ಶರಣೋತ್ಸವದಲ್ಲಿದೆ.

ಕನ್ನಡ ರಾಜ್ಯೋತ್ಸವ ಆಚರಣೆ ಅಂದ್ರೆ?

ಆಚರಣೆ ಅನ್ನುವಂತದ್ದೇ ಒಂದು ಸಂಭ್ರಮ, ಈ ಸಂಭ್ರಮಕ್ಕೆ ಇದೇ ತರಹದ ರೀತಿ, ನೀತಿಗಳು ಅನ್ನೋದಕ್ಕಿಂತ ಹೆಚ್ಚು. ಕನ್ನಡವನ್ನು ಉಪಯೋಗಿಸೋದೇ ಕನ್ನಡಿಗರಿಗೆ ಒಂದು ಸಂಭ್ರಮ. ಅದಕ್ಕಿಂತ ದೊಡ್ಡ ಸಂಭ್ರಮ ಏನಿದೆ? ಹೆಚ್ಚು ಕನ್ನಡ ಉಪಯೋಗಿಸೋಣ, ನಾಲ್ಕು ಜನರಿಗೆ ನಮ್ಮ ಭಾಷೆ ಕಲಿಸೋಣ. ಅದೇ ನಿಜವಾದ ಆಚರಣೆ, ಅದೇ ನಿಜವಾದ ಸಂಭ್ರಮ. ನಮ್ಮ ಮಕ್ಕಳಿಗೆ ನಾವು ಹೆಚ್ಚು ಕನ್ನಡದ ಪ್ರಾಮುಖ್ಯತೆ ಹೇಳಿಕೊಡೋಣ. ಹೆಚ್ಚು ಸಂಭಾಷಿಸೋಣ. ಸ್ಟೈಲಿಶ್‍ಆಗಿ, ಇಂಗ್ಲಿಷ್ ಪದಗಳನ್ನು ಬಳಸುವುದನ್ನು, ಕನ್ನಡವನ್ನೇ ಇಂಗ್ಲಿಷ್‍ನಂತೆ ಮಾತನಾಡೋದು ಜಾಸ್ತಿಯಾಗಿದೆ. ಅದನ್ನು ಕಡಿಮೆ ಮಾಡಬೇಕು. ಕನ್ನಡದಲ್ಲೇ ಕೆಲ ನಟಿಯರು ಹೊರ ರಾಜ್ಯಗಳಿಂದ ಬಂದು ಕೆಲವೇ ದಿನಗಳಲ್ಲಿ ಕನ್ನಡ ಕಲಿತು ಇಲ್ಲಿ ಡಬ್ಬಿಂಗ್ ಮಾಡ್ತಿದ್ದಾರೆ. ಇದಲ್ವಾ ನಿಜವಾದ ಸಂಭ್ರಮ, ಇದಲ್ವಾ ನಿಜವಾದ ಆಚರಣೆ. ನಾವು ಅವರಿಂದ ಕಲಿತುಕೊಳ್ಳುವುದು ಎಷ್ಟಿದೆ?... ನಮ್ಮಲ್ಲೇ ಇಂತಹ ಹಲವಾರು ಉದಾಹರಣೆಗಳಿವೆ. ಎಲ್ಲಿಯೋ ಹುಟ್ಟಿ, ಯಾವುದೋ ಮಾತೃಭಾಷೆಯಾಗಿದ್ದರೂ, ಅವರು ಇಲ್ಲಿಗೆ ಬಂದು ಇಲ್ಲಿನ ಸಿನಿಮಾಗಳಲ್ಲಿ ಕೆಲಸ ಮಾಡಲು ಶುರು ಮಾಡುತ್ತಾ ಕೆಲವೇ ದಿನಗಳಲ್ಲಿ ಕನ್ನಡ ಕಲಿತುಕೊಂಡು ಡಬ್ಬಿಂಗ್ ಮಾಡೋ ಹಂತಕ್ಕೆ ಹೋಗಿರುವ ಹಲವು ನಟ, ನಟಿಯರಿದ್ದಾರೆ. ನಾನ್ಯಾಕೆ ಕೇವಲ ಚಿತ್ರರಂಗವನ್ನೇ ಉದಾಹರಣೆ ನೀಡುತ್ತಿದ್ದೇನೆ ಅಂದ್ರೆ, ಇದು ನನ್ನ ಕ್ಷೇತ್ರ. ನನಗೆ ಹೆಚ್ಚಿನ ಮಾಹಿತಿ ಇಲ್ಲಿ ಸಿಗುತ್ತಿದೆ.

ಕನ್ನಡದ ಉಳಿವಿಗೆ ಸಿನಿಮಾಗಳ ಕೊಡುಗೆ ಬಗ್ಗೆ...

ನಾವೀಗ ಕನ್ನಡ ಚಿತ್ರಗಳನ್ನು ಅಮೆರಿಕಾ, ಆಸ್ಟ್ರೇಲಿಯಾ, ಬರ್ಲಿನ್, ಹಾಂಗ್‍ಕಾಂಗ್, ದುಬೈಗಳಲ್ಲಿ ರಿಲೀಸ್ ಮಾಡ್ತಿದ್ದೀವಿ. ಇದು ಕನ್ನಡ ಹಾಗೂ ಕನ್ನಡ ಚಿತ್ರರಂಗಕ್ಕೆ ಎಷ್ಟು ಆರೋಗ್ಯ ಬೆಳವಣಿಗೆಯಲ್ವಾ? ಇದು ಆಚರಣೆ ಅಲ್ವಾ? ಇದು ನಿಜವಾದ ಆಚರಣೆ. ಈ ಬೆಳವಣಿಗೆಗಳಿಂದ ನನಗಂತೂ ತುಂಬಾ ಖುಷಿಯಾಗ್ತಿದೆ. ಒಬ್ಬ ಕನ್ನಡಿಗನಾಗಿ, ಕನ್ನಡ ಚಿತ್ರರಂಗದವನಾಗಿ, ಈ ಬದಲಾವಣೆ ತುಂಬಾ ಹೆಮ್ಮೆಯೆನಿಸುತ್ತಿದೆ ಹಾಗೂ ಖುಷಿ ನೀಡುತ್ತಿದೆ. ಇದಿನ್ನೂ ಮುಂದುವರಿಯಬೇಕು. ಕನ್ನಡ ಚಿತ್ರಗಳ ಮೂಲಕ ಗಡಿ ದಾಟಿ, ದೇಶ ದಾಟಿ ಬೇರೆ ಬೇರೆ ರಾಷ್ಟ್ರಗಳಲ್ಲೂ ಕನ್ನಡ ಡಿಂಡಿಮ ಮೊಳಗಬೇಕು.

ಕನ್ನಡ ರಾಜ್ಯೋತ್ಸವ ಹೇಗೆ ಆಚರಿಸುತ್ತೀರಿ..?

ಆ ರೀತಿಯ ರೂಡಿ ಇಲ್ಲ. ಕನ್ನಡ ರಾಜ್ಯೋತ್ಸವ ಸಂಬಂಧ, ಕನ್ನಡಪರ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯುತ್ತಾರೆ. ಅಂತಹ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತೀನಿ. ಇದೇ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ರೂಢಿ. ಆದ್ರೆ ಎಲ್ಲರಲ್ಲೂ ಇದು ನನ್ನ ಭಾಷೆ ಎಂಬ ಪ್ರೀತಿಯ ಭಾವನೆ ಮೂಡಬೇಕು. ನನ್ನ ಭಾಷೆಯನ್ನು ನಾನು ಮಾತಾಡಬೇಕು ಅಂದ್ರೆ ಖುಷಿ ಮತ್ತೆ ಹೆಮ್ಮೆ ಎನಿಸಬೇಕು. ಕನ್ನಡಿಗನಾಗಿ ಹುಟ್ಟಿರೋದು ನನ್ನ ಪುಣ್ಯ, ನನ್ನ ಅದೃಷ್ಟ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾಳೆ ಮಾತ್ರ ವಿಶೇಷವಾಗಿ ಆಚರಿಸೋಣ ಅಂತಿದ್ದೀನಿ. ನಾಳೆ ಒಂದು ದಿನ ಪೂರ್ತಿ ಬರಿಯ ಕನ್ನಡದಲ್ಲೇ ಮಾತನಾಡಬೇಕು ಅನ್ನೋ ತೀರ್ಮಾನಕ್ಕೆ ಬಂದಿದ್ದೀನಿ. ನನ್ನ ಮನೆಯಲ್ಲಿ, ಹೊರಗೆ ಚಿತ್ರೀಕರಣದ ಸ್ಥಳದಲ್ಲಿ ಗೆಳೆಯರೊಂದಿಗೆ ಕೇವಲ ಕನ್ನಡದಲ್ಲೇ ಮಾತನಾಡುವ ಮೂಲಕ ಕನ್ನಡದ ದಿನವನ್ನು ಕನ್ನಡವನ್ನೇ ಹೆಚ್ಚಾಗಿ ಬಳಸುವ ಮೂಲಕ ಆಚರಿಸೋಣ ಅಂತಂದುಕೊಂಡಿದ್ದೀನಿ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಏನ್ ಹೇಳ್ತೀರಿ?

ಎರಡು ಸಾವಿರ ವರ್ಷಗಳಿಗಿಂತ ಹೆಚ್ಚು ಇತಿಹಾಸ ಹೊಂದಿರುವ ಭಾಷೆ ನಮ್ಮ ಕನ್ನಡ ಭಾಷೆ. ಇದರ ಮನದಟ್ಟನ್ನ ಕೇಂದ್ರ ಸರ್ಕಾರಕ್ಕೆ ಮಾಡಿಕೊಡಬೇಕು. ಇಲ್ಲಿ ನಾವೆಲ್ಲರೂ ಒಮ್ಮತದಿಂದ ಹೋರಾಡಬೇಕು ನಾವಿದನ್ನು. ಹೋರಾಟದ ಮೂಲಕ ಪಡಿಯುವ ಪರಿಸ್ಥಿತಿ ಉಂಟಾಗಿರೋದೇ ನೋವಿನ ಸಂಗತಿ. 2000 ವರ್ಷಗಳ ಇತಿಹಾಸ ಇರುವಂತ ಪುರಾವೆ, ದಾಖಲೆಗಳೇ ಇದ್ಯಲ್ಲಾ? ಇದಕ್ಕೆ ಸಂಬಂಧಪಟ್ಟಂತೆ, ಕೇಂದ್ರ ಸರ್ಕಾರಕ್ಕೆ ಅರಿವು ಮೂಡಿಸಬೇಕು. ಸ್ವಲ್ಪ ವಿಳಂಬ ಆಗುತ್ತಿದೆಯಷ್ಟೇ ಆದ್ರೆ, ಒಬ್ಬ ಕನ್ನಡಿಗನಾಗಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಖಂಡಿತವಾಗಿ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆ, ನನಗೆ ಬಹಳ ಇದೆ.

ನಿಮ್ಮ ಪ್ರಕಾರ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೇನು?

ಕನ್ನಡವನ್ನು ದೈನಂದಿನ ಬದುಕಲ್ಲಿ ರೂಢಿಸಿಕೊಳ್ಳಿ. ನಮ್ಮ ಕನ್ನಡ ಭಾಷೆಯನ್ನು ಹೆಚ್ಚಾಗಿ ಉಪಯೋಗಿಸುವ ಮೂಲಕ ಆಚರಿಸಿ. ಕನ್ನಡ ಭಾಷೆಯನ್ನು ಹೆಚ್ಚಾಗಿ ಉಪಯೋಗಿಸೋದು, ಅದನ್ನು ಗೌರವಿಸಿದಷ್ಟೇ ಮಹತ್ತರವಾದ ಕೆಲಸ. ಅದನ್ನು ರೂಢಿಸಿಕೊಂಡ್ರೆ, ಅದೇ ಒಂದು ಆಚರಣೆ, ಅದೇ ಒಂದು ಸಂಭ್ರಮ. ಹಿಂದೆ ಯಾವ ಜನ್ಮದಲ್ಲಿ ಹುಟ್ಟಿದ್ದೆವೋ, ಮುಂದೆ ಯಾವ ಜನ್ಮದಲ್ಲಿ ಹುಟ್ಟುತ್ತೀವೋ ಗೊತ್ತಿಲ್ಲ. ಈ ಜನ್ಮದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೀವಲ್ಲಾ, ಇದನ್ನು ಸಂಭ್ರಮಿಸೋಣ. ಆಚರಿಸೋಣ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಕರ್ನಾಟಕ ಮಾತೆ