ಇ-ಕಾಮರ್ಸ್‍ನಲ್ಲಿ ಸಣ್ಣ ವ್ಯಾಪಾರಿಗಳ ದೊಡ್ಡ ಹೆಜ್ಜೆ

ಟೀಮ್​​ ವೈ.ಎಸ್​​.

ಇ-ಕಾಮರ್ಸ್‍ನಲ್ಲಿ ಸಣ್ಣ ವ್ಯಾಪಾರಿಗಳ ದೊಡ್ಡ ಹೆಜ್ಜೆ

Thursday October 22, 2015,

2 min Read

ನಂಬರ್‍ಮಾಲ್. ಕಿರಣ್ ಗಲಿ ಅವರ ಕನಸಿನ ಕೂಸು. ಸಣ್ಣ ಅಂಗಡಿಯೊಂದರ ಮಾಲೀಕ ಕಿರಣ್ ಇವತ್ತು ಉದ್ಯಮಿ. ಅದಕ್ಕೆ ಕಾರಣ ಈ ನಂಬರ್‍ಮಾಲ್ ಅಪ್ಲಿಕೇಶನ್. ಅಂದಹಾಗೇ, ಇದೆಲ್ಲಾ ಪ್ರಾರಂಭವಾಗಿದ್ದು 2011ರ ದೀಪಾವಳಿ ಹಬ್ಬದಂದು.

ಮೊಬೈಲ್ ರೀಚಾರ್ಜ್ ಮಾಡೋದರಿಂದ ಹಿಡಿದು, ವಿದ್ಯುತ್ ಬಿಲ್, ವ್ಯಾಪಾರ ವಹಿವಾಟಿಗಾಗಿ ಹಣ ವರ್ಗಾವಣೆ ಮಾಡಲು ಸಣ್ಣ ವ್ಯಾಪಾರಿಗಳ ಪರದಾಟ ನೋಡಿ ಅದಕ್ಕೆ ತಾವೇ ಪರಿಹಾರ ಕಂಡುಹಿಡಿದಿದ್ದಾರೆ ಕಿರಣ್. ಆ ಪರಿಹಾರವೇ ಈ ನಂಬರ್‍ಮಾಲ್ ಅಪ್ಲಿಕೇಶನ್. ತನ್ನಂಥ ಸಣ್ಣ ವಾಪಾರಿಗಳು ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಬಗೆಹರಿಸಲು ಪಣ ತೊಟ್ಟ ಕಿರಣ್ 2012ರಲ್ಲಿ ಅದಕ್ಕೆ ತಾಂತ್ರಿಕ ಹಾಗೂ ತಾತ್ವಿಕ ಅಂತ್ಯ ಹಾಡಿಯೇಬಿಟ್ಟರು. ಕಷ್ಟಪಟ್ಟು ಕೂಡಿಟ್ಟಿದ್ದ ಸುಮಾರು 10 ಲಕ್ಷ ರೂಪಾಯಿ ಹಣವನ್ನೇ ವ್ಯಯಿಸಿ ನಂಬರ್‍ಮಾಲ್ ಅಪ್ಲಿಕೇಶನ್ ಪ್ರಾರಂಭಿಸಿದರು ಕಿರಣ್.

image


ವ್ಯಾಪಾರಿ ಸಂಬಂಧದ ಹಣ ವರ್ಗಾವಣೆ ಹಾಗೂ ಸೇವಾದಾರರಿಗೆ ಇಂಟರ್‍ನೆಟ್ ಮೂಲಕ ಹಣ ಪಾವತಿಸಲು ಒಂದೇ ವೇದಿಕೆ ಕಲ್ಪಿಸಿರುವ ಭಾರತದ ಮೊದಲ ಮೊಬೈಲ್ ಅಪ್ಲಿಕೇಶನ್ ಎಂಬ ಖ್ಯಾತಿ ಹೈದರಾಬಾದ್ ಮೂಲದ ಈ ನಂಬರ್‍ಮಾಲ್‍ಗೆ ಸಲ್ಲುತ್ತದೆ. ಈ ಮೊದಲು ಕೇವಲ ಎಸ್‍ಎಮ್‍ಎಸ್ ಸಂದೇಶ ಸೌಲಭ್ಯವಷ್ಟೇ ಇತ್ತು. ಆದ್ರೆ ನಂಬರ್‍ಮಾಲ್ ಅಂತರ್ಜಾಲವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಹೊಸ ಭಾಷ್ಯ ಬರೆದಿದೆ. ಕಾರಣ, ಮೊಬೈಲ್ ಬಿಲ್ ಪಾವತಿ, ಡಿಟಿಎಚ್ ರೀಚಾರ್ಜ್, ಡೇಟಾ ಕಾರ್ಡ್ ರೀಚಾರ್ಜ್, ಬಸ್ ಟಿಕೆಟ್ ಬುಕ್ಕಿಂಗ್ ಸೇರಿದಂತೆ ಇನ್ನೂ ಹಲವು ಸೇವೆಗಳ ದರವನ್ನು ಈ ನಂಬರ್‍ಮಾಲ್ ಮೂಲಕ ಪಾವತಿಸಬಹುದು. ನಂಬರ್‍ಮಾಲ್ ಕಾರ್ಯಕ್ಷಮತೆ ಕಂಡು ಮನಸೋತಿರುವ 15 ಸಾವಿರಕ್ಕೂ ಹೆಚ್ಚು ಮಂದಿ ಸಣ್ಣ ವ್ಯಾಪಾರಿಗಳು ಈಗ ಈ ಅಪ್ಲಿಕೇಶನ್‍ಅನ್ನು ಬಳಸುತ್ತಿದ್ದಾರೆ. ಭಾರತದಾದ್ಯಂತ 1 ಕೋಟಿ 40 ಲಕ್ಷ ಸಣ್ಣ ವ್ಯಾಪಾರಿಗಳಿದ್ದು, ಈ ವಲಯದ ಆರ್ಥಿಕ ಮೌಲ್ಯ ಬರೊಬ್ಬರಿ 600 ಬಿಲಿಯನ್ ಡಾಲರ್ ದಾಟುತ್ತದೆ. ಹೀಗಾಗಿಯೇ ಈ ಕ್ಷೇತ್ರದಲ್ಲಿ ನಮಗೆ ಉತ್ತಮ ಮಾರುಕಟ್ಟೆಯಿದೆ ಅನ್ನೋದು ಕಿರಣ್ ಅಭಿಪ್ರಾಯ.

ಬಹುತೇಕ ಭಾರತೀಯರು ಇ-ಕಾಮರ್ಸ್‍ನಲ್ಲಿ ಖರೀದಿ ಮಾಡದ ಕಾರಣ, ಅವರಿಗೆ ಇಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯಿಲ್ಲ. ಹಲವು ಕಾರಣಗಳಿಂದಾಗಿ ಮನೆ ಸಮೀಪದ ಅಂಗಡಿಗಳಲ್ಲಿ ಅಥವಾ ಸಣ್ಣ ವ್ಯಾಪಾರಿಗಳಿಂದಲೇ ಜನ ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡ್ತಾರೆ. ಇಂತಹ ಜನರಿಗೆ ಇ- ಕಾಮರ್ಸ್ ಕುರಿತು ಅಷ್ಟಾಗಿ ಮಾಹಿತಿ ಇಲ್ಲ. ಹೀಗಾಗಿಯೇ ಸಣ್ಣ ವ್ಯಾಪಾರಿಗಳೊಂದಿಗೆ ಸೇರಿ ಇ- ಕಾಮರ್ಸ್ ಮೂಲಕ ಜನರನ್ನು ನಿರಾಯಾಸವಾಗಿ ತಲುಪಬಹುದು. ಹಾಗೇ ಇಲ್ಲಿ ಸ್ಟೋರ್‍ಕಿಂಗ್ ಮತ್ತು ಐಪೇಯಂತಹ ಕೆಲ ಕಂಪನಿಗಳು ಬಿಟ್ಟರೆ ನಮಗೆ ಪ್ರತಿಸ್ಪರ್ಧಿಗಳೂ ಇಲ್ಲ ಅಂತ ತಮ್ಮ ತಮ್ಮ ಯಶಸ್ಸಿನ ಕುರಿತು ಹೇಳಿಕೊಳ್ಳುತ್ತಾರೆ ಕಿರಣ್.

ಇಂತಹ ಹಲವು ಸೌಲಭ್ಯಗಳ ಜೊತೆಗೇ ಗ್ರಾಹಕರನ್ನು ಸೆಳೆಯಲು ದೈನಂದಿನ ಬಳಕೆಯ ವಸ್ತುಗಳನ್ನೂ ಆನ್‍ಲೈನ್‍ನಲ್ಲೇ ನಂಬರ್‍ಮಾಲ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದನ್ನು ಹೈಬ್ರಿಡ್ ಮಾದರಿಯಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸುವ ಐಡಿಯಾ ಕಿರಣ್ ಅವರದು. ಮಾರಾಟಗಾರ, ಸೇವಾದಾರ, ವ್ಯಾಪಾರಿ ಹಾಗೂ ಗ್ರಾಹಕರ ನಡುವೆ ಅತ್ಯುತ್ತಮ ರೀತಿಯಲ್ಲಿ ಸಂಪರ್ಕ ಸೇತುವೆಯಂತೆ ನಂಬರ್‍ಮಾಲ್ ಕೆಲಸ ಮಾಡುತ್ತದೆ. ಇದಕ್ಕಾಗಿ ಮಾರಾಟಗಾರರು ಇಂತಿಷ್ಟು ಅಂತ ಹಣ ಕಟ್ಟಬೇಕಷ್ಟೇ.

ಹೀಗೆ ಇ- ಕಾಮರ್ಸ್ ವಲಯದಲ್ಲಿ ಅತ್ಯುತ್ತಮ ಅವಕಾಶಗಳಿವೆ. ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ- ವಹಿವಾಟುಗಳಿಗೆ ಒಂದು ವೇದಿಕೆ ನಿರ್ಮಿಸಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ನಂಬರ್‍ಮಾಲ್‍ಅನ್ನೇ ವಿಸ್ತರಿಸಲು ಕಿರಣ್ ಇದೇ ಜನವರಿಯಲ್ಲಿ ಎಸ್‍ಆರ್‍ಐ ಕ್ಯಾಪಿಟಲ್‍ನಿಂದ 5 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಆ ಹಣವನ್ನು ಕಿರಣ್, ಒಂದೊಳ್ಳೆ ತಂಡ ಹಾಗೂ ತಾಂತ್ರಿಕ ಅಭಿವೃದ್ಧಿಗಾಗಿ ವ್ಯಯಿಸಿದ್ದಾರೆ. ಹೀಗಾಗಿಯೇ ನಂಬರ್‍ಮಾಲ್ ಈಗಾಗಲೇ ವಾರ್ಷಿಕ 120 ಕೋಟಿ ರೂಪಾಯಿ ವಹಿವಾಟು ಮಾಡುತ್ತಿದೆ. ವಿಶೇಷ ಅಂದ್ರೆ ಈ ಕಂಪನಿ ಪ್ರತಿ ತಿಂಗಳು ಶೇಕಡಾ 10ರಷ್ಟು ಬೆಳವಣಿಗೆ ಕಾಣುತ್ತಿದೆ.

ಈಗ ಹೆಚ್ಚು ಸ್ಪರ್ಧೆಯಿಲ್ಲದಿದ್ದರೂ ಇಲ್ಲಿನ ಮಾರುಕಟ್ಟೆ ನೋಡಿ ಮುಂದಿನ ವರ್ಷಗಳಲ್ಲಿ ಹಲವು ಕಂಪನಿಗಳು ಜನ್ಮ ತಾಳುವ ಸಾಧ್ಯತೆಯಿದೆ. ಹಾಗೇ ಗ್ರಾಮೀಣ ಪ್ರದೇಶದಲ್ಲಿ ಇಂಟರ್‍ನೆಟ್ ಇಲ್ಲದ ಕಾರಣ 2ಜಿ ಮೂಲಕ ಕೆಲಸ ಮಾಡಲಾಗುತ್ತಿದೆ ಎಂದು ಈ ಇ ಕಾಮರ್ಸ್ ಸವಾಲುಗಳ ಕುರಿತು ಮಾತನಾಡುತ್ತಾರೆ ಕಿರಣ್.