ಟೀಮ್ ವೈ.ಎಸ್.ಕನ್ನಡ
ಪ್ರತಿಭೆಯೊಂದಿದ್ರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ತಾಜಾ ನಿದರ್ಶನ ಪಿಯೂಶ್ ಗೋಯಲ್. ಜೈಲಿನಲ್ಲಿದ್ದುಕೊಂಡೇ ಐಐಟಿ ಪಾಸು ಮಾಡಿದ ಬುದ್ಧಿವಂತ ವಿದ್ಯಾರ್ಥಿ ಈತ. ಹೌದು ಕಳೆದ 2 ವರ್ಷಗಳಿಂದ ಉಳಿದೆಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಂತೆ ಪಿಯೂಶ್ ಗೋಯಲ್ ಕೂಡ ಹಗಲು ರಾತ್ರಿ ಕಷ್ಟಪಟ್ಟು ಓದಿದ್ದಾನೆ. ಒಂದೇ ಒಂದು ವ್ಯತ್ಯಾಸ ಅಂದ್ರೆ ಪಿಯೂಶ್ ಓದಿದ್ದು ಮನೆಯಲ್ಲೋ, ಹಾಸ್ಟೆಲ್ನಲ್ಲೋ ಅಲ್ಲ, ಓಪನ್ ಜೈಲಿನಲ್ಲಿ. ಪಿಯೂಶ್ ಗೋಯಲ್ನ ತಂದೆ ಫೂಲ್ ಚಂದ್ ಗೋಯಲ್ ಒಬ್ಬ ಅಪರಾಧಿ. ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾನೆ. ಆತ ಅತ್ಯಂತ ಬಡವನಾಗಿರೋದ್ರಿಂದ ನಗರದ ಹಾಸ್ಟೆಲ್ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುವ ಅವಕಾಶವಿಲ್ಲ. ಹಾಗಂತ ಪಿಯೂಶ್ ಓದುವ ಆಸೆಯನ್ನೇನೂ ಕೈಬಿಡಲಿಲ್ಲ, ನಿರಾಶನಾಗಲಿಲ್ಲ. ತಂದೆ ಇರುವ ಜೈಲಿನಲ್ಲಿದ್ದುಕೊಂಡೇ ಐಐಟಿ ಜೆಇಇನಲ್ಲಿ 453ನೇ ರ್ಯಾಂಕ್ನೊಂದಿಗೆ ಉತ್ತೀರ್ಣನಾಗಿದ್ದಾನೆ. ವಿಶೇಷ ಅಂದ್ರೆ ಪಿಯೂಶ್ ಗೋಯಲ್ಗೆ ಈಗಷ್ಟೇ 18ರ ಹರೆಯ.
``ಜೈಲು ಅಷ್ಟೇನೂ ಕೆಟ್ಟದಾಗಿಲ್ಲ. ಅಲ್ಲಿನ ವಾತಾವರಣ ಅತ್ಯಂತ ಕೆಟ್ಟದಾಗಿರುತ್ತದೆ ಎಂದೇ ಜನರು ಭಾವಿಸುತ್ತಾರೆ. ಆದ್ರೆ ಅದು ಸುಳ್ಳು. ನಾನೀಗ ನನ್ನ ತಂದೆಯ ಕನಸನ್ನು ನನಸು ಮಾಡಿದ್ದೇನೆಂಬ ತೃಪ್ತಿಯಿದೆ. ಅವರು ನನ್ನನ್ನು ಜೈಲಿನಲ್ಲಿಟ್ಟುಕೊಂಡು, ನನ್ನ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡುತ್ತ ಧೈರ್ಯ ಮೆರೆದಿದ್ದಾರೆ'' ಅನ್ನೋದು ಪಿಯೂಶ್ನ ಸಂತಸದ ನುಡಿ. ಕೊಲೆ ಕೇಸೊಂದರಲ್ಲಿ ಫೂಲ್ ಚಂದ್ ಗೋಯಲ್ಗೆ 14 ವರ್ಷ ಸೆರೆವಾಸ ವಿಧಿಸಲಾಗಿತ್ತು. ಆತನ ಶಿಕ್ಷೆ ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ಹಾಗಾಗಿ ಓಪನ್ ಜೈಲಿನಲ್ಲಿರಲು ಫೂಲ್ ಚಂದ್ಗೆ ಅವಕಾಶ ಮಾಡಿಕೊಡಲಾಗಿದೆ. ಕೆಲಸಕ್ಕಾಗಿ ಆತ ಜೈಲು ಆವರಣದಿಂದ ಹೊರಗೆ ಹೋಗಬಹುದು, ಆದ್ರೆ ಸಂಜೆ ವೇಳೆಗೆ ಕಾರಾಗೃಹಕ್ಕೆ ಹಿಂತಿರುಗಬೇಕು. ಕಳೆದ ಎರಡು ವರ್ಷಗಳಿಂದ ಪಿಯೂಶ್ ಗೋಯೆಲ್ ಕೂಡ ತಂದೆ ಫೂಲ್ ಚಂದ್ ಜೊತೆ ಜೈಲಿನಲ್ಲೇ ವಾಸವಾಗಿದ್ದಾನೆ.
ನಗರದಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಫೂಲ್ ಚಂದ್ ತಿಂಗಳಿಗೆ 12000 ರೂಪಾಯಿ ಸಂಪಾದಿಸುತ್ತಾನೆ. ಹಾಸ್ಟೆಲ್ ಖರ್ಚನ್ನು ಭರಿಸಲು ಅಸಾಧ್ಯವಾದರೂ ಕೋಟಾದಲ್ಲೇ ಇರುವ ಕೋಚಿಂಗ್ ಸೆಂಟರ್ ಒಂದಕ್ಕೆ ಮಗನನ್ನು ಕಳುಹಿಸಲು ಫೂಲ್ ಚಂದ್ ಸಫಲನಾಗಿದ್ದಾನೆ. ``ಇಲ್ಲಿ ಓದುವುದು ನಿಜಕ್ಕೂ ಕಷ್ಟದ ಕೆಲಸ. ಆದ್ರೆ ಜೈಲು ಅಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಯ್ತು. ಕರ್ತವ್ಯದಲ್ಲಿರುವ ಗಾರ್ಡ್ಗಳು ಅದರಲ್ಲೂ ಯುವಕರು ನನ್ನ ಮಗನನ್ನು ಪ್ರೋತ್ಸಾಹಿಸಿದ್ದಾರೆ'' ಎನ್ನುತ್ತಾನೆ ಫೂಲ್ ಚಂದ್.
ಪಿಯೂಶ್ ಗೋಯಲ್ ಪಡೆದ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಅಧಿಕಾರಿಗಳು ಜೈಲಿನಲ್ಲಿರುವ ಖೈದಿಗಳಿಗೆ ಇನ್ನಷ್ಟು ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ``ಇಂತರ ಪ್ರತಿಕೂಲ ಸಂದರ್ಭದಲ್ಲೂ ಪಿಯೂಶ್ ಗೋಯೆಲ್ ಐಐಟಿಯಲ್ಲಿ ಉತ್ತೀರ್ಣನಾಗಿರುವುದು ಸಂತೋಷ ತಂದಿದೆ'' ಎನ್ನುತ್ತಾರೆ ಜೈಲಿನ ಸೂಪರಿಂಟೆಂಡೆಂಟ್ ಶಂಕರ್ ಸಿಂಗ್. ಒಟ್ಟಿನಲ್ಲಿ ಜೈಲಿನಲ್ಲಿದ್ದುಕೊಂಡೇ ಐಐಟಿಯಲ್ಲಿ ತೇರ್ಗಡೆಯಾದ ಪಿಯೂಶ್ ಎಲ್ಲ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದ್ದಾನೆ.
ಇದನ್ನೂ ಓದಿ...
ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ- ಶ್ರಮವಹಿಸಿದರೆ ಲಾಭ ಖಚಿತ..!
ಕಮಲ್ ಹಾಸನ್, ರಾಜಮೌಳಿಗೆ ಆಗದೇ ಇದ್ದಿದ್ದನ್ನು ಇವರು ಮಾಡಿದ್ರು: ಸಿನಿಮಾದ ಮುಂದಿನ ಭವಿಷ್ಯ ಇಂದೇ ತಿಳಿಯಿರಿ..!
Related Stories
March 14, 2017
March 14, 2017
Stories by YourStory Kannada