ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!

ವಿಸ್ಮಯ

7

ಬದುಕು ರೂಪಿಸಿಕೊಳ್ಳಲು ವಿದ್ಯೆ ಇದ್ರೆ ಸಾಲದು, ಅವಕಾಶವನ್ನು ಹುಡುಕಿಕೊಳ್ಳುವ ಕಣ್ಣು, ಅದನ್ನು ಬಳಸಿಕೊಳ್ಳುವ ತೋಳಿಗಿಂತ- ಛಲ ಗಟ್ಟಿಯಾಗಿರಬೇಕು. ಇದಕ್ಕೆ ಸಾಕ್ಷಿ ಎಂಬಂತೆ ನಮ್ಮ ಮುಂದೆ ಸಾಕಷ್ಟು ಜನಗಳಿದ್ದಾರೆ. ಕೆಲವರು ಅಪ್ಪ ಹಾಕಿದ್ದ ಆಲದ ಮರದಲ್ಲಿ ಹಾಯಾಗಿ ಇದ್ದಾರೆ.. ಇನ್ನು ಕೆಲವರು ತಮ್ಮ ಸ್ವಂತ ದುಡಿಮೆ, ಪ್ರತಿಭೆಯನ್ನು ಹೊಂದಿರುತ್ತಾರೆ.. ಹಾಗೇ ಇಲ್ಲಿ ಒಬ್ಬರು ತಮ್ಮ ಬದುಕನ್ನ ಸ್ವಾಲಂಭಿಯಾಗಿ ರೂಪಿಸಿಕೊಳ್ಳಬೇಕು ಅನ್ನೋ ನಿಟ್ಟಿನಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ಜೋತು ಬೀಳದೇ, ಅದಕ್ಕಿಂತ ಇನ್ನು ಮುಂದೆ ಹೋಗಿ ಹೊಸ ಉದ್ಯಮವನ್ನ ಆರಂಭಿಸಿದ್ದಾರೆ..

ಇವರ ಹೆಸರು ಗಗನ್‍ರಾಜ್.. ವಯಸ್ಸು ಇನ್ನು 25 ವರ್ಷ ಮಾತ್ರ.. ಓದಿದ್ದು ಎಂಬಿಎ ಪದವಿ, ಆಗಿದ್ದು ಒಂದು ಫಾರ್ಮ್‍ನ ಮಾಲೀಕ.. ಬೇರೆ ಯಾವರಿಗಿಂತ ಸ್ವಲ್ಪ ವಿಭಿನ್ನವಾಗಿ ಬದುಕು ರೂಪಿಸಿಕೊಳ್ಳಬೇಕು ಅನ್ನೋ ಇವರ ಮನೋಭಾವ ಇಂದು ಎಲ್ಲರೂ ಇವರನ್ನು ಗುರುತಿಸುವಂತೆ ಮಾಡಿದೆ. ಬಿ.ಕಾಂ ಮುಗಿಸಿದ ನಂತರ ಕ್ಯಾಂಪಸ್ ಸಂದರ್ಶನದಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಫೈನಾನ್ಸಿಯಲ್ ಅನಾಲಿಸ್ಟ್ ಆಗಿ ಆಯ್ಕೆಯಾಗಿದ್ದರು. ಉತ್ತಮ ಸಂಬಳ ಕೂಡ ದೊರೆತಿತ್ತು. ಆದರೆ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲೇ ಗಗನ್ ಅವರನ್ನು ತಡೆ ಹಿಡಿಯಿತು. ಇದರಿಂದಾಗಿ ತಾವೇ ಕೆಲವರಿಗೆ ಉದ್ಯೋಗ ನೀಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ..

ಅಂದಹಾಗೇ ಇವರು ಕೋಳಿ ಸಾಕಣೆಯಲ್ಲಿ ತೊಡಗಿಸಿಕೊಳ್ಳಲು ಮುಂದಾದ್ರು. ಮಾಂಸಾಹಾರಪ್ರಿಯರಿಗೆ ನಾಟಿಕೋಳಿ ಅಂದರೆ ಬಲು ಪ್ರೀತಿ.. ಇದೇ ಕೋಳಿ ಬೇಕು ಅಂತ ಹುಡುಕಿ ಹೋಗುವ ಮಂದಿ ಹೆಚ್ಚಿಗೆ ಇರುವುದನ್ನು ತಿಳಿದು ನಾಟಿಕೋಳಿ ಫಾರ್ಮ್ ಶುರು ಮಾಡಿದ್ರು.. ಕೋಳಿ ಸಾಕಣೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರಿಗೆ ಸಾಕಷ್ಟು ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ. ಇನ್ನು ಇವರು ಉದ್ಯಮವನ್ನು ಆರಂಭ ಮಾಡಬೇಕೆಂದ ಅಂದುಕೊಂಡಾಗ ಬಂಡವಾಳದ ಕೊರತೆ ಬಂತು. ಆದ್ರೆ ಅವ್ರ ಸ್ನೇಹಿತರ ಸಹಾಯದಿಂದ ಇಂದು ದೊಡ್ಡ ಫಾರ್ಮ್ ಹೌಸ್‍ನ ಮಾಲೀಕರಾಗಿದ್ದಾರೆ. ಹತ್ತಾರು ಮಂದಿಗೆ ಕೆಲಸ ನೀಡಿದ್ದಾರೆ. ಸದ್ಯ ಮದ್ದೂರು, ಶಿರಾ ಹಾಗೂ ಧಾರವಾಡದಲ್ಲೂ ಘಟಕ ಸ್ಥಾಪಿಸಲು ಯೋಜನೆ ಹಾಕಿಕೊಂಡಿದ್ದಾರೆ..

ಗಗನ್ ಹೇಳುವಂತೆ ಬಂಡವಾಳವೊಂದರಿಂದಲೇ ಎಲ್ಲ ಸಾಧ್ಯ ಆಗುವುದಿಲ್ಲ. ಧೈರ್ಯ, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು. ಕಡಿಮೆ ಬಂಡವಾಳ ಹಾಕಿ ದುಡಿದು ಯಶಸ್ವಿ ಉದ್ಯಮಿಯಾದವರು ನಮ್ಮ ಜಣ್ಣೆದುರಿಗೇ ಇದ್ದಾರೆ. ಅಂಥವರನ್ನು ನಾವು ನೋಡಿ ಕಲಿಯಬೇಕು ಅಂತಾರೆ ಯಶಸ್ವಿ ಉದ್ಯಮಿ ಗಗನ್.. ಇನ್ನು ಮಾರುಕಟ್ಟೆಯಲ್ಲಿ ಯಾವ ಕೋಳಿ ಚಾಲ್ತಿಯಲ್ಲಿದೆ ಅನ್ನೊದು ಗಮನದಲ್ಲಿ ಇರಬೇಕು ಅಂತ ಕಿವಿ ಮಾತು ಹೇಳತ್ತಾರೆ. ದೇಸಿ ತಳಿಗಳಾದ ಗಿರಿರಾಜ, ಗಿರಿರಾಣಿ, ಸಾಸೊ, ಸ್ವರ್ಣಧಾರ, ಆಸಿಲ್ ಹಾಗೂ ಕಾವೇರಿ ತಳಿಗಳನ್ನು ಪಾರ್ಮ್‍ನಲ್ಲಿ ಪಡೆಯಬಹುದು.. ವಾರದಲ್ಲಿ 300 ಕೆಜಿ ಮಾಂಸದ ವಹಿವಾಟು ನಡೆಯುತ್ತಿದೆ. ಕೋಳಿ ಗೊಬ್ಬರಕ್ಕೂ ಬೇಡಿಕೆ ಹೆಚ್ಚು ಅಂತಾರೆ ಗಗನ್..

ಏನ್ ಹೇಳುತ್ತಾರೆ ಪೋಷಕರು ಮಗನ ಸಾಧನೆಗೆ..?

ನಾವು ಕೆಲವು ಭ್ರಮೆಗಳೊಂದಿಗೆ ಶಿಕ್ಷಣ ಮುಗಿಸುತ್ತೇವೆ.. ಕೆಲಸ ಹುಡುಕಿಕೊಂಡು ಮತ್ತೊಬ್ಬರ ಮೆಚ್ಚುಗೆ ಪಡೆಯುವ ಯತ್ನದಲ್ಲೇ ಜೀವನ ಸವೆದುಹೋಗುತ್ತದೆ. ಅದರ ಬದಲಾಗಿ ನಾವೇ ಕೆಲಸ ನೀಡುವ ಗುರಿ ಹಾಕಿಕೊಳ್ಳಬೇಕು ಅನ್ನೂತ್ತಾರೆ ಗಗನ್ ತಂದೆ.. ನನ್ನ ಮಗನ ಈ ಹೆಜ್ಜೆ ನಿಜಕ್ಕೂ ಖುಷಿ ತಂದು ಕೊಟ್ಟಿದೆ ಈತನ ಈ ಸಾಧನೆ ಬೇರೆ ಯಾವರಿಗೂ ಸ್ಫೂತಿ ಆಗಲಿ ಅನ್ನೋದು ನಮ್ಮ ಆಸೆ ಅಂತಾರೆ ಗೋಪಾಲಸಿಂಗ್.

ನಾಟಿ ಕೋಳಿಗೆ ದುಪ್ಪಟ್ಟು ಹಣ.. ಬ್ರಾಯ್ಲರ್ ಚಿಕನ್‍ಗಿಂತ ನಾಟಿ ಕೋಳಿಗೆ ದುಪ್ಪಟ್ಟು ದರವಿದೆ. ಮೊಟ್ಟೆಗೆ ಸದಾ ಕಾಲ ಬೇಡಿಕೆ ಇದ್ದೇ ಇದೆ.. ಕೋಳಿ ಸಾಕಣೆ ಮಾಡುವವರು 50 ನೀಡಿ ನಾಲ್ಕು ಹೆಣ್ಣು ಹಾಗೂ ಒಂದು ಗಂಡು ಮರಿ ಪಡೆದು ಸಾಕಾಣಿಕೆ ಆರಂಭಿಸಬಹುದು ಅಂತಾರೆ ಗಗನ್. ವರ್ಷಕ್ಕೆ ಮೂರೂವರೆ ಸಾವಿರದಿಂದ 5 ಸಾವಿರ ರೂಪಾಯಿ ತನಕ ಗಳಿಸಬಹುದು. ಸಾವಿರ ಕೋಳಿ ಸಾಕಣೆ ಮಾಡುವವರು ವರ್ಷಕ್ಕೆ 70ರಿಂದ75 ಸಾವಿರ ಗಳಿಸಬಹುದು. ಒಂದು ಮೊಟ್ಟೆಗೆ ಗಗನ್ ಅವರ ಫುಡ್ ಬಾಂಡ್ ಪ್ರಾಡಕ್ಟ್ಸ್ ಪ್ರೈ.ಲಿಮಿಟೆಡ್‍ನಿಂದ 5.50 ನೀಡಿ ಖರೀದಿಸುತ್ತಾರೆ. ಒಟ್ಟಿನಲ್ಲಿ ಹೊಸದೆನೋ ಮಾಡಬೇಕು ಅನ್ನೋ ಗಗನ್ ಬೇರೆ ಯುವಕರಿಗೂ ಮಾದರಿ ಆಗಿದ್ದಾರೆ. 

Related Stories