ಮೊದಲ ಉದ್ಯಮದ ಸೋಲಿನಿಂದ ಕಲಿತ ಪಾಠ

ಟೀಮ್​​ ವೈ.ಎಸ್​. ಕನ್ನಡ

0

ಆದಿತ್ಯ ಮೆಹ್ತಾ ಮುಂಬೈ ಮೂಲದ ಉದ್ಯಮಿ. ಲಂಡನ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡಿದ್ದಾರೆ. ಸದ್ಯ `ಎಡ್ಜಿಟಲ್' `ಟಿಪ್‍ಸ್ಟಾಪ್' ಸಂಸ್ಥೆಗಳ ಜೊತೆ ಕೈಜೋಡಿಸಿದ್ದಾರೆ. ಆದಿತ್ಯ ಮೆಹ್ತಾ ಅವರ ಪಾಲಿಗೂ ಯಶಸ್ಸು ಕಬ್ಬಿಣದ ಕಡಲೆಯಾಗಿತ್ತು. ಅವರು ಕೈಹಾಕಿದ್ದ ಮೊದಲ ಉದ್ಯಮವೇ ಸೋಲಿನ ಸುಳಿಗೆ ಸಿಲುಕಿತ್ತು. ಆ ಅನುಭವಗಳನ್ನೆಲ್ಲ ಆದಿತ್ಯ ಮೆಹ್ತಾ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಸುಮಾರು 2 ವರ್ಷಗಳ ಸತತ ಪ್ರಯತ್ನದ ಬಳಿಕ ನಾನು, ನನ್ನ ಮೊದಲ ಉದ್ಯಮವನ್ನು ಮುಚ್ಚಲು ನಿರ್ಧರಿಸಿದ್ದೆ. ಉದ್ಯಮದ ಸೋಲಿಗೆ ಕಾರಣವೇನು? ನಮ್ಮಿಂದ ತಪ್ಪಾಗಿದ್ದೆಲ್ಲಿ ಅನ್ನೋದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದರ ಜೊತೆ ಜೊತೆಗೆ ಈ ಸೋಲಿನಿಂದ ಕಲಿತ ಪಾಠವನ್ನು ಭವಿಷ್ಯದ ಉದ್ಯಮಗಳಲ್ಲಿ ಬಳಸಿಕೊಳ್ಳಬೇಕು. ಉದ್ಯಮ ವೈಫಲ್ಯದಿಂದ ನಾನು ಕಲಿತ ಪಾಠಗಳ ಸಾರಾಂಶ ಇಲ್ಲಿದೆ.

1. ಉತ್ಪನ್ನದ ಬಗ್ಗೆ ಗಮನವಿರಲಿ

ಸಂಸ್ಥೆಯಲ್ಲಿ ಮಾರಾಟ ಮತ್ತು ಹಣಕಾಸು ವಿಭಾಗದ ಜವಾಬ್ಧಾರಿಯನ್ನು ನಾನು ಹೊತ್ತುಕೊಂಡಿದ್ದೆ. ಅದೊಂದು ತಂತ್ರಜ್ಞಾನ ತೀವ್ರತೆಯಿರುವ ಉದ್ಯಮ. ಪ್ರತಿಸ್ಪರ್ಧಿ ಮಾರಾಟಗಾರನಿಗೆ ಹೊರಗುತ್ತಿಗೆ ನೀಡಿದ್ರೆ ಆತ ಎಲ್ಲದರ ಬಗೆಗೂ ಕಾಳಜಿ ವಹಿಸ್ತಾನೆ ಅನ್ನೋದು ನನ್ನ ಲೆಕ್ಕಾಚಾರವಾಗಿತ್ತು. ಚೀಫ್ ಟೆಕ್ನಿಕಲ್ ಆಫೀಸರ್ ಒಬ್ಬರನ್ನು ನೇಮಕ ಮಾಡಿಕೊಂಡು, ಅವರಿಂದ ಎದುರಾಗುವ ಸ್ಪರ್ಧೆಯನ್ನು ಎದುರಿಸಲು ನಾನು ಸಿದ್ಧನಿರಲಿಲ್ಲ. ಆತ ಕೂಡ ಉತ್ಪನ್ನದ ಬಗ್ಗೆ ನನ್ನಷ್ಟೇ ಭಾವೋದ್ರಿಕ್ತನಾಗಿರುತ್ತಾನೆ ಅನ್ನೋ ಆತಂಕವೂ ಇತ್ತು. ನೀವು ತಂತ್ರಜ್ಞಾನ ಆಧರಿತ ಉದ್ಯಮವನ್ನು ಮುನ್ನಡೆಸುತ್ತಿದ್ದರೆ, ಮಾರಾಟಗಾರನನ್ನು ಕೇವಲ ಮಾರಾಟಗಾರನಂತೆ ನೋಡುವುದು ಬಹಳ ಮುಖ್ಯ.

2. ಉದ್ಯೋಗಿಗಳ ನಿರೀಕ್ಷೆಗಳನ್ನು ಪರಿಗಣಿಸಿ

ಉದ್ಯಮದಲ್ಲಿ ಇನ್ನಷ್ಟು ಹೂಡಿಕೆ ಮಾಡಿ, ಯಶಸ್ಸಿನತ್ತ ಮುನ್ನಡೆಯುವ ಆತುರ ನಿಮಗಿದ್ದೇ ಇರುತ್ತೆ. ಆ ಸಂದರ್ಭಲ್ಲಿ ಆರಂಭದಲ್ಲಿ ನೀವು ನೇಮಕ ಮಾಡಿಕೊಂಡ ಸಿಬ್ಬಂದಿಯ ಪಾತ್ರ ನಿರ್ಣಾಯಕವಾಗುತ್ತದೆ. ಉದ್ಯಮ ಪರಿಸರದಲ್ಲಿನ ಅಪಾಯ ಹಾಗೂ ಕೆಲಸಕ್ಕೆ ಸಿಗುವ ಪ್ರಶಂಸೆಯನ್ನು ಅವರು ಅರ್ಥಮಾಡಿಕೊಂಡಿದ್ದಾರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದೇವೆಂಬ ಭಾವನೆ ಅವರಲ್ಲಿದ್ರೆ, ಅಂತಹುದ್ದೇ ಉದ್ಯೋಗ ಖಾತ್ರಿಯನ್ನು ಅವರು ಬಯಸಿದ್ರೆ ಉದ್ಯಮವೇನಾದ್ರೂ ವಿಫಲವಾದಲ್ಲಿ ನಿರಾಶರಾಗುವುದು ಖಂಡಿತ. ಜೊತೆಗೆ ಉದ್ಯಮ ಪರಿಸರಕ್ಕೆ ಅಗತ್ಯವಾದ ಅಧಿಕ ಪರಿಶ್ರಮ ಹಾಕಲು ಕೂಡ ಅವರು ಮುಂದಾಗದೇ ಇರಬಹುದು.

3. ಹೂಡಿಕೆಗೆ ಹೆಚ್ಚು ಸಮಯ ವ್ಯಯಿಸಬೇಡಿ

ಹೂಡಿಕೆ ಅತ್ಯಂತ ಮುಖ್ಯ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ನಿಧಿ ಸಂಗ್ರಹಿಸುವ ಪ್ರಯತ್ನದಲ್ಲಿ ನೀವು ಬ್ಯುಸಿಯಾಗಿದ್ರೆ ಉತ್ಪನ್ನದ ಬಗ್ಗೆ ಗಮನಹರಿಸಲು ಮರೆತು ಹೋಗಬಹುದು. ನಾನು ಕೂಡ ಹೂಡಿಕೆ ಬಗ್ಗೆ ಹೆಚ್ಚು ಗಮನಹರಿಸಿದ್ದೆ, ಅದಕ್ಕಾಗಿಯೇ ಬಹಳ ಸಮಯ ವಿನಿಯೋಗಿಸಿದ್ದೆ. ಹೂಡಿಕೆದಾರರ ಆಸಕ್ತಿ ಗಮನಿಸಿದಾಗ ನನ್ನ ಉತ್ಪನ್ನ ಇನ್ನೂ ಹಿನ್ನಡೆಯಲ್ಲಿದೆ ಅನ್ನೋದು ಅರಿವಿಗೆ ಬಂದಿತ್ತು. ಪರಿಣಾಮ ಹೂಡಿಕೆದಾರರು ಅದರಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಯ್ತು.

4. ಜನರನ್ನು ಸಂಸ್ಥೆಯಲ್ಲಿ ತೊಡಗಿಸಿ

ಸ್ನೇಹಿತರು ಅಥವಾ ನಿಮ್ಮ ಮೊದಲ ಸಂಸ್ಥೆಯಲ್ಲಿನ ಪರಿಚಯಸ್ಥರ ತಂಡ ಕಟ್ಟುವ ಉತ್ಸಾಹ ನಿಮ್ಮಲ್ಲಿ ಇದ್ದೇ ಇರುತ್ತೆ. ಅಷ್ಟೆಲ್ಲಾ ಕಸರತ್ತಿನ ಬಳಿಕವೂ ಕೆಲವರು ಅವರ ಹುದ್ದೆ ನಿಭಾಯಿಸಲು ಅಸಮರ್ಥರಾಗಿರಬಹುದು. ಆದ್ರೆ ನೀವು ಅವರಲ್ಲಿ ಅವ್ಯಕ್ತವಾದ ನಂಬಿಕೆ ಇಟ್ಟಿದ್ದೀರಾ ಎಂಬ ವಾಸ್ತವವೇ ಅವರನ್ನು ಆ ಹುದ್ದೆಗೆ ಯೋಗ್ಯರನ್ನಾಗಿ ಪರಿವರ್ತಿಸುತ್ತದೆ.

5. ನಿಧಿ ಸಂಗ್ರಹದ ನಂತರವೂ ಹಣದ ಮೂಲಗಳ ಹುಡುಕಾಟದಲ್ಲಿರಿ

ನಿಧಿ ಸಂಗ್ರಹದ ಬಳಿಕ ಹಲವು ಉದ್ಯಮಗಳು ನಿರಾಯಾಸವಾಗಿ ಹಣವನ್ನು ಖರ್ಚು ಮಾಡುತ್ತವೆ. ಫಂಡಿಂಗ್‍ನಿಂದ ಉತ್ತಮ ಮಾನವ ಶಕ್ತಿಯನ್ನು ಪಡೆಯಲು ಅನುಕೂಲವಾಗುತ್ತದೆ, ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಬಹುದು ಅನ್ನೋದು ಸುಳ್ಳಲ್ಲ. ಹಾಗಂತ ಸಂಸ್ಥಾಪಕ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಐಶಾರಾಮಿ ಕಾರು ಕೊಂಡುಕೊಳ್ಳಬೇಕೆಂದಿಲ್ಲ. ಅತಿಯಾದ ಖರ್ಚು ಸಂಸ್ಥೆಯನ್ನು ದುರ್ಬಲಗೊಳಿಸುತ್ತದೆ. ಕಂಪನಿ ವಿಫಲವಾದಲ್ಲಿ ಮಾಧ್ಯಮಗಳಲ್ಲಿ ರುಣಾತ್ಮಕ ಅಭಿಪ್ರಾಯಗಳು ಹರಿದಾಡುತ್ತವೆ.

6. ಉದ್ಯಮ ತಂತ್ರ ರೂಪಿಸುವ ವೇಳೆ ತೆರೆದ ಮನಸ್ಸಿನಿಂದ ಯೋಚಿಸಿ

ಒಂದು ದೊಡ್ಡ ಸಂಸ್ಥೆಯನ್ನು ಮುನ್ನಡೆಸುವುದಕ್ಕಿಂದ ಹೊಸ ಉದ್ಯಮ ಆರಂಭಿಸುವುದು ಸುಲಭ. ಮಾರುಕಟ್ಟೆಯ ಆಗುಹೋಗುಗಳ ಬಗ್ಗೆ ಅಲರ್ಟ್ ಆಗಿರಿ. ನಿಮ್ಮ ಅಸಲಿ ಯೋಜನೆಯ ಹೊರತಾಗಿ ಏನನ್ನಾದರೂ ಮಾಡಬೇಕೆನಿಸಿದಲ್ಲಿ ಹಿಂದೇಟು ಹಾಕಬೇಡಿ. ಆ ನಿರ್ಧಾರವೇ ನಿಮ್ಮ ಕಂಪನಿಯನ್ನು ಉಳಿಸಲೂಬಹುದು.

7. ಉದ್ಯಮದ ವೈಫಲ್ಯದ ಬಗ್ಗೆ ಯಾವಾಗ ಪ್ರಕಟಿಸಬೇಕೆಂಬ ಅರಿವಿರಲಿ

ಸಂಸ್ಥಾಪಕರು ತಮ್ಮ ಉದ್ಯಮದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಆದ್ರೆ ವಾಸ್ತವವಾದಿಗಳಾಗಿರಿ, ಸಹಿಸಲಸಾಧ್ಯವಾದ ಬೆಳವಣಿಗೆಗಳು ನಡೆದಲ್ಲಿ, ನಿರೀಕ್ಷೆಯಂತೆ ಗ್ರಾಹಕರ ಪ್ರತಿಕ್ರಿಯೆ ಸಿಗದೇ ಇದ್ದಲ್ಲಿ, ಕೂಡಲೇ ಉದ್ಯಮವನ್ನು ಮುಚ್ಚಿಬಿಡಿ. ಅದರಿಂದಾಗಿ ನೀವು ಅತಿ ದೊಡ್ಡ ನಷ್ಟದಿಂದ ತಪ್ಪಿಸಿಕೊಳ್ಳಬಹುದು.

ಅನುವಾದಕರು: ಭಾರತಿ ಭಟ್​​​​​​​

Related Stories