`ವಾಹ್ ಎಕ್ಸ್​​ಪ್ರೆಸ್'ನ 7 ಕಮಾಂಡೋಗಳು..!ಲಾಜಿಸ್ಟಿಕ್ಸ್ ಕಂಪನಿಯ ಯಶಸ್ಸಿನ ಗುಟ್ಟು

ಟೀಮ್​​ ವೈ.ಎಸ್​. ಕನ್ನಡ

0

ಮುಂಬೈ ಮಹಾನಗರಿಯ ಅಂಧೇರಿ ಎಂಟಿಎನ್‍ಎಲ್ ಲೇನ್‍ನಲ್ಲಿರುವ `ವಾಹ್ ಎಕ್ಸ್​​ಪ್ರೆಸ್' ಎಲ್ಲರ ಕಣ್ಸೆಳೆಯುತ್ತಿತ್ತು. ಇದೊಂದು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಲಾಜಿಸ್ಟಿಕ್ಸ್ ಉದ್ಯಮ. `ವಾಹ್ ಎಕ್ಸ್​ಪ್ರೆಸ್' ಕೇವಲ ಆ ಪ್ರದೇಶದಲ್ಲಿ ಮಾತ್ರ ಪ್ರಸಿದ್ಧಿ ಪಡೆದಿರಲಿಲ್ಲ, ಇಡೀ ಇಂಡಸ್ಟ್ರಿಗೇ ಭದ್ರಕೋಟೆಯಂತಾಗಿತ್ತು. ಸಂಸ್ಥೆ ಎಷ್ಟು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆಯೋ, ಅದರ ಕಚೇರಿ ಕೂಡ ಅಷ್ಟೇ ಅಚ್ಚುಕಟ್ಟಾಗಿದೆ. ವಾಹ್ ಎಕ್ಸ್​​ಪ್ರೆಸ್‍ನ ಸಂಸ್ಥಾಪಕರಲ್ಲಿ ಒಬ್ಬರಾದ ಸಂದೀಪ್ ಪಡೋಶಿ ತಾವು ಪಟ್ಟ ಶ್ರಮ, ಉದ್ಯಮದ ಬಗೆಗಿನ ಅದಮ್ಯ ಉತ್ಸಾಹ ಹಾಗೂ ತಮ್ಮ ದೃಷ್ಟಿಕೋನ ಎಲ್ಲವನ್ನೂ `ಯುವರ್‍ಸ್ಟೋರಿ' ಜೊತೆ ಹಂಚಿಕೊಂಡಿದ್ದಾರೆ. ತಮ್ಮ ಕಂಪನಿಯ 7 ಕಮಾಂಡೋಗಳ ಬಗ್ಗೆ ವಿವರಿಸಿದ್ದಾರೆ.

1. ``ಕಾನೂನು, ಷೇರ್​​ ಹೋಲ್ಡರ್‍ಗಳು ಮತ್ತು ಕುಟುಂಬದ ಎಲ್ಲ ಸದಸ್ಯರಿಗೂ ಗೌರವ''

``ಬಹುತೇಕ ಎಲ್ಲಾ ಕಂಪನಿಗಳಲ್ಲೂ ಕಾರ್ಯಾಚರಣೆಯೇ ಪ್ರಮುಖವಾಗಿರಬಹುದು, ಆದ್ರೆ ನಾವು ಎಚ್‍ಆರ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ನಮ್ಮ ಉದ್ಯೋಗಿಗಳನ್ನು ನಾವು ಡೆಲಿವರಿ ಬಾಯ್ಸ್ ಎಂದು ಕರೆಯುವುದಿಲ್ಲ, ಸರ್ವೀಸ್ ಮಾರ್ಷಲ್ಸ್ ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕಂಪನಿಯ ಸ್ವತ್ತುಗಳಿಗೆ ಕಿಮ್ಮತ್ತು ನೀಡುವ ಜೊತೆಗೆ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಆದ್ಯತೆಗಳಲ್ಲಿ ಪ್ರಮುಖವಾದದ್ದು'' ಅನ್ನೋದು ಸಂದೀಪ್ ಅವರ ಬಿಚ್ಚು ನುಡಿ. ಕಚೇರಿಯಲ್ಲೇ ಉಪಹಾರವನ್ನು ಒದಗಿಸುತ್ತಿರುವ ಏಕೈಕ ಲಾಜಿಸ್ಟಿಕ್ಸ್ ಕಂಪನಿ ಅಂದ್ರೆ `ವಾಹ್ ಎಕ್ಸ್​ಪ್ರೆಸ್'. ಸಂಸ್ಥೆಯಲ್ಲಿ ಗೊಂದಲ, ತಿಕ್ಕಾಟಗಳ ಪ್ರಮಾಣವಂತೂ ಶೇ.5ಕ್ಕಿಂತಲೂ ಕಡಿಮೆ. ಆರಂಭದಲ್ಲಿ ನಮಗೆ ಸಾಥ್ ನೀಡಿದವರು ಇವತ್ತಿಗೂ ಜೊತೆಗಿದ್ದಾರೆ. ಹಾಗಾಗಿ ವಾಹ್ ಎಕ್ಸ್​ಪ್ರೆಸ್‍ಗೆ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರಿದೆ.

2. ``ಅದ್ಭುತ ಎನಿಸುವಂಥ ಸೇವೆ''

ಸಂಸ್ಥೆ ಹಾಗೂ ಸಂಸ್ಥಾಪಕರು ಡೆಲಿವರಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಬಹುತೇಕ ಎಲ್ಲ ಬಿಲಿಯನ್ ಡಾಲರ್ ಮೌಲ್ಯದ ಕಂಪನಿಗಳು ತಮ್ಮ ವೆಬ್‍ಸೈಟ್‍ಗೆ ಹೆಚ್ಚು ಒತ್ತುಕೊಡುತ್ತವೆ. ಯುಐ, ಉತ್ಪನ್ನ ವ್ಯಾಪ್ತಿ, ಆನ್‍ಲೈನ್ ಅನುಭವ ಬಹಳ ಮುಖ್ಯ ಎಂದುಕೊಳ್ತಾರೆ. ಆದ್ರೆ ಇವೆಲ್ಲದಕ್ಕೂ ಮೂಲ ಡೆಲಿವರಿ, ವಿತರಣೆ ಅನ್ನೋದು ಇಡೀ ಪ್ರಕ್ರಿಯೆಯ ಮಹತ್ವದ ಭಾಗ. ಸಿಬ್ಬಂದಿಯೇ ನಮ್ಮ ಸೇವೆಯ ಜೀವಾಳ. ಡೆಲಿವರಿ ಬಾಯ್ಸ್ ಕಂಪನಿಯ ಮುಖವಿದ್ದಂತೆ. ನಮ್ಮ ಗ್ರಾಹಕರನ್ನು ಪ್ರತಿನಿಧಿಸಲು, ಕಂಪನಿಯ ಪ್ರತಿಷ್ಠೆ ಹಾಗೂ ಬ್ರಾಂಡ್ ನೇಮ್ ಅನ್ನು ಉಳಿಸಲು ಸಿಬ್ಬಂದಿಗೆ ತರಬೇತಿ ನೀಡುತ್ತೇವೆ. ಚೆನ್ನಾಗಿ ಮಾತನಾಡುವುದು ಹೇಗೆ? ಒಳ್ಳೆಯ ನಡತೆ, ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುವ ಕಲೆಯನ್ನು ಕಲಿಸಿಕೊಡಲಾಗುತ್ತದೆ. ಜೊತೆಗೆ ಉತ್ಪನ್ನದ ಸಂಪೂರ್ಣ ವಿವರಗಳನ್ನು ಕೂಡ ಅವರು ತಿಳಿದುಕೊಂಡಿರಬೇಕು. ಅದರಲ್ಲಿ ಸಮಸ್ಯೆಗಳಿದ್ರೆ ಪತ್ತೆ ಮಾಡಬಹುದು, ಇನ್‍ಸ್ಟಾಲ್ ಮಾಡಬಹುದು, ಉತ್ಪನ್ನವನ್ನು ವಾಪಸ್ ಪಡೆಯಬಹುದು, ರಿಫಂಡ್ ಕೂಡ ಮಾಡಿಸಿಕೊಳ್ಳಬಹುದು.

3. ರಿಸ್ಕ್ ತೆಗೆದುಕೊಳ್ಳಲು ರೆಡಿ..!

ಇದು ಸಂಸ್ಥಾಪಕರ ವರ್ತನೆಯನ್ನು ಅವಲಂಬಿಸಿದೆ. ಮೊದಲು ಸೂರತ್ ಮತ್ತು ಮುಂಬೈನಲ್ಲಿ ಮಾತ್ರ `ವಾಹ್ ಎಕ್ಸ್‍ಪ್ರೆಸ್' ಕಚೇರಿಯಿತ್ತು. ಈಗ ಭಾರತದ 8 ನಗರಗಳಲ್ಲಿ ವಾಹ್ ಎಕ್ಸ್‍ಪ್ರೆಸ್‍ನ 20ಕ್ಕೂ ಹೆಚ್ಚು ಕಚೇರಿಗಳಿವೆ. ವಾಹ್ ಎಕ್ಸ್‍ಪ್ರೆಸ್‍ನ ಸಂಸ್ಥಾಪಕರಾದ ಸಂದೀಪ್ ಪಡೋಶಿ, ಜಯೇಶ್ ಕಾಮತ್ ಮತ್ತು ಮಝರ್ ಫಾರೂಖಿ 40-45 ವರ್ಷದವರು. ಮೂವರೂ 2 ದಶಕಗಳಿಂದ ಯಶಸ್ವಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆದ್ರೆ ಇ-ಕಾಮರ್ಸ್ ಹವಾದಿಂದಾಗಿ ಹಿನ್ನಡೆ ಅನುಭವಿಸುವ ಭೀತಿ ಶುರುವಾಗಿತ್ತು. `ರೀಡರ್ಸ್ ಡೈಜೆಸ್ಟ್', `ಅಮರ್ ಚಿತ್ರ ಕಥಾ'ದಂತಹ ಪ್ರಸಿದ್ಧ ಪಬ್ಲಿಕೇಷನ್‍ಗಳಲ್ಲಿ ಸಂದೀಪ್ ಕೆಲಸ ಮಾಡಿದ್ದಾರೆ. ಹಾಗಾಗಿ ಕ್ಯಾಶ್ ಆನ್ ಡೆಲಿವರಿ, ಹೋಮ್ ಆರ್ಡರಿಂಗ್ ಬಗ್ಗೆ ಅವರಿಗೆ ಮೊದಲೇ ಗೊತ್ತಿತ್ತು. ಮಝರ್ ಹಾಗೂ ಜಯೇಶ್ ಅವರ ಜೊತೆ 7 ವರ್ಷಗಳ ಕಾಲ ಕಾರ್ಪೊರೇಟ್ ಟೈಅಪ್ ಮಾಡಿಕೊಂಡಿದ್ರು, ಯಾಕಂದ್ರೆ ಅವರಿಬ್ರೂ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಎಕ್ಸ್‍ಪರ್ಟ್‍ಗಳು. ಅವರ ಅನುಭವವನ್ನು ಬಳಸಿಕೊಂಡು ಹೊಸದೇನನ್ನಾದ್ರೂ ಮಾಡಬೇಕೆಂಬ ಸಂದೀಪ್ ಅವರ ಕಲ್ಪನೆ ಕೈಗೂಡಿದೆ.

4. ``ಧೈರ್ಯ ಮತ್ತು ಬದಲಾವಣೆ ಒಪ್ಪಿಕೊಳ್ಳುವ ಸಾಮರ್ಥ್ಯ''

ಬಹುತೇಕ ಇ-ಕಾಮರ್ಸ್ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಅರೆಕಾಲಿಕ ದಾಸ್ತಾನು, ಭಾಗಶಃ ಮಾರುಕಟ್ಟೆ ಮಾದರಿಯಿಂದ ಸಂಪೂರ್ಣ ಮಾರುಕಟ್ಟೆಗೆ ಬದಲಾಯಿಸುತ್ತಿವೆ. ಈ ಹೊಸ ಟ್ರೆಂಡ್ ಲಾಜಿಸ್ಟಿಕ್ಸ್ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರಿಂದ ಡೆಲಿವರಿ ಮತ್ತು ಕೊರಿಯರ್ ಕಂಪನಿಗಳಿಗೆ, ದೇಶದ ವಿವಿಧೆಡೆಯ ಮಾರಾಟಗಾರರಿಂದ ಆರ್ಡರ್ ಸಂಗ್ರಹಿಸುವುದು ಕಷ್ಟವಾಗುತ್ತಿದೆ. ಅದನ್ನು ವಿವಿಧ ಸ್ಥಳಗಳಿಗೆ ಡೆಲಿವರಿ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಾಹ್ ಎಕ್ಸ್​​ಪ್ರೆಸ್ ಮೊಟ್ಟಮೊದಲ ಬಾರಿಗೆ ಮೈಲ್ ಪಿಕ್ ಅಪ್ ನೆಟ್‍ವರ್ಕ್ ಅನ್ನು ಸೃಷ್ಟಿಸಿದೆ. ಇದು ದೇಶದ ಅತಿ ದೊಡ್ಡ ಯಾಂತ್ರಿಕ ವ್ಯವಸ್ಥೆಗಳಲ್ಲೊಂದು. ಇದು ರೆಡಿಫ್‍ನ ಮೊದಲ ಹಾಗೂ ಪೇಟಿಮ್‍ನ ಮೂರನೇ ಮೈಲ್ ಪಿಕ್ ಅಪ್‍ಗಳನ್ನು ನಿರ್ವಹಿಸುತ್ತದೆ.

5. ``ನಿಮ್ಮ ಸ್ಮಾರ್ಟ್‍ಫೋನ್ ಮೂಲಕ ಪ್ರತಿಜ್ಞೆ''

ತಂತ್ರಜ್ಞಾನವನ್ನು ಸಕ್ರಿಯಗೊಳಿಸಬಹುದು ಅನ್ನೋದು ಸಂದೀಪ್ ಅವರ ಬಲವಾದ ನಂಬಿಕೆ. ಸ್ಮಾರ್ಟ್‍ಫೋನ್ ಹೊಂದಿರುವವರನ್ನೇ ನೇಮಕ ಮಾಡಿಕೊಳ್ಳಲಾಗುತ್ತದೆ. ಯಾಕಂದ್ರೆ ಸರ್ವೀಸ್ ಮಾರ್ಷಲ್‍ಗಳು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ರಿಯಲ್ ಟೈಮ್‍ನಲ್ಲಿ ಅಪ್‍ಡೇಟ್‍ಗಳನ್ನು ಪೋಸ್ಟ್ ಮಾಡಬೇಕಾಗುತ್ತದೆ. ಡೆಲಿವರಿ ಪ್ರಯತ್ನ ವಿಫಲವಾದಲ್ಲಿ ಅದಕ್ಕೆ ಮಾರ್ಷಲ್‍ಗಳ ಬಳಿ ಗ್ರಾಹಕರ ಮನೆ ಬಾಗಿಲಿನ ಫೋಟೋ ಸಾಕ್ಷ್ಯವಿರಬೇಕು. ಎಲ್ಲಾ ಸರ್ವೀಸ್ ಮಾರ್ಷಲ್‍ಗಳ ಕೈಗೆ ಸ್ಕ್ಯಾನರ್‍ಗಳನ್ನು ಕಟ್ಟಲಾಗುತ್ತದೆ. ನೈಜ ಸಮಯದಲ್ಲಿ ಸಾಮಾಗ್ರಿಗಳ ರವಾನೆಯ ಬಗ್ಗೆ ಸ್ಕ್ಯಾನಿಂಗ್ ವಿವರಗಳು ನಿಖರವಾಗಿ ಮತ್ತು ಸ್ವಯಂಚಾಲಿತವಾಗಿ ದೊರೆಯುತ್ತವೆ.

ಈ ವರ್ಷದ `ಮೋಸ್ಟ್ ಇನ್ನೋವೇಟಿವ್ ಲಾಜಿಸ್ಟಿಕ್ಸ್ ಕಂಪನಿ' ಅನ್ನೋ ಹೆಗ್ಗಳಿಕೆಗೂ ವಾಹ್ ಎಕ್ಸ್​​ಪ್ರೆಸ್ ಪಾತ್ರವಾಗಿದೆ. ಸರ್ವೀಸ್ ಮಾರ್ಷಲ್‍ಗಳಿಗೆ ಸಾಮಾಗ್ರಿಗಳನ್ನು ಡೆಲಿವರಿ ಮಾಡಲು ಸ್ಪೋಟ್ರ್ಸ್ ಸೈಕಲ್‍ಗಳನ್ನು ಕೊಡಲಾಗಿದೆ. ಈ ಮೂಲಕ ವಾಹ್ ಎಕ್ಸ್‍ಪ್ರೆಸ್ ಇಂಧನ ಉಳಿತಾಯ ಮಾಡುತ್ತಿದೆ. ಅಷ್ಟೇ ಅಲ್ಲ ಮೋಟೋಸೈಕಲ್ ಆಧಾರಿತ ಡೆಲಿವರಿ ಕೂಡ ಇದೆ.

6. ``ಪೈಪೋಟಿಯಲ್ಲಿ ಮುನ್ನಡೆ ಸಾಧಿಸಲು ಸರ್ವಪ್ರಯತ್ನ''

ಡೆಲಿವರಿಯಲ್ಲಿ ಮಾಡಿದ ಸಣ್ಣ ಪುಟ್ಟ ಬದಲಾವಣೆಗಳಿಂದಾಗಿ ವಾಹ್ ಎಕ್ಸ್​ಪ್ರೆಸ್ ಪ್ರತಿಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದ್ರಿಂದಾಗಿ ತಮ್ಮಲ್ಲಿ ಸೃಜನಶೀಲತೆಗೆ ಅವಕಾಶ ಸಿಕ್ಕಿದೆ ಎನ್ನುತ್ತಾರೆ ಸಂದೀಪ್. ಸಂದೀಪ್ ಅವರ ಪ್ರಕಾರ ಭಾರತದ 3ಪಿಎಲ್ ಮಾರುಕಟ್ಟೆ ಇನ್ನು 4-5 ವರ್ಷಗಳಲ್ಲಿ ಭಾರೀ ಬೆಳವಣಿಗೆ ಹೊಂದಲಿದೆ. 2019ರ ವೇಳೆಗೆ ಇಂಡಸ್ಟ್ರಿಯ ಮೌಲ್ಯ 48,000 ಕೋಟಿಗೆ ತಲುಪಲಿದೆ. ವಾಹ್ ಎಕ್ಸ್​​ಪ್ರೆಸ್ 48 ಗಂಟೆಗಳೊಳಗೆ ಗ್ರಾಹಕರಿಗೆ ಹಣ ಪಾವತಿಸುತ್ತದೆ. ಕಾರ್ಡ್ ಆನ್ ಡೆಲಿವರಿ ಸೇವೆ ಕೂಡ ಲಭ್ಯವಿದೆ. `ಡೆಲಿವರಿ', `ಇಕೊಮ್‍ಎಕ್ಸ್​​ಪ್ರೆಸ್', `ಗೋ ಜಾವಾಸ್' ಸಂಸ್ಥೆಗಳು ವಾಹ್ ಎಕ್ಸ್​​ಪ್ರೆಸ್‍ನ ಪ್ರಮುಖ ಪ್ರತಿಸ್ಪರ್ಧಿಗಳು. ಇ-ಕಾಮಸ್ ಕಂಪನಿಗಳನ್ನು ಕೂಡ ಪ್ರತಿಸ್ಪರ್ಧಿಗಳೆಂದೇ ಪರಿಗಣಿಸಬಹುದು.

ಕೇವಲ 6 ತಿಂಗಳುಗಳಲ್ಲಿ ವಾಹ್ ಎಕ್ಸ್​ಪ್ರೆಸ್ ಕಚೇರಿಗಳ ಸಂಖ್ಯೆ 2ರಿಂದ 20ರಷ್ಟಾಗಿದೆ. ಫ್ಲಿಪ್‍ಕಾರ್ಟ್, ಪೇಟಿಮ್, ರೆಡಿಫ್, ನಿಕಾ, ಫ್ಯಾಷನ್ & ಯು, ಅಮೇಝಾನ್ ಸಂಸ್ಥೆಗಳಿಗೂ ವಾಹ್ ಎಕ್ಸ್‍ಪ್ರೆಸ್ ಡೆಲಿವರಿ ಸೇವೆ ಒದಗಿಸುತ್ತಿದೆ. ಪ್ರತಿದಿನ ಪಾರ್ಸಲ್‍ಗಳ ಸಂಖ್ಯೆ 15,000 ಕ್ಕಿಂತಲೂ ಹೆಚ್ಚಾಗಿದೆ. 2017ರ ವೇಳೆಗೆ 120 ಕೋಟಿ ಆದಾಯ ಗಳಿಸುವ ಯೋಜನೆಯನ್ನು ವಾಹ್ ಎಕ್ಸ್‍ಪ್ರೆಸ್ ಹಾಕಿಕೊಂಡಿದೆ. 2020-21ರ ವೇಳೆಗೆ ಆದಾಯ 1000 ಕೋಟಿಗೆ ತಲುಪುವ ಸಾಧ್ಯತೆಯಿದ್ದು, ಭಾರತದ ಟಾಪ್ 5 ಲಾಜಿಸ್ಟಿಕ್ಸ್ ಕಂಪನಿಗಳಲ್ಲಿ ವಾಹ್ ಎಕ್ಸ್‍ಪ್ರೆಸ್ ಗುರುತಿಸಿಕೊಳ್ಳಲಿದೆ. ವಿಶೇಷ ಅಂದ್ರೆ ತಿಂಗಳಿನಿಂದ ತಿಂಗಳಿಗೆ ವಹಿವಾಟು ಶೇ.50ರಷ್ಟು ಪ್ರಗತಿ ಹೊಂದುತ್ತಿದೆ. ಜುಲೈನಲ್ಲಿ ಓನಿಡಾ ಗ್ರೂಪ್‍ನಿಂದ ವಾಹ್ ಎಕ್ಸ್‍ಪ್ರೆಸ್‍ಗೆ ಬಂಡವಾಳದ ನೆರವು ಕೂಡ ದೊರೆತಿದೆ.

7. ``ಆತ್ಮದ ಜೊತೆಗೆ ಕಂಪನಿ ಕಟ್ಟಿ ಬೆಳೆಸೋಣ''

ಉದ್ಯಮವನ್ನು ಸ್ವಾಧೀನಪಡಿಸಿಕೊಂಡು, ಅಭಿವೃದ್ಧಿ ತೋರಿಸುವುದು ಮಾತ್ರ ನಮ್ಮ ಗುರಿಯಲ್ಲ, ಗ್ರಾಹಕರಿಗೆ ಡೆಲಿವರಿ ಅನುಭವ ಕೂಡ ಆನ್‍ಲೈನ್ ಶಾಪಿಂಗ್‍ನಂತೆ ಎಂಜಾಯ್ ಮಾಡುವಂತಾಗಬೇಕು ಎನ್ನುತ್ತಾರೆ ಮಝರ್ ಫಾರೂಖಿ. ಸಿಬ್ಬಂದಿಗೆ ಕೂಡ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದರಿಂದ ಅವರು ತೃಪ್ತಿದಾಯಕವಾಗಿ ಕೆಲಸ ಮಾಡಬಹುದು. ನಮ್ಮ ಯಂತ್ರದ ಬಹು ಮುಖ್ಯ ಚಕ್ರ ಅಂದ್ರೆ ಸಿಬ್ಬಂದಿ ಅನ್ನೋದು ಅವರ ಹೆಮ್ಮೆಯ ನುಡಿ. ಒಟ್ನಲ್ಲಿ ಉದ್ಯೋಗಿಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ವಾಹ್ ಎಕ್ಸ್‍ಪ್ರೆಸ್ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಲೇಖಕರು: ಬಿಂಜಲ್ ಶಾ
ಅನುವಾದಕರು: ಭಾರತಿ ಭಟ್

Related Stories