ದೀನರಿಗೆ ದಾರಿದೀಪವಾದ “ಪ್ರಿಯಾ ಎಂಟರ್‍ಟೈನ್‍ಮೆಂಟ್ಸ್ ಪ್ರೈವೇಟ್ ಲಿಮಿಟೆಡ್”

ಟೀಮ್​​ ವೈ.ಎಸ್​​.

0

ಹೆಚ್ಚುತ್ತಿರುವ ಮಾಲಿನ್ಯದಿಂದ ಕಲುಷಿತ ನೀರು, ಗಾಳಿ, ಆಹಾರವನ್ನು ಉಪಯೋಗಿಸುವ ಜನರು ಇಲ್ಲಸಲ್ಲದ ಕಾಯಿಲೆಗಳನ್ನು ತಮ್ಮ ಬೆನ್ನಿಗಂಟಿಸಿಕೊಂಡು ತೊಂದರೆಪಡುವಂತಾಗಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಯಾವುದೇ ಪದಾರ್ಥ, ವಸ್ತುಗಳನ್ನು ಕೊಳ್ಳಬೇಕೆಂದರೂ ಬೆಲೆ ಗಗನದೆತ್ತರಕ್ಕೆ ಹೋಗಿವೆ. ಪರಿಸ್ಥಿತಿ ಹೀಗಿರುವಾಗ ಬಡ ಹಾಗೂ ಮಧ್ಯಮ ವರ್ಗದವರು ಉತ್ತಮ ಆಹಾರಗಳನ್ನು ಸೇವಿಸುವುದಿರಲಿ, ಕಾಯಿಲೆಗಳು ಬಂದಾಗ ಔಷಧಿಗಳನ್ನು ಕೊಳ್ಳುವಷ್ಟು ಶಕ್ತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವೇನು ಮಾಡಬೇಕು ಎಂದು ತಲೆ ಮೇಲೆ ಕೈ ಹೊತ್ತು ಕೂರುವವರಿಗೆ ನಾವಿದ್ದೇವೆ ಎಂದು ಅಭಯ ಹಸ್ತ ಚಾಚುತ್ತಿದ್ದಾರೆ ಪಿ.ಇ.ಪಿ.ಎಲ್‍ನವರು. ಅಂದಹಾಗೆ ಈ ಪಿ.ಇ.ಪಿ.ಎಲ್ ಬಗ್ಗೆ ಹೇಳುವುದಕ್ಕಿಂತ ಮುಂಚೆ ಶೇಖ್ ಆಲಂ ಹಾಗೂ ಸಬಿತಾ ದಾಸ್ ಅವರುಗಳ ಮನದಾಳದ ಮಾತುಗಳನ್ನು ಮೊದಲು ನೀವು ಇಲ್ಲಿ ಓದಲೇಬೇಕು...

ಪಶ್ಚಿಮ ಬಂಗಾಳ ರಾಜ್ಯದ ಬೀರ್‍ಬೂಮ್ ಜಿಲ್ಲೆಯ ಇಲಾಮ್ ಬಜಾರ್ ಪ್ರದೇಶದ ಬಡ ರೈತ ಶೇಖ್ ಆಲಂ. ಇವರು ಎದೆ ಉರಿತದಿಂದ ಬಳಲುತ್ತಿದ್ದರು. ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿದ್ದ ಇವರಿಗೆ ಎದೆ ಉರಿತಕ್ಕೆ ಔಷಧಿಯನ್ನು ತೆಗೆದುಕೊಳ್ಳಲು ಹಣವಿರಲಿಲ್ಲ. ಆ ಸಮಯದಲ್ಲಿ ಹೀಗೆ ಯಾರೋ ಒಬ್ಬರು ಹೇಳಿದ ಸಲಹೆಯ ಮೇರೆಗೆ ತನ್ನ ಸ್ಥಳೀಯ ಪ್ರದೇಶದಲ್ಲೇ ಇರುವ ‘ಬಾಲಕಾ’ ಎಂಬ ಎನ್.ಜಿ.ಓ. ಸಂಸ್ಥೆಗೆ ಭೇಟಿ ನೀಡಿ, ನಂತರ ಅಲ್ಲಿ ಎದೆ ಉರಿಗೆ ಉಚಿತವಾಗಿ ಔಷಧಿಯನ್ನು ಪಡೆದಿದ್ದಾರೆ ಶೇಖ್ ಆಲಂ.

ಶೇಖ್ ಆಲಂ ತರಹವೇ ಇನ್ನೊಂದು ಎನ್.ಜಿ.ಓ. ಸಂಸ್ಥೆಯಿಂದ ಸಹಾಯ ಪಡೆದವರು ದಕ್ಷಿಣ ದೀನಜ್‍ಪುರ ಜಿಲ್ಲೆಯಲ್ಲಿರುವ ಬಲುರ್‍ಘಾಟ್‍ನ ಸಬಿತಾ ದಾಸ್. ಚರ್ಮದ ಸೋಂಕಿನಿಂದ ಬಳಲುತ್ತಿದ್ದ ಇವರಿಗೆ ಚಿಕಿತ್ಸೆ ಪಡೆಯಲು ಕೂಡ ಹಣವಿರಲಿಲ್ಲ. ಆಗ ಇವರ ಸಹಾಯಕ್ಕೆ ಬಂದವರು ಸತ್ಯಜಿತ್ ಮಂಚ ಎಂಬ ಎನ್.ಜಿ.ಓ. ಸಂಸ್ಥೆ. ಈ ಸಂಸ್ಥೆಯಿಂದ ಸ್ಕಿನ್ ಇನ್‍ಫೆಕ್ಷನ್‍ಗೆ ಉಚಿತವಾಗಿ ದುಬಾರಿ ಬೆಲೆಯ ಮೆಡಿಸಿನ್, ಆಯಿಂಟ್‍ಮೆಂಟ್ ಪಡೆದ ಇವರು ಸದ್ಯಕ್ಕೆ ಈ ಚರ್ಮದ ಸೋಂಕಿನಿಂದ ಪಾರಾಗಿದ್ದಾರೆ.

ಈ ಎರಡೂ ಎನ್.ಜಿ.ಓ. ಸಂಸ್ಥೆಗಳು ಉಚಿತವಾಗಿ ಔಷಧಿಯನ್ನು ದಾನ ಮಾಡಿರುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯದ ಜೊತೆಗೆ ಸಂತೋಷವಾಗುತ್ತದೆ. ಇಂದಿನ ಕಾಲದಲ್ಲಿಯೂ ಬಡವರಿಗೆ ಸಹಾಯ ಮಾಡುವ ಎನ್.ಜಿ.ಓ. ಸಂಸ್ಥೆಗಳು ಇವೆಯಲ್ಲಾ ಎಂದು. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ನೀವೀಗ ಓದಿದ ಎರಡೂ ಎನ್.ಜಿ.ಓ. ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿರುವುದು ಪಿ.ಇ.ಪಿ.ಎಲ್‍ನ ಜೊತೆಗೆ. ಇಷ್ಟೆಲ್ಲಾ ಜನರಿಗೆ ಒಳ್ಳೆಯ ಸರ್ವೀಸ್ ಒದಗಿಸುತ್ತಿರುವ ಈ ಪಿ.ಇ.ಪಿ.ಎಲ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ...

‘ಮೆಡಿಸಿನ್ ಬಾಕ್ಸ್​' ಮೂಲಕ ಆರಂಭವಾಯ್ತು ಸೇವೆ...

ಪಿ.ಇ.ಪಿ.ಎಲ್ ಎಂದರೆ “ಪ್ರಿಯಾ ಎಂಟರ್‍ಟೈನ್‍ಮೆಂಟ್ಸ್ ಪ್ರೈವೇಟ್ ಲಿಮಿಟೆಡ್” ಎಂದರ್ಥ. ಶಾರ್ಟ್ ಆಗಿ ಪ್ರತಿಯೊಬ್ಬರು ಕರೆಯುವುದು ಪಿ.ಇ.ಪಿ.ಎಲ್ ಎಂದು. ನಿಮ್ಮ ಮನಸ್ಸಿನಲ್ಲಿ ಈ ಹೆಸರನ್ನು ಎಲ್ಲೋ ಕೇಳಿದ್ದೇವೆಂದು ಲೆಕ್ಕಚಾರ ಹಾಕುತ್ತಿದ್ದರೆ ನಿಮ್ಮ ಊಹೆ ಸರಿ ಇದೆ. ಯಾಕೆಂದರೆ ಪ್ರಿಯಾ ಎಂಟರ್‍ಟೈನ್‍ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮೊದಲು ಗುರುತಿಸಿಕೊಂಡದ್ದು ಚಿತ್ರಮಂದಿರದ ಮೂಲಕ. ಕೋಲ್ಕಾತ್ತದಲ್ಲಿರುವ ಪ್ರಿಯಾ ಸಿನಿಮಾ ಹೆಸರಿನ ಈ ಚಿತ್ರಮಂದಿರದಲ್ಲಿ ವಿಐಪಿ ಸೆಕ್ಷನ್, ಆನ್‍ಸೈಟ್ ಕೆಫೆಟೇರಿಯಾವಿದ್ದು ಸಖತ್ ಲಕ್ಸೂರಿಯಾಗಿದೆ. ಎಂಟರ್‍ಟೈನ್‍ಮೆಂಟ್ ಕ್ಷೇತ್ರದಲ್ಲಿದ್ದರೂ ಇದುವರೆಗೂ ಒಂದಲ್ಲಾ ಒಂದು ಸಾಧನೆಗಳಿಗೆ ಕೈ ಹಾಕುತ್ತಾ ಬಂದಿರುವ ಪಿ.ಇ.ಪಿ.ಎಲ್.ನ ಬಗ್ಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಮಾಡಬೇಕಾಗುತ್ತದೆ. ಇರಲಿ, ನಿಮಗೆ ಈ ಪಿ.ಇ.ಪಿ.ಎಲ್‍ಗೂ ಸಮಾಜ ಸೇವೆಗೂ ಎತ್ತಣಿಂದೆತ್ತ ಸಂಬಂಧ ಅನಿಸದಿರದು, ಆದರೂ ಇದು ‘ಮೆಡಿಸಿನ್ ಬಾಕ್ಸ್​​' ಮಾಡಿ ಮಾಡುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ. ಹೌದು, ಪಶ್ಚಿಮ ಬಂಗಾಳ ರಾಜ್ಯದ ಸುಮಾರು 11 ಕೇಂದ್ರಗಳಲ್ಲಿ ‘ಮೆಡಿಸಿನ್ ಬಾಕ್ಸ್​​​' ಗಳನ್ನು ತೆರೆಯಲಾಗಿದ್ದು, ಈ ವರ್ಷದಿಂದ ತ್ರಿಪುರದಲ್ಲಿಯೂ ಇದನ್ನು ಆರಂಭಿಸಲಾಗುತ್ತದೆ.

ಕ್ಲಿಕ್ ಆಯ್ತು ಅಮ್ಮನ ಐಡಿಯಾ

ಏನಿದು ಮೆಡಿಸಿನ್ ಬಾಕ್ಸ್ ಅಂತೀರಾ? ಪ್ರಿಯಾ ಎಂಟರ್‍ಟೈನ್‍ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‍ನ ಎಂ.ಡಿ. ಅರ್ಜಿತ್ ದತ್ತಾ ಹೇಳುವ ಪ್ರಕಾರ ‘ಮೆಡಿಸಿನ್ ಬಾಕ್ಸ್​​​'ಗಳ ಐಡಿಯಾ ಕೊಟ್ಟಿದ್ದು ಅವರ ತಾಯಿ ಪೂರ್ಣಿಮಾ ದತ್ತಾ ಅವರಂತೆ. ಇವರು ಕೂಡ ಪಿ.ಇ.ಪಿ.ಎಲ್‍ನ ಅಧ್ಯಕ್ಷೆ. ನಮ್ಮ ಸಮಾಜದಲ್ಲಿ ತಳ ಮಟ್ಟದ ವರ್ಗದಲ್ಲಿ ವಾಸಿಸುವ ಜನರು ಊಟಕ್ಕೆ ಪರದಾಡುತ್ತಿರುವಾಗ, ಇನ್ನು ಔಷಧಿಯನ್ನು ಕೊಳ್ಳುವುದೆಂದರೆ ಹರ ಸಾಹಸವೇ ಸರಿ. ಏಕೆಂದರೆ ವೈದ್ಯರು ಹೇಳುವ, ಬರೆದುಕೊಡುವ ಎಲ್ಲಾ ಔಷಧಗಳನ್ನು ಕೊಳ್ಳಲು ಹಣವಿರಬೇಕಲ್ಲ. ಅದಕ್ಕೆ ಅಂತಹವರಿಗೆ ಔಷಧಿಯನ್ನು ಒದಗಿಸುವ ಸಲುವಾಗಿ ಪಿ.ಇ.ಪಿ.ಎಲ್ ‘ಮೆಡಿಸಿನ್ ಬಾಕ್ಸ್​​​' ಎಂದು ಮಾಡಿ ಎಲ್ಲಾ ಘಟಕಗಳಲ್ಲೂ ಇಟ್ಟಿತು. ಅಲ್ಲಿ ಬಳಕೆ ಮಾಡದ, ದಿನಾಂಕದ ಅವಧಿ ಮುಗಿಯದ ಔಷಧಿಗಳನ್ನು ಸಂಗ್ರಹಿಸಲಾಯಿತು. ಈ ಒಂದು ಅಭಿಯಾನ ಆರಂಭವಾದದ್ದು ಏಪ್ರಿಲ್ 14 ‘ಪೊಯಿಲಾಬೈಸಾಖ್’ ದಿನ. ಈ ದಿನ ಬೆಂಗಾಲಿಗರಿಗೆ ಹೊಸ ವರ್ಷದ ಆರಂಭವೆಂದು ಹೇಳುತ್ತಾರೆ ಅರ್ಜಿತ್.

ಈ ಬಗ್ಗೆ ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್​​​ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜನರಿಗೆ ಇದರ ಬಗ್ಗೆ ಮಾಹಿತಿ ತಿಳಿಯಲೆಂದೇ ಬ್ರಾಂಡೆಡ್ ಮೆಡಿಸಿನ್ ಬಾಕ್ಸ್​​​ಗಳನ್ನು ಜನದಟ್ಟಣೆ ಇರುವ ಮುಖ್ಯವಾದ ಪ್ರದೇಶಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಹಳಷ್ಟು ಜನರಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಹಾಯ ಮಾಡಲು ಅನೇಕ ಜನರು ಮುಂದೆ ಬರುತ್ತಿದ್ದಾರೆ, ಅಲ್ಲದೆ ತಮ್ಮ ಬಳಿ ಇರುವ ಮೆಡಿಸಿನ್ ಕೊಡಲು ಧಾರಳವಾಗಿ ಮುಂದೆ ಬರುತ್ತಿದ್ದಾರಂತೆ. ಹೀಗೆ ಎಲ್ಲಾ ಘಟಕಗಳಿಂದ ಸಂಗ್ರಹಗೊಂಡ ಔಷಧಿಯನ್ನು ಎನ್.ಜಿ.ಓಗಳಿಗೆ, ಬಡ ಮಕ್ಕಳಿಗೆ, ಕುಟುಂಬಗಳಿಗೆ ಕೊಡಲಾಗುತ್ತಿದ್ದು, ಸಾಕಷ್ಟು ಜನರು ಇದರ ಅನುಕೂಲ ಪಡೆಯುತ್ತಿದ್ದಾರೆ ಹಾಗೂ ಪಡೆದುಕೊಂಡಿದ್ದಾರೆಂದು ಸಂತಸ ವ್ಯಕ್ತಪಡಿಸಿದ್ದಾರೆ ಅರ್ಜಿತ್.

ಆರ್.ಐ.ಹೆಚ್.ಎ.ಡಿ ಯ ಸಾಮಾಜಿಕ ಕಾರ್ಯಕರ್ತ ಅಲೋಕ್ ಪೌಲ್ ಹೇಳುವಂತೆ, ಪಿ.ಇ.ಪಿ.ಎಲ್ ಜೊತೆಗೆ ನಾವು ಕೂಡ ಕಾರ್ಯನಿರ್ವಹಿಸುತ್ತಿದ್ದೇವೆ. ಅನೇಕ ಕಾಯಿಲೆಗಳಿಗೆ ನಮ್ಮ ಸಂಸ್ಥೆಯ ಮೂಲಕ ಉಚಿತ ಔಷಧಿಗಳನ್ನು ಕೊಟ್ಟಿದ್ದೇವೆ. ಹೆಚ್ಚಿನ ಔಷಧಿಗಳು ಗ್ಯಾಸ್ಟ್ರಿಕ್ ಸಂಬಂಧಿತ ಕಾಯಿಲೆಗಳಿಗೆ ಉಪಯೋಗವಾಗಲಿವೆ ಎಂಬುದನ್ನು ಸ್ಥಳೀಯ ವೈದ್ಯರು ಕೂಡ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

‘ಮೆಡಿಸಿನ್ ಬಾಕ್ಸ್​​​' ತರಹವೇ ಅನೇಕ ರೀತಿಯ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವ ಪಿ.ಇ.ಪಿ.ಎಲ್ ಸಿಇಎಂಒ ಸಹಯೋಗದೊಂದಿಗೆ ಕಳೆದ ವರ್ಷದಿಂದ ಪರಿಸರ ಮತ್ತು ಪ್ರಕೃತಿ/ವನ್ಯಜೀವಿಗಳಿಗೆ ಸಂರಕ್ಷಣೆ ಬಗ್ಗೆ ಕೋಲ್ಕಾತ್ತದ ಅನೇಕ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುತ್ತಿದೆ.