ರಾಕೆಟ್ ವೇಗದಲ್ಲಿ ಮನೆಬಾಗಿಲಿಗೆ ಬಯಸಿದ ಫುಡ್ : ಗುರುಗಾಂವ್ ನಲ್ಲಿ ‘ರಾಕೆಟ್ ಶೆಫ್’ ಮ್ಯಾಜಿಕ್ ..

ಟೀಮ್​ ವೈ.ಎಸ್​. ಕನ್ನಡ

ರಾಕೆಟ್ ವೇಗದಲ್ಲಿ ಮನೆಬಾಗಿಲಿಗೆ ಬಯಸಿದ ಫುಡ್ : ಗುರುಗಾಂವ್ ನಲ್ಲಿ ‘ರಾಕೆಟ್ ಶೆಫ್’ ಮ್ಯಾಜಿಕ್ ..

Thursday January 14, 2016,

3 min Read

ಹೊಟ್ಟೆಯೊಳಗೆ ಹಸಿವಿನ ಡಂಗುರ ಬಾರಿಸಿದ ಮೇಲೆ ಯಾರಿಗೂ ಅಡುಗೆ ಮನೆಗೆ ನುಗ್ಗಿ ಕಷ್ಟಪಟ್ಟು ಅಡುಗೆ ಮಾಡುವಷ್ಟು ತಾಳ್ಮೆ ಇರೋದಿಲ್ಲ. ಬದಲಾಗಿ ಸುಲಭವಾಗಿ ಸಿಗುವ ತಿಂಡಿ ತಿನಿಸುಗಳ ಕಡೆ ಗಮನ ಕೊಡುತ್ತಾರೆ. ಆನ್ ಲೈನ್, ಫೋನ್ ಕಾಲ್, ಎಸ್ ಎಂ ಎಸ್ ಹೀಗೆ ಯಾವುದಾದರೊಂದು ಸುಲಭ ಮಾರ್ಗದಲ್ಲಿ ಸಿಗಬಹುದಾದ ದಾರಿಗಳ ಬಗ್ಗೆ ಯೋಚಿಸುತ್ತಾರೆ. ಆದ್ರೆ ಮನೆ ಬಾಗಿಲಿಗೆ ಆಹಾರ ಪದಾರ್ಥಗಳು ಬಂದ್ರೂ ಅದು ಟೇಸ್ಟಿ ಮತ್ತು ಫ್ರೆಶ್ ಆಗಿರಬೇಕು ಅಂತ ಗ್ರಾಹಕರು ಸಹಜವಾಗೇ ನಿರೀಕ್ಷಿಸುತ್ತಾರೆ. ಇನ್ನು ಗ್ರಾಹಕರ ಈ ನಿರೀಕ್ಷೆಗಳಿಗೆ ಸ್ಪಂದಿಸಲು ಆಹಾರ ಉತ್ಪನ್ನ ಹಾಗೂ ಡೆಲಿವರಿ ಕಂಪನಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ಹೀಗೆ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುತ್ತಾ, ಶುಚಿಯಾದ, ರುಚಿಯಾದ ಆಹಾರ ಪೂರೈಸಿ, ಹೊಟ್ಟೆಬಾಕರ ಹಸಿವು ತಣಿಸುವ ಮೂಲಕ ಮನೆ ಮಾತಾಗಿರೋದು ಗುರುಗಾಂವ್ ನ ರಾಕೆಟ್ ಶೆಫ್ಸ್. ಕೇವಲ ಒಂದೇ ಒಂದು ಕರೆ ಮಾಡಿದ್ರೆ ಸಾಕು ಬಯಸಿದ ಆಹಾರ ಪದಾರ್ಥಗಳನ್ನ ವ್ಯಾನ್ ಅಥವಾ ಬೈಕ್ ಮೂಲಕ ಮನೆಬಾಗಿಲಿಗೇ ತಲುಪಿಸುವ ರಾಕೆಟ್ ಶೆಫ್ ತನ್ನ ಉದ್ದಿಮೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದೆ.

image


ರಾಕೆಟ್ ಶೆಫ್ ಅಕ್ಟೋಬರ್ 2015ರಂದು 70 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಶುರುವಾಯ್ತು. ಪಿಜ್ಜಾ ಹಾಗೂ ಸ್ಯಾಂಡ್ ವಿಚ್ ಗಳನ್ನ ವ್ಯಾನ್ ನೊಳಗೇ ತಯಾರಿಸುವುದು ರಾಕೆಟ್ ಶೆಫ್ ನ ಸ್ಪೆಷಾಲಿಟಿ. ಗ್ರಾಹಕರು ಫೋನ್ ಕಾಲ್ ಅಥವಾ ಆಪ್ ನ ಮೂಲಕ ಆರ್ಡರ್ ಮಾಡಿದ್ರೆ ಸಾಕು ಕೆಲವೇ ನಿಮಿಷಗಳಲ್ಲಿ ಫುಡ್ ಮನೆಬಾಗಿಲಿಗೆ ಬರುತ್ತದೆ. ಇನ್ನು ಮನೆ ಹತ್ತಿರಕ್ಕೆ ವ್ಯಾನ್ ಬರುತ್ತಿದ್ದಂತೆ ಆಪ್ ನಲ್ಲಿದ್ದ ಲೊಕೇಶನ್ ಇಂಡಿಕೇಟರ್ ತನ್ನಿಂದ ತಾನೇ ಮಾಯವಾಗುತ್ತದೆ.

“ ನನಗೆ ಸಣ್ಣಪುಟ್ಟದನ್ನೂ ಅನುಭವಿಸುವುದರಲ್ಲೇ ಹೆಚ್ಚು ಖುಷಿ. ಪ್ರತಿಯೊಂದನ್ನೂ ಆಸ್ವಾದಿಸುವುದಕ್ಕಾಗಿ ಯತ್ನಿಸುತ್ತಿರುತ್ತೇನೆ. ಇನ್ನು ಆಹಾರದ ಮೇಲೆ ನನಗಿರುವ ಪ್ರೀತಿ ಎಲ್ಲವನ್ನೂ ಮರೆಸಿ ಬಿಡುತ್ತದೆ ” – ರಾಮ್ ನಿಧಿ ವಾಸನ್, ರಾಕೆಟ್ ಶೆಫ್ ನ ಸಂಸ್ಥಾಪಕ ಹಾಗೂ ಸಿಇಒ

ರಾಕೆಟ್ ಶೆಫ್ ಕಳೆದ ಎರಡು ದಶಕಗಳಿಂದ ದೊಡ್ಡ ದೊಡ್ಡ ಹೊಟೇಲ್ ಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಒಬೆರಾಯ್ ಹೊಟೇಲ್, ದಿ ಮ್ಯಾನೊರ್, ಸಿಟ್ರಸ್ ಹೊಟೇಲ್ಸ್, ಹೈದ್ರಾಬಾದ್ ನ ವಿಸ್ಟಿನ್, ಬೆಂಗಳೂರಿನ ಮೆರಿಯೆಟ್, ಹೆಚ್ ವಿಸಿ ಇಂಟರ್ ನ್ಯಾಷನಲ್ ಹಾಗೂ ರಿಲಾಯನ್ಸ್ ಪೆಟ್ರೊಲಿಯಂ ಹೀಗೆ ಹಲವು ಪ್ರತಿಷ್ಠಿತರೊಂದಿಗೆ ನಿಟಕ ಸಂಪರ್ಕ ಹೊಂದಿದೆ. ಹೀಗಿದ್ರೂ ರಾಮ್ ನಿಧಿ ಕನಸು ಕಾಣೋದು ಗುಣಮಟ್ಟ ಹಾಗೂ ಸೇವೆಯಲ್ಲಿ ಸುಧಾರಿಸುವ ಬಗ್ಗೆ ಮಾತ್ರ. ಇಷ್ಟೆಲ್ಲಾ ಸಾಧನೆ ಮಾಡಿರುವ ರಾಮ್ ನಿಧಿ ವಾಸನ್ ದೆಹಲಿ ವಿವಿಯಿಂದ ಹೊಟೇಲ್ ಮ್ಯಾನೇಜ್ ಮೆಂಟ್ ಪದವಿ ಪಡೆದಿದ್ದಾರೆ. ಉನ್ನತ ಶಿಕ್ಷಣ ಪಡೆದಿರೋದು ವಾಗಿ ಒಬೆರಾಯ್ ಸ್ಕೂಲ್ ಆಫ್ ಹೊಟೇಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಿಂದ ಅನ್ನೋದು ವಿಶೇಷ.

ಲಾಭದ ಲೆಕ್ಕಾಚಾರ..

ರಾಕೆಟ್ ಶೆಫ್ ನಾಲ್ವರು ಪರಿಣಿತ ಶೆಫ್ ಗಳನ್ನ ಹೊಂದಿದ್ದು ಮೂರು ವಾಹನಗಳು ಗುರುಗಾಂವ್ ನಲ್ಲಿ ಸೇವೆ ನೀಡುತ್ತಿವೆ. ಈ ವಾಹನಗಳು ವಿಶೇಷ ರೀತಿಯಲ್ಲಿ ನಿರ್ಮಿಸಲ್ಪಿಟ್ಟಿದ್ದು ಆಹಾರ ಪದಾರ್ಥಗಳನ್ನ ಬೇಗನೆ ಬಿಸಿ ಮಾಡುವ ಸೌಕರ್ಯಗಳನ್ನ ಇಲ್ಲಿ ಕಲ್ಪಿಸಲಾಗಿದೆ. ಪ್ರತಿ ದಿನ 60 ರಿಂದ 70 ಪಿಜ್ಜಾಗಳನ್ನ ಡೆಲಿವರಿ ಮಾಡಲಾಗುತ್ತಿದ್ದು ಸಾಮಾನ್ಯ ಗಾತ್ರದ ಪಿಜ್ಜಾಕ್ಕೆ 500 ರೂಪಾಯಿ ನಿಗದಿ ಪಡಿಸಲಾಗಿದೆ. ಇದ್ರಲ್ಲಿ ರಾಕೆಟ್ ಶೆಫ್ ಶೇಕಡಾ 60ರಷ್ಟು ಲಾಭ ಪಡೆಯುತ್ತದೆ.

“ ಪಿಜ್ಜಾ ವ್ಯಾನ್ ಗಳಿಗೆ ರಾಕೆಟ್ ಶೆಫ್ ವ್ಯಯಿಸಿರೋದು ಆರರಿಂದ ಏಳು ಲಕ್ಷ ರುಪಾಯಿ. ಇದು ವ್ಯಾನ್ ನ ಎಲ್ಲಾ ಮಾರ್ಪಾಡು ವೆಚ್ಚಗಳನ್ನೂ ಒಳಗೊಂಡಿದೆ. ಪ್ರತೀ ವ್ಯಾನ್ ದಿನಕ್ಕೆ ಎಲ್ಲಾ ಖರ್ಚುಗಳನ್ನ ಕಳೆದು ಸುಮಾರು 3,500 ರೂಪಾಯಿ ವಹಿವಾಟು ನಡೆಸುತ್ತದೆ. ಅಲ್ಲದೆ ಪಿಜ್ಜಾ ಡೆಲಿವರಿಗೆ ಇನ್ನಿತರ ಸಣ್ಣ ವಾಹನಗಳಿವೆ. ಇದಕ್ಕೆ ತಗುಲಿರುವ ವೆಚ್ಚ 2 ಲಕ್ಷ. ಇದೀಗ ರಾಕೆಟ್ ಶೆಫ್ ನಲ್ಲಿ 16 ಮಂದಿ ಉದ್ಯೋಗಿಗಳಿದ್ದಾರೆ. - ರಾಮ್ ನಿಧಿ ವಾಸನ್, ರಾಕೆಟ್ ಚೆಫ್ ನ ಸಂಸ್ಥಾಪಕ ಹಾಗೂ ಸಿಇಒ

ರಾಕೆಟ್ ಶೆಫ್ ಇದೀಗ ತಿಂಗಳಿಂದ ತಿಂಗಳಿಗೆ ಶೇಕಡಾ 40ರಷ್ಟು ಪ್ರಗತಿಯನ್ನ ತೋರಿಸುತ್ತಿದೆ. ಇನ್ನು ಭವಿಷ್ಯದಲ್ಲೂ ಅದ್ಭುತವಾದುದನ್ನ ಸಾಧಿಸಲು ರಾಮ್ ನಿಧಿ ವಾಸನ್ ಯೋಜನೆ ರೂಪಿಸಿದ್ದಾರೆ. ಇನ್ನು ಎರಡು ಮೂರು ವರ್ಷದಲ್ಲಿ 250 ಪಿಜ್ಜಾ ವ್ಯಾನ್ ಗಳನ್ನ ಗುರುಗಾಂವ್, ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಬಿಡಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಈ ಮೂಲಕ 10ರಿಂದ 12 ಕೋಟಿ ರೂಪಾಯಿ ಆದಾಯ ಗಳಿಸುವ ಲೆಕ್ಕಾಚಾರ ರಾಮ್ ನಿಧಿ ಅವರದ್ದು.

ಯುವರ್ ಸ್ಟೋರಿ ಅಭಿಪ್ರಾಯ..

ಫುಡ್ ಟ್ರಕ್ ಗಳ ಇತಿಹಾಸ 1800 ರಿಂದಲೇ ಆರಂಭವಾಗಿದೆ. ಟೆಕ್ಸಾಸ್ ಮೂಲದ ಚಕ್ ವ್ಯಾಗನ್ ಅಮೆರಿಕಾದಲ್ಲಿ ಮೊದಲು ಫುಡ್ ಟ್ರಕ್ ಶುರುಮಾಡಿತು. ನಂತ್ರ ಈ ಟ್ರೆಂಡ್ ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಫ್ರಾನ್ಸ್ ಹಾಗೂ ಮೆಕ್ಸಿಕೋದಲ್ಲಿ ಶುರುವಾಯ್ತು. ಇದೀಗ ಭಾರತದಲ್ಲೂ ಈ ಪರಿಕಲ್ಪನೆ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು, ಚೆನ್ನೈ, ಮುಂಬೈನಂತಹ ನಗರದ ಜನರು ಮನೆ ಊಟಕ್ಕಿಂತ ಹೊರಜಗತ್ತಿನ ಆಹಾರವನ್ನೇ ಹೆಚ್ಚು ಇಷ್ಟಪಡುತ್ತಾರೆ. ಈ ಫುಡ್ ಬ್ಯುಸಿನೆಸ್ ಪ್ರತೀ ವರ್ಷ ಶೇಕಡಾ 20ರಷ್ಟು ಬೆಳೆಯುತ್ತಲೇ ಇದೆ. ಆದ್ರೆ ಉದ್ಯಮದ ದೃಷ್ಠಿಯಿಂದ ಇದನ್ನ ನಿಭಾಯಿಸುವುದು ಅಷ್ಟು ಸುಲಭವಲ್ಲ. ವಿವಿಧ ಸಮಸ್ಯೆಗಳಿಂದಾಗಿ ಅದೆಷ್ಟೋ ಜನರು ತಮ್ಮ ಉದ್ಯಮಕ್ಕೆ ಗುಡ್ ಬೈ ಹೇಳಿದ್ದಾರೆ. ಆದ್ರೆ ರಾಕೆಟ್ ಶೆಫ್ ಮಾದರಿಯ ಐಡಿಯಾಗಳು ಭಾರತದಲ್ಲಿ ಫುಡ್ ಬ್ಯುಸ್ ನೆಸ್ ಗೆ ಗಟ್ಟಿಯಾದ ನೆಲೆಯನ್ನ ಒದಗಿಸಬಲ್ಲದು.


ಲೇಖಕರು - ಅಪರಾಜಿತ ಚೌಧರಿ

ಅನುವಾದ – ಬಿ ಆರ್ ಪಿ, ಉಜಿರೆ