ಬೆಂಗಳೂರಲ್ಲಿ 4 ಎಕರೆ ವಿಸ್ತಾರದ `ಕ್ವಿಕರ್' ಕ್ಯಾಂಪಸ್ - ಹೊಸ ಬದಲಾವಣೆಗೆ ನಾಂದಿ

ಟೀಮ್​​ ವೈ.ಎಸ್. ಕನ್ನಡ

0

ಬರೋಬ್ಬರಿ 7 ವರ್ಷಗಳ ಬಳಿಕ `ಕ್ವಿಕರ್' ಮುಂಬೈನ ಸಕಿ ನಾಕಾದಿಂದ ಬೆಂಗಳೂರಿನ ರಾಚೇನಹಳ್ಳಿವರೆಗಿನ ತನ್ನ ಪಯಣವನ್ನು ಮುಗಿಸಿದೆ. ಕೊನೆಗೂ ಕ್ವಿಕರ್‍ನ 982.4 ಕಿಲೋ ಮೀಟರ್ ಸಂಚಾರ ಯಶಸ್ವಿಯಾಗಿದೆ. ಆರಂಭಿಕ ವರ್ಷಗಳನ್ನು ನೋಡೋದಾದ್ರೆ ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್‍ನಂತೆ ಕ್ವಿಕರ್‍ಗೂ ಕೂಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಇದು ಸೂಕ್ತವಾದ ಸಮಯ. 2008ರಲ್ಲಿ ಪ್ರಣಯ್ ಚುಲೆಟ್ ಅವರು ಆರಂಭಿಸಿದ `ಕ್ವಿಕರ್' ಈಗ ಒಂದು ಬಿಲಿಯನ್ ಡಾಲರ್‍ನಷ್ಟು ಬೆಲೆಬಾಳುತ್ತದೆ. ಅಡ್ಡ ವಿಭಾಗದಲ್ಲಿ ವರ್ಗೀಕರಿಸಿರುವ ವೇದಿಕೆಗಳ ಪೈಕಿ ಕ್ವಿಕರ್ ಮುಂಚೂಣಿಯಲ್ಲಿದೆ. ವಿಶೇಷ ಅಂದ್ರೆ ಭಾರತದ 1000 ನಗರಗಲ್ಲಿ, ಕ್ವಿಕರ್ ಪ್ರತಿ ತಿಂಗಳು 30 ಮಿಲಿಯನ್ ಅನನ್ಯ ಬಳಕೆದಾರರನ್ನು ಹೊಂದಿದೆ.

ಇದೀಗ ಬೆಂಗಳೂರಲ್ಲಿ ಕ್ವಿಕರ್‍ನ ಮುಖ್ಯ ಕಚೇರಿ ಆರಂಭವಾಗಿದೆ. ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ನಾಲ್ಕು ಎಕರೆ ವಿಸ್ತಾರವಾದ ಕ್ವಿಕರ್ ಕಚೇರಿ ತಲೆಯೆತ್ತಿದೆ. ಈ ಕಚೇರಿಯಲ್ಲಿ 1200 ಸಿಬ್ಬಂದಿ ಕರ್ತವ್ಯ ನಿರ್ವಹಿಸ್ತಾರೆ. ಈ ವರ್ಷಾರಂಭದಲ್ಲಿ ಕ್ವಿಕರ್ ತನ್ನ ಮುಖ್ಯ ಕಚೇರಿಯನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಿಸಿತ್ತು. ಇದುವರೆಗೆ ಕ್ವಿಕರ್ ನೌಕರರೆಲ್ಲ ಶಿವಾಜಿನಗರದ ಸಣ್ಣ ಕಟ್ಟಡವೊಂದ್ರಲ್ಲಿ ಕೆಲಸ ಮಾಡ್ತಾ ಇದ್ರು. ಕಚೇರಿ ಸ್ಥಳಾಂತರಕ್ಕೂ ಮುನ್ನ `ಯುವರ್ ಸ್ಟೋರಿ' ಜೊತೆ ಮಾತನಾಡಿದ್ದ ಪ್ರಣಯ್ ಚುಲೆಟ್, ಬೆಂಗಳೂರಿನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಬಳಸಿಕೊಳ್ಳುವ ಸಲುವಾಗಿ ಮುಂಬೈನಿಂದ ಸಿಲಿಕಾನ್ ಸಿಟಿಗೆ ಶಿಫ್ಟ್ ಆಗ್ತಿರೋದಾಗಿ ತಿಳಿಸಿದ್ರು.

ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಕ್ವಿಕರ್‍ನ ನೂತನ ಕಚೇರಿ ಮೂರು ಕಟ್ಟಡಗಳನ್ನು ಒಳಗೊಂಡಿದೆ. ನಟ್ಟನಡುವೆ ಸುಂದರ ಹುಲ್ಲು ಹಾಸನ್ನು ನಿರ್ಮಿಸಲಾಗಿದೆ. ಅಲ್ಲೇ ವಾಲಿವಾಲ್ ಕೋರ್ಟ್ ಹಾಗೂ ಕ್ಯಾಫಿಟೇರಿಯಾವನ್ನು ಕೂಡ ನಿರ್ಮಾಣ ಮಾಡುವುದಾಗಿ ಪ್ರಣಯ್ ಹೇಳಿದ್ದಾರೆ. ಕ್ವಿಕರ್‍ನ ಮುಖ್ಯ ಕಚೇರಿ ಮೂರು ಅಂತಸ್ತಿನ ಮುಕ್ತ ಜಾಗವನ್ನು ಹೊಂದಿದೆ. ಮಧ್ಯದಲ್ಲಿ ಅಂಗಳವಿದೆ, ಅದೇ ಕ್ವಿಕರ್‍ನ ಮಳಿಗೆ. ಮೊದಲು ಇಲ್ಲಿ ಉಡುಪುಗಳ ಕಾರ್ಖಾನೆಯಿತ್ತು. ಆ ಫ್ಯಾಕ್ಟರಿ ಲುಕ್ಕನ್ನು ಹಾಗೇ ಉಳಿಸಿಕೊಂಡು, ಕಟ್ಟಡವನ್ನು ಅತ್ಯಂತ ವಿಶಾಲವಾಗಿ, ಮುಕ್ತವಾಗಿ ಮತ್ತು ಪರಸ್ಪರ ಸಂಪರ್ಕಕ್ಕೆ ಅನುಕೂಲವಾಗುವಂತೆ ನಿರ್ಮಿಸುವುದು ಪ್ರಣಯ್ ಅವರ ಯೋಜನೆಯಾಗಿತ್ತು. ಆದ್ರೆ ಈ ಅಂದದ ಕ್ಯಾಂಪಸ್ ನಿರ್ಮಾಣಕ್ಕೆ ಪ್ರಣಯ್ ಅವರ ಅಂದಾಜಿಗಿಂತ ಕೊಂಚ ಹೆಚ್ಚು ಖರ್ಚಾಗಿದ್ಯಂತೆ. ಆದ್ರೆ ನೀವಂದುಕೊಂಡಷ್ಟು ಭಾರೀ ಮೊತ್ತವೇನಲ್ಲ ಎನ್ನುತ್ತಾರೆ ಪ್ರಣಯ್.

ಬದಲಾವಣೆ ಅನ್ನೋದು ಒಳ್ಳೆಯದು ಜೊತೆಗೆ ಸರಳ ಅನ್ನೋ ತತ್ವದ ಆಧಾರದ ಮೇಲೆ ಕ್ವಿಕರ್ ತನ್ನ 7 ವರ್ಷಗಳ ಪಯಣದಲ್ಲಿ ಲೋಗೋ ಹಾಗೂ ಮುಖ್ಯ ಕಚೇರಿ ಸ್ಥಳವನ್ನು ಬದಲಾಯಿಸಿದೆ. ಈ ವಿನೂತನ ಕಚೇರಿ ನಿರ್ಮಾಣವಾಗ್ತಾ ಇರೋ ಸಂದರ್ಭದಲ್ಲಿ ಕ್ವಿಕರ್‍ನ 1200 ಉದ್ಯೋಗಿಗಳು ಶೆಡ್‍ನಂತಹ ಚಿಕ್ಕ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ. ಬದಲಾವಣೆಯ ತತ್ವವೇ ತಮ್ಮ ಸಿಬ್ಬಂದಿಯನ್ನು ಪ್ರೇರೇಪಿಸಿತ್ತು ಅನ್ನೋದು ಪ್ರಣಯ್ ಅವರ ಅಭಿಪ್ರಾಯ. ಕಳೆದ ಕೆಲ ತಿಂಗಳುಗಳಿಂದ ಇಕ್ಕಟ್ಟಾದ ಜಾಗದಲ್ಲೇ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿದ ತಮ್ಮ ನೌಕಕರ ಬಗ್ಗೆ ಪ್ರಣಯ್ ಅವರಿಗೆ ಹೆಮ್ಮೆಯಿದೆ. ಅಂಗೈ ಅಗಲದ ಜಾಗದಲ್ಲೇ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಅವರು ಕೊಂಡಾಡಿದ್ದಾರೆ.

ಮುಖ್ಯ ಕಟ್ಟಡದ ನಡುವಿನಲ್ಲಿರುವ `ಕ್ಯೂ' ಎಂಬ ದೈತ್ಯ ಅಕ್ಷರ ಎಲ್ಲರ ಕಣ್ಸೆಳೆಯುತ್ತೆ. ಮೇಲಿನ ಮಹಡಿಯಲ್ಲಿರುವ ಡೆಕ್, ಇಡೀ ಕಟ್ಟಡದ ಅವಿಭಾಜ್ಯ ಅಂಗ. ಅಲ್ಲಿ ನಿಂತಿದ್ದ ಪ್ರಣಯ್ ಅವರಲ್ಲಿ ಹೊಸ ಉತ್ಸಾಹವಿತ್ತು. ಅವರು ಕೊನೆಯೇ ಇಲ್ಲದ ಸಾಧ್ಯತೆಗಳನ್ನು ತಮ್ಮಲ್ಲಿ ಹಿಡಿದಿಟ್ಟುಕೊಂಡಿದ್ರು. ಇಲ್ಲೇ ನಿಂತು ನಾನೊಂದು ಸಿನಿಮಾವನ್ನು ಬೇಕಾದ್ರೂ ಚಿತ್ರೀಕರಿಸಬಹುದು ಅಂತಾ ಖುಷಿಯಾಗಿ ಹೇಳಿಕೊಂಡ್ರು. ಆದ್ರೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿತ್ತು, ಆ ಜಾಗದಲ್ಲಿ ಬಿಗ್ ಬಾಸ್ ಪ್ರಣಯ್ ಅವರ ಜೊತೆ ಸೇಲ್ಸ್ ಟೀಮ್‍ನ ಸಭೆ ಮಾತ್ರ ನಡೆಯೋದಿಲ್ಲ ಅನ್ನೋದು.

2014ರಲ್ಲಿ ಕ್ವಿಕರ್, 150 ಮಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಿದೆ. `ಟೈಗರ್ ಗ್ಲೋಬಲ್' 60 ಮಿಲಿಯನ್ ಡಾಲರ್ ಹಾಗೂ `ಕಿನ್ನೆವಿಕ್' 90 ಮಿಲಿಯನ್ ಡಾಲರ್ ನಿಧಿಯನ್ನು ಕ್ವಿಕರ್‍ಗೆ ನೀಡಿದೆ. ಕ್ವಿಕರ್ ಸಂಸ್ಥೆ ಆರಂಭವಾದಾಗಿನಿಂದ ಇದುವರೆಗೆ 7 ಹಣಕಾಸಿನ ಸುತ್ತುಳಲ್ಲಿ 350 ಮಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸಿದೆ. `ವಾರ್‍ಬರ್ಗ್ ಪಿಂಕಸ್' , `ಮ್ಯಾಟ್ರಿಕ್ಸ್ ಪಾರ್ಟ್‍ನರ್ಸ್ ಇಂಡಿಯಾ' , `ನಾರ್ವೆಸ್ಟ್ ವೆಂಚರ್ ಪಾರ್ಟ್‍ನರ್ಸ್' , `ನೋಕಿಯಾ ಗ್ರೌತ್ ಪಾರ್ಟ್‍ನರ್ಸ್' , `ಸ್ಟೆಡ್ ವ್ಯೂ ಕ್ಯಾಪಿಟಲ್' , `ಒಮಿಡ್ಯರ್ ನೆಟ್‍ವರ್ಕ್' ಮತ್ತು `ಇಬೇ ಇಂಕ್' ಕೂಡ ಕ್ವಿಕರ್‍ನಲ್ಲಿ ಹೂಡಿಕೆ ಮಾಡಿವೆ. ಇದೀಗ ಉದ್ಯಾನ ನಗರಿ ಬೆಂಗಳೂರಿನಲ್ಲಿ ಕ್ವಿಕರ್‍ನ ಯಶಸ್ಸಿನ ಪಯಣ ಅದೆಷ್ಟು ಚುರುಕಾಗಿ ಸಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.  

ಅನುವಾದಕರು: ಭಾರತಿ ಭಟ್​​​