ಶುಭ್ರ ಬಟ್ಟೆಗಾಗಿ ಸಂಪರ್ಕಿಸಿ `ಪಿಕ್ ಮೈ ಲಾಂಡ್ರಿ’

ಟೀಮ್​​ ವೈ.ಎಸ್​. ಕನ್ನಡ

0


ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ಹಳ್ಳಿ ಜನರಿಗೆ ನಗರ ಸುಂದರವಾಗಿ ಕಾಣುತ್ತೆ. ಅಲ್ಲಿನ ಶಾಪಿಂಗ್ ಮಾಲ್, ಹೋಟೆಲ್, ರಸ್ತೆ, ವಾಹನ ಸೌಲಭ್ಯವೆಲ್ಲ ಅವರನ್ನು ಆಕರ್ಷಿಸುತ್ತದೆ. ಹಾಗೆ ನಗರದಲ್ಲಿ ವಾಸಿಸುವವರ ಜೀವನ ಕ್ರಮಬದ್ಧವಾಗಿ ಸಾಗಿದೆ ಎಂದು ಅವರು ಭಾವಿಸುತ್ತಾರೆ. ವಾಸ್ತವವಾಗಿ ನಗರದ ಸ್ಥಿತಿ ಹಾಗಿರುವುದಿಲ್ಲ. ಚಿಕ್ಕ-ಪುಟ್ಟ ವಿಷಯಕ್ಕೆ ನಗರದ ಜನರು ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಅದರಲ್ಲಿ ಲಾಂಡ್ರಿ ಕೂಡ ಒಂದು. ಇದರ ಬಗ್ಗೆ ಅನೇಕರಿಗೆ ಅಸಮಾಧಾನವಿದೆ. ಇದು ಅಸಂಘಟಿತವಾಗಿದ್ದು, ಯಾರೂ ಸರಿಯಾಗಿ ಜವಾಬ್ದಾರಿ ನಿಭಾಯಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಬಟ್ಟೆಗಳು ಮನೆ ತಲುಪುವುದಿಲ್ಲ.

ಜನರ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಗೌರವ್ ಅಗರ್ ವಾಲ್, ಸಮರ್ ಸಿಸೋಡಿಯಾ ಹಾಗೂ ಅಂಕುರ್ ಜೈನ್ ಮುಂದೆ ಬಂದ್ರು. ಅನೇಕ ಸಂಶೋಧನೆಗಳ ನಂತರ ಅವರು `ಪಿಕ್ ಮೈ ಲಾಂಡ್ರಿ’ ಶುರುಮಾಡಿದ್ರು. ದೆಹಲಿ ಹಾಗೂ ಗುರಗಾಂವ್ ನಲ್ಲಿ ವಾಸಿಸುವ ಜನರ ಲಾಂಡ್ರಿ ಸಮಸ್ಯೆಯನ್ನು ಈ ಪಿಕ್ ಮೈ ಲಾಂಡ್ರಿ ಕಂಪನಿ ಬಗೆಹರಿಸ್ತಿದೆ. ಗೌರವ್,ಸಮರ್ ಹಾಗೂ ಅಂಕುರ್ ಐಐಟಿಯಲ್ಲಿ ಎಂಜಿನಿಯರಿಂಗ್ ಮಾಡಿದ ಅವರು ಮೊದಲು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡಿದ್ರು. ಕೆಲಸದ ಜೊತೆಗೆ ಬೇರೆ ಏನಾದ್ರೂ ಮಾಡಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ಜನರನ್ನು ನೇರವಾಗಿ ಸಂಪರ್ಕಿಸುವುದರ ಜೊತೆಗೆ ಅವರ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತ ಹೊಸ ಉದ್ಯೋಗವೊಂದನ್ನು ಆರಂಭಿಸುವ ಕನಸು ಕಂಡಿದ್ದರು.

ಅಂಕುರ್ ಮತ್ತು ಗೌರವ್ ಒಡಿಸಾದಲ್ಲಿ ಕೆಲಸ ಮಾಡ್ತಿದ್ದರು. ಸಮರ್ ಛತ್ತೀಸಗಢದಲ್ಲಿ ಕೆಲಸ ಮಾಡ್ತಾ ಇದ್ದರು. ಕೆಲಸ ಮಾಡ್ತಾ ಇದ್ದರೂ ಅವರ ಮನಸ್ಸು ಬೇರೆಯದನ್ನೇ ಯೋಚಿಸ್ತಾ ಇತ್ತು. ಜನರು ಯಾವುದರ ಬಗ್ಗೆ ಜಾಸ್ತಿ ಕಿರಿಕಿರಿ ಅನುಭವಿಸ್ತಾರೆ ಎಂಬುದರ ಬಗ್ಗೆ ಸಂಶೋಧನೆ ನಡೆಸ್ತಿದ್ದರು. ಕೊನೆಗೆ ಅವರ ಅರಿವಿಗೆ ಬಂದಿದ್ದು ಲಾಂಡ್ರಿ. ತಮ್ಮಂತೆ ಕೆಲಸ ಮಾಡುವ ಅದೆಷ್ಟೋ ಯುವಕರಿಗೆ ಬಟ್ಟೆ ಒಗೆಯುವುದು ಹಾಗೂ ಇಸ್ತ್ರಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಧೋಬಿ ಸರಿಯಾದ ಸಮಯಕ್ಕೆ ಬಟ್ಟೆ ತೆಗೆದುಕೊಂಡು ಹೋದರೂ ಬೇಕಾದ ಸಮಯಕ್ಕೆ ಬಟ್ಟೆ ವಾಪಸ್ ಮಾಡುವುದಿಲ್ಲ. ಪ್ರತಿನಿತ್ಯ ಜನರು ಈ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂಬುದನ್ನು ಈ ಮೂವರು ಮನಗಂಡರು. ತಾವಿರುವ ಸಣ್ಣ ನಗರದಲ್ಲಿಯೇ ಈ ಸಮಸ್ಯೆ ಕಂಡು ಬಂದರೆ ಇನ್ನು ದೊಡ್ಡ ನಗರಗಳ ಸ್ಥಿತಿ ಏನು ಎಂಬುದನ್ನು ಅರಿತ ಅವರು ಒಂದು ನಿರ್ಧಾರಕ್ಕೆ ಬಂದರು. ರಜಾ ತೆಗೆದುಕೊಂಡು ದೆಹಲಿಗೆ ಬಂದ ಮೂವರೂ ಬಹಳಷ್ಟು ರಿಸರ್ಚ್ ಮಾಡಿದ್ರು. ನಂತರ ಫೆಬ್ರವರಿ 2015 ರಲ್ಲಿ `ಪಿಕ್ ಮೈ ಲಾಂಡ್ರಿ’ಯ ಟ್ರಯಲ್ ರನ್ ಶುರುಮಾಡಿದ್ರು. ಮಾರ್ಚ್ 2015ರಲ್ಲಿ ಅಧಿಕೃತವಾಗಿ ಕಂಪನಿ ಓಪನ್ ಮಾಡಿದ್ರು.

ಪಿಕ್ ಮೈ ಲಾಂಡ್ರಿ, ಲಾಂಡ್ರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ. ಲಾಂಡ್ರಿ, ಇಸ್ತ್ರಿ, ಡ್ರೈ ಕ್ಲೀನಿಂಗ್ ಮಾಡುವ ಕಂಪನಿ, ಗ್ರಾಹಕರ ಮನೆಯಿಂದ ಬಟ್ಟೆ ತಂದು ಮತ್ತೆ ಅದನ್ನು ಸಮಯಕ್ಕೆ ಸರಿಯಾಗಿ ವಾಪಸ್ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ತಾ ಇದೆ ಸಂಸ್ಥೆ.

`ನಮ್ಮ ಸಂಸ್ಥೆ ಸಂಘಟಿತ ರೀತಿಯಲ್ಲಿ ಕೆಲಸ ಮಾಡುತ್ತೆ. ನಮ್ಮ ತಂಡ ಸಾಕಷ್ಟು ಪ್ರೊಪೆಷನಲ್ ಆಗಿದ್ದು, ಇದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದಷ್ಟು ವೇಗವಾಗಿ ಕಂಪನಿ ಗ್ರಾಹಕರಿಗೆ ಬಟ್ಟೆ ವಾಪಸ್ ಮಾಡ್ತಿದೆ. ಹಾಗಾಗಿ ಒಮ್ಮೆ ನಮ್ಮ ಸೇವೆ ಪಡೆದ ಗ್ರಾಹಕರು ಮತ್ತೆ ನಮ್ಮ ಬಳಿಯೇ ಬರ್ತಾರೆ’ ಎನ್ನುತ್ತಾರೆ ಸಂಸ್ಥಾಪಕ ಗೌರವ್ ಅಗರ್ವಾಲ್.

ಕಂಪನಿಯ ವೆಬ್ಸೈಟ್ , ಫೋನ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಗ್ರಾಹಕರು ಸೇವೆ ಪಡೆಯಬಹುದು. ಕಂಪನಿಯಿಂದ ಸೇವೆ ಪಡೆಯುವುದು ಅತಿ ಸುಲಭ.

ದೂರವಾಣಿ ಕರೆ ಸ್ವೀಕರಿಸುವುದು,ಡಿಲೆವರಿ ಮಾಡುವುದು,ಲೆಕ್ಕ ನೋಡಿಕೊಳ್ಳುವುದು ಸೇರಿದಂತೆ ಆರಂಭದಲ್ಲಿ ಮೂವರೇ ಎಲ್ಲ ಕೆಲಸವನ್ನು ನಿರ್ವಹಿಸ್ತಾ ಇದ್ದರು. ಅವರ ಶ್ರಮದಿಂದಾಗಿ 6 ತಿಂಗಳಲ್ಲೇ ಮೂರಿದ್ದ ಕಂಪನಿ ಜನಸಂಖ್ಯೆ 35ಕ್ಕೇರಿತು.

ಆರಂಭದಲ್ಲಿ ಒಂದು ದಿನ 15 ಬಟ್ಟೆಗಳನ್ನು ಪಡೆಯುತ್ತಿದ್ದ ಕಂಪನಿಯ ಬಟ್ಟೆ ಸಂಖ್ಯೆ 2500 ತಲುಪಿದೆ. ಕಂಪನಿ ದಕ್ಷಿಣ ದೆಹಲಿ ಹಾಗೂ ಗುರಗಾಂವ್ ನಲ್ಲಿ ಕಾರ್ಯನಿರ್ವಹಿಸ್ತಾ ಇದೆ. ಕಂಪನಿ ಡಿಜಿಟಲ್ ಮಾರ್ಕೆಟಿಂಗ್ ಗೆ ಹೆಚ್ಚು ಒತ್ತು ನೀಡ್ತಾ ಇದೆ. ಅಲ್ಲದೆ ಒಮ್ಮೆ ಬಂದ ಗ್ರಾಹಕರು ಮತ್ತೆ ಸೇವೆ ಪಡೆಯುವುದಲ್ಲದೇ ಬೇರೆಯವರಿಗೆ ಹೇಳ್ತಿದ್ದಾರೆ. ಈ ಮೂಲಕ ಕಂಪನಿಗೆ ಪ್ರಚಾರ ಸಿಗ್ತಾ ಇದೆ.

ಜನರ ಲಾಂಡ್ರಿ ಸಮಸ್ಯೆ ಬಗೆಹರಿಸುವುದಲ್ಲದೆ, ಸರ್ಕಾರಕ್ಕೆ ಸೇವಾ ತೆರಿಗೆ ಕಟ್ಟುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಂಪನಿಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಉದ್ದೇಶ ನಮಗಿದೆ. ಲಾಭಕ್ಕಿಂತ ಜನರ ತೃಪ್ತಿ ಹಾಗೂ ದೇಶಕ್ಕೆ ಕೈಲಾದ ಸಹಾಯ ಮಾಡುವುದನ್ನು ನಾವು ಯಶಸ್ಸು ಎಂದು ಭಾವಿಸುತ್ತೇವೆನ್ನುತ್ತಾರೆ ಗೌರವ್.


ಲೇಖಕ : ಅಶುತೋಷ್ ಕಾಂತ್ವಾಲ್

ಅನುವಾದಕರು: ರೂಪಾ ಹೆಗಡೆ

Related Stories

Stories by YourStory Kannada