ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನಳಾದ ನಾಗಾಲ್ಯಾಂಡ್‌ನ 8ರ ಪೋರಿ ಮ್ಹೋನ್ ಬೇನಿ ಈಜುಂಗ್

ಟೀಮ್​ ವೈ.ಎಸ್​. ಕನ್ನಡ

0


ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿ 8 ವರ್ಷದ ಬಾಲಕಿಗೆ ಲಭಿಸಿದೆ. ಮ್ಹೋನ್ ಬೇನಿ ಈಜುಂಗ್ ಎಂಬ ಈ ನಾಗಾಲ್ಯಾಂಡ್‌ನ ಹುಡುಗಿ ಅಲ್ಲಿನ ವೋಕಾ ಜಿಲ್ಲೆಯ ಚೂಡಿ ಎಂಬ ಹಳ್ಳಿಯಲ್ಲಿ ಹರಿಯುತ್ತಿದ್ದ ನದಿಯಲ್ಲಿ ಮುಳುಗುತ್ತಿದ್ದ ತನ್ನ ಅಜ್ಜಿಯನ್ನು ರಕ್ಷಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಈ ವರ್ಷ ಶೌರ್ಯ ಪ್ರಶಸ್ತಿ ಪಡೆಯುತ್ತಿರುವ 23 ಮಂದಿಯಲ್ಲಿ ಅತೀ ಚಿಕ್ಕ ವಯಸ್ಸಿನ ಹುಡುಗಿ ಈ ಮ್ಹೋನ್ ಬೇನಿ ಈಜುಂಗ್.

ತನ್ನ ಶಾಲೆಗೆ ಚಳಿಗಾಲದ ರಜೆ ಘೋಷಿಸಿದ ಸಂದರ್ಭದಲ್ಲಿ ಮ್ಹೋನ್ ಬೇನಿ ತನ್ನ ಅಜ್ಜಿಯೊಂದಿಗೆ ಕಾಲ ಕಳೆಯಲು ನಾಗಾಲ್ಯಾಂಡ್​ನ ಚೂಡಿ ಎಂಬ ಹಳ್ಳಿಗೆ ಹೋಗಿದ್ದಳು. ಮ್ಹೋನ್ ಬೇನಿಯ ಅಜ್ಜಿ ರೆಂಥುಂಗ್ಲೋ ಜುಂಗಿಗೆ 78 ವರ್ಷ. ಮ್ಹೋನ್ ಬೇನಿಯ ಅಜ್ಜಿ ಆಕೆಯನ್ನು ಸಮೀಪದ ಹೊಳೆಗೆ ಫಿಶಿಂಗ್‌ಗಾಗಿ ಕರೆದೊಯ್ದಿದ್ದಳು. ಫಿಶಿಂಗ್ ಸಮಯದಲ್ಲಿ ಮ್ಹೋನ್ ಬೇನಿಯ ಅಜ್ಜಿಗೆ ಇದ್ದಕ್ಕಿದ್ದಂತೆ ಸೆಳೆತ ಬಂದಂತಾಗಿ, ಪಾರ್ಶ್ವವಾಯು ಬಡಿದು ಮೂರ್ಛೆಹೋದರು. ಇದನ್ನು ಕಂಡು ಮ್ಹೋನ್ ಬೇನಿ ಬೆದರಿದ್ದಳು. ತನ್ನ ಹಳ್ಳಿಯೊಳಗೆ ಆಕೆ ಹೋಗಬೇಕೆಂದರೆ 4,5 ಕೀಮೀನಷ್ಟು ದೂರದ ದುರ್ಗಮವಾದ ಕಾಡಿನ ದಾರಿಯನ್ನು ಸವೆಸಬೇಕಾಗಿತ್ತು. ಆದರೂ ಈ ಪುಟ್ಟ ಹುಡುಗಿಗೆ ಆ ಕ್ಷಣದಲ್ಲಿ ಧೈರ್ಯ ಅದೆಲ್ಲಿಂದ ಬಂದಿತ್ತೋ ಗೊತ್ತಿಲ್ಲ. ಹಳ್ಳಿಯೊಳಗೆ 4,5 ಕಿಮೀನಷ್ಟು ದೂರ ಓಡಿ, ಅಲ್ಲಿನ ಗ್ರಾಮಸ್ಥರನ್ನು ಕರೆದುಕೊಂಡು ಬಂದು ತನ್ನಜ್ಜಿಯನ್ನು ಅಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾದಳು.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಮ್ಹೋನ್ ಬೇನಿಯ ತಂದೆ ಎನ್‌ ಲಾಂಗ್‌ತ್ಸುಬೆಮೋ ಲೋತಾಗೆ ತಮ್ಮ ಮಗಳ ಬಗ್ಗೆ ಹೆಮ್ಮೆ ಇದೆ. ಎನ್‌ಲಾಂಗ್‌ತ್ಸುಬೆಮೋ ನಾಗಾಲ್ಯಾಂಡ್‌ನ ಹೋಮ್‌ಗಾರ್ಡ್ಸ್‌ ಇಲಾಖೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮಗಳು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಸ್ತಿ ಪಡೆಯುವ ಕ್ಷಣವನ್ನು, ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಲಾಂಗ್‌ತ್ಸುಬೆಮೋ ಅವರು ಕೂಡ ನವದೆಹಲಿಗೆ ಆಗಮಿಸಿದ್ದರು. ತನ್ನ ಅಜ್ಜಿಯನ್ನು ರಕ್ಷಿಸುವಲ್ಲಿ ಧೈರ್ಯವಹಿಸಿದ ಮ್ಹೋನ್‌ ಬೇನಿ, 1 ಮೆಡಲ್, ಸರ್ಟಿಫಿಕೇಟ್ ಮತ್ತು ರಾಷ್ಟ್ರೀಯ ಯೋಜನೆಯಡಿ ಹಣ ಮತ್ತು ಆಕೆ ಎಷ್ಟು ಓದುತ್ತಾಳೋ ಅಷ್ಟರವರೆಗೆ ಆಕೆಗೆ ಸಂಪೂರ್ಣವಾದ ಹಣಕಾಸಿನ ಸಹಾಯಕ್ಕೆ ಪಾತ್ರಳಾಗಿದ್ದಾಳೆ. ಚಿಕ್ಕವಯಸ್ಸಿನಲ್ಲೇ ಅಸಾಧಾರಣ ಧೈರ್ಯ ಪ್ರದರ್ಶಿಸಿ ಅಜ್ಜಿಯನ್ನು ಕಾಪಾಡಿದ ಮ್ಹೋನ್‌ಬೇನಿ ಎಂಬ ಈ 8 ವರ್ಷದ ಪುಟ್ಟ ಬಾಲಕಿಗೆ ನಮ್ಮ ಕಡೆಯಿಂದಲೂ ಒಂದು ಸಲ್ಯೂಟ್.


ಅನುವಾದಕರು: ವಿಶ್ವಾಸ್​