ಹಿರಿಜೀವಗಳ ಬದುಕಲ್ಲಿ ಆಶಾಕಿರಣ - ಸಂಗಾತಿ ಆಯ್ಕೆಗಾಗಿ ವಿವಾಹ ವೇದಿಕೆ  

ಟೀಮ್​ ವೈ.ಎಸ್​.ಕನ್ನಡ

0

ಮದುವೆ ಅನ್ನೋದು ಅನ್ಯೋನ್ಯ ಬಂಧನ ಅನ್ನೋ ಮಾತಿದೆ. ಸಂಗಾತಿ ಜೊತೆಗಿದ್ರೆ ಜೀವನ ಬಲು ಚೆನ್ನ. ಏಕಾಂಗಿ ಬದುಕು ನಿಜಕ್ಕೂ ಯಾತನಾಮಯ. ಅದರಲ್ಲೂ ವಯಸ್ಸಾಗುತ್ತಿದ್ದಂತೆ ಒಂಟಿತನ ಬಾಧಿಸಲಾರಂಭಿಸುತ್ತೆ. ಸುಖ-ದುಃಖ ಹಂಚಿಕೊಳ್ಳಲು ಸಂಗಾತಿ ಬೇಕೆನಿಸುತ್ತೆ. ಬಾಳ ಮುಸ್ಸಂಜೆಯಲ್ಲಿ ಒಂಟಿಯಾಗಿ ಬದುಕು ಸವೆಸುತ್ತಿರುವವರಿಗೆಲ್ಲ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಬೆಂಗಳೂರಲ್ಲಿ ಸಿಕ್ಕಿತ್ತು. 50-60 ವರ್ಷ ವಯಸ್ಸಿನ ಸುಮಾರು 250 ಮಂದಿ ಬೆಂಗಳೂರಲ್ಲಿ ನಡೆದ ಮ್ಯಾಚ್-ಮೇಕಿಂಗ್ ಈವೆಂಟ್‍ನಲ್ಲಿ ಪಾಲ್ಗೊಂಡಿದ್ರು. ಇವರಲ್ಲಿ 150 ಪುರುಷರು ಹಾಗೂ 100 ಮಹಿಳೆಯರಿದ್ರು. 

"ಏಕಾಂಗಿಯಾಗಿರುವವರು, ವಿಧವೆಯರು, ವಿಚ್ಛೇದಿತರು ಸೇರಿದಂತೆ ಹಲವರು ಸಂಗಾತಿಯ ಹುಡುಕಾಟಕ್ಕಾಗಿ ಬಂದಿದ್ರು. ಹಿರಿಯ ನಾಗರೀಕರಿಂದ ಕಾರ್ಯಕ್ರಮಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದ ಖುಷಿಯಾಗಿದೆ''
                         - ಭರತ್ ಭಾಯಿ ಪಟೇಲ್, ಅನುಬಂಧನ ಫೌಂಡೇಶನ್ ಸದಸ್ಯ .

ಒಂಟಿಯಾಗಿ ಬದುಕುತ್ತಿರುವವರು ಹಾಗೂ ಮಕ್ಕಳಿಂದ ದೂರವಿರುವ ಹಿರಿಯ ನಾಗರೀಕರದ್ದು ನಿಜಕ್ಕೂ ಬಹುದೊಡ್ಡ ಸಮಸ್ಯೆ. ಅವರೆಲ್ಲ ಸಂಗಾತಿಯನ್ನು ಹುಡುಕಿಕೊಂಡು ಅರ್ಥಪೂರ್ಣ ಬದುಕು ನಡೆಸುವಂತಾಗಲಿ ಎಂಬ ಕಾರಣಕ್ಕೆ ಅಹಮದಾಬಾದ್ ಮೂಲದ ಅನುಬಂಧನ ಫೌಂಡೇಶನ್ ಇಂತಹ ಮ್ಯಾಚ್‍ಮೇಕಿಂಗ್ ಈವೆಂಟ್‍ಗಳನ್ನು ದೇಶದಾದ್ಯಂತ ಆಯೋಜಿಸುತ್ತಿದೆ. ``2014ರ ಜನವರಿಯಲ್ಲಿ ಮೊದಲ ಬಾರಿ ಬೆಂಗಳೂರಲ್ಲಿ ಮ್ಯಾಚ್ ಮೇಕಿಂಗ್ ಈವೆಂಟ್ ಆಯೋಜಿಸಲಾಗಿತ್ತು. ಆಗ 300 ಮಂದಿ ಪಾಲ್ಗೊಂಡಿದ್ರು. ಆದ್ರೆ ಈ ಬಾರಿ 50 ಮಂದಿ ಕಡಿಮೆಯಾಗಿದ್ದಾರೆ, ಅಂದ್ರೆ ಕೇವಲ 250 ಮಂದಿ ಈವೆಂಟ್‍ಗೆ ಬಂದಿದ್ದರು. ಮೊದಲ ಬಾರಿ ನಡೆದ ಈವೆಂಟ್‍ನಲ್ಲಿ ಮಂಗಳೂರು, ಹುಬ್ಬಳ್ಳಿ, ಮೈಸೂರು, ರಾಯಚೂರು ಸೇರಿದಂದೆ ಕರ್ನಾಟಕದ ವಿವಿಧೆಡೆಯಿಂದ ಜನರು ಆಗಮಿಸಿದ್ದರು'' ಅಂತಾ ಭರತ್ ಭಾಯಿ ಪಟೇಲ್ ವಿವರಿಸಿದ್ದಾರೆ. ಸಂಗಾತಿ ಹುಡುಕಾಟಕ್ಕಾಗಿ ಬಂದವರಲ್ಲಿ ಅತಿ ಹಿರಿಯ ವ್ಯಕ್ತಿ ಎಂದ್ರೆ 78 ವರ್ಷದವರು, ಮಹಿಳೆಯರ ಪೈಕಿ 55 ವರ್ಷದವರು.

ಈವೆಂಟ್‍ಗೆ ಬಂದಿದ್ದ 250 ಜನರಲ್ಲಿ ಶೇಕಡಾ 10ರಷ್ಟು ಹಿರಿಯ ನಾಗರಿಕರಿಗೆ ಸ್ಥಳದಲ್ಲೇ ಸಂಗಾತಿಗಳು ಸಿಕ್ಕಿದ್ದಾರೆ. ಸುಮಾರು 12 ಮಂದಿ ಮತ್ತೊಮ್ಮೆ ಪರಸ್ಪರ ಭೇಟಿಯಾಗಿ ಮದುವೆ ಮಾತುಕತೆ ಮುಂದುವರಿಸಲು ಒಪ್ಪಿದ್ದಾರೆ. ಇನ್ನು ಕೆಲವರು ತಮ್ಮ ಟೇಸ್ಟ್‍ಗೆ ತಕ್ಕಂತಹ ಸಂಗಾತಿಗಳನ್ನು ಹುಡುಕಿಕೊಳ್ಳಲು ಆಸಕ್ತಿ ತೋರಿದ್ದಾರೆ. ಇದಕ್ಕಾಗಿ ತಮ್ಮ ಹೆಸರು ಮತ್ತು ಉಳಿದ ವಿವರಗಳನ್ನು ಅನುಬಂಧನ ಫೌಂಡೇಶನ್‍ನಲ್ಲಿ ನಮೂದಿಸಿದ್ದಾರೆ. ಅವರಿಗೆಲ್ಲ ಸೂಕ್ತ ಜೊತೆಗಾರರನ್ನು ಹುಡುಕಿಕೊಡುವ ಜವಾಬ್ಧಾರಿಯನ್ನು ಅನುಬಂಧನ ಫೌಂಡೇಶನ್ ಹೊತ್ತುಕೊಂಡಿದೆ.

ಇದನ್ನು ಓದಿ: ಕಿರಿಕಿರಿ ಮುಕ್ತವಾಗಲಿದೆ ಬೆಂಗಳೂರು ಟ್ರಾಫಿಕ್- ಇದು ನಮ್ಮ ಮೆಟ್ರೋದ ಮ್ಯಾಜಿಕ್​​

"ವಿಭಕ್ತ ಕುಟುಂಬಗಳು, ವೃತ್ತಿ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ಹಿರಿಯ ನಾಗರೀಕರ ಬದುಕು ದುಸ್ತರವಾಗಿದೆ. ಶಿಕ್ಷಣ ಮುಗಿಸಿ ಉದ್ಯೋಗ ಸಿಗುತ್ತಿದ್ದಂತೆ ಮಕ್ಕಳು ತಂದೆತಾಯಿಯನ್ನು ದೂರ ಮಾಡುತ್ತಾರೆ. ಬಹುತೇಕ ಎಲ್ಲರೂ ಮದುವೆಯಾಗುತ್ತಿದ್ದಂತೆ ತಂತೆ-ತಾಯಿಯಿಂದ ಬೇರೆಯಾಗಿ ಜೀವನ ನಡೆಸುತ್ತಾರೆ. ಬೇರೆ ಬೇರೆ ನಗರಗಳಿಗೆ ಅಥವಾ ವಿದೇಶಕ್ಕೆ ಹೋಗಿ ನೆಲೆಸುತ್ತಾರೆ'' ಅನ್ನೋದು ಅನುಬಂಧನ ಫೌಂಡೇಶನ್ ಸದಸ್ಯ ಭರತ್ ಭಾಯಿ ಪಟೇಲ್ ಅವರ ವಿಷಾದದ ನುಡಿ.

ಹಿರಿಯ ನಾಗರಿಕರಲ್ಲಿ ಬಹುತೇಕರು ಮಧ್ಯಮ ವರ್ಗದವರು. ಅವರಲ್ಲಿ ಕೆಲವರು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಆದ್ರೆ ಒಂಟಿತನ ಅವರನ್ನು ಬಾಧಿಸುತ್ತದೆ. ಸಂಗಾತಿಯ ಕೊರತೆಯಿಂದ ನೊಂದು ಅವರು ಸಮಾಜದ ಕಟ್ಟಳೆಗಳನ್ನು ಮೀರಿ ಬೇರೆ ಸಮುದಾಯದವರನ್ನು ವರಿಸುವಂತಹ ಅನಿವಾರ್ಯತೆ ಎದುರಾಗುತ್ತದೆ. ಅದೇನೇ ಆದ್ರೂ ಅನುಬಂಧನ ಫೌಂಡೇಶನ್ ಒಂಟಿತನ ಅನ್ನೋ ಪೆಡಂಭೂತಕ್ಕೆ ಬೆದರಿ ಬೆಂಡಾದ ಹಿರಿ ಜೀವಗಳ ಬದುಕನ್ನು ಹಸನು ಮಾಡುತ್ತಿದೆ. 

ಇದನ್ನು ಓದಿ:

1. "ಕಬಾಲಿ’’ಗೆ ಮೆಗಾ ಬ್ರಾಂಡಿಂಗ್: ಅಧಿಕೃತ ಪಾಲುದಾರನಾದ ಏರ್ ಏಷ್ಯಾ : ಚಿತ್ರದ ಪ್ರಮೋಷನ್​​ಗೆ ಸಖತ್ ಪ್ಲಾನ್

2. 2 ಲಕ್ಷ ಯೂಸರ್ಸ್​ ಮತ್ತು 45 ಲಕ್ಷ ಮಂತ್ಲಿ ಟ್ರಾಫಿಕ್..!

3. ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್​ಪಂಡಾ ಹೊಟ್ಟೆ ತುಂಬಿಸುತ್ತೆ..!