ಸುರಕ್ಷಿತ ಮತ್ತು ಸ್ಮಾರ್ಟ್ ‘ಕ್ಲೋವರ್‍ಬೋರ್ಡ್’

ಟೀಮ್​​ ವೈ.ಎಸ್​. ಕನ್ನಡ

ಸುರಕ್ಷಿತ ಮತ್ತು ಸ್ಮಾರ್ಟ್ ‘ಕ್ಲೋವರ್‍ಬೋರ್ಡ್’

Wednesday December 23, 2015,

4 min Read

ಮನೆ ಯಾಂತ್ರೀಕರಣ ಅನ್ನೋದು ಎಲ್ಲರಿಗೂ ಇಷ್ಟ. ಆದ್ರೆ ಆ ಸೇವೆ ಪಡಿಬೇಕು ಅಂದ್ರೆ ಖರ್ಚು ಹೆಚ್ಚು ಅಥವಾ ಅದನ್ನು ಹೇಗೆ ಪಡೆಯೋದು ಅನ್ನೋದರ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರೋದಿಲ್ಲ. ಹೀಗಾಗಿಯೇ ತಂತ್ರಜ್ಞಾನ ಮೇಳಗಳಲ್ಲಿ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿಗಳಲ್ಲಷ್ಟೇ ಇಂತಹ ಹೋಮ್ ಆಟೊಮೇಷನ್ ಕುರಿತ ವಿವಿಧ ತಂತ್ರಜ್ಞಾನಗಳನ್ನು ನೋಡಬಹುದಾಗಿತ್ತು ಹಾಗೂ ಓದಬಹುದಾಗಿತ್ತು.

ಆದ್ರೆ ಈ ತಂತ್ರಜ್ಞಾನ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗಳಲ್ಲೂ ಲಭ್ಯವಾಗಲಿದೆ. ಆ ತಂತ್ರಜ್ಞಾನಗಳಲ್ಲಿನ ಸಂಕೀರ್ಣತೆ, ವಿವಿಧ ಸ್ವರೂಪಗಳು, ಇನ್ನೂ ಹೆಚ್ಚಿನದನ್ನು ನೀಡುವ ಸಾಮರ್ಥ್ಯಗಳು ಈ ವಲಯದಲ್ಲಿ ಹೆಚ್ಚಿನ ಪ್ರಯತ್ನಗಳು ನಡೆಯಲು ಕಾರಣವಾಗಿವೆ.

ಏನೇನೋ ಸರ್ಕಸ್ ಮಾಡಿ, ವಿವಿಧ ಉಪಕರಣಗಳನ್ನು ತಂದು, ಸಂವಹನ ಸಂಪರ್ಕ ಸಾಧನಗಳ ಮೂಲಕ ನೆಟ್‍ವರ್ಕ್ ಕಲ್ಪಿಸಿ ತಲೆ ಕೆಡಿಸಿಕೊಂಡು ಒದ್ದಾಡೋದಕ್ಕಿಂತ, ಕೇವಲ ವೈಫೈ ಮತ್ತು ಸ್ವಿಚ್‍ಗಳನ್ನು ಉಪಯೋಗಿಸಿಕೊಂಡು ಹಲವು ಕೆಲಸಗಳನ್ನು ಮಾಡಿದ್ರೆ ಹೇಗೆ?

image


ಆಲ್ ಇನ್ ಒನ್, ಬಹುಪಯೋಗಿ ಸ್ವಿಚ್ ಮೂಲಕ ಇದನ್ನು ನಿಜ ಮಾಡಲು ಹೊರಟಿದ್ದಾರೆ ಕೆಲ ಎನ್‍ಐಟಿ – ಜೈಪುರದ ಒಂದು ತಂಡ.

ಇದು ಭವಿಷ್ಯದ ಸ್ವಿಚ್

ಇದು ಕ್ಲೋವರ್‍ಬೋರ್ಡ್. ಈ ಅತ್ಯಾಧುನಿಕ, ನೂತನ ತಂತ್ರಜ್ಞಾನವುಳ್ಳ ಕ್ಲೋವರ್‍ಬೋರ್ಡ್ ಮೂಲಕ ವಿದ್ಯುತ್ ಉಳಿತಾಯ ಮಾಡಬಹುದು. ಇದರ ಸಂಶೋಧಕರ ಪ್ರಕಾರ, ಈ ಸ್ವಿಚ್ ಮೂಲಕ ಎಸಿ, ವಾಟರ್ ಹೀಟರ್‍ಗಳ ವಿದ್ಯುತ್ ಬಳಕೆಯಲ್ಲಿ ಶೇಕಡಾ 10ರಿಂದ 15 ಪ್ರತಿಶತಃ ಹಾಗೂ ಬಲ್ಬ್ ಮತ್ತು ಟ್ಯೂಬ್‍ಲೈಟ್‍ಗಳಿಂದ 30ರಿಂದ 40 ಪ್ರತಿಶತಃ ಖರ್ಚು ಉಳಿಸಬಹುದಂತೆ.

ಮತ್ತೊಂದು ಅವತಾರದಲ್ಲಿ ಕ್ಲೋವರ್‍ಬೋರ್ಡ್‍ಅನ್ನು, ‘ಎನಿವೇ’ ಸ್ವಿಚ್ ಅನ್ನಬಹುದು. ಬಟನ್‍ಗಳನ್ನು ಬಳಸಲು, ಅವುಗಳ ಕೆಲಸವನ್ನು ಅರಿತುಕೊಂಡು ಉಪಯೋಗಿಸೋದು ಅಷ್ಟು ಕಷ್ಟವೇನಲ್ಲ. ಹಾಗೇ ನಮಗೆ ಇಷ್ಟ ಬಂದಂತೆ ಅದನ್ನು ಬದಲಿಸಬಹುದು ಕೂಡ. ಹೀಗಾಗಿಯೇ ಅಡುಗೆ ಮನೆ ಲೈಟ್ ಆನ್ ಆಗಿದ್ದರೆ, ಅದನ್ನು ಆಫ್ ಮಾಡಲು ಅಲ್ಲಿಗೇ ಹೋಗಬೇಕು ಅಂತೇನಿಲ್ಲ. ನಿಮ್ಮ ಬೆಡ್‍ರೂಮ್‍ನಲ್ಲಿ ಹಾಸಿಗೆ ಮೇಲೆ ಕುಳಿತೇ ಆನ್, ಆಫ್ ಮಾಡಬಹುದು.

ಇನ್ನು ಮನೆಯಿಂದ ಕೆಲಸಕ್ಕೆ ಹೋಗುವ ಮುನ್ನ ‘ಅವೇ’ ‘ಚಿತಿಚಿಥಿ’ ಬಟನ್ ಒತ್ತಿದ್ರೆ ಸಾಕು, ಮನೆಯಲ್ಲಿ ಯಾವುದೇ ಲೈಟ್ ಅಥವಾ ಎಸಿ, ವಾಟರ್ ಹೀಟರ್ ಆನ್ ಆಗಿದ್ದರೆ, ಎಲ್ಲವೂ ಆಫ್ ಆಗುತ್ತವೆ. ಆ ಮೂಲಕ ವಿದ್ಯುತ್ ಉಳಿತಾಯ ಮಾಡಬಹುದು ಹಾಗೂ ಹಣವನ್ನೂ ಉಳಿಸಬಹುದು.

ಇನ್ನು ನಿಮಗೆ ಬೇಕಾದ ನಿರ್ದಿಷ್ಟ ಸಮಯಕ್ಕೆ ತಕ್ಕಂತೆ ಹಾಗೂ ಕೆಲಸಗಳಿಗೆ ಅನುಗುಣವಾಗಿ ಲೈಟ್‍ಗಳನ್ನು ಹಾಗೂ ಕೂಲಿಂಗ್ ವ್ಯವಸ್ಥೆಯನ್ನು ಮೊದಲೇ ನಿಯೋಜಿಸಬಹುದು. ಪ್ರತಿದಿನ ಬೆಳಗ್ಗೆ 8 ಗಂಟೆಗೆ ನೀವು ಗೀಸರ್ ಆನ್ ಮಾಡಬೇಕು ಅಂತಿದ್ರೆ, ಮನೆಯ ಸೆಕ್ಯುರಿಟಿ ಅಲಾರ್ಮ್ ವ್ಯವಸ್ಥೆಯ ಕಾರ್ಯ ಎಲ್ಲವನ್ನೂ ಕ್ಲೋವರ್‍ಬೋರ್ಡ್ ಮೂಲಕವೇ ಮಾಡಬಹುದು.

ಇದು ಎಲ್ಲಾ ಹೋಮ್ ಆಟೊಮೇಷನ್‍ಗಳಲ್ಲೂ ಇದ್ದೇ ಇರುತ್ತೆ ಅಂತೀರಾ? ಆದ್ರೆ ಇದರ ಸಂಸ್ಥಾಪಕರು ಅದಕ್ಕೆ ಒಪ್ಪಲ್ಲ. ಯಾಕಂದ್ರೆ ಬೇರೆ ಸಾಂಪ್ರದಾಯಿಕ ಹೋಮ್ ಆಟೊಮೇಷನ್ ಉತ್ಪನ್ನಗಳು ಮತ್ತು ಅವುಗಳ ಸೇವೆಗಳು ನಿಜವಾಗಲೂ ತಾಂತ್ರಿಕವಾಗಿ ಉತ್ತಮ ಗುಣಮಟ್ಟವಾಗಿರೋದಿಲ್ಲ. ಮೊಬೈಲ್ ಇಲ್ಲದೇ ಅವುಗಳು ಕೆಲಸ ಮಾಡೋದಿಲ್ಲ. ಅಲ್ಲದೇ ಇಂತಹ ಸೇವೆಯಲ್ಲಿ ಪರಿಹಾರ ಒದಗಿಸಲು ಮನೆಯಲ್ಲಿ ಹೊಸ ವೈರಿಂಗ್ ಮತ್ತು ಮನೆಯ ರಚನೆಯನ್ನು ಬದಲಿಸಬೇಕಾಗುತ್ತೆ. ಇದರಿಂದ ಅನಾನುಕೂಲತೆಯೂ ಹೆಚ್ಚುತ್ತದೆ ಹಾಗೂ ಖರ್ಚೂ ಜಾಸ್ತಿಯಾಗುತ್ತೆ.

ಪಯಣ

ಕ್ಲೋವರ್‍ಬೋರ್ಡ್ ಸಹ ಸಂಸ್ಥಾಪಕರಾದ ನಿಶಾಂತ್ ಕುಮಾರ್, ನಿರ್ಮಲಾ ಕುನ್ವರ್ ಹಾಗೂ ರಿತಿಕಾ ಧ್ಯವಳ ಅವರಲ್ಲಿನ ರೋಬೋಟಿಕ್ ಮತ್ತು ತಂತ್ರಜ್ಞಾನಗಳ ಕುರಿತ ಸೆಳೆತವೇ ಅವರನ್ನು ಒಂದೇ ವೇದಿಕೆಗೆ ಬರಲು ಕಾರಣವಂತೆ. ರೋಬೋಟಿಕ್ಸ್ ಕಾಲೇಜು ತಂಡದಲ್ಲಿ ಒಬ್ಬರಿಗೊಬ್ಬರು ಪರಿಚಯವಾದ ಈ ತಂಡ, ತಮ್ಮ ಮೊದಲ ವರ್ಷದ ಕಾಲೇಜ್‍ನಲ್ಲಿರುವಾಗಲೇ ನೈಜ ಸಮಸ್ಯೆಗಳನ್ನು ತಂತ್ರಜ್ಞಾನಗಳ ಮೂಲಕ ಪರಿಹರಿಸಲು ಪ್ರಯತ್ನಿಸಿದ್ರು.

ಆ ಪ್ಯಾಶನ್‍ಅನ್ನು ಇವರು ಹೇಗೆ ಮುಂದುವರಿಸಿಕೊಂಡು ಬಂದ್ರು ಅಂದ್ರೆ, ಪದವಿ ಪಡೆದು ಕಾಲೇಜ್‍ನಿಂದ ಪಾಸ್‍ಆಗಿ ಹೊರಬಂದು, ಕೆಲಸಕ್ಕೆ ಸೇರಿದ ಮೇಲೂ ಆಗಾಗ ಭೇಟಿಯಾಗುತ್ತಿದ್ದರು. ಹೊಸ ತಂತ್ರಜ್ಞಾನಗಳು, ಅದರಲ್ಲಿನ ಸಮಸ್ಯೆಗಳ ಮತ್ತು ಅವುಗಳನ್ನು ಪರಿಹರಿಸುವ ಕುರಿತು ಚರ್ಚಿಸುತ್ತಿದ್ದರು. ಇದನ್ನು ನೋಡಿ ನಿಶಾಂತ್‍ರ ಹಿರಿಯ ಸಹೋದರ ವಿಕೇಕ್ ರಾಜ್ ಕೂಡ ಈ ತಂಡವನ್ನು ಸೇರಿಕೊಂಡರು. ನೆಟ್‍ವರ್ಕಿಂಗ್‍ನಲ್ಲಿ ಕೈಜೋಡಿಸಿದ ಅವರು ಸಂಶೋಧನಾ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿ, ಬಂಡವಾಳ ಹೂಡಿಕೆದಾರರು ಹಾಗೂ ಉದ್ಯಮಿಗಳೊಂದಿಗೆ ಈ ತಂಡಕ್ಕೆ ಸಂಪರ್ಕ ಕಲ್ಪಿಸಿಕೊಟ್ಟರು.

image


ಈಗ ತಂಡ ಬಹುದೂರ ಸಾಗಿ ಬಂದಿದೆ. ಹಾರ್ಡ್‍ವೇರ್‍ಗಳ ವಿಷಯಕ್ಕೆ ಬಂದ್ರೆ ಉತ್ತಮ ಗುಣಮಟ್ಟದ ಒಂದೊಳ್ಳೆ ಉತ್ಪನ್ನವನ್ನು ಪರಿಚಯಿಸುವುದೇ ಅತಿ ದೊಡ್ಡ ಸವಾಲು. ಹೀಗಾಗಿಯೇ ಒಂದು ಪೂರ್ಣಗೊಂಡ ಉತ್ಪನ್ನ, ಅದರ ಪ್ರೋಟೋಟೈಪ್ ಅಥವಾ ಮೊದಲ ಮಾದರಿಗಿಂತ ತುಂಬಾ ವಿಭಿನ್ನವಾಗಿರುತ್ತೆ. ಯಾಕಂದ್ರೆ ಮೊದಲ ಮಾದರಿ ತಯಾರಿಸಲು ಕೇವಲ 10ರಷ್ಟು ಪ್ರಯತ್ನ ಬೇಕಿರುತ್ತೆ, ಆದ್ರೆ ಆ ಪ್ರೋಟೋಟೈಪ್‍ಅನ್ನು ಒಂದೊಳ್ಳೆ ಉತ್ಪನ್ನವನ್ನಾಗಿ ಪರಿವರ್ತಿಸಲು ಶೇಕಡಾ 90ರಷ್ಟು ಪ್ರಯತ್ನ ಹಾಗೂ ಪರಿಶ್ರಮ ಬೇಕಾಗುತ್ತೆ. ನಂತರ ಅದನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಬಹುದು.

ಮೊದಲು ಸೇವಾ ವಲಯದ ಉದ್ಯಮ ಆರಂಭಿಸಲು ರಿತಿಕಾ ಆಸೆಪಟ್ಟಿದ್ದರು. ಆಟೊಮೇಷನ್ ಕಂಪನಿಯನ್ನು ನಡೆಸಬೇಕು ಅಂದ್ರೆ ಮೂರನೇ ಪಾರ್ಟಿಯ ಮೊರೆ ಹೋಗಬೇಕು. ಯಾಕಂದ್ರೆ ಉತ್ಪನ್ನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕು. ಹೀಗಾಗಿಯೇ ನಮ್ಮ ಕಂಪನಿ ಮಧ್ಯವರ್ತಿಯಾಗುತ್ತೆಯೇ ವಿನಃ ತಾನೇ ಹೊಸ ಉತ್ಪನ್ನಗಳನ್ನು ಸಂಶೋಧಿಸಲು ಹಿನ್ನಡೆ ಉಂಟಾಗುತ್ತದೆ. ಹೀಗಾಗಿಯೇ ‘ನಾವು ಒಂದು ಈಗಲೂ ಬಳಸಬಹುದಾದಂತಹ ಹಾಗೂ ಮುಂದೆಯೂ ಬದಲಾವಣೆ ಮಾಡಬಹುದಾದಂತಹ ಉತ್ಪನ್ನವನ್ನು ಸೃಷ್ಟಿಸಲು ಚಿಂತಿಸಿದ್ದೆವು’ ಅಂತಾರೆ ರಿತಿಕಾ.

ಈ ಪಯಣದಿಂದ ಕ್ಲೋವರ್‍ಬೋರ್ಡ್ ತಂಡ ಸಾಕಷ್ಟು ಕಲಿತಿದೆ. ಅನುಭವ ಪಡೆದಿದೆ. ‘ಈ ಪಯಣ ನಮಗೆ ಕೇವಲ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಿಲ್ಲ ಬದಲಿಗೆ ಬೇರೆ ಬೇರೆ ರೀತಿಯ ಜನರ ಬಗ್ಗೆಯೂ ತಿಳುವಳಿಕೆ ನೀಡಿದೆ. ಒಂದು ಕನಸು ಕಂಡು ಅದನ್ನು ನನಸು ಮಾಡಿಕೊಳ್ಳೋದು ಹೇಗೆ ಅನ್ನೋದನ್ನು ಕಲಿಸಿದೆ. ಒಂದು ಹಾರ್ಡ್‍ವೇರ್ ಕಂಪನಿ ಕಟ್ಟಿ ಬೆಳೆಸೋದು ತುಂಬಾ ಕಷ್ಟ ಮತ್ತು ಭಯ ಮೂಡಿಸುವಂತಹ ಕೆಲಸ. ಆದ್ರೆ ಅದರಲ್ಲಿ ಸಿಗುವ ಖುಷಿ ಮತ್ತು ನಾವೇ ಉತ್ಪಾದಿಸುವ ಒಂದು ಉಪಕರಣ ನೋಡಿ ಸಿಗುವ ಸಮಾಧಾನವನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ’ ಅಂತ ಸಂತಸ ವ್ಯಕ್ತಪಡಿಸುತ್ತಾರೆ ರಿತಿಕಾ.

ಮೊದಲ ಪ್ರಯತ್ನದಲ್ಲಿರುವ ಯುವ ಉದ್ಯಮಿಗಳಿಗೆ, ಅವರ ಈ ಪಯಣ ಕಷ್ಟದ ದಿನಗಳಲ್ಲಿ ಹಣದ ಮಹತ್ವವನ್ನು ತಿಳಿಸುತ್ತದೆ. ಜೊತೆಗೆ ತುಂಬಾ ಕಷ್ಟದ ಸಂದರ್ಭಗಳಲ್ಲಿ, ಹತಾಶೆ ಕಾಡುವ ಸಮಯದಲ್ಲಿ ಆ ಅನುಭವಗಳಿಂದ ಹೊರಬರುವುದನ್ನೂ ತಿಳಿಸುತ್ತದೆ.

ಈಗಿನ್ನೂ ಕಣ್ಣು ತೆರೆದಿರುವ ಕಾರಣ ಕಂಪನಿ ಸದ್ಯ ಮುಂದಿನ ಮೂರು ತಿಂಗಳ ಕಾಲ ಲಿಮಿಟೆಡ್ ಉತ್ಪನ್ನಗಳನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. 2016ರಲ್ಲಿ ಪೂರ್ಣ ಪ್ರಮಾಣದಲ್ಲಿ, ಮಾರುಕಟ್ಟೆಗೆ ಜಿಗಿಯುವ ಐಡಿಯಾ ಕ್ಲೋವರ್‍ಬೋರ್ಡ್ ತಂಡದ್ದು. ‘ಭಾರತೀಯರು ಅತ್ಯುತ್ತಮ ವಿನ್ಯಾಸದ ಹಾಗೂ ಗುಣಮಟ್ಟದ ಹಾರ್ಡ್‍ವೇರ್ ಉಪಕರಣಗಳನ್ನು ಉತ್ಪಾದಿಸಲು ಅಸಮರ್ಥರು ಅನ್ನೋ ಮಾತಿದೆ. ಆದ್ರೆ ಆ ಅಭಿಪ್ರಾಯ ಮುಂದಿನ ದಿನಗಳಲ್ಲಿ ಬದಲಾಗಲಿದೆ. ಹಾಗೇ ಭವಿಷ್ಯದಲ್ಲಿ ನಮ್ಮ ಉತ್ಪನ್ನಗಳನ್ನು ಭಾರತದ ಎಲ್ಲಾ ಮೂಲೆಗಳಿಗೂ ವಿಸ್ತರಿಸುವ ಐಡಿಯಾ ಇದೆ’ ಅಂತಾರೆ ರಿತಿಕಾ.

ಈ ಕಂಪನಿಗೆ, ಐಐಎಮ್ ಅಹ್ಮದಾಬಾದ್‍ನವರು ಎಡಿಬಿ ಮೂಲಕ 10 ಲಕ್ಷ ರೂಪಾಯಿ ಅನುದಾನ ಕೊಡಿಸಿದ್ದಾರೆ. ಅಲ್ಲದೇ ಬಂಡವಾಳ ಹೂಡಿಕೆದಾರರು, ಪಾಲುದಾರರು ಹಾಗೂ ಉದ್ಯಮಿಗಳೊಂದಿಗೆ ಮಾತುಕತೆಯ ಮೂಲಕ 1.5 ಮಿಲಿಯನ್ ಡಾಲರ್ ಬಂಡವಾಳ ಪಡೆಯುವ ಯೋಜನೆ ಕೂಡ ಇದೆ. ಆ ಮೂಲಕ ಭಾರತದ ಟಾಪ್ 8 ನಗರಗಳಿಗೆ ಆದಷ್ಟು ಬೇಗ ತಲುಪಬೇಕು ಹಾಗೂ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಅನ್ನೋ ಪ್ಲ್ಯಾನ್ ಈ ತಂಡದ್ದು.

ಈಗಾಗಲೇ 1 ಸಾವಿರಕ್ಕೂ ಹೆಚ್ಚು ಕ್ಲೋವರ್‍ಬೋರ್ಡ್‍ಗಳಿಗೆ ಆರ್ಡರ್ ದೊರೆತಿದೆ. ವಿದ್ಯುತ್ ಉಪಕರಣಗಳ ನಿರ್ವಹಣೆ, ಸೌರ ಶಕ್ತಿ ಬಳಕೆ, ಅತ್ಯುತ್ತಮ ಬ್ಯಾಟರಿ ತಂತ್ರಜ್ಞಾನಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮನೆಗಳಲ್ಲಿ ಸ್ವಯಂ ಸಮರ್ಥನೀಯವಾಗಿ ಒಂದಕ್ಕೊಂದು ಸಂಪರ್ಕ ಕಲ್ಪಿಸಬಹುದು. ಮುಂದಿನ ದಿನಗಳಲ್ಲಿ ಧ್ವನಿ ಗುರುತಿಸುವಿಕೆ ತಂತ್ರಜ್ಞಾನ ಸಂಯೋಜನೆ ಮೂಲಕ ಮಾಲೀಕರು ತಮ್ಮ ಮನೆಗಳೊಂದಿಗೆ ಮಾತನಾಡಬಹುದಾದ ಸೇವೆಯನ್ನೂ ಕಲ್ಪಿಸುತ್ತೇವೆ ಅಂತಾರೆ ಕ್ಲೋವರ್‍ಬೋರ್ಡ್ ತಂಡದ ಸದಸ್ಯರು.

ಲೇಖಕರು: ತರುಷ್​ ಭಲ್ಲಾ

ಅನುವಾದಕರು: ವಿಶಾಂತ್​​