ನವೆ ಆಗ್ತಿದೆಯಾ..? ಆನ್​​ಲೈನ್​​ ಡಾಕ್ಟರ್ ಇದ್ದಾರೆ..!

ಟೀಮ್​​ ವೈ.ಎಸ್​​.

1

ಅದೊಂದು ತುರಿಕೆ... ಅಸಾಧ್ಯ ತುರಿಕೆ... ಅಷ್ಟೇ...ಅಂಕಿತ್ ಖುರಾನಾ ಅವರು ಮೈಡೆರ್ಮಸಿ ಎಂಬ ಫ್ಲಾಟ್​​ಫಾರ್ಮ್ ಸೃಷ್ಟಿಸಿಬಿಟ್ಟರು ! ಅಬ್ಬಬ್ಬಾ ಎಂಥಾ ಸಂದರ್ಭ !

"ನಾನು ತುಂಬಾ ಪ್ರಯಾಣ ಮಾಡುತ್ತಿದ್ದೆ. ಯಾವುದೇ ಚರ್ಮದ ಸಮಸ್ಯೆ ಉಂಟಾದಲ್ಲಿ ವೈದ್ಯರ ಬಳಿಗೆ ಹೋಗಲು ತುಂಬಾ ಉದಾಸೀನ ಮಾಡುತ್ತಿದ್ದೆ. ಹೀಗೆ ಒಂದು ಪ್ರಯಾಣದ ವೇಳೆ ನನಗೆ ಸಾಕ್ಸ್ ಅಲರ್ಜಿ(ಡೆರ್ಮಟೈಟಿಸ್) ಶುರುವಾಗಿತ್ತು. ಅಸಾಧ್ಯ ತುರಿಕೆ ಅದು. ನಾನೊಂದು ಫೋಟೋ ತೆಗೆದು ವೈದ್ಯರ ಸಲಹೆ ಪಡೆಯುವುದು ಸಾಧ್ಯವಾಗಿದ್ದರೆ ಹೇಗಿತ್ತು? ಅಂತ ಪ್ರಶ್ನಿಸತೊಡಗಿದ್ದೆ." ಹೀಗೆ ತಮ್ಮ ಚಿಂತನೆಯನ್ನು ಬಿಚ್ಚಿಡುತ್ತಾರೆ ಅಂಕಿತ್ ಖುರಾನಾ.

ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾಗ ಸೃಷ್ಟಿಯಾಗಿದ್ದೇ ಮೈಡೆರ್ಮಸಿ ಸ್ಟಾರ್ಟ್ಆ್ಯಪ್​​. ಒಂದೇ ಒಂದು ಸೆಲ್ಫಿ ಮೂಲಕ ಜನರಿಗೆ ತಮ್ಮ ಚರ್ಮ ಮತ್ತು ಕೂದಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ಈ ಆ್ಯಪ್​​ನ ವಿಶೇಷ.

ಒಂದು ಪುಟ್ಟ ಇತಿಹಾಸ

ಓಹಿಯೋದ ಕೇಸ್ ವೆಸ್ಟರ್ನ್ ಯೂನಿವರ್ಸಿಟಿಯಲ್ಲಿ ಬಯೋಮೆಡಿಕಲ್ ಪದವಿ ಪಡೆದಿದ್ದರು ಅಂಕಿತ್. ಸುಮಾರು ಒಂದು ದಶಕಗಳ ಕಾಲವನ್ನು ಅವರು ಚರ್ಮದ ಆರೈಕೆಯಲ್ಲಿ ಕಳೆದಿದ್ದರು. ಇದೇ ಈ ಆ್ಯಪ್ ಚರ್ಮರೋಗದ ಬಗ್ಗೆ ಗಮನಹರಿಸಲು ಕಾರಣ. ಅಂಕಿತ ಸಂಪರ್ಕದಲ್ಲಿ ಅದಾಗಲೇ ಹಲವು ಚರ್ಮರೋಗ ತಜ್ಞರು ಇದ್ದರು. ಅತ್ತ ಕೊಲಂಬಿಯಾ ಏಷಿಯಾ ಬ್ಯುಸಿನೆಸ್ ಸ್ಕೂಲ್​​ನ ಪದವೀಧರ ಕುಬೇರ್ ಅವರು ಈ ಉದ್ಯಮಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆ ಮತ್ತ ವಹಿವಾಟಿನ ವ್ಯವಸ್ಥೆ ಮಾಡಿದರು.

ನವ್ಯೋದ್ಯಮದ ಹುಟ್ಟು

2013ರಲ್ಲಿ ಅಂಕಿತ್ ಮತ್ತು ಅವರ ಸಹಸಂಸ್ಥಾಪಕ ಮತ್ತು ಸಿಟಿಓ ಕುಬೇರ್ ಶರ್ಮಾ ಅವರು ಮೈ ಡೆರ್ಮಸಿ ಆ್ಯಪ್ ಅಭಿವೃದ್ಧಿಪಡಿಸಲು ತೀರ್ಮಾನಿಸಿದರು. ಆರಂಭದಲ್ಲಿ ಇದನ್ನು ಇ-ಕಾಮರ್ಸ್ ವೆಬ್​ಸೈಟ್ ಆಗಿ ರೂಪಿಸಿ ಚರ್ಮರೋಗ, ಕೂದಲು ಮತ್ತು ಲೈಂಗಿಕ ಉತ್ಪನ್ನಗಳ ಮಾರಾಟ ಮಾಡಬೇಕು ಎಂದು ಯೋಚಿಸಿದ್ದರು.

ಬಹುತೇಕ ನವ್ಯೋದ್ಯಮಿಗಳು ಮಾಡುವಂತೆ, ಇದನ್ನು ಆನ್​ಲೈನ್​​ ಚರ್ಮ ಕ್ಲಿನಿಕ್ ಆಗಿ ರೂಪಿಸಲು ಹೊರಟಿದ್ದರು.

"ನಮಗೆ ಇ-ಕಾಮರ್ಸ್ ವೆಬ್​ಸೈಟ್​​ ಬಗ್ಗೆ ತೀವ್ರ ಆಸಕ್ತಿ ಇತ್ತು. ಆದರೆ ಚರ್ಮರೋಗ ಸಲಹೆಗೆ ನಮ್ಮ ನಿರೀಕ್ಷೆಗೂ ಮೀರಿದ ಮಾರುಕಟ್ಟೆ ಇದೆ ಎನ್ನುವ ಊಹೆ ನಮ್ಮದಾಗಿತ್ತು. ಇದನ್ನು ನಾವು ಶೀಘ್ರದಲ್ಲೇ ರೂಪಿಸಿದರೆ ಭಾರತದಲ್ಲಿ ನಾವೇ ಮೊದಲಿಗರಾಗುತ್ತಿದ್ದೆವು" ಎನ್ನುತ್ತಾರೆ ಅಂಕಿತ್.

ಮೇ 2015ರಲ್ಲಿ ಕೆಲವು ಲಕ್ಷಗಳಷ್ಟು ಬಂಡವಾಳದೊಂದಿಗೆ ಚಾಟ್ ಆಧಾರಿತ ಕನ್ಸಲ್ಟೇಷನ್ ಪ್ಲಾಟ್​​ಫಾರಂ ರೂಪಿಸಲಾಯಿತು.

ಮೈಡೆರ್ಮಸಿ ಮತ್ತು ಅದರ ಮಾರುಕಟ್ಟೆ

2014ರಲ್ಲಿ ಫ್ರಾಸ್ಟ್ ಅಂಡ್ ಸಲ್ಲಿವನ್ ಎಂಬ ಸಂಸ್ಥೆಯು ಚರ್ಮದ ಆರೈಕೆ ಕ್ಷೇತ್ರದ ಸಮೀಕ್ಷೆ ನಡೆಸಿ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ 2015ರ ವೇಳೆಗೆ ಭಾರತದಲ್ಲಿ ಸುಮಾರು 19 ಕೋಟಿ ಜನರು ನಾನಾ ವಿಧದ ಚರ್ಮದ ಕಾಯಿಲೆಗಳಿಗೆ ಗುರಿಯಾಗಲಿದ್ದಾರಂತೆ.

ಚರ್ಮ ಆರೋಗ್ಯದ ಕ್ಷೇತ್ರವು ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲಿದ್ದು, ಮುಂದಿನ ವರ್ಷಗಳಲ್ಲಿ ಹೂಡಿಕೆ ಮಾಡುವವರಿಗೆ ಆಪ್ತ ವಲಯವಾಗಿ ಪರಿಣಮಿಸಲಿದೆ. ಸಮೀಕ್ಷೆಯ ಪ್ರಕಾರ ದೇಶದಲ್ಲಿ ಕೇವಲ 7000 ಚರ್ಮರೋಗ ತಜ್ಞರಿದ್ದಾರೆ. ಅಂದರೆ ಭಾರತದಲ್ಲಿ ಪ್ರತಿ 1 ಲಕ್ಷ ಜನರಿಗೆ ಕೇವಲ 0.49 ಚರ್ಮರೋಗ ತಜ್ಞರು ಲಭ್ಯರಿದ್ದಾರೆ. ಅದೇ ಅಮೆರಿಕಾದಲ್ಲಿ ಪ್ರತಿ ಲಕ್ಷ ಮಂದಿಗೆ 3.3% ಚರ್ಮರೋಗ ತಜ್ಞರಿದ್ದಾರೆ.

ಮೈಡೆರ್ಮಸಿಯು ಈ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಸುಮಾರು 150ಕ್ಕೂ ಹೆಚ್ಚು ಚರ್ಮವೈದ್ಯರ ನೆಟ್​​ವರ್ಕ್​ನೊಂದಿಗೆ ಈ ವಿರ್ಚುವಲ್ ಸ್ಕಿನ್ ಕ್ಲಿನಿಕ್, ಚರ್ಮ ಸಮಸ್ಯೆಗಳಿಗೆ, ಕೂದಲಿನ ಸಮಸ್ಯೆಗಳಿಗೆ, ಲೈಂಗಿಕ ಆರೋಗ್ಯದ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದೆ.

ಈ ಪ್ಲಾಟ್​ಪಾರಂನಲ್ಲಿರುವ ವೈದ್ಯರು ತಮ್ಮ ಅನುಭವಕ್ಕೆ ಅನುಗುಣವಾಗಿ 300 ರೂಪಾಯಿಗಳಿಂದ 1 ಸಾವಿರ ರೂಪಾಯಿಗಳವರೆಗೆ ಶುಲ್ಕ ಪಡೆಯುತ್ತಾರೆ. ಬ್ಯುಸಿನೆಸ್ ವರ್ಲ್ಡ್​​ ಆಕ್ಸಿಲೇಟರ್ ನ ಭಾಗವಾಗಿರುವ ಈ ಪ್ಲಾಟ್​​​​ಫಾರಂ, ಪ್ರತಿ ತಿಂಗಳು ಸುಮಾರು 1 ಲಕ್ಷ ವಿವಿಧ ರೋಗಿಗಳಿಗೆ ಸಲಹೆಯನ್ನು ನೀಡಿದೆ. ಈ ಪೈಕಿ 90% ಮಂದಿ ಭಾರತೀಯರು.

"ಈ ಪ್ಲಾಟ್​​ಫಾರಂ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತವಾಗಿರುವುದರಿಂದ ಇಂತಹದ್ದೇ ಪ್ರಶ್ನೆಗಳು ಎಂದು ನಿರೀಕ್ಷಿಸುವ ಹಾಗಿಲ್ಲ. ಕೆಲವೊಂದು ಪ್ರಶ್ನೆಗಳು ತುಂಬಾ ಹಾಸ್ಯಾಸ್ಪದವಾಗಿರುತ್ತವೆ. ಹಲವು ಬಳಕೆದಾರರು ಚಿತ್ರವಿಚಿತ್ರವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾಹರಣೆಗೆ... ನಾನು ನಾಳೆ ಮದುವೆಯಾಗುತ್ತಿದ್ದೇನೆ. ನನ್ನ ಮುಖದಲ್ಲಿ ಮೊಡವೆ ಇದೆ. ನಾನು ಏನು ಮಾಡಬೇಕು? ಅಥವಾ.. ನನ್ನ ಜನನಾಂಗದ ಮೇಲೆ ಸಣ್ಣ ಕಲೆಯೊಂದಿದೆ. ನಾನು ಶೀಘ್ರದಲ್ಲೇ ವಿವಾಹವಾಗುತ್ತಿದ್ದೇನೆ? ನಾನು ಅದರದೊಂದು ಫೋಟೋ ಕಳುಹಿಸಲೇ.. ದಯವಿಟ್ಟು ನೆರವು ನೀಡಿ.."ಇಂತಹ ಪ್ರಶ್ನೆಗಳಿರುತ್ತವೆ ಎನ್ನುತ್ತಾರೆ ಅಂಕಿತ್.

ಯಾಕೆ ಈ ಪ್ಲಾಟ್​ಫಾರಂ ಭಿನ್ನವಾಗಿದೆ ?

ಇಂತಹ ಅನೇಕ ವಿರ್ಚುವಲ್ ಆಸ್ಪತ್ರೆಗಳು ವಿಡಿಯೋ ಮೂಲಕ ಸಲಹೆ ನೀಡುತ್ತಾರೆ. ಆದರೆ ಇವೆಲ್ಲವೂ ಹೆಚ್ಚುವರಿ ಎಂದು ಅಂಕಿತ್​ಗೆ ಅನ್ನಿಸುವುದಿಲ್ಲ.

"ನಮಗೆ ವಿಡಿಯೋಗಳು ಅಗತ್ಯ ಎನ್ನಿಸುವುದಿಲ್ಲ. ಕಾರಣವೇನೆಂದರೆ, ಚರ್ಮವೈದ್ಯರು ಸಾಮಾನ್ಯವಾಗಿ ಚರ್ಮದ ಸ್ಥಿತಿಗತಿ ಬಗ್ಗೆ ಫೋಟೋ ನೋಡಿಯೇ ತಿಳಿದುಕೊಳ್ಳುತ್ತಾರೆ. ಅವರು ಈ ಮೂಲಕವೇ ತರಬೇತಿ ಪಡೆದಿರುತ್ತಾರೆ. ಕೇವಲ ಟೆಲಿ-ರೇಡಿಯಾಲಜಿ ಮತ್ತು ಟೆಲಿ ಡರ್ಮಿಟಾಲಜಿ ಮಾತ್ರವೇ ಸ್ಟೋರ್ ಅಂಡ್ ಫಾರ್ವರ್ಡ್ ಮಾದರಿಯನ್ನು ಅನುಸರಿಸಬಹುದು. ಉಳಿದ ಟೆಲಿ ಮೆಡಿಸಿನ್ ಕೇತ್ರಗಳಲ್ಲಿ ಪ್ಲಾಟ್​ಫಾರಂಗಳನ್ನು ಎರಡನೇ ಸಲಹೆಗೆ ಮಾತ್ರ ಬಳಸಬಹುದು," ಎನ್ನುತ್ತಾರೆ ಅಂಕಿತ್.

ಸ್ಟೋರ್ ಅಂಡರ್ ಫಾರ್ವರ್ಡ್ ತಂತ್ರಜ್ಞಾನಗಳು, ವೈದ್ಯಕೀಯ ಮಾಹಿತಿಯನ್ನು ವಿದ್ಯುನ್ಮಾನ ಪ್ರಸರಣಕ್ಕೆ ಮಾತ್ರ ಅಂದರೆ ಮಾಹಿತಿ, ಡಿಜಿಟಲ್ ಚಿತ್ರಗಳು, ಡಿಜಿಟಲ್ ಕಡತಗಳು ಮತ್ತು ಪೂರ್ವ ಮುದ್ರಿತ ವಿಡಿಯೋಗಳನ್ನು ಈ ಮೇಲ್ ಅಥವಾ ಎಸ್ಎಂಎಸ್ ಅಥವಾ ಚಾಟ್ ಅಪ್ಲಿಕೇಶನ್​ಗಳ ಮೂಲಕ ಕಳುಹಿಸುವಂತೆ ಇರುತ್ತವೆ.

ಈ ಎಲ್ಲಾ ಮಾಹಿತಿಗಳ ಜೊತೆಗೆ ಮೈಡೆರ್ಮಸಿಯು ವೈದ್ಯರಿಗೂ ಚರ್ಮ ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ರೋಗಿಗಳಿಗೆ ಅಗತ್ಯ ಬಿದ್ದಲ್ಲಿ ಚರ್ಮರೋಗದ ಕ್ಲಿನಿಕ್​ಗಳ ಪಟ್ಟಿಯನ್ನೂ ನೀಡುತ್ತದೆ.

"ಮೈಡೆರ್ಮಸಿ ಮತ್ತು ಇತರ ಭಾರತದಲ್ಲಿರುವ ಡಜನ್​ಗಟ್ಟಲೆ ವಿರ್ಚುವಲ್ ಆಸ್ಪತ್ರೆಗಳಿಗೆ ತುಂಬಾ ವ್ಯತ್ಯಾಸವಿದೆ. ಮೈಡೆರ್ಮಸಿಯು ಚರ್ಮಚಿಕಿತ್ಸೆಗೆ ಸಂಬಂಧಿಸಿದ ಪರಿಪೂರ್ಣ ಆ್ಯಪ್ ಆಗಿದೆ. ನಮ್ಮ ಪ್ಲಾಟ್​ಫಾರಂನಲ್ಲಿ ರೋಗಿ-ವೈದ್ಯರ ನಡುವೆ, ವೈದ್ಯ- ತಂತ್ರಜ್ಞಾನ ಪೋರೈಕೆದಾರರ ಮಧ್ಯೆ ಪರಸ್ಪರ ಸಂವಹನಕ್ಕೆ ಅವಕಾಶ ಕಲ್ಪಿಸಿದೆ. ಜೊತೆಗೆ ಈ ಕ್ಷೇತ್ರದಲ್ಲಿನ ಸೇವಾದಾರರ ಜೊತೆಗೂ ಸಂವಹನಕ್ಕೆ ಅವಕಾಶವಿದೆ." ಎನ್ನುತ್ತಾರೆ ಅಂಕಿತ್.

ಸ್ಪರ್ಧೆ..!

ವೈದ್ಯಕೀಯ ಸೇವಾ ವಲಯದಲ್ಲಿ ಮೈಡೆರ್ಮಸಿಯು ವಿವಿಧ ನವ್ಯೋದ್ಯಮಿಗಳ ಜೊತೆ ಪೈಪೋಟಿ ನಡೆಸುತ್ತಿದೆ. ಲೈಬ್ರೇಟ್, ಐಕ್ಲಿನಿಕ್, ಹೆಲ್ತ್​​ಕೇರ್​​ ಮ್ಯಾಜಿಕ್, ಆಸ್ಕ್ ಎ ಡಾಕ್ಟರ್, ಹೆಲ್ತ್ ಇ ಮೈಂಡ್ಸ್, ಮೆಡಿಏಂಜಲ್ಸ್, ಹೆಲ್ಪಿಂಗ್ ಡಾಕ್ ಮತ್ತು ಪ್ರಾಕ್ಟೋಗಳ ಜೊತೆ ಸ್ಪರ್ಧೆಗೆ ಇಳಿದಿದೆ. ಪ್ರಾಕ್ಟೋ ಸಧ್ಯದಲ್ಲೇ ಆನ್​ಲೈನ್​​ ಕನ್ಸಲ್ಟೇಷನ್ ಅನ್ನು ಆರಂಭಿಸಲಿದೆ ಎನ್ನುವ ಮಾಹಿತಿಯೂ ಇದೆ.

ಆದಾಗ್ಯೂ, ಮೈಡೆರ್ಮಸಿ ಜೊತೆ ಸುಮಾರು ಅರ್ಧ ಡಜನ್ ಜಾಗತಿಕ ಸಂಸ್ಥೆಗಳಾದ ಫಸ್ಡೈರ್ಮ್​್ , ಕ್ಲಾರಾ, ಡೆರ್ಮಟಲಾಜಿಸ್ಟ್ಆನ್ಕಾಲ್.ಕಾಂ, ರಿಯಲ್ಸೆಲ್ಫ್ ಮೊದಲಾದವು ನೇರ ಸ್ಪರ್ಧೆಗೆ ಇಳಿದಿವೆ.

ಭವಿಷ್ಯದ ಮುನ್ನೋಟ

ಭವಿಷ್ಯದ ಯೋಜನೆಗಳಿಗೆ ಸಂಬಂಧಿಸಿ ಹೇಳುವುದಾದರೆ, ಅಂಕಿತ್ ಮತ್ತು ಕುಬೇರ್ ಅವರು ಚರ್ಮರೋಗ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಸಾಮಾನ್ಯ ತಿಳುವಳಿಕೆ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ಪ್ಲಾಟ್​ಫಾರಂ ಮೂಲಕ ಸಣ್ಣ ನಗರಗಳನ್ನೂ ತಲುಪಲು ಶ್ರಮಿಸುತ್ತಿದ್ದಾರೆ.