ಎಚ್‍ಐವಿ ಸೋಂಕಿತರ ಬಾಳಲ್ಲಿ ಭರವಸೆಯ ಕಿರಣ...ಹೊಸ ಬದುಕು ಕಟ್ಟಿಕೊಟ್ಟ `ಜೆಎನ್‍ಪಿ'

ಟೀಮ್​ ವೈ.ಎಸ್​​.ಕನ್ನಡ

0

2003ರಲ್ಲಿ ದಿನೇಶ್ ಜೋಶಿ ಅವರ ಬಾಳಲ್ಲಿ ಬರಸಿಡಿಲು ಬಡಿದಿತ್ತು. ತಾನು ಎಚ್‍ಐವಿ ಎಂಬ ಮಹಾಮಾರಿಯ ಕಪಿಮುಷ್ಠಿಯಲ್ಲಿ ಸಿಲುಕಿದ್ದೇನೆಂಬ ಕರಾಳ ಸತ್ಯ ಅವರಿಗೆ ಅರಿವಾಗಿತ್ತು. ಆಗ ದಿನೇಶ್ ಜೋಶಿ ಅವರ ಮುಂದಿದ್ದಿದ್ದು ಎರಡೇ ಆಯ್ಕೆ. ಒಂದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಪ್ರತ್ಯೇಕವಾಗಿ ಬದುಕೋದು, ಇನ್ನೊಂದು ಎಲ್ಲರೊಡನೆ ಈ ವಿಚಾರವನ್ನ ಬಿಚ್ಚು ಮನಸ್ಸಿನಿಂದ ಹೇಳಿಕೊಂಡು, ಎಚ್‍ಐವಿ ಪೀಡಿತರನ್ನು ಕೂಡ ಸಹಜವಾಗಿ ನೋಡುವಂಥ ವಾತಾವರಣವನ್ನು ಕಲ್ಪಿಸುವುದು. ಕಠಿಣ ಎನಿಸಿದ್ರೂ ದಿನೇಶ್ ಜೋಶಿ ಎರಡನೆಯದನ್ನೇ ಆಯ್ಕೆ ಮಾಡಿಕೊಂಡ್ರು. ಏಡ್ಸ್ ಪೀಡಿತರು ಅನ್ನೋದನ್ನು ಹೇಳಿಕೊಂಡಾಗ ಸುತ್ತಮುತ್ತಲ ಜನರೆಲ್ಲ ಅವರನ್ನು ವಿಭಿನ್ನವಾಗಿ ನೋಡ್ತಾ ಇದ್ರು. ಅಲ್ಲಿ ಸಂಪೂರ್ಣ ತಿರಸ್ಕಾರವೂ ಇರಲಿಲ್ಲ, ಕರುಣೆಯೂ ಇರಲಿಲ್ಲ. ಆ ಸಮಯದಲ್ಲಿ ದಿನೇಶ್ ಅವರನ್ನು ಬೆಂಬಲಿಸಿದವರೆಂದ್ರೆ ಎಸ್‍ಎನ್ ಮೆಡಿಕಲ್ ಕಾಲೇಜಿನ ಪ್ರಧಾನ ನಿಯಂತ್ರಕ ಡಾ.ಅರವಿಂದ್ ಮಾಥುರ್. ಅವರ ಪ್ರೇರಣೆಯಿಂದ ದಿನೇಶ್ ಅವರಲ್ಲಿ ಹೊಸ ಶಕ್ತಿ ಒಗ್ಗೂಡಿದಂತಾಗಿತ್ತು. ಆ ಬಲದಿಂದ್ಲೇ 2003ರಲ್ಲಿ ದಿನೇಶ್ ಜೋಶಿ, `ಜೋಧ್‍ಪುರ್ ನೆಟ್‍ವರ್ಕ್ ಆಫ್ ಪಾಸಿಟಿವ್ ಪೀಪಲ್' ಅನ್ನು ಸ್ಥಾಪಿಸಿದ್ರು.

ದಿನೇಶ್ ಅವರಿಗೆ ಸಮಾಜದಲ್ಲಿ ಹೇಳಿಕೊಳ್ಳುವಂತಹ ಪ್ರೋತ್ಸಾಹವೇನೂ ಸಿಕ್ಕಿರಲಿಲ್ಲ, ಸರ್ಕಾರದಿಂದ್ಲೂ ನೆರವನ್ನು ನಿರೀಕ್ಷಿಸುವುದು ನಿರರ್ಥಕ ಎನಿಸಿತ್ತು. ಎಲ್ಲರನ್ನೂ ಒಗ್ಗೂಡಿಸಿ, ಎಚ್‍ಐವಿ ಪೀಡಿತರಿಗೆ ನೆರವಾಗಲು ವೇದಿಕೆಯೊಂದನ್ನು ಹುಟ್ಟುಹಾಕುವ ಅಗತ್ಯವಿತ್ತು. ಆ ಕೆಲಸವನ್ನು `ಜೋಧ್‍ಪುರ್ ನೆಟ್‍ವರ್ಕ್ ಆಫ್ ಪಾಸಿಟಿವ್ ಪೀಪಲ್' ಆರಂಭಿಸಿತ್ತು. ದಿನೇಶ್ ಅವರ ಜೆಎನ್‍ಪಿ, ಸಮುದಾಯ ಸಂಘಟನೆಯನ್ನೂ ಮೀರಿದ್ದು. ಮಹಾಮಾರಿ ಪೀಡಿತರಾಗಿ ಬದುಕಿನಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನ ಕಳೆದುಕೊಂಡವರಿಗೆ ಆಶ್ರಯ ತಾಣ. ಸಮಾಜವನ್ನು ಸುಶಿಕ್ಷಿತವಾಗಿಸೋದನ್ನು ಬಿಟ್ಟು, ಜೆಎನ್‍ಪಿ ಎಚ್‍ಐವಿ ಪೀಡಿತರಲ್ಲಿನ ಅಪರಾಧಿ ಮನೋಭಾವನೆಯನ್ನು ಹೋಗಲಾಡಿಸಿ, ಅವರಲ್ಲಿ ಆತ್ಮವಿಶ್ವಾಸ ಬೆಳೆಸುವತ್ತ ಗಮನಹರಿಸಿದೆ. ಒಮ್ಮೆ ನಮ್ಮೊಳಗಿನ ಯುದ್ಧ ಗೆದ್ದರೆ ಸಮಾಜವನ್ನು ಎದುರಿಸುವುದು ಕಷ್ಟವಲ್ಲ ಎನ್ನುತ್ತಾರೆ ದಿನೇಶ್ ಜೋಶಿ.

ಪ್ರಾಜೆಕ್ಟ್ ವಿಹಾನ್...

ಎಚ್‍ಐವಿ ಪೀಡಿತರ ಮೂಲಭೂತ ಸಮಸ್ಯೆ ಆ ಮಹಾಮಾರಿಯಿಂದ ಬಂದಿದ್ದಲ್ಲ, ಬದಲಾಗಿ ಸಾಮಾಜಿಕ ಕಳಂಕ ಎಂಬ ಕೊಂಕು ಮಾತಿನಿಂದ ಉದ್ಭವವಾಗಿರುತ್ತದೆ. ಬಹುತೇಕ ಎಲ್ಲ ಎಚ್‍ಐವಿ ರೋಗಿಗಳು ಖಿನ್ನತೆಗೆ ಒಳಗಾಗ್ತಾರೆ. ಸಂವೇದನೆ ತೋರದ ಸಾರ್ವಜನಿಕರಿಂದ ದೂರವಿರಲು ಅದೃಶ್ಯ ಜೀವನ ನಡೆಸ್ತಾರೆ. ಈ ಸಮಸ್ಯೆಗಳ ವಿರುದ್ಧ `ಪ್ರಾಜೆಕ್ಟ್ ವಿಹಾನ್' ಹೋರಾಟ ನಡೆಸ್ತಿದೆ. ವಿಹಾನ್ ಅಂದ್ರೆ ಸಂಸ್ಕøತದಲ್ಲಿ ಸೂರ್ಯನ ಮೊದಲ ಕಿರಣ ಎಂದರ್ಥ. ಎಚ್‍ಐವಿ ಪೀಡಿತರಲ್ಲಿ ಜೀವನೋತ್ಸಾಹದ ಜೊತೆಗೆ ಹೊಸ ಬೆಳಕು ಮೂಡಿಸುವುದು ಈ ಪ್ರಾಜೆಕ್ಟ್‍ನ ಉದ್ದೇಶ. ಸ್ವಯಂ ವಿಷಣ್ಣತೆ ಮತ್ತು ಮುಜುಗರದ ಭಾವನೆಯನ್ನು ಹೋಗಲಾಡಿಸಲು ಇವರು ಪ್ರಯತ್ನಿಸ್ತಾರೆ. ಎಚ್‍ಐಪಿ ಪೀಡಿತರನ್ನು ಒಂದೆಡೆ ಸೇರಿಸಿ ಸಭೆ ಹಾಗೂ ಸೆಮಿನಾರ್‍ಗಳನ್ನು ನಡೆಸಲಾಗುತ್ತೆ. ಸರ್ಕಾರದ ಯೋಜನೆಗಳು, ನಿಯಮಗಳು ಹಾಗೂ ಲಭ್ಯವಿರುವ ಚಿಕಿತ್ಸೆಯ ಬಗ್ಗೆ ಅವರಿಗೆ ತಿಳಿಹೇಳಲಾಗುತ್ತದೆ. ಕೆಲವರು ಬದುಕಿನ ಭರವಸೆಯನ್ನೇ ಕಳೆದುಕೊಂಡು ಚಿಕಿತ್ಸೆ ಪಡೆಯುವುದನ್ನೇ ನಿಲ್ಲಿಸಿರ್ತಾರೆ. ಅಂಥವರಿಗೆ ವಿಹಾನ್ ಸಹಾಯ ಮಾಡುತ್ತಿದೆ. ಏಡ್ಸ್ ಪೀಡಿತರ ಬದುಕನ್ನು ಇನ್ನಷ್ಟು ಸರಳಗೊಳಿಸುವ ಜೊತೆಗೆ, ರೋಗದಿಂದ ಬಳಲಿರುವ ತಾಯಂದಿರು ಹಾಗೂ ವಿಧವೆಯರಿಗೆ ಕೂಡ ನೆರವು ನೀಡುತ್ತಿದೆ. ಎಚ್‍ಐವಿ ಸೋಂಕಿತ ಯುವಜನತೆಯನ್ನು ಸಾಮಾಜಿಕ ಕ್ರೋಧದಿಂದ ಬಚಾವ್ ಮಾಡುವ ಪ್ರಯತ್ನವನ್ನು ದಿನೇಶ್ ಮಾಡ್ತಿದ್ದಾರೆ.

`ಬಾಲ್ ಬಸೇರಾ ಸ್ಕೂಲ್' - ಎಚ್‍ಐವಿ ಸೋಂಕಿತ ಮಕ್ಕಳ ಮನೆ...

ವಯಸ್ಕರು ಸಮಾಜದ ತಿರಸ್ಕಾರವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರ್ತಾರೆ, ಆದ್ರೆ ಮಕ್ಕಳು ಅದನ್ನೆಲ್ಲ ಗ್ರಹಿಸಲು ಸಾಧ್ಯವಾಗದಷ್ಟು ಮುಗ್ಧರು. ತಮಗ್ಯಾಕೆ ತಾರತಮ್ಯ ಮಾಡಲಾಗ್ತಿದೆ ಅನ್ನೋದು ಮಕ್ಕಳಿಗೆ ಅರ್ಥವಾಗುವುದಿಲ್ಲ ಎನ್ನುತ್ತಾರೆ ಭಾವನಾ ಪ್ರಕಾಶ್. 10 ವರ್ಷಗಳ ಹಿಂದೆ ಭಾವನಾ ಎಚ್‍ಐವಿ ಮಹಾಮಾರಿಗೆ ತಮ್ಮ ಪತಿ ಹಾಗೂ ಮಗುವನ್ನು ಕಳೆದುಕೊಂಡಿದ್ದಾರೆ. ಈಗ ಎಚ್‍ಐವಿ ಪೀಡಿತ ಮಕ್ಕಳ ಮನೆ `ಬಾಲ್ ಬಸೇರಾ'ದಲ್ಲಿ ಕೆಲಸ ಮಾಡ್ತಿದ್ದಾರೆ. ಎಚ್‍ಐವಿ ಸೋಂಕಿತ ಮಕ್ಕಳ ಪೋಷಣೆಯಲ್ಲೇ ಅವರು ಸಂತೋಷ ಕಾಣ್ತಿದ್ದಾರೆ. ಇಲ್ಲಿರುವ ಬಹುತೇಕ ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಬಾಲ್ ಬಸೇರಾದಲ್ಲಿ ಅಂತಹ ಮಕ್ಕಳ ಆಟ, ಪಾಠ, ಚಿಕಿತ್ಸೆ ಎಲ್ಲವನ್ನೂ ನೋಡಿಕೊಳ್ಳಲಾಗ್ತಿದೆ. ಬಾಲ್ ಬಸೇರಾ 60 ಮಕ್ಕಳಿಗೆ ಆಶ್ರಯ ತಾಣವಾಗಿದೆ. ಎಚ್‍ಐವಿ ಪೀಡಿತರೆಂಬ ಕೀಳರಿಮೆಯಿಲ್ಲದೆ ಬೆಳೆಯುವಂತಹ ವಾತಾವರಣವನ್ನು ಇಲ್ಲಿ ನಿರ್ಮಿಸಿಕೊಡಲಾಗಿದೆ.

ಕೊನೆಗೂ ಕಂಡ ಯಶಸ್ಸು...

ಬರೀ ವಿಹಾನ್ ಮತ್ತು ಬಾಲ್ ಬಸೇರಾ ಮಾತ್ರವಲ್ಲ, ಇಂತಹ ಹತ್ತಾರು ಯಶಸ್ಸಿನ ಕಹಾನಿಗಳು ಜೆಎನ್‍ಪಿಯಲ್ಲಿವೆ. ಜೆಎನ್‍ಪಿ ಸದಸ್ಯರ ಪ್ರಯತ್ನದಿಂದ ಅದೆಷ್ಟೋ ಮಂದಿ ಸ್ವಾವಲಂಬಿಯಾಗಿ, ಆತ್ಮವಿಶ್ವಾಸದಿಂದ ಬದುಕುವುದನ್ನು ಕಲಿತಿದ್ದಾರೆ. ಕೀಳರಿಮೆಯಿಂದ ಹೊರಬಂದು ಸರ್ಕಾರದ ಯೋಜನೆಗಳ ನೆರವಿನಿಂದ ಸಮಾಜದ ತಿರಸ್ಕಾರಕ್ಕೆ ತಲೆಕೆಡಿಸಿಕೊಳ್ಳದೆ ಮುನ್ನಡೆದಿದ್ದಾರೆ.

ಭವಿಷ್ಯದ ಗುರಿ...

ಮೂದಲಿಕೆ ಮತ್ತು ಕಿರುಕುಳದಿಂದ ನೊಂದಿರುವ ಎಚ್‍ಐವಿ ಸೋಂಕಿತ ಮಹಿಳೆಯರು ಮತ್ತು ಮಕ್ಕಳ ಬದುಕನ್ನು ಹಸನಾಗಿಸುವುದು ಜೆಎನ್‍ಪಿ ಮುಂದಿರುವ ಗುರಿ. ರೋಗ ಪೀಡಿತ ಮಕ್ಕಳಿಗೆ ಆಶ್ರಯ ಕಲ್ಪಿಸಲು ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ಭೂಮಿ ಪಡೆಯುವ ನಿಟ್ಟಿನಲ್ಲಿ ಪಾಲುದಾರಿಕೆ ಮಾಡಿಕೊಳ್ಳಲು ಜೆಎನ್‍ಪಿ ಮುಂದಾಗಿದೆ.

ಹಿನ್ನುಡಿ...

2013ರ ಅಂಕಿ-ಅಂಶಗಳ ಪ್ರಕಾರ, ಅತಿ ಹೆಚ್ಚು ಎಚ್‍ಐವಿ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. 2014ರ ವೇಳೆಗೆ 15,000 ಎಚ್‍ಐವಿ ಪರೀಕ್ಷಾ ಕೇಂದ್ರಗಳು ಹಾಗೂ ಕೌನ್ಸಿಲಿಂಗ್ ಕೇಂದ್ರಗಳಿದ್ರೂ, ಶೇ.13ರಷ್ಟು ಮಂದಿಗೆ ಮಾತ್ರ ಅದರ ಬಗ್ಗೆ ಅರಿವು ಮೂಡಿಸುವಲ್ಲಿ ಸಫಲವಾಗಿದೆ. ಏಡ್ಸ್ ವಿರುದ್ಧದ ಹೋರಾಟ ದೂರದ ಕನಸು ಎಂಬಂತಾಗಿದೆ. ಎಚ್‍ಐವಿ ಸೋಂಕಿತರು ಭಯದ ನೆರಳಲ್ಲಿ, ಅಂಧಕಾರದಲ್ಲಿ ಬದುಕ್ತಿದ್ದಾರೆ. ಜೆಎನ್‍ಪಿಯಂತಹ ಸಂಸ್ಥೆಗಳು ಅವರ ಬಾಳಲ್ಲಿ ಬೆಳಕಾಗಿ ಬಂದಿವೆ. ಎಚ್‍ಐವಿ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಸೋಂಕಿತರು ಸ್ವಯಂ ಕಾಳಜಿ ಹಾಗೂ ರೋಗ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹುಮುಖ್ಯ.

ಲೇಖಕರು: ಸಿಮ್ರನ್​​ ಚಿಬ್ಬರ್​​
ಅನುವಾದಕರು: ಭಾರತಿ ಭಟ್​​​

Related Stories