ಬಹುಮುಖ ಪ್ರತಿಭೆ "ಪರಿಸರ ಚಂದ್ರಶೇಖರ್"..!

ಟೀಮ್​ ವೈ.ಎಸ್​. ಕನ್ನಡ

ಬಹುಮುಖ ಪ್ರತಿಭೆ "ಪರಿಸರ ಚಂದ್ರಶೇಖರ್"..!

Sunday December 25, 2016,

2 min Read

ಸ್ವಚ್ಛಂದ ಪರಿಸರದಲ್ಲಿ ಬದುಕಬೇಕು, ಹಸಿರು ತುಂಬಿದ ವಾತಾವರಣದಲ್ಲಿ ಶುದ್ಧಗಾಳಿ ಸೇವಿಸುತ್ತಾ ಬದುಕಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ ಆ ಸುಂದರ ವಾತಾವರಣಕ್ಕಾಗಿ ತಾವು ಮಾಡಬೇಕಾದ ಕೆಲಸಗಳನ್ನು ಮಾಡೋ ಮನಸ್ಸು ಮಾಡೋದಿಲ್ಲ. ಬದಲಾಗಿ, ಇರೋ ಅಲ್ಪ ಶುದ್ಧತೆಯನ್ನೂ ತಮಗೆ ಅರಿಯದಂತೆ ಹಾಳುಮಾಡೋದರಲ್ಲಿ ನಿರತರಾಗಿಬಿಡ್ತಾರೆ. ಅಂಥವರ ನಡುವೆ ನಮಗೆ ಮಾದರಿಯಾಗಿ ಕಂಡಿದ್ದು ಈ ಪರಿಸರ ಚಂದ್ರಶೇಖರ್. ಪರಿಸರದ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸೋ ಇವರಿಗೆ ಪರಿಸರ ಚಂದ್ರಶೇಖರ್ ಅನ್ನೋ ಹೆಸರಿನಿಂದಲೇ ಗುರುತಿಸಲಾಗುತ್ತೆ.

image


ಬೆಂಗಳೂರು ನಗರದ ಬಸವನಗುಡಿಯಲ್ಲಿ ವಾಸವಿರುವ ಚಂದ್ರಶೇಖರ್ ಅವರದ್ದು ಜನಪರತೆ ಹಾಗೂ ಹೋರಾಟದ ಮನಸ್ಸು. ಶಾಲೆಯ ಮುಖವನ್ನೇ ಕಾಣದ ತಾಯಿ ಲಕ್ಷ್ಮಮ್ಮ, ಬಿಡಿಎನಿಂದ ದೊರೆತಿದ್ದ ಖಾಲಿ ನಿವೇಶನ ಕೈ ತಪ್ಪುವ ಹಂತ ತಲುಪಿದಾಗ ನಿತ್ಯವೂ ಅಲೆದಾಡಿ ಹೋರಾಡಿ ನಿವೇಶನವನ್ನು ದಕ್ಕಿಸಿಕೊಂಡಿದ್ದು ಇವರಿಗೆ ಪ್ರೇರಣೆಯಾಗಿದ್ದು ಸುಳ್ಳಲ್ಲ. ಬಾಲ್ಯದಿಂದಲೂ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡ ಚಂದ್ರಶೇಖರ್ ಬೆಳೆಯುತ್ತಾ ಹೋದ ಹಾಗೆಲ್ಲಾ ಸಾಮಾಜಿಕ ಕಳಕಳಿಯೂ ಗಾಢವಾಗಿ ಬೆಳೆಯುತ್ತಾ ಬಂದಿತು. ರಾಂಗೋಡ್ಲು ಹಾಗೂ ಚೆನ್ನಪಟ್ಟಣ ಬಳಿ ಭೂದಾಹಿಗಳು ಗೋಮಾಳವನ್ನು ಕಬಳಿಸಲು ಯತ್ನಿಸಿದಾಗ ಕೈಕಟ್ಟಿ ಕೂರದ ಚಂದ್ರಶೇಖರ್ ಸಂಬಂಧಪಟ್ಟ ಅಧಿಕಾರಿಗಳ, ಹಿರಿಯರ, ರಾಜಕಾರಣಿಗಳ ಮನೆಗೆ ಅಲೆದು ಗೋವುಗಳಿಗೆ ಆ ಜಾಗವನ್ನು ಉಳಿಸುವಲ್ಲಿ ಯಶಸ್ವಿಯಾದರು ಈ ಚಂದ್ರಶೇಖರ್.

ಇದನ್ನು ಓದಿ: ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

ಸಾಮಾಜಿಕ ಕಳಕಳಿ ಹೊಂದಿರೋ ಈ ಚಂದ್ರಶೇಖರ್ ಉತ್ತಮ ಭಾಷಣಕಾರರೂ ಹೌದು. ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುವ ಚಂದ್ರಶೇಖರ್, ಭಾಷಣ ಮಾಡುವುದರಲ್ಲಿ, ಭಾಷಣ ಬರೆದುಕೊಡುವುದರಲ್ಲೂ ನಿಪುಣರು. ಬಾಲ್ಯದಲ್ಲೊಮ್ಮೆ ಅಪ್ಪನ ಜೊತೆ ಯಾವುದೋ ಸಮಾರಂಭದಲ್ಲಿ ಅಧ್ಯಕ್ಷರೊಬ್ಬರ ಭಾಷಣ ಕೇಳಿದ ಇವ್ರ ಭಾಷಣದ ಮೇಲೆ ಆಸಕ್ತಿ ಬೆಳೆಸಿಕೊಂಡರಂತೆ. ಕಾಲ ಉರುಳಿದಂತೆ ಉತ್ತಮ ಭಾಷಣಕಾರರಾದ ಚಂದ್ರಶೇಖರ್ ಅದನ್ನ ಬದುಕಿನ ಹವ್ಯಾಸ ಮತ್ತು ದಾರಿಯಾಗಿ ಮಾರ್ಪಡಿಸಿಕೊಂಡ್ರು. ತಮ್ಮ ಭಾಷಣದ ಕಲೆಯನ್ನು ಮುಂದಿನ ಪೀಳಿಗೆಗೂ ದಾಟಿಸಬೇಕೆಂಬ ಬಯಕೆಯಿಂದ ಭಾಷಣ ಕಲಿಕಾ ಶಿಬಿರವನ್ನು ಆರಂಭಿಸಿದ್ರು. ರಾಜಕಾರಣಿಗಳು, ಯುವಕರು ಮಾತ್ರವಲ್ಲದೇ ಶಾಲಾ ಮಕ್ಕಳಿಗೂ ಭಾಷಣ ತರಗತಿಗಳನ್ನು ಆರಂಭಿಸಿ, ಮಾತು ಮಾಣಿಕ್ಯ ಅನ್ನೋ ಸಂದೇಶವನ್ನು ರವಾನಿಸುತ್ತಿದ್ದಾರೆ.

image


ಇದರ ಜೊತೆ ಚಂದ್ರಶೇಖರ್ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಉತ್ತಮ ನಿರೂಪಕರು ಎನಿಸಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವ, ವಚನ ಸಾಹಿತ್ಯ ಸಮ್ಮೇಳನ, ಕನ್ನಡ ಸಂಸ್ಕೃತಿ ಇಲಾಖೆ ನಡೆಸುವ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳ ಬೃಹತ್ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ಇಂಗ್ಲೀಷ್‍ನಲ್ಲೂ ಕಾರ್ಯಕ್ರಮ ನಡೆಸಿಕೊಡುವುದು ಇವರ ವೈಶಿಷ್ಟ್ಯ. ಈವರೆಗೂ 1500ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಕರಾದ ಹಿರಿಮೆ ಇವರದ್ದು. ಇದರ ಜೊತೆ ಬೆಂಗಳೂರು ದದೂರದರ್ಶನ ಹಾಗೂ ಖಾಸಗಿ ವಾಹಿನಿಗಳಲ್ಲಿ ಸಾವಿರ ಕಂತುಗಳಲ್ಲಿ ಸಂದರ್ಶಕರಾಗಿ ದುಡಿದದ್ದು ಕಡಿಮೆ ಸಾಧನೆಯೇನಲ್ಲ.

ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಚಂದ್ರಶೇಖರ್ ಜನ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಜನರ ಹಲವು ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ನಗರಪಾಲಿಕೆ ಹಾಗೂ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪರಿಸರ ಉಳಿಸಿ ಮಾಲಿನ್ಯ ರಹಿತ ಕರ್ನಾಟಕ ನಿರ್ಮಾಣಕ್ಕೆ ಜಾಗೃತಿ ಮೂಡಿಸುವ ಕಾಯಕದಲ್ಲಿ ಚಂದ್ರಶೇಖರ್ ಸದಾ ನಿರತರಾಗಿದ್ದು, ಸದ್ಯ ಕರ್ನಾಟಕ ಜನಸಂಪರ್ಕ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗತಿಕ ತಾಪಮಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರ ಪ್ರೇಮವನ್ನು ಮೆರೆದಿದ್ದಾರೆ. ಇದರ ಜೊತೆ ಅನೇಕ ಶಾಲೆಗಳಲ್ಲಿ ಉಚಿತವಾಗಿ ವ್ಯಕ್ತಿತ್ವ ವಿಕಸನ ಶೀಬಿರಗಳನ್ನು ನಡೆಸಿ, ನಾಡಿಗೆ ಸತ್ಪ್ರಜೆಗಳನ್ನು ನೀಡುವಲ್ಲಿ ಅಳಿಲುಸೇವೆ ಸಲ್ಲಿಸುತ್ತಿರೋ ಚಂದ್ರಶೇಖರ್ ಆಪ್ತ ಸಮಾಲೋಚಕರೂ ಹೌದು.

image


ಸೋಲಾರ್ ಗ್ರಾಮ ಮಾಡುವ ನಿಟ್ಟಿನಲ್ಲಿ ರಾಂಗೋಡ್ಲು ಬಳಿಯ ಒಂದು ಚಿಕ್ಕ ಗ್ರಾಮವನ್ನು ದತ್ತು ಪಡೆದು 150 ಮನೆಗಳಿರುವ ಈ ಗ್ರಾಮಕ್ಕೆ ಸೋಲಾರ್ ದೀಪಗಳನ್ನು ಅಳವಡಿಸುವ ಕಾಯಕದಲ್ಲಿ ಸಹ ಚಂದ್ರಶೇಖರ್ ನಿರತ. ಇವರ ಸಮಾಜಸೇವೆ ಗುರುತಿಸಿ ಬೆಂಗಳೂರು ಮಹಾನಗರಪಾಲಿಕೆ ಕೆಂಪೇಗೌಡ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಕೆಂದ್ರ ಸರ್ಕಾರ 2011ರಲ್ಲಿ ರಾಜೀವ್‍ಗಾಂಧಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಿದೆ. 2012ರಲ್ಲಿ ಶ್ರೇಷ್ಠ ನಾಗರೀಕ ಪ್ರಶಸ್ತಿ ಎನಿಸಿರುವ ಬಸವನಗುಡಿರತ್ನ ಪ್ರಶಸ್ತಿಯೂ ಇವರ ಮುಡಿಗೇರಿದೆ. ಈ ರೀತಿಯ ಸಾಕಷ್ಟು ಪ್ರಶಸ್ತಿಗಳಿಗೆ ಭಾಜರಾಗಿರೋ ಪರಿಸರ ಚಂದ್ರಶೇಖರ್‍ಸಮಾಜಸೇವೆಗೆ, ಹಸಿರನ್ನು ಪ್ರೀತಿಸುವವರಿಗೆ ಮತ್ತಷ್ಟಯ ಸ್ಪೂರ್ತಿಯಾಗಿದ್ದಾರೆ.

ಇದನ್ನು ಓದಿ:

1. ನಿಮಗಿಷ್ಟವಿರುವ ಕೆಲಸ ಮಾಡಿ- ಕೈ ತುಂಬಾ ಸಂಬಳ ಪಡೆಯಿರಿ

2. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

3. ಡಿಜಿಟಲ್​ ಪೇಮೆಂಟ್​ ಕಡೆ ಗಮನ ಕೊಡಿ- ಆಕರ್ಷಕ ಬಹುಮಾನ ಗೆಲ್ಲಿರಿ..!