ಬ್ರೋಕರ್​ಗಳ ಚಾಯ್ಸ್​ ಬಿಟ್ಟುಬಿಡಿ- ನೋ ಬ್ರೋಕರ್ ಮೂಲಕ ಮನೆ ಹುಡುಕಿ

ಟೀಮ್​ ವೈ.ಎಸ್​. ಕನ್ನಡ

0

ಘಟನೆ 01:

ಹರ್ಷಿತ್​​. ಎಂಬಿಎ ಗ್ರಾಜ್ಯುವೇಟ್​. ಹಾಸನದಿಂದ ಬೆಂಗಳೂರಿಗೆ ಕೆಲಸ ಅರಸಿಕೊಂಡು ಬಂದ ಯುವಕ. ಕೆಲಸ ಏನೋ ಸಿಕ್ತು. ಆದ್ರೆ ಇಲ್ಲಿ ಉಳಿಯೋದಿಕ್ಕೆ ಮನೆ ಬೇಕಲ್ಲ..? ಬೇಗನೆ ಮನೆ ಹುಡುಕಿಕೊಳ್ಳುವ ಅನಿವಾರ್ಯತೆ ಬೇರೆ. ಹೀಗಾಗಿ ಬೇರೆ ವಿಧಿ ಇಲ್ಲದೆ ಬ್ರೋಕರ್​ ನಂಬರ್​ಗೆ ಡಯಲ್ ಮಾಡಿದ್ದರು. ಇಬ್ಬರೂ ಜೊತೆ ಸೇರಿ ಮನೆ ಹುಡುಕಿಕೊಂಡ್ರು. ಆದ್ರೆ ಕಮಿಷನ್​ ಆಗಿ ಒಂದು ತಿಂಗಳ ಮನೆ ಬಾಡಿಗೆಯಷ್ಟನ್ನು ನೀಡಬೇಕಾಯಿತು. ತಿಂಗಳ ಖರ್ಚಿನ ಬಜೆಟ್​ ಒಮ್ಮಿಂದೊಮ್ಮೆಲೆ  ಹೆಚ್ಚಾಯಿತು.

*****

ಘಟನೆ 02:

ಸ್ಮಿತಾ. 24 ವರ್ಷದ ಯುವತಿ. ಬೆಂಗಳೂರಿಗೆ ಕೆಲಸ ನಿಮಿತ್ತ ಬಂದಿದ್ದರು. ಆರು ತಿಂಗಳ ಮಟ್ಟಿಗೆ ಪೇಯಿಂಗ್​ ಗೆಸ್ಟ್​ ಆಗಿ ಉಳಿದುಕೊಂಡಿದ್ದರು. ಅದ್ರೆ ಅದು ಸೆಟ್​ ಆಗಿರಲಿಲ್ಲ. ಹೀಗಾಗಿ ಮನೆ ಹುಡುಕುವ ಕೆಲಸ ಆರಂಭಿಸಿದ್ರು. ಸಿಗುವ ರಜೆಗಳಲ್ಲೆಲ್ಲಾ ಮನೆ ಹುಡುಕೋದು ಕೆಲಸ. ವೈಯಕ್ತಿಕ ಬದುಕು ಮಾಯವಾಗಿತ್ತು. ಮನೆ ಹುಡುಕುವ ಕೆಲಸವೇ ಬೇಜಾರಾಗಿತ್ತು.

*****

ಇದು ಜಸ್ಟ್​ ಎರಡು ಕೇಸ್​ಗಳು ಮಾತ್ರ. ಸಿಲಿಕಾನ್ ಸಿಟಿ ಬೆಂಗಳೂರಿಗೆ ದಿನವೊಂದಕ್ಕೆ ಕೆಲಸ ಅರಸಿ ಬರುವವರ ಸಂಖ್ಯೆ ಸಾವಿರಾರು. ಅವರಿಗೆಲ್ಲಾ ಉಳಿದುಕೊಳ್ಳಲು ಒಳ್ಳೆಯ ಮನೆಯ ಅವಶ್ಯಕತೆ ಇರುತ್ತದೆ. ಇಲ್ಲಿ ಯಾರು ಪರಿಚಯವಿಲ್ಲದ ಕಾರಣ ವಿಧಿ ಇಲ್ಲದೆ ರಿಯಲ್ ಎಸ್ಟೇಟ್ ಬ್ರೋಕರ್​ನ್ನು ಅವಲಂಬಿಸುತ್ತಾರೆ. ಇಷ್ಟವಾದ ಮನೆ ಸಿಗುವುದಿಲ್ಲ. ಆದ್ರೆ ಪರ್ಸ್​ ಮಾತ್ರ ಖಾಲಿ ಖಾಲಿ. ಕಮಿಷನ್​​ ನೀಡಿ ಮನೆಯೇ ಬೇಡ ಅನ್ನುವಷ್ಟರ ಮಟ್ಟಿಗೆ ಯೋಚನೆ ಬದಲಾಗಿರುತ್ತದೆ.

ಇದಕ್ಕೆಲ್ಲಾ ಪರಿಹಾರ ಒಂದು ಸಿಕ್ಕಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಆರಂಭವಾಗಿರುವ ಸ್ಟಾರ್ಟ್ಅಪ್ ಒಂದು ಮನೆ ಹುಡುಕಲು ಬ್ರೋಕರ್​ನ ಅವಶ್ಯಕತೆ ಬೇಡ ಎಂದು ಹೇಳುತ್ತಿದೆ. ಅದರ ಹೆಸರೆ ‘ನೋ ಬ್ರೋಕರ್’ ಡಾಟ್​ ಕಾಮ್​(www.nobroker.com).

ಹೌದು ಬೆಂಗಳೂರಿನಲ್ಲಿ ಕೆಲಸವನ್ನು ಈಸಿಯಾಗಿ ಗಿಟ್ಟಿಸಿಕೊಳ್ಳಬಹುದು. ಆದರೆ ಮನೆ ಸಿಗುವುದೇ ದೊಡ್ಡ ಸಮಸ್ಯೆ. ಆಗ ನಾವು ಸಂಪರ್ಕಿಸುವ ಬ್ರೋಕರ್​ಗಳು ಸಾಕಷ್ಟು ಬಾರಿ ಹೆಚ್ಚಿನ ಹಣ ಪೀಕುತ್ತಾರೆ. ಇಂತಹ ಕಹಿ ಅನುಭವಗಳನ್ನು ಅನುಭವಿಸಿದ ಅಖಿಲ್ ಹಾಗೂ ಅಮಿತ್ ಎಂಬು ಸ್ನೇಹಿತರು ಈ ‘ನೋ ಬ್ರೋಕರ್’ ಸಂಸ್ಥಾಪಕರು.

ಬ್ರೋಕರ್ ಮೂಲಕ ಮನೆ ಬಾಡಿಗೆ ಪಡೆದಲ್ಲಿ ಆತ ಬಾಡಿಗೆ ಪಡೆದವನಿಂದ ಮತ್ತು ಮನೆಯ ಮಾಲೀಕರಿಂದ ಸೇರಿದಂತೆ ಇಬ್ಬರಿಂದಲೂ ಕಮಿಷನ್ ಪಡೆಯುತ್ತಾನೆ. ಬೆಂಗಳೂರಿನ ಕೆಲ ಪ್ರತಿಷ್ಠಿತ ಏರಿಯಾಗಳಲ್ಲಿ ವ್ಯವಸ್ಥಿತವಾದ ಮನೆಗಳಿಗೆ ಸುಮಾರು 20 ರಿಂದ 25 ಸಾವಿರದವರೆಗೆ ಬಾಡಿಗೆ ಇರುತ್ತದೆ. ಇಂತಹ ಸಮಯದಲ್ಲಿ ಬ್ರೋಕರ್ ಹಿಂದೆ ಮುಂದೆ ನೋಡದೇ ಓನರ್​ಗೆ  ಸುಳ್ಳು ಹೇಳಿ ಬಾಡಿಗೆದಾರರಿಗೂ ಸುಳ್ಳು ಹೇಳಿ ಮನೆ ಕೊಡಿಸಿ ಕುಳಿತಲ್ಲೇ ಸಾವಿರಾರು ರೂಪಾಯಿ ಹಣ ಪಡೆದು ಮಾಯಾವಾಗುತ್ತಾನೆ.

ಅಮಿತ್ ಮತ್ತು ಅಖಿಲ್ ಇಬ್ಬರೂ ಮಾಂಸಾಹಾರಿಗಳು. ಆದರೆ ಅವರು ಮನೆ ಹುಡುಕಲು ಬ್ರೋಕರ್​​ಗೆ ಹೇಳಿದರೆ ಆತ ಮನೆಯ ಮಾಲೀಕನಿಗೆ ಇವರು ಸಸ್ಯಹಾರಿಗಳು ಎಂದು ಹೇಳಿ ಪರಾರಿಯಾಗಿದ್ದ. ಆಗ ಈ ಸಂಸ್ಥಾಪಕರು ಸಾಕಷ್ಟು ಕಷ್ಟ ಅನುಭವಿಸಿದ್ದರು. ಈ ಕಹಿ ಅನುಭವವೇ ಇವರಿಗೆ ನೋ ಬ್ರೋಕರ್ ಸ್ಥಾಪಿಸಲು ಸ್ಪೂರ್ತಿಯಾಯಿತು ಎಂದರೆ ತಪ್ಪಾಗಲಾರದು. ಸುಖಾ ಸುಮ್ಮನೆ ಸಾವಿರಾರು ರೂಪಾಯಿ ಹಣ ಗಳಿಸುವ ಮಿಡಿಯೇಟರ್​​ಗಳ ಹಾವಳಿ ತಪ್ಪಿಸಲು 2014ರ ಮಾರ್ಚ್​ನಲ್ಲಿ ಈ ಸಂಸ್ಥೆಯನ್ನು ಆರಂಭಿಸಿದರು.

20 ಕೋಟಿ ಹಣ ಉಳಿಕೆ

2014ರಿಂದ ಇಲ್ಲಿಯವರೆಗೂ ನೋ ಬ್ರೋಕರ್ ಸಂಸ್ಥೆ ಸಾಕಷ್ಟು ಜನರಿಗೆ ಮನೆ ಹುಡುಕಿಕೊಡಲು ಸಹಾಯ ಮಾಡಿದೆ. ಇದರಿಂದ ಸರಾಸರಿ ಸುಮಾರು 20 ಕೋಟಿಯಷ್ಟು ಬ್ರೋಕರ್​ಗಳಿಗೆ ನೀಡಬೇಕಿದ್ದ ಹಣವನ್ನು ಇದು ಉಳಿಸಿದೆ ಎಂದರೆ ನೀವು ನಂಬಲೇ ಬೇಕು.

ಆ್ಯಪ್ ಕೂಡಾ ಲಭ್ಯ

ಈ ನೋ ಬ್ರೋಕರ್​ನಿಂದ ಮೊಬೈಲ್ ಆ್ಯಪ್ ಕೂಡಾ ಲಭ್ಯವಿದೆ. ಆ್ಯಪ್ ಡೌನ್​ಲೋಡ್ ಮಾಡಿ ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಪ್​ಡೇಟ್ ಮಾಡಿದರೆ ನೀವು ಬ್ರೋಕರ್ ಅಲ್ಲ ಎನ್ನುವದನ್ನು ಕಂಪನಿಯವರು ಖಚಿತಪಡಿಸಿಕೊಳ್ಳುತ್ತಾರೆ. ಆ ನಂತರ ನೀವು ಇಚ್ಛಿಸುವ ಪ್ರದೇಶದಲ್ಲಿ ನಿಮಗೆ ಮನೆಗಳನ್ನು ಹುಡುಕಿಕೊಳ್ಳಬಹುದು.

ಮನೆ ಮಾಲೀಕರು ಮತ್ತು ಬಾಡಿಗೆದಾರರನ್ನು ನೇರವಾಗಿ ಕನೆಕ್ಟ್ ಮಾಡುವ ಏಕೈಕ ಮಾಧ್ಯಮ ಇದು. ಆ್ಯಪ್ ಮಾತ್ರವಲ್ಲದೆ ವೆಬ್​ಸೈಟ್​ನಲ್ಲಿಯೂ ನೀವು ನಿಮ್ಮ ಮಾಹಿತಿಯನ್ನು ಹಾಕಿ "ಮನೆ ಬೇಕಿದ್ದರೆ" ಮಾಹಿತಿಗಾಗಿ ಎಂಬ ಬಟನ್ ಕ್ಲಿಕ್ ಮಾಡಿದರೆ ಸಾಕು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಮನೆ ಮಾಲೀಕರಿಗೆ ರವಾನೆಯಾಗುತ್ತದೆ.

ನಿಮಗೆ ಒಳ್ಳೆ ಮನೆ ಹಾಗೂ ಹೆಚ್ಚಿನ ಬಾಡಿಗೆಯ ಮನೆಗಳು ಬೇಕಿದ್ದರೆ 999 ರೂಪಾಯಿ ಮೊತ್ತ ಪಾವತಿಸಿದರೆ ಅಂತಹ ಉತ್ತಮ ಮನೆಗಳ ಮಾಹಿತಿ ನಿಮಗೆ ಲಭ್ಯವಾಗುತ್ತದೆ. 1999 ರೂಪಾಯಿ ಪಾವತಿ ಮಾಡಿದರೆ ನೋ ಬ್ರೋಕರ್ ವತಿಯಿಂದ ಒಬ್ಬರು ನಿಮ್ಮ ಪರವಾಗಿ ಮಾಲೀಕರ ಜತೆ ಮಾತನಾಡಿ ನಿಮ್ಮ ಮತ್ತು ಅವರ ಭೇಟಿಯ ಸಮಯ, ದಿನಾಂಕ ಎಲ್ಲವನ್ನೂ ನಿಗದಿ ಮಾಡಿ ನಿಮ್ಮ ಜೊತೆ ವೈಯಕ್ತಿಕ ಸಂಪರ್ಕ ಬೆಳೆಸಿ ನಿಮ್ಮ ರೆಂಟಲ್ ಅಗ್ರಿಮೆಂಟ್ ಕೂಡ ಮಾಡಿಸಿಕೊಡತ್ತಾರೆ.

ಮಾಲೀಕರಿಗೂ ಸಾಕಷ್ಟು ಅನುಕೂಲ

ಈ ಸಂಸ್ಥೆಯಿಂದ ಮಾಲೀಕರಿಗೆ ಸಾಕಷ್ಟು ಅನುಕೂಲಗಳಿವೆ. ನೀವು ಯಾವುದೇ ಹಣ ನೀಡದೇ ನಿಮ್ಮ ಮನೆಯ ಮಾಹಿತಿಯನ್ನು ಇದರಲ್ಲಿ ಅಪ್​ಡೇಟ್ ಮಾಡಬಹುದು. ಮಾಹಿತಿ ನೀಡಿರುವವರು ಬ್ರೋಕರ್​​ಗಳಲ್ಲ ಎಂದು ಖಚಿತವಾದ ಮೇಲೆ ಆ್ಯಪ್ ಮತ್ತು ವೆಬ್​ಸೈಟ್​ಗಳಲ್ಲಿ ನಿಮ್ಮ ಮನೆ ಅದರ ಬಾಡಿಗೆ ಎಲ್ಲ ಮಾಹಿತಿಗಳು ಅಪ್​ಡೇಟ್ ಆಗುತ್ತವೆ. ರೆಂಟಲ್ ಅಗ್ರಿಮೆಂಟ್​ ಕೂಡ ನಿಮ್ಮ ಮನೆಗೆ ತಲುಪಿಸುವ ಕೆಲಸವನ್ನು ನೋ ಬ್ರೋಕರ್ ಮಾಡುತ್ತದೆ.

ಎಲ್ಲೆಲ್ಲಿ ಸೇವೆ..?

ಮುಂಬೈ, ಪುಣೆ, ಚೆನ್ನೈ, ಮತ್ತು ಬೆಂಗಳೂರಿನಲ್ಲಿ ಸಧ್ಯ ಕಾರ್ಯನಿರ್ವಹಿಸುತ್ತಿರುವ ನೋ ಬ್ರೋಕರ್ ತಿಂಗಳಿಗೆ ನಾಲ್ಕು ಸಾವಿರಕ್ಕಿಂತಲೂ ಹೆಚ್ಚಿನ ಬಾಡಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಪ್ರತಿ ತಿಂಗಳು15 ಸಾವಿರ ಮನೆಗಳ ಮಾಹಿತಿ ಇದಕ್ಕೆ ಅಪ್​ಡೇಟ್ ಆಗುತ್ತದೆ. ಸುಮಾರು 10 ಲಕ್ಷಕ್ಕೂ ಹಚ್ಚು ಮಂದಿ ವೆಬ್​ಸೈಟ್​ಗೆ ಭೇಟಿ ನೀಡುತ್ತಾರೆ.

ಆಫರ್​ ನೀಡಿ ಮನ ಗೆಲ್ಲುತ್ತೆ..!

ನೀವು ದಾರಿಯಲ್ಲಿ ಎಲ್ಲಾದರೂ ಟು-ಲೆಟ್ ಬೋರ್ಡ್ ನೋಡಿದರೆ ಅದನ್ನು ಫೋಟೊ ತೆಗೆದು ನೋ ಬ್ರೋಕರ್ ಆ್ಯಪ್ ಮೂಲಕ ಕಳುಹಿಸಿಕೊಟ್ಟರೆ, ಅದು ಅಪ್​ಡೇಟ್ ಆದರೆ ಫೋಟೊ ಕಳುಹಿಸಿದವರಿಗೆ ಪೇಟಿಎಂ ಮೂಲಕ 100 ರೂಪಾಯಿ ಕ್ಯಾಶ್ ನೀಡುವುದಾಗಿ ಕಂಪನಿ ಹೇಳಿದೆ.

ಹೀಗೆ ನೋ ಬ್ರೋಕರ್ ಕಂಪನಿಯ ಮೂಲಕ ಸಾವಿರಾರು ರೂಪಾಯಿ ಹಣ ಉಳಿಸುವ ಜೊತೆಗೆ ಉತ್ತಮ ದರದಲ್ಲಿ ನಿಮಗೆ ಬಾಡಿಗೆ ಮನೆ ದೊರಕುತ್ತದೆ. ಮಾಲೀಕರಿಗೂ ಅಷ್ಟೇ ಉತ್ತಮ ಬಾಡಿಗೆದಾರರು ದೊರೆಯುತ್ತಾರೆ. ಇದು ಅಖಿಲ್ ಮತ್ತು ಅಮಿತ್ ಅವರ ಶ್ರಮ ಮತ್ತು ಬುದ್ದಿವಂತಿಕೆ ಫಲ.

ಇದನ್ನು ಓದಿ

1. ಹಿರೇಗೌಡರ ಮಂಡ್ಯ ಟು ಇಂಟರ್​ನ್ಯಾಷನಲ್​ ಸ್ಟೋರಿ

2. ಗೋಧಿ ಬ್ಯಾಂಕ್​ನಿಂದ ಬದಲಾಯಿತು ಜೀವನದ ಕಥೆ...

3. ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!

Related Stories