ಗ್ರಾಮೀಣ ಭಾರತಕ್ಕೂ ಇ-ಕಾಮರ್ಸ್

ಟೀಮ್​ ವೈ.ಎಸ್​​.

ಗ್ರಾಮೀಣ ಭಾರತಕ್ಕೂ ಇ-ಕಾಮರ್ಸ್

Monday September 28, 2015,

3 min Read

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಇ-ಕಾಮರ್ಸ್ ನಿರೀಕ್ಷೆಗೂ ಮೀರಿ ಬೆಳೆದಿದೆ. ಆದರೆ, ಗ್ರಾಮೀಣ ಭಾರತಕ್ಕೆ ಅದರ ಲಾಭ ಸಿಕ್ಕಿಲ್ಲ. ಗ್ರಾಮೀಣ ಗ್ರಾಹಕರ ಪಾಲ್ಗೊಳ್ಳುವಿಕೆಯಿಂದಷ್ಟೇ, ಇ-ಕಾಮರ್ಸ್‍ನ ನಿಜವಾದ ಬೆಳವಣಿಗೆಯಾಗಲಿದೆ ಎನ್ನತ್ತಾರೆ ಅಂತರ್ಜಾಲ ತಜ್ಞರು.

ಫ್ಲಿಪ್‍ಕಾರ್ಟ್, ಅಮೇಜಾನ್, ಸ್ನಾಪ್‍ಡೀಲ್‍ನಂತಹ ಸಂಸ್ಥೆಗಳು ಗ್ರಾಮೀಣ ಮಾರುಕಟ್ಟೆ ಪ್ರವೇಶಿಸಲು ಶತಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ, ಐಪೇ, ಸ್ಟೋರ್‍ಕಿಂಗ್, ಇನ್‍ತ್ರೀ ಮೊದಲಾದ ಕಂಪನಿಗಳು ಗ್ರಾಮೀಣ ಮಾರುಕಟ್ಟೆಯನ್ನೇ ಮೊದಲ ಆದ್ಯತೆಯನ್ನಾಗಿಸಿವೆ.

ಇನ್‍ತ್ರೀಯ ಸಹಸಂಸ್ಥೆಯಾಗಿರುವ ಬೂನ್‍ಬಾಕ್ಸ್, ವ್ಯಾಪಾರಿಗಳಿಗೆ, ವರ್ತಕರಿಗೆ ಗ್ರಾಮೀಣ ಮಾರುಕಟ್ಟೆ ಪ್ರವೇಶಿಸಲು ದಾರಿ ಮಾಡಿಕೊಡುತ್ತಿವೆ. ಇದು ಮೊದಲು ಗ್ರಾಹಕರಿಂದ ಆರ್ಡರ್‍ಗಳನ್ನು ಸಂಗ್ರಹಿಸುತ್ತದೆ. ಬಳಿಕ ಅವನ್ನು ಒಗ್ಗೂಡಿಸಿ ವರ್ತಕರಿಗೆ ತಲುಪಿಸುತ್ತದೆ. ತಮಿಳುನಾಡು ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದೆ.

ಇನ್​ ತ್ರಿ ಮತ್ತು ಬೂನ್​​ಬಾಕ್ಸ್​​ ಟೀಮ್​​

ಇನ್​ ತ್ರಿ ಮತ್ತು ಬೂನ್​​ಬಾಕ್ಸ್​​ ಟೀಮ್​​


ಕಂಪನಿಯು ಗ್ರಾಮೀಣ ಪ್ರದೇಶಗಳಲ್ಲಿ ಬಲಿಷ್ಠ ನೆಟ್‍ವರ್ಕ್ ಹೊಂದಿದ್ದು, ಪ್ರತಿ ಗ್ರಾಮ, ಹಳ್ಳಿಗೂ ತಲುಪಲು ಸಾಧ್ಯವಾಗುತ್ತಿದೆ. ಬೃಹತ್ ಗ್ರಾಮೀಣ ಗ್ರಾಹಕರಿಗೆ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿದೆ. ತನ್ನ ಹಲವು ವರ್ಷಗಳ ಅನುಭವವನ್ನು ಬಳಸಿಕೊಂಡು ಕಟ್ಟಕಡೆಯ ಗ್ರಾಮೀಣ ಗ್ರಾಹಕನ ಆಸೆ, ಆಕಾಂಕ್ಷೆಗಳನ್ನು ಪೂರೈಸುತ್ತಿದೆ.

ಇನ್‍ತ್ರೀಗೆ ಸಿ. ಕೆ ಪ್ರಹ್ಲಾದ್ ಸ್ಫೂರ್ತಿ

ಬಹುತೇಕ ನವ್ಯೋದ್ಯಮಿಗಳಿಗೆ, ಸ್ಟೀವ್ ಜಾಬ್ಸ್, ಜಾಕ್ ಮಾ, ಸಚಿನ್ ಭನ್ಸಾಲ್ ಮತ್ತು ಕುನಾಲ್ ಬಹಲ್ ಅವರಂತಹವರೇ ಸ್ಫೂರ್ತಿಯಾಗಿರುತ್ತಾರೆ. ಆದರೆ, ಇನ್‍ತ್ರೀಯ ಸಂಸ್ಥಾಪಕ ಆರ್. ರಾಮನಾಥನ್ ಅವರಿಗೆ ದಿವಂಗತ ಡಾ ಸಿ ಕೆ. ಪ್ರಹ್ಲಾದ್ ಅವರ ಜೊತೆಗಿನ ಮಾತುಕತೆಯ ಸ್ಪೂರ್ತಿ. ಅವರ ಸಲಹೆಯಂತೆಯೇ ಇನ್‍ತ್ರೀ ಗ್ರಾಮೀಣ ಮಾರುಕಟ್ಟೆಯತ್ತ ಗಮನಹರಿಸಿದೆ.

ಸಂಸ್ಥಾಪಕ ರಾಮಚಂದ್ರನ್​​ ರಾಮನಾಥನ್​​​

ಸಂಸ್ಥಾಪಕ ರಾಮಚಂದ್ರನ್​​ ರಾಮನಾಥನ್​​​


ಪ್ರಹ್ಲಾದ್ ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‍ಮೆಂಟ್ ಪ್ರೊಫೆಸರ್ ಆಗಿದ್ದರು. ಅವರನ್ನು ಭಾರತದ ಪೀಟರ್ ಡ್ರಕ್ಕರ್ ಎಂದೇ ಕರೆಯಲಾಗುತ್ತಿದೆ. ಈ ಹಿಂದೆ ರಾಮನಾಥನ್ ಅವರು ಎಸ್‍ಬಿಯುನಲ್ಲಿ ಹಿರಿಯ ಆಡಳಿತಾಧಿಕಾರಿಯಾಗಿದ್ದರು. ಆರ್‍ಪಿಜಿ, ಐಸಿಐಸಿಐ ಮತ್ತು ಟಿವಿಎಸ್ ಗ್ರೂಪ್‍ಗಳಲ್ಲಿ ಪ್ರಾಫಿಟ್ ಸೆಂಟರ್ ಮುಖ್ಯಸ್ಥರಾಗಿದ್ದರು.

ಇನ್‍ತ್ರೀಯ ಆರಂಭಿಕ ದಿನಗಳು:

ಆರಂಭಿಕ ದಿನಗಳಲ್ಲಿ ಗ್ರಾಮೀಣ ಮಾರುಕಟ್ಟೆಯಲ್ಲಿ ಕೇವಲ ಕನ್ಸಲ್ಟಿಂಗ್ ಆರ್ಡರ್‍ಗಳನ್ನಷ್ಟೇ ತೆಗೆದುಕೊಳ್ಳುತ್ತಿದ್ದರು. ಕಾರಣ, ಸರಕು ವಿತರಣೆ ಮಾಡುವಷ್ಟು ಸಾಮರ್ಥ್ಯ ಇನ್‍ತ್ರೀಗೆ ಇರಲಿಲ್ಲ ಎನ್ನುತ್ತಾರೆ ರಾಮನಾಥನ್.

ನಾವು ಭಾರತದಲ್ಲಿ ಫಿಲಿಪ್ಸ್​​ಗಾಗಿ ಹೊಗೆರಹಿತ ಒಲೆಗಳನ್ನು ತಯಾರಿಸಿದೆವು. ಯುರೇಕಾ ಫೋಬ್ರ್ಸ್, ನೋಕಿಯಾ, ಟೈಟಾನ್, ಹೈನ್ಸ್ ಫೌಂಡೇಶನ್ ಮತ್ತಿತರ ಸಂಸ್ಥೆಗಳಿಗೆ ಕನ್ಸಲ್ಟಿಂಗ್ ಸೇವೆ ಒದಗಿಸಿದೆವು.

2011ರ ಅಂತ್ಯದ ವೇಳೆಗೆ ನಾವು ತಮಿಳುನಾಡಿನಲ್ಲಿ ಆಯ್ದ ಅಂಚೆಕಚೇರಿಗಳ ಮುಖಾಂತರ ಸೌರದೀಪಗಳನ್ನು ಮಾರಾಟ ಮಾಡಲು ಆರಂಭಿಸಿದೆವು. ಅಲ್ಲಿ ಸಿಕ್ಕ ಬೆಂಬಲ ಮತ್ತು ಬೇಡಿಕೆಯಿಂದಾಗಿ ನಾವು ತಮಿಳುನಾಡಿನಾದ್ಯಂತ ಮತ್ತು ಕರ್ನಾಟಕದಲ್ಲೂ ವಹಿವಾಟು ವಿಸ್ತರಿಸಿದೆವು ಎನ್ನುತ್ತಾರೆ ರಾಮನಾಥನ್.

ನಾವು ಅಸಾಂಪ್ರದಾಯಿಕ ಮಾಧ್ಯಮಗಳು ಅಂದರೆ, ಎನ್‍ಜಿಓಗಳು, ಕೃಷಿ ಮಂಡಳಿಗಳ ಮೂಲಕ ವಹಿವಾಟು ನಡೆಸಿದೆವು. ಸುಮಾರು 5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ 7 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಲು ಯಶಸ್ವಿಯಾದೆವು.

ಇ-ಕಾಮರ್ಸ್‍ನಿಂದ ಗ್ರಾಮೀಣ ಜೀವನಶೈಲಿ ಬದಲಾಗಲಿದೆ..

ಸೌರದೀಪಗಳಂತಹ ಉತ್ಪನ್ನಗಳ ಮಾರಾಟದಲ್ಲಿ ಯಶಸ್ಸು ಕಂಡಿದ್ದೇವೆ. ಆದರೆ, ಗ್ರಾಮೀಣ ಜನರು, ಬೇರೆ ಬೇರೆ ರೀತಿಯ ಸರಕು ಹಾಗೂ ಸೇವೆಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ನಾವು ಗ್ರಾಮೀಣ ಗ್ರಾಹಕರಿಗೆ ವಿವಿಧ ಉತ್ಪನ್ನಗಳು ನಮ್ಮ ವೇದಿಕೆಯಲ್ಲಿ ದೊರಕುವಂತೆ ಮಾಡಿದೆವು ಎನ್ನುತ್ತಾರೆ ರಾಮನಾಥನ್.

ವರ್ತಕರು ಮೆಟ್ರೋ ಮತ್ತು ನಗರ ಗ್ರಾಹಕರನ್ನು ಗುರಿಯಾಗಿರಿಸಿ ವಹಿವಾಟು ನಡೆಸುತ್ತಾರೆ. ಆದರೆ, ವಿಶಾಲವಾದ ಮತ್ತು ಅಧಿಕ ಜನಸಂಖ್ಯೆಯುಳ್ಳ ಗ್ರಾಮೀಣ ಪ್ರದೇಶಗಳನ್ನು ಮರೆತುಬಿಡುತ್ತಾರೆ ಎಂಬ ಚಿಂತನೆಯೊಂದಿಗೆ ಇನ್‍ತ್ರೀ ಮತ್ತು ಬೂನ್ ಬಾಕ್ಸ್ ಆರಂಭಿಸಲಾಯಿತು. ಗ್ರಾಮೀಣ ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸುವ ಆಸೆಯೊಂದಿಗೆ ಎಲ್ಲವೂ ಶುರುವಾಯಿತು ಎಂದು ರಾಮನಾಥನ್ ಹೇಳುತ್ತಾರೆ.

ವರ್ತಕರಿಗೆ ಬೂನ್‍ಬಾಕ್ಸ್​​ನಿಂದ ಏನು ಲಾಭ?

ಕಟ್ಟಕಡೆಯ ವರ್ತಕನಿಗೆ ಗ್ರಾಮೀಣ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲು ವೇದಿಕೆಯಾಗಿ ಬೂನ್ ಬಾಕ್ಸ್ ಕೆಲಸ ಮಾಡುತ್ತದೆ. ಇನ್‍ತ್ರೀಯು ವಿವಿಧ ಉತ್ಪನ್ನಗಳಿಗೆ ಬೇಡಿಕೆಗಳನ್ನು ಸಂಗ್ರಹಿಸಿ, ಒಟ್ಟುಮಾಡಿ ವರ್ತಕರಿಗೆ ಕಳುಹಿಸುತ್ತದೆ. ಸಧ್ಯಕ್ಕೆ ಬೂನ್‍ಬಾಕ್ಸ್ ತಮಿಳುನಾಡು, ಕರ್ನಾಟಕದಲ್ಲಿ ಭರ್ಜರಿ ವಹಿವಾಟು ನಡೆಸುತ್ತಿದೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶ ಮಾರುಕಟ್ಟೆಯನ್ನೂ ಪ್ರವೇಶಿಸಿದೆ.

ಪ್ರತಿಯೊಂದು ಉತ್ಪನ್ನವೂ ಇನ್‍ತ್ರೀಯ ಉಗ್ರಾಣಕ್ಕೆ ಮೊದಲು ಹೋಗುತ್ತದೆ. ಅಲ್ಲಿ ಗುಣಮಟ್ಟ ಪರಿಶೀಲಿಸಿ ಗ್ರಾಹಕರಿಗೆ ತಲುಪಿಸಲು ಪ್ಯಾಕೇಜಿಂಗ್ ಮಾಡಲಾಗುತ್ತದೆ.

ವಹಿವಾಟು ಮತ್ತು ಆದಾಯ

ಇಲ್ಲಿಯವರೆಗೆ, ಸೌರದೀಪ, ನೀರು ಶುದ್ಧೀಕರಣ ಯಂತ್ರಗಳು ಸೇರಿದಂತೆ ವೈವಿಧ್ಯಮಯವಾದ 7 ಲಕ್ಷ ಉತ್ಪನ್ನಗಳನ್ನು ಮಾರಾಟ ಮಾಡಿದ್ದೇವೆ. ಸಂಸ್ಥೆಯು ಆರಂಭದಿಂದಲೇ ಲಾಭದಲ್ಲಿ ಸಾಗಿದೆ. ಆಗಸ್ಟ್ 2014ರಲ್ಲಿ ಇಂಡಿಯನ್ ಏಂಜಲ್ ನೆಟ್‍ವರ್ಕ್‍ನಿಂದ ಬಂಡವಾಳ ಪಡೆದಿತ್ತು.

ಒಟ್ಟಾರೆ 2 ಕೋಟಿಗೂ ಹೆಚ್ಚು ಲಾಭಗಳಿಸಿರುವ ಕಂಪನಿಯು ಇಲ್ಲಿಯವರೆಗೆ ಎಲ್ಲಾ ವಹಿವಾಟುಗಳನ್ನು ಆಂತರಿಕ ಬಂಡವಾಳದಿಂದಲೇ ಸರಿದೂಗಿಸಿತ್ತು.

ಸವಾಲುಗಳು ಮತ್ತು ಭವಿಷ್ಯದ ಯೋಜನೆಗಳು

ಸರಿಯಾದ ದರಕ್ಕೆ ಗ್ರಾಹಕರನ್ನು ಸಂಪಾದಿಸುವುದು, ಅಂತರ್ಜಾಲ ಸಂಪರ್ಕದ ಕೊರತೆ, ಕ್ರೆಡಿಟ್ ಕಾರ್ಡ್ ಸೌಲಭ್ಯದ ಕೊರತೆ ಸೇರಿದಂತೆ ಕಟ್ಟಕಡೆಯ ವ್ಯಕ್ತಿಯೆಡೆಗಿನ ಸಂಪರ್ಕದ ಕೊರತೆಯೇ ಪ್ರಮುಖ ಸವಾಲುಗಳು ಎಂದು ರಾಮನಾಥನ್ ಅವರು ಪಟ್ಟಿ ಮಾಡುತ್ತಾರೆ. ಸಧ್ಯಕ್ಕೆ ಸಂಸ್ಥೆಯಲ್ಲಿ 40 ಮಂದಿ ನೌಕರರಿದ್ದು, ಇನ್ನೊಂದು ವರ್ಷದಲ್ಲಿ ಈ ಸಂಖ್ಯೆ 100 ತಲುಪುವ ಸಾಧ್ಯತೆ ಇದೆ ಎನ್ನುತ್ತಾರೆ ರಾಮನಾಥನ್.

ಗ್ರಾಮೀಣ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಇನ್‍ತ್ರೀ ನೇತಾರನಾಗಲು ಬಯಸುತ್ತಿದೆ. ಗ್ರಾಮೀಣ ಗ್ರಾಹಕರು ಬಯಸುವ ಎಲ್ಲಾ ಸವಲತ್ತುಗಳನ್ನು ಒದಗಿಸಲು ಶ್ರಮಿಸುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಶೀಘ್ರವೇ ಸೇವೆ ಆರಂಭಿಸಲಿದೆ.