ಬಂಗಾರಪೇಟೆ ಟು ಬೆಂಗಳೂರು- ಇದು ಸ್ಪೆಷಲ್​​​​​ ಚಾಟ್ಸ್​​​​ ಕಥೆ..!

ಉಷಾ ಹರೀಶ್

0

ಕಿತ್ತಳೆಗೆ ಕೊಡಗು, ಬೆಣ್ಣೆ ದೋಸೆಗೆ ದಾವಣಗೆರೆ, ಫೇಡಾಕ್ಕೆ ಧಾರವಾಡ, ಕುಂದಾಗೆ ಬೆಳಗಾವಿ, ಹೀಗೆ ನಮ್ಮ ರಾಜ್ಯದ ಒಂದೊಂದು ಊರು ಒಂದೊಂದು ತಿಂಡಿಗೆ ಫೇಮಸ್ಸು. ಅದೇ ರೀತಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಾನಿಪೂರಿಗೆ ಸಿಕ್ಕಾಪಟ್ಟೆ ಫೇಮಸ್ಸು. ಆ ಬಂಗಾರಪೇಟೆಯಲ್ಲಿ ಸಿಗುವ ಅದೇ ರುಚಿಯ ಪಾನಿಪೂರಿ ಈ ಬೆಂಗಳೂರು ನಗರದಲ್ಲೂ ಸಿಗುತ್ತದೆ.

ಈ ಚಾಟ್ಸ್​​ನ ವಿಶೇಷ ಎಂದರೆ ಪ್ರತಿ ದಿನ ಬಂಗಾರಪೇಟೆಯಿಂದ ಈ ಚಾಟ್ಸ್​​ಗಳನ್ನು ತಯಾರಿಸಿಕೊಂಡು ಮಧ್ಯಾಹ್ನ ಹೊರಟು ಸಂಜೆ 4ಕ್ಕೆಲ್ಲಾ ಅಂಗಡಿಗೆ ತಂದು ಮಾರಾಟ ಮಾಡಲು ಆರಂಭ ಮಾಡುತ್ತಾರೆ. ಅದನ್ನು ಅಲ್ಲಿಂದಲೇ ಏಕೆ ತರತ್ತೀರಿ ಇಲ್ಲೇ ತಯಾರಿಸಬಹುದಲ್ಲವೇ ಎಂದರೆ ‘‘ಬಂಗಾರಪೇಟೆ ಚಾಟ್ಸ್ ಎಂದು ಹೆಸರಿಟ್ಟುಕೊಂಡು ಇಲ್ಲಿ ಮಾಡಿದರೆ ಅದರ ರುಚಿ ಸಿಗುವುದಿಲ್ಲ. ಅದು ಅಲ್ಲದೇ ಗ್ರಾಹಕರಿಗೆ ನಾವು ಪ್ಯೂರ್ ಬಂಗಾರಪೇಟೆಯ ರುಚಿ ಎಲ್ಲರಿಗೂ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಹೀಗೆ ಪ್ರತಿ ದಿನ ಪ್ರಯಾಣ ಮಾಡುತ್ತೇನೆ,’’ ಎನ್ನುತ್ತಾರೆ ಮಾಲೀಕ ಸರವಣನ್. ಹನುಂತನಗರದ 50 ಅಡಿ ರಸ್ತೆಯಲ್ಲಿ ಬಂಗಾರಪೇಟೆ ಚಾಟ್ಸ್ ಅಂಗಡಿಯಲ್ಲಿ ಬಂಗಾರಪೇಟೆಯಲ್ಲಿ ಸಿಗುವ ವಿವಿಧ ರೀತಿಯ ಪಾನಿಪೂರಿ, ಮಸಾಲೆ ಪೂರಿ ಸಿಗುತ್ತದೆ.

ಐಟಿಐ ಪಧವೀದರರಾಗಿರುವ ಸರವಣನ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅದು ಅವರಿಗೆ ಸರಿಯಾಗದೇ ಕೆಲಸ ಬಿಟ್ಟು ಬೇರೆ ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಸರವಣನ್ ಸಹೋದರನಿಗೆ ಬಂಗಾರಪೇಟೆ ಪಾನಿಪೂರಿ ಅಂಗಡಿ ಮಾಡಿ ಇಲ್ಲಿನ ರುಚಿಯನ್ನು ಸಿಲಿಕಾನ್ ಸಿಟಿ ಮಂದಿಗೆ ತಲುಪಿಸಿದರೆ ಹೇಗೆ ಎಂಬ ಆಲೋಚನೆಯೊಂದಿಗೆ ಪ್ರಾರಂಭವಾಗಿದ್ದೇ ಬಂಗಾರಪೇಟೆ ಚಾಟ್ಸ್.

ಈ ಚಾಟ್ಸ್ ಅಂಗಡಿಯ ವಿಶೇಷತೆ ಎಂದರೆ ಇಲ್ಲಿ ಸಿಗುವ ಲೈಮ್ ಪಾನಿ. ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ,ಪುದೀನಾ, ಕೊತ್ತಂಬರಿ ಸೊಪ್ಪನ್ನು ಹದವಾಗಿ ಜಜ್ಜಿ ಅದಕ್ಕೆ ಬಿಸ್ಲೆರಿ ನೀರು ಮತ್ತು ನಿಂಬೆ ಹುಳಿಯನ್ನು ಬೆರಸಿ ನಂತರ ಸೋಸಿದಾಗ ಸಿಗುವ ದ್ರವವನ್ನು ಪಾನಿಯನ್ನಾಗಿ ನೀಡುತ್ತಾರೆ. ಇದು ತುಂಬಾ ಖಡಕ್ಕಾಗಿ, ಖಾರವಾಗಿ ಇರುತ್ತದೆ. ಇದು ನಗರದ ಯಾವುದೇ ಚಾಟ್ಸ್ ಅಂಗಡಿಯಲ್ಲೂ ಸಿಗುವುದಿಲ್ಲ. ಒಂದು ಅಂಗಡಿಯಲ್ಲಿ ಸರವಣನ್ ಮತ್ತೊಂದು ಅಂಗಡಿಯಲ್ಲಿ ಸರವಣನ್ ಅವರ ಸಹೋದರ ಇಬ್ಬರೇ ಸೇರಿ ಉದ್ಯಮವನ್ನು ಬೆಳೆಸುತ್ತಿದ್ದಾರೆ. ಸಹಾಯಕ್ಕಾಗಿ ಪ್ರತಿ ಅಂಗಡಿಯಲ್ಲೂ ಒಬ್ಬರು ಇದ್ದಾರೆ ಬಿಟ್ಟರೆ ಬೇರೆ ಯಾರು ಇಲ್ಲಿರುವುದಿಲ್ಲ.

ಮತ್ತೊಂದು ವಿಶೇಷವಾದ ತಿನಿಸು ಎಂದರೆ ಸಿಸಿ ಮಸಾಲಾ( ಚೌ ಚೌ ಮಸಾಲಾ) ಇದು ಸಹ ಬಂಗಾರಪೇಟೆಯ ವಿಶೇಷ ಇದು ಸಹ ಬೇರೆಲ್ಲೂ ಸಿಗುವುದಿಲ್ಲ.

ಏನೇನು ಸಿಗುತ್ತದೆ..?

ಬಂಗಾರಪೇಟ್ ಮಸಾಲಾ, ಮಸಾಲೆ ಪುರಿ, ದಹಿ ಪೂರಿ, ಬೇಲ್ ಪುರಿ, ಬಂಗಾರಪೇಟೆಯ ವಿಶೇಷ ನಿಪ್ಪಟ್​​ ಮಸಾಲೆ, ಟೊಮ್ಯಾಟೊ ಮಸಾಲೆ, ಹೀಗೆ ಹತ್ತು ಹಲವು ಬಂಗಾರಪೇಟೆ ಚಾಟ್ಸ್​​ಗಳು ಇಲ್ಲಿ ಸಿಗುತ್ತವೆ.

ಆರಂಭ ಮಾಡಿ ಒಂದು ವರ್ಷದೊಳಗೆ ಸರವಣನ್ ಸಹೋದರರು ರಾಜಾಜಿನಗರದಲ್ಲಿ ಮತ್ತೊಂದು ಅಂಗಡಿ ತೆರೆದಿದ್ದಾರೆಂದರೆ ಬಂಗಾರಪೇಟೆಯ ಚಾಟ್ಸ್ ರುಚಿ ಎಷ್ಟು ಎಂಬುದು ತಿಳಿಯುತ್ತದೆ.

ಗ್ರಾಹಕರ ಮಾತು...

ನಾವು ತಿರುಪತಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಬಂಗಾರಪೇಟೆಯಲ್ಲಿ ಅದ್ಬುತ ರುಚಿಯಾಗಿರುವ ಪಾನಿಪೂರಿ ಮಸಾಲೆ ಪೂರಿ ತಿಂದಿದ್ದೇವೆ. ಇದೇ ರುಚಿ ಬೆಂಗಳೂರಲ್ಲೂ ಸಿಕ್ಕರೆ ಒಳ್ಳೆದಲ್ಲವೇ ಎಂದುಕೊಳ್ಳುತ್ತಿದ್ದೇವೆ. ಆದರೆ ನಮ್ಮ ಏರಿಯಾದಲ್ಲೇ ಇದು ಆಗಿರುವುದರಿಂದ ವಾರಕ್ಕೊಂದು ಬಾರಿಯಾದರೂ ಇಲ್ಲಿಗೆ ಬಂದು ಬಂಗಾರಪೇಟೆಯ ಚಾಟ್ಸ್​​ನ ಸವಿಯನ್ನು ಮೆಲ್ಲುತ್ತೇನೆ ಎಂದು ಖುಷಿಯಿಂದ ಹೇಳುತ್ತಾರೆ ಬೆಂಗಳೂರಿನ ಶ್ರೀನಗರ ನಿವಾಸಿ ಶೋಭಾರವಿಶಂಕರ್.


Related Stories

Stories by usha harish