ಹೊಟ್ಟೆಯ ಸಂಗಾತಿ, ಹಸಿವಿನ ಶತ್ರು `Swiggy’

ರೂಪಾ ಹೆಗಡೆ

0

ಬಿರಿಯಾನಿ ತಿನ್ನುವ ಆಸೆ ಆಗ್ಬಿಟ್ಟಿದೆ. ಆಫೀಸ್ ನಲ್ಲಿ ಕೆಲಸ ಜಾಸ್ತಿ ಇರುವ ಕಾರಣ ಹೊರಗೆ ಹೋಗೋದು ಸಾಧ್ಯವಾಗದ ಮಾತು. ಇಲ್ಲಿಗೆ ತರಿಸಿ ತಿನ್ನೋಣ ಅಂದ್ರೆ, ಹತ್ತಿರ ಯಾವ ಹೊಟೇಲ್ ಇದೆ ನೋಡಬೇಕು. ಅದರ ನಂಬರ್ ಹುಡುಕಬೇಕು. ಅಲ್ಲಿ ಬಿರಿಯಾನಿ ಸಿಗುತ್ತಾ ಎಂಬುದನ್ನು ತಿಳಿದುಕೊಂಡು ಆರ್ಡರ್ ಮಾಡಬೇಕು. ಇನ್ನು ಪಾರ್ಸಲ್ ಬರುವ ಹೊತ್ತಿಗೆ ಸುಸ್ತೋ ಸುಸ್ತು.

ಇಷ್ಟೆಲ್ಲ ಮಾಡುವ ಬದಲು ಭಾರತದ ಎರಡನೇ ಅತಿದೊಡ್ಡ ಆಹಾರ ವಿತರಣಾ ವೇದಿಕೆ Swiggy ಅಪ್ಲಿಕೇಶನನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಸಾಕು. ಎಲ್ಲ ಕೆಲಸ ಫಟಾಫಟ್ ಆಗಿಬಿಡುತ್ತೆ. ನೀವು ಹೇಳಿದ ಟೈಂಗೆ ನೀವಿದ್ದಲ್ಲಿಗೆ ನೀವು ಆರ್ಡರ್ ಮಾಡಿದ ತಿಂಡಿ ಬರುತ್ತೆ.

ಆರಂಭ..

ಶ್ರೀಹರ್ಷಾ,ನಂದನ್ ರೆಡ್ಡಿ ಹಾಗೂ ರಾಹುಲ್ ಆನ್​ಲೈನ್ ಆಹಾರ ವಿತರಣಾ ಸಂಸ್ಥೆ Swiggy ಸಂಸ್ಥಾಪಕರು. ಆಗ್ನೇಯ ಏಷ್ಯಾ ಮತ್ತು ಯುರೋಪ್ ಗಳನ್ನು ಸೈಕಲ್ ನಲ್ಲಿ ಸುತ್ತಿದ ಶ್ರೀಹರ್ಷಾ BITS ಪಿಲಾನಿ ಮತ್ತು ಐಐಎಂ-ಸಿನಲ್ಲಿ ಓದಿ ಲಂಡನ್ ನ ಒಂದು ಬ್ಯಾಂಕ್ ನಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನು ಭಾರತದಲ್ಲಿ ಮೊದಲ ಬಾರಿ ಗ್ರಾಮೀಣ ಬಿಪಿಓ ಆರಂಭಿಸಿದ ನಂದನ್ ರೆಡ್ಡಿ ಕೂಡ BITS ಪಿಲಾನಿಯಲ್ಲಿ ಓದಿದ್ದಾರೆ. ಅವರು ರೆಸ್ಟೊರೆಂಟ್ ಟ್ಯಾಬ್ಲೆಟ್ ಬೇಸ್ಡ್ ಪಿಓಎಸ್ ರಚಿಸುವ ಕೆಲಸ ಮಾಡುತ್ತಿದ್ದರು. ಇಬ್ಬರು ಒಂದಾಗಿ Bundl ಎಂಬ ಹೆಸರಿನ ಲಾಜಿಸ್ಟಿಕ್ ಕಂಪನಿಯನ್ನು ಸ್ಥಾಪಿಸಿದ್ದರು. ಆದರೆ 2014ರಲ್ಲಿ ಕೆಲ ಕಾರಣಗಳಿಂದಾಗಿ ಅದು ಮುಚ್ಚಲ್ಪಟ್ಟಿತು. ಭಾರತೀಯ ಮೆಟ್ರೋ ನಗರಗಳಲ್ಲಿ ಸ್ಥಳೀಯ ಆಹಾರೋತ್ಪನ್ನಗಳ ವಿತರಣೆಯ ಬಗ್ಗೆ ಆಸಕ್ತಿ ಹೊಂದಿದ್ದ ಶ್ರೀಹರ್ಷಾ ಹಾಗೂ ನಂದನ್, Bundl ಕಂಪನಿ ಮುಚ್ಚುವ ಮುನ್ನವೆ ಇದರ ಬಗ್ಗೆ ಯೋಚಿಸಿದ್ದರು.

Swiggy ಆರಂಭವಾಗುವಾಗ ಶ್ರೀಹರ್ಷ ಹಾಗೂ ನಂದನ್ ರೆಡ್ಡಿ ಜೊತೆ ಕೈ ಜೋಡಿಸಿದವರು ರಾಹುಲ್. ಖರಗ್ಪುರದಲ್ಲಿ ಐಐಟಿ ಅಭ್ಯಾಸ ಮಾಡಿದ್ದ ರಾಹುಲ್,ಆನ್​ಲೈನ್ ಶಾಪಿಂಗ್ Myntraದ ವೆಬ್ ಪೋರ್ಟಲ್ ಡೆವಲಪರ್ ಆಗಿ ಕೆಲಸ ಮಾಡಿದ್ದರು. ಈ ಮೂವರು ಸೇರಿ ಆನ್ಲೈನ್ ನಲ್ಲಿ ಆಹಾರದ ಆರ್ಡರ್ ಪಡೆಯುವ ಹಾಗೂ ವಿತರಣೆ ಮಾಡುವ ಕಂಪನಿ Swiggyಯನ್ನು ಶುರು ಮಾಡಿದರು. ಆಗಸ್ಟ್ 2014ರಂದು Swiggy ಬೆಂಗಳೂರಿನ ಕೋರಮಂಗಲದಲ್ಲಿ ತನ್ನ ಸೇವೆ ಶುರುಮಾಡಿತು. Swiggy ಆರಂಭವಾಗಿ ಕೇವಲ 8 ತಿಂಗಳಲ್ಲಿ Accel ಹಾಗೂ SAIF ನಿಂದ 2 ಮಿಲಿಯನ್ ಡಾಲರ್ ಆರ್ಥಿಕ ನೆರವು ಪಡೆಯಲು ಯಶಸ್ವಿಯಾಯ್ತು.

Swiggy ಅಪ್ಲಿಕೇಶನ್

ವಾಸ್ತವಿಕತೆ ಹಾಗೂ ಅಭೂತಪೂರ್ವ ಎಂಬುದು Swiggy ಮೂಲ ಅರ್ಥವಾಗಿದೆ. ನಗರದ ಅತ್ಯುನ್ನತ ಹೊಟೇಲ್ಗಳ ಆಹಾರವನ್ನು ಗ್ರಾಹಕರಿಗೆ ಸುಲುಭವಾಗಿ ಹಾಗೂ ಸಮಯಕ್ಕೆ ಸರಿಯಾಗಿ ತಲುಪಿಸುವುದು Swiggy ನ ಮುಖ್ಯ ಉದ್ದೇಶವಾಗಿದೆ. Swiggy ವಿಭಿನ್ನವಾಗಿ ತನ್ನ ಕೆಲಸ ಮಾಡ್ತಾ ಇದೆ.

ಮೊದಲು ಗ್ರಾಹಕ Swiggy ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ತಾನಿರುವ ಪ್ರದೇಶದ ಮಾಹಿತಿಯನ್ನು ನೀಡಬೇಕು. ಆಗ Swiggy ಆ್ಯಪ್ ಆ ಪ್ರದೇಶದ ಸುತ್ತಮುತ್ತಲಿರುವ ಉತ್ತಮ ಹೊಟೇಲ್ ಗಳ ಮಾಹಿತಿಯನ್ನು ನೀಡುತ್ತದೆ. ಯಾವ ಹೊಟೇಲ್ ನಲ್ಲಿ ಯಾವ ಯಾವ ಆಹಾರ ಸಿಗುತ್ತೆ ಹಾಗೂ ಅದರ ಬೆಲೆ ಎಷ್ಟು ಎಂಬುದನ್ನು Swiggy ಗ್ರಾಹಕರಿಗೆ ಮಾಹಿತಿ ನೀಡುತ್ತದೆ. ಗ್ರಾಹಕ ತನಗೆ ಬೇಕೆನಿಸುವ ಆಹಾರವನ್ನು ಅದರಲ್ಲಿ ಆರ್ಡರ್ ಮಾಡಬಹುದು. ಆಂಡ್ರಾಯ್ಡ್ / ಐಒಎಸ್ ಅಪ್ಲಿಕೇಶನ್ ಮೂಲಕ ಕೂಡ ಆರ್ಡರ್ ಮಾಡಬಹುದು. ಆರ್ಡರ್ ಪಡೆದ Swiggy ಸಿಬ್ಬಂದಿ ರೆಸ್ಟೋರೆಂಟ್ ಗೆ ಹೋಗಿ ಗ್ರಾಹಕ ಹೇಳಿದ ಆಹಾರವನ್ನು ಪಡೆದು ಸಮಯಕ್ಕೆ ಸರಿಯಾಗಿ ಗ್ರಾಹಕನಿಗೆ ತಲುಪಿಸುತ್ತಾರೆ. Swiggy ತನ್ನದೇ ವಾಹನ ಹೊಂದಿರುವುದರಿಂದ ಉತ್ತಮ ಸೇವೆ ನೀಡುವುದು ಸುಲಭವಾಗಿದೆ.

ಎಲ್ಲೆಲ್ಲಿ Swiggy ?

Swiggy ಹಾಗೂ ಗ್ರಾಹಕರಿಗೆ ಯಾವುದೇ ಸಂಬಂಧವಿರುವುದಿಲ್ಲ. ರೆಸ್ಟೋರೆಂಟ್ ನೀಡಿದ ಆಹಾರವನ್ನು ಗ್ರಾಹಕನಿಗೆ ತಲುಪಿಸುವುದು Swiggy ಕೆಲಸ. ಹಾಗಾಗಿ Swiggy ಹೊಟೇಲ್ ಗಳಿಂದ ಸಂಭಾವನೆ ಪಡೆಯುತ್ತದೆ. ಇದೇ Swiggy ಆದಾಯದ ಮೂಲ. 250 ರೂಪಾಯಿಗಿಂತ ಕಡಿಮೆ ಬಿಲ್ ಮಾಡಿದ್ರೆ ಮಾತ್ರ ಗ್ರಾಹಕ Swiggyಗೆ 30 ರೂಪಾಯಿ ವಿತರಣಾ ಫೀ ನೀಡಬೇಕಾಗುತ್ತದೆ. ಪ್ರತಿ ತಿಂಗಳು Swiggy ಕ್ಷೇತ್ರ ವಿಸ್ತರಣೆಯಾಗ್ತಾ ಇದೆ. ವಿವಿಧ ಹೊಟೇಲ್ ಹಾಗೂ ಫುಡ್ ಪಾಯಿಂಟ್ ಗಳು Swiggy ಜೊತೆ ಕೈಜೋಡಿಸುತ್ತಿವೆ.

Swiggy ಬೆಂಗಳೂರಿನ 11 ಕಡೆ ತನ್ನ ಸೇವೆಯನ್ನು ಒದಗಿಸ್ತಿದೆ. ಇದಲ್ಲದೆ ಗುರಗಾಂವ್, ಹೈದರಾಬಾದ್, ದೆಹಲಿ, ಮುಂಬೈ, ಪುಣೆ, ಕೋಲ್ಕತಾ, ಚೆನೈ ಸೇರಿ 8 ನಗರಗಳಲ್ಲಿ ತನ್ನ ಸೇವೆ ವಿಸ್ತರಿಸಿದೆ. Swiggy ರೆಸ್ಟೋರೆಂಟ್ ಗಳಿಗೆ ವಿತರಣಾ ಸೇವೆ ನೀಡುತ್ತಿರುವುದರಿಂದ ರೆಸ್ಟೋರೆಂಟ್ ಗಳ ಗ್ರಾಹಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ಹೊಟೇಲ್ ಗಳು ಸ್ವಿಗ್ಗಿಯನ್ನು ತಮ್ಮ ಅವಿಭಾಜ್ಯ ಅಂಗವೆಂದು ಭಾವಿಸಿವೆ.

ಜನರಿಂದ ಸಿಗುವ ಮನ್ನಣೆಯೇ ನಿಜವಾದ ಮಾರ್ಕೆಟಿಂಗ್ ಎಂದು Swiggy ನಂಬಿದೆ. ಗ್ರಾಹಕರಿಗೆ ಇಷ್ಟವಾದ್ರೆ ಸೇವೆ ಯಶಸ್ವಿಯಾದಂತೆ ಎನ್ನುತ್ತಾರೆ ಸಂಸ್ಥಾಪಕರು. ದೇಶದಲ್ಲಿಯೇ ಅತಿ ಉನ್ನತ ದರ್ಜೆಯ ವಿತರಣಾ ಸೇವೆ ಒದಗಿಸುವ ತಂಡವನ್ನು ಕಟ್ಟಲು Swiggy ಮುಂದಾಗಿದೆ. ಇದಕ್ಕಾಗಿ Swiggy ಉತ್ತಮ ವೃತ್ತಿಪರರನ್ನು ನೇಮಕ ಮಾಡಿಕೊಂಡಿದೆ ಹಾಗೂ ನೇಮಕ ಮಾಡಿಕೊಳ್ಳುತ್ತಿದೆ.

ಇದು ಆನ್ಲೈನ್ ಯುಗವಾಗಿದ್ದರೂ ಭಾರತದಲ್ಲಿ ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡುವ ಉದ್ಯಮ ಗಟ್ಟಿಯಾಗಿ ಬೇರೂರಿಲ್ಲ. ಅನೇಕರಿಗೆ ಆನ್ಲೈನ್ ಸೇವೆ ಬಗ್ಗೆ ತಿಳಿದಿಲ್ಲ. ಮತ್ತೆ ಕೆಲವರಿಗೆ ತಿಳಿದಿದ್ದರೂ ಆನ್ಲೈನ್ ಕಂಪನಿಗಳು ನೀಡುವ ಸೇವೆ ಮೇಲೆ ಭರವಸೆಯಿಲ್ಲ. ಈ ನಡುವೆಯೂ ಫುಡ್ ವಿತರಣಾ ಕ್ಷೇತ್ರಕ್ಕೆ Zomato and FoodPanda ನಂತಹ ಕಂಪನಿಗಳು ಕಾಲಿಟ್ಟಿವೆ. ಕಾಲ ಕಳೆದಂತೆ ಸ್ಪರ್ಧೆ ಹೆಚ್ಚಾಗ್ತಾ ಇದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಮಾರುಕಟ್ಟೆಯಲ್ಲಿ ಶಾಶ್ವತವಾಗಿ ತಳವೂರುವ ದಾರಿಯಲ್ಲಿ ಮುನ್ನುಗ್ಗುತ್ತಿದೆ Swiggy.

Related Stories