ಬ್ಲಡ್​ ಕ್ಯಾನ್ಸರ್ ಪೀಡಿತರಿಗೆ ಸಹಾಯ ಹಸ್ತ

ಉಷಾ ಹರೀಶ್​

0

ಬ್ಲಡ್ ಕ್ಯಾನ್ಸರ್​ಗೆ  ಅಸ್ಥಿ ಮಜ್ಜೆ ( ಬೋನ್ ಮ್ಯಾರೊ) ಕಸಿಯಿಂದ ರೋಗವನ್ನು ಗುಣ ಪಡಿಸಬಹುದು. ಆದರೆ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗೆ ಹೊಂದಿಕೊಳ್ಳುವಂತಹ ಅಸ್ಥಿಮಜ್ಜೆಯನ್ನು ಹುಡುಕುವುದೇ ದೊಡ್ಡ ಕಷ್ಟದ ಕೆಲಸ. ಅಷ್ಟೇ ಅಲ್ಲದೇ ಈ ಚಿಕಿತ್ಸೆಗೆ ವೆಚ್ಚವೂ ದುಬಾರಿಯಾಗುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುವ ಸಲುವಾಗಿ ಬೆಂಗಳೂರು ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ಥಿ ಮಜ್ಜೆ ನೀಡುವ ದಾನಿಗಳ ಮಾಹಿತಿಯನ್ನು ನೊಂದಣಿ ಮಾಡುವತ್ತ ತನ್ನ ಹೆಜ್ಜೆ ಇಟ್ಟಿದೆ.

2015 ಬೆಂಗಳೂರು ವೈದ್ಯಕೀಯ ಕಾಲೇಜಿಗೆ ವಜ್ರಮಹೋತ್ಸವ ಸಂಭ್ರಮ . ಇದೇ ಸುಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಹಳೆ ವಿದ್ಯಾರ್ಥಿಗಳು ನಡೆಸುತ್ತಿರುವ ಇರುವ ಬಿಎಂಸಿಯ ಅಭಿವೃದ್ಧಿ ಟ್ರಸ್ಟ್ ಮೂಲಕ ಅಸ್ಥಿ ಮಜ್ಜೆ ದಾನಿಗಳ ನೊಂದಣಿ ಕಾರ್ಯ ಆರಂಭಿಸಿದ್ದಾರೆ.

ಬ್ಲಡ್ ಕ್ಯಾನ್ಸರ್ ಹೊಂದಿರುವ ರೋಗಿಗಳ ಪರಿಹಾರಕ್ಕೆ ರೋಗ ಪೀಡಿತ ಅಸ್ಥಿ ಮಜ್ಜೆಯನ್ನು ಕೊಂದು ಆರೋಗ್ಯವಂತ ಮತ್ತು ರೋಗಿಗೆ ಸರಿ ಹೊಂದುವ ಅಸ್ಥಿ ಮಜ್ಜೆ ಕಸಿ ಮಾಡಬೇಕಾಗುತ್ತದೆ. ಆದರೆ ಸಮಸ್ಯೆ ಇರುವುದು ರೋಗಿಗೆ ಸರಿಹೊಂದುವ ಅಸ್ಥಿ ಮಜ್ಜೆಯ ಹುಡುಕಾಟದಲ್ಲಿ. ಈ ಹುಟಕಾಟಕ್ಕಾಗಿಯೇ ಸುಮಾರು ಲಕ್ಷಗಳು ಖರ್ಚಾಗುತ್ತವೆ. ಸರಿ ಹೊಂದುವ ವ್ಯಕ್ತಿ ಸಿಕ್ಕರೆ ನಂತರ ಅದನ್ನು ಕಸಿ ಮಾಡಬಹುದು. ಆದರೆ ಈ ತರಹ ಹುಡುಕುವಾಗ ಸಮಯ ವ್ಯರ್ಥವಾಗಿ ಕೆಲ ಬಾರಿ ರೋಗಿಗಳು ಮೃತ ಪಡುವ ಸಂದರ್ಭಗಳು ಉಂಟು. ಹುಡುಕುವ ಅವಧಿ ಮತ್ತು ಸರಿ ಹೊಂದುವ ಅಸ್ಥಿ ಮಜ್ಜೆ ಯಾವ ದಾನಿಯ ಬಳಿ ದೊರಕುತ್ತದೆ ಎಂಬ ಮಾಹಿತಿ ಸಿಕ್ಕರೆ ರೋಗಿ ಬದುಕಬಹುದು.

ಅಸ್ಥಿ ಮಜ್ಜೆಯೇ ಕೆಂಪು ರಕ್ತ ಕಣ ಬಿಳಿ ರಕ್ತ ಕಣ ಹಾಗೂ ಪ್ಲೇಟ್ಲೆಟ್​​ಗಳ ಉತ್ಪಾದಕ. ಅಸ್ಥಿ ಮಜ್ಜೆಯಲ್ಲಿರುವ ಹ್ಯೂಮನ್ ಲ್ಯೂಕೋಸೈಟ್ ಆಂಟಿಜನ್ ( ಎಚ್ ಎಲ್ಎ) ಹೊಂದಾಣಿಕಾದರೆ ಮಾತ್ರ ಕಸಿ ಮಾಡಬಹುದು. ಎಚ್ಎಲ್ಎ ಪ್ರತಿ ಜನಕ ( ಆಂಟಿಜನ್) ಗಳನ್ನು ಉತ್ಪಾದಿಸ್ತುವೆ. ಒಂದು ವೇಳೆ ಕಸಿ ಮಾಡುವಾಗ ಈ ಬೋನ್ ಮ್ಯಾರೊ ಹೊಂದಾಣಿಕೆಯಾಗದೆ ಹೊದಲ್ಲಿ ಪ್ರತಿ ಜನಗಳ ನಡುವೆ ಹೋರಾಟ ನಡೆಯುತ್ತದೆ ಇದೇ ಕಾರಣದಿಂದ ಎಚ್ಎಲ್ಎಗಳ ಹೊಂದಾಣಿಕೆ ಅಗತ್ಯ.

ಚೆನ್ನೈ ,ದೆಹಲಿಯಲ್ಲಿ ದಾನಿಗಳ ನೊಂದಣಿ

ಈ ಬೋನ್​ಮ್ಯಾರೋ ದಾನಿಗಳನ್ನು ನೊಂದಣಿ ಮಾಡಿಕೊಳ್ಳುವ ಕಾರ್ಯವನ್ನು ಬೆಂಗಳೂರು ಮಾತ್ರವಲ್ಲದೇ ಭಾರತದ ಇತರೆ ನಗರಗಳಾದ ನವದೆಹಲಿ, ಚೆನ್ನೈ, ಮುಂಬೈನಲ್ಲಿ ಪ್ರಾರಂಭ ಮಾಡಲಾಗಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಎರಡು ದಶಕದ ಹಿಂದೆಯೇ ದಾನಿಗಳ ನೊಂದಣಿ ಆರಂಭಿಸುವಂತೆ ಕರೆ ನೀಡಿತ್ತು. ಚೆನ್ನೈನ ದತ್ರಿ ಎಂಬ ಸಂಸ್ಥೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚಿನ ದಾನಿಗಳನ್ನು ನೊಂದಾಯಿಸಿಕೊಂಡಿದೆ. ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆ ಬಳಿಯೂ ದಾನಿಗಳ ನೊಂದಣಿ ಇದೆ.

ನೊಂದಣಿ ಬಗ್ಗೆ ಅರಿವು

ಸಾಮಾನ್ಯವಾಗಿ ಅಸ್ಥಿಮಜ್ಜೆಯನ್ನು ಸುಲಭವಾಗಿ ದಾನ ಮಾಡಲು ಒಪ್ಪುವುದಿಲ್ಲ. ಅದಕ್ಕಾಗಿ ಬೆಂಗಳೂರು ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಲ್ಲಿ ಕೆಲ ವೈದ್ಯರು ಸ್ವಯಂ ಸೇವಕರಾಗಿ ಸಾಕಷ್ಟು ಕಡೆಗಳಲ್ಲಿ ಅಸ್ಥಿ ಮಜ್ಜೆ ದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಸ್ಥಿ ಮಜ್ಜೆಯ ದಾನ ಮಾಡುವುದಕ್ಕೆ ಒಪ್ಪುವ ಸಂಘಟನೆಗಳು, ವಿದ್ಯಾಸಂಸ್ಥೆಗಳಲ್ಲಿ ಸುಮಾರು 25 ನಿಮಿಷಗಳ ಕಾಲ ಅಸ್ಥಿ ಮಜ್ಜೆಯ ದಾನದ ಬಗ್ಗೆ ದಾನ ಮಾಡುವುದರಿಂದ ಆಗುವ ಉಪಯೋಗದ ಬಗೆಗೆ ಪ್ರೆಸೆಂಟೆಷನ್ ನೀಡುತ್ತಾರೆ. ಆ ನಂತರ ದಾನಿಗಳಿಂದ 3 ಎಂಎಲ್​ನಷ್ಟು ರಕ್ತವನ್ನು ಪಡೆಯಲಾಗುತ್ತದೆ. ಆ ರಕ್ತವನ್ನು ಪರೀಕ್ಷೆ ಮಾಡಿ ನಂತರ ನೊಂದಣಿ ಮಾಡಿಕೊಳ್ಳಲಾಗುತ್ತದೆ.

ದಾನ ಹೇಗೆ..?

ರಕ್ತದಲ್ಲಿ ಅಸ್ಥಿ ಮಜ್ಜೆ ಅಲ್ಪ ಪ್ರಮಾಣದಲ್ಲಿ ಹರಿದಾಡುತ್ತಿರುತ್ತದೆ. ದಾನದ ಸಂಧರ್ಭದಲ್ಲಿ ಇದರ ಪ್ರಮಾಣ ಹೆಚ್ಚಿಸುವ ಸಲುವಾಗಿ ಇಂಜೆಕ್ಷನ್ ರೂಪದಲ್ಲಿ ಐದು ದಿನ ನೀಡಲಾಗುತ್ತದೆ 6 ನೇ ದಿನ ನಂತರ ದಾನಿಯನ್ನು ಕೋಶ ಬೇರ್ಪಡಿಸುವ ಯಂತ್ರದ ಸಂಪರ್ಕಕ್ಕೆ ತಂದು ಅಸ್ಥಿ ಮಜ್ಜೆಯ ಸ್ಟೆಮ್ಸೆಲ್ಸ್​​ಗಳನ್ನು ಪ್ರತ್ಯೇಕಿಸಿ ರೋಗಿಗೆ ನೀಡಲಾಗುತ್ತದೆ.

ಬಿಎಂಸಿಯ ಹಳೇ ವಿದ್ಯಾರ್ಥಿಗಳ ಸಾಹಸಕ್ಕೆ ಇನ್ಫೋಸಿಸ್ ಸಾಥ್

ಈ ಅಸ್ಥಿ ಮಜ್ಜೆ ದಾನಿಗಳ ನೊಂದಣಿ ಕಾರ್ಯಕ್ಕೆ ಹಣದ ಅಗತ್ಯವೂ ಸಾಕಷ್ಟಿದೆ. ಇದಕ್ಕಾಗಿ ಬೆಂಗಳೂರು ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ಶ್ರೀನಿವಾಸ್ಗೌಡ, ಡಾ. ಲಕ್ಷ್ಮಣ್ ಮತ್ತವರ ತಂಡ ದಾನಿಗಳ ನೊಂದಣಿಯನ್ನು ಇನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ಇವರ ಈ ಪ್ರಯತ್ನಕ್ಕೆ ಇನ್ನಿತರ ಹಳೇ ವಿದ್ಯಾರ್ಥಿಗಳು ಇವರ ಸಾಮಾಜಿಕ ಕೆಲಸಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ಇವರ ಬೆನ್ನಿಗೆ ನಿಂತಿದೆ. 10ಲಕ್ಷ ದಾನಿಗಳ ಹೆಸರನ್ನು ನೊಂದಣಿ ಮಾಡಿಸುವ ಗುರಿಯನ್ನು ಡಾ ಶ್ರೀನಿವಾಸ್​ಗೌಡ ಮತ್ತು ಲಕ್ಷ್ಮಣ್ ಅವರ ತಂಡ ಹೊಂದಿದೆ. ವಿಶ್ವದದ್ಯಾಂತ ಸುಮಾರು 50 ಸಂಸ್ಥೆಗಳಲ್ಲಿ 25 ದಶಲಕ್ಷಕ್ಕೂ ಹೆಚ್ಚು ಅಸ್ಥಿ ಮಜ್ಜೆ ದಾನಿಗಳ ಹೆಸರಿದೆ.

18 ವರ್ಷದಿಂದ 50 ವರ್ಷದೊಳಗಿನ ಆರೋಗ್ಯವಂತರೆಲ್ಲರೂ ಅಸ್ಥಿ ಮಜ್ಜೆಯನ್ನು ದಾನ ಮಾಡಬಹುದು. ವೈದ್ಯರು ಖಚಿತಪಡಿಸಬೇಕು. ಇದರಿಂದ ಯಾವುದೇ ಅಪಾಯವಿಲ್ಲ ಬದಲಿಗೆ ಒಂದು ಜೀವವನ್ನು ಉಳಿಸಿದ ಸಾರ್ಥಕತೆ ಇರುತ್ತದೆ.