ವಿರಾಟ್​ ನಾಯಕತ್ವದ ತಂಡವೇಕೆ ಸರ್ವಶ್ರೇಷ್ಟ..?

ಟೀಮ್​ ವೈ.ಎಸ್​. ಕನ್ನಡ

ವಿರಾಟ್​ ನಾಯಕತ್ವದ ತಂಡವೇಕೆ ಸರ್ವಶ್ರೇಷ್ಟ..?

Friday December 23, 2016,

5 min Read

ವಿರಾಟ್ ನಾಯಕತ್ವದ ಟೆಸ್ಟ್ ತಂಡವನ್ನು ನೀವು ಹೇಗೆ ಅರ್ಥಮಾಡಿಕೊಳ್ಳುತ್ತೀರಿ..? ಇಂಗ್ಲೆಂಡ್ ವಿರುದ್ಧದ 4-0 ಅಂತರ ಟೆಸ್ಟ್ ಸರಣಿ ಗೆಲುವಿನ ಬಳಿಕ ನಿಮಗೆ ವಿರಾಟ್ ನೇತೃತ್ವದ ಟೀಮ್ ಇಂಡಿಯಾದ ಬಗ್ಗೆ ಹೊಸ ಕನಸು ಹುಟ್ಟಿಕೊಂಡಿರುವುದು ಖಚಿತ. ಹಲವು ಪ್ರಶ್ನೆಗಳು ನಿಮ್ಮೊಳಗೆಯೇ ಕಾಡುತ್ತಿರಬಹುದು. ಕೊಹ್ಲಿಯ ತಂಡ ಭಾರತದ ಮಟ್ಟಿಗೆ ಸರ್ವಶ್ರೇಷ್ಟವೇ..? ಭಾರತೀಯ ಕ್ರಿಕೆಟ್​ನ ಸುವರ್ಣ ಯುಗ ಮತ್ತೆ ಆರಂಭವಾಯಿತೇ..? 1970, 1980ರಲ್ಲಿ ವೆಸ್ಟ್ಇಂಡೀಸ್ ಕ್ರಿಕೆಟ್​ನಲ್ಲಿ ಅಧಿಪತ್ಯ ಸಾಧಿಸಿದಂತೆ ವಿರಾಟ್ ತಂಡವೂ ಅಧಿಪತ್ಯ ಸಾಧಿಸಬಹುದೇ..? ಕಳೆದೊಂದು ವಾರದಿಂದ ನನಗೆ ಇಂತಹ ಹಲವು ಪ್ರಶ್ನೆಗಳು ಎದುರಾಗುತ್ತಿವೆ. ನನ್ನ ಪ್ರಕಾರ ವಿರಾಟ್ ಬಳಗ ಭಾರತೀಯ ಕ್ರಿಕೆಟ್​ನ ಸರ್ವಶ್ರೇಷ್ಠ ತಂಡ ಅನ್ನುವುದಕ್ಕೆ ಮುಜಗರವೇ ಇಲ್ಲ. 1983ರಲ್ಲಿ ವಿಶ್ವಕಪ್ ಗೆದ್ದಿದ್ದ ಕಪಿಲ್ ದೇವ್ ತಂಡಕ್ಕಿಂತ ವಿರಾಟ್ ತಂಡ ಶ್ರೇಷ್ಟವಾಗಿದೆ. 2 ವಿಶ್ವಕಪ್​ಗಳನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿಯ ತಂಡಕ್ಕಿಂತ ಈ ತಂಡ ಉತ್ತಮವಾಗಿದೆ. ಸಚಿನ್, ದ್ರಾವಿಡ್, ಸೆಹ್ವಾಗ್, ಲಕ್ಷ್ಮಣ್, ಕುಂಬ್ಳೆ ಮತ್ತು ಭಜ್ಜಿಯನ್ನು ಒಳಗೊಂಡಿದ್ದ ಗಂಗೂಲಿಯ ತಂಡಕ್ಕಿಂತಲೂ ಈ ತಂಡ ಉತ್ತಮವಾಗಿದೆ. ಟೀಕಾಕಾರರು ನನ್ನ ಮಾತನ್ನು ಒಪ್ಪುವುದು ಕಷ್ಟ. ಆದ್ರೆ ವಿರಾಟ್ ತಂಡದ ಸಾಧನೆಗಳು ನನ್ನ ಮಾತಿಗೆ ಬೆಂಬಲವಾಗಿ ನಿಲುತ್ತವೆ.

image


ಕ್ರಿಕೆಟ್ ಬಗ್ಗೆ ನನಗಿರುವ ಆಸಕ್ತಿ ಚಿಕ್ಕಂದಿನಿಂದಲೇ ಬಂದಿದೆ. ಭಾರತದ ಕ್ರಿಕೆಟ್ ತಂಡ ಸೋಲಿನಿಂದ ಪಾರಾಗಲು ಆಡುತ್ತಿದ್ದ ಕಾಲದಿಂದಲೂ ನಾನು ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಆವಾಗ ಭಾರತಕ್ಕೆ ಗೆಲುವು ಅನ್ನೋದು ಅಪರೂಪವೇ ಆಗಿತ್ತು. ಅದು ಪ್ಯೂರ್ ಟೆಸ್ಟ್ ಕ್ರಿಕೆಟ್​ನ ಕಾಲವಾಗಿತ್ತು. ಏಕದಿನ ಕ್ರಿಕೆಟ್ ಇತ್ತಾದ್ರೂ ಅದಕ್ಕೆ ಹೆಚ್ಚು ಬೆಲೆ ಇರಲಿಲ್ಲ. ಕಲರ್ ಬಟ್ಟೆಗಳು ಕೂಡ ಇರಲಿಲ್ಲ. ಟಿ-20 ಕ್ರಿಕೆಟ್​ನ ಬಗ್ಗೆ ಯೋಚನೆ ಕೂಡ ಮಾಡುವ ಹಾಗಿರಲಿಲ್ಲ. ಫೀಲ್ಡಿಂಗ್​ನಲ್ಲಿ ವೈಯಕ್ತಿಕ ಸಾಧನೆಗಳನ್ನು ಬಿಟ್ರೆ, ಫೀಲ್ಡಿಂಗ್ ಆಗಲಿ ಅಥವಾ ಒಟ್ಟಾರೆ ಕ್ರಿಕೆಟ್ ಆಗಲಿ ಅಥ್ಲೆಟಿಕ್ ಆಗಿರಲಿಲ್ಲ. ಹೆಲ್ಮೆಟ್ ಅನ್ನುವುದು ಫ್ಯಾಷನ್ ಆಗಿರಲಿಲ್ಲ. ಕ್ರಿಕೆಟ್ ಲೈವ್ ಮನೆ ಮಾತಾಗಿರಲಿಲ್ಲ. ರೆಡಿಯೋ ಕಾಮೆಂಟರಿ ಮತ್ತು ಸುಶೀಲ್ ದೋಷಿ ಮತ್ತು ನರೋತ್ತಮ್ ಪುರಿಯವರ ಕಂಚಿನ ಕಂಠದ ಕಾಮೆಂಟರಿಗಳು ಹೆಚ್ಚು ಇಷ್ಟವಾಗಿದ್ದವು.

70ರ ದಶಕದಲ್ಲಿ ಭಾರತ ಸ್ಪಿನ್ನರ್​ಗಳಿಗೆ ಹೆಸರಾಗಿತ್ತು. ಚಂದ್ರಶೇಖರ್, ಬೇಡಿ, ಪ್ರಸನ್ನ ಮತ್ತು ವೆಂಕಟ್ ರಾಘವನ್ ಎದುರಾಳಿಗಳ ಪಾಲಿಗೆ ಭಯಾನಕವಾಗಿದ್ದರು. ಭಾರತೀಯ ಪಿಚ್​ಗಳಲ್ಲಂತೂ ಈ ಸ್ಪಿನ್ನರ್​ಗಳನ್ನು ಎದುರಿಸಲು ಜಗತ್ತಿನ ಶ್ರೇಷ್ಟ ಬ್ಯಾಟ್ಸ್​ಮನ್​ಗಳೇ ಭಯಪಡುತ್ತಿದ್ದರು. ಸುನೀಲ್ ಗವಾಸ್ಕರ್ ಮತ್ತು ಗುಂಡಪ್ಪ ವಿಶ್ವನಾಥನ್ ಭಾರತದ ಶ್ರೇಷ್ಟ ಬ್ಯಾಟ್ಸ್​ಮನ್​ಗಳಾಗಿದ್ದರು. ಆದ್ರೂ ಭಾರತದ ಕ್ರಿಕೆಟ್ ತಂಡದ ಬಗ್ಗೆ ಹೆಚ್ಚೇನು ಭಯವಿರಲಿಲ್ಲ. ವಿದೇಶಿ ಪಿಚ್​ಗಳಲ್ಲಿ ಗೆಲುವು ಇರಲಿಲ್ಲ, ಭಾರತದ ಪಿಚ್​ಗಳಲ್ಲೂ ಗೆಲುವು ಅಪರೂಪ ಅನ್ನುವಂತಾಗಿತ್ತು. ಭಾರತಕ್ಕೆ ಗೆಲ್ಲುವುದಕ್ಕಿಂತ ಸೋಲು ತಪ್ಪಿಸಿಕೊಳ್ಳಲು ಅಡುವುದೇ ದೊಡ್ಡ ಕಾಯಕವಾಗಿತ್ತು.

ಕಪಿಲ್ ದೇವ್ ಆಗಮನದಿಂದ ಸ್ಪಿನ್ನರ್​ಗಳ ಯುಗ ಬಹುತೇಕ ಅಂತ್ಯಕಂಡಿತ್ತು. ಕಪಿಲ್ ದೇವ್ ಎಲ್ಲಾ ಯುವಕರಿಗೂ ಮಾದರಿ ಆಗಿದ್ದರು. ಸ್ಪಿನ್ನರ್​ಗಳ ಕ್ವಾಲಿಟಿ ಕಡಿಮೆ ಆಗಿದ್ದರೂ ಶ್ರೇಷ್ಟ ಬ್ಯಾಟ್ಸ್​ಮನ್​ಗಳನ್ನು ಹೆದರಿಸಬಲ್ಲ ವೇಗಿಗಳು ನಮ್ಮಲ್ಲಿ ಇರಲಿಲ್ಲ. ಭಾರತದಲ್ಲಿ ವೆಸ್ಟ್ಇಂಡೀಸ್​ನಲ್ಲಿದ್ದಂತಹ ಘಾತಕ ವೇಗಿಗಳಿರಲಿಲ್ಲ. ಆಸ್ಟ್ರೇಲಿಯಾದ ಡೆನಿಸ್ ಲಿಲ್ಲಿ ಮತ್ತು ಥಾಮ್ಸನ್​ರಂತಹ ವೇಗಿಗಳು ಕೂಡ ಇರಲಿಲ್ಲ. ಮೊಹಮ್ಮದ್ ನಿಸ್ಸಾರ್ ಆ ಕಾಲದಲ್ಲಿ ಭಾರತದ ಮಟ್ಟಿಗೆ ವೇಗದ ಬೌಲರ್ ಆಗಿದ್ದೇ ಹೆಚ್ಚು. ಗವಾಸ್ಕರ್ ನಿವೃತ್ತಿ ಆದ ನಂತರ ಸಚಿನ್ ತಂಡಕ್ಕೆ ಎಂಟ್ರಿ ಕೊಟ್ರು. ಸೌರವ್ ಗಂಗೂಲಿ ಭಾರತೀಯ ತಂಡವನ್ನು ಸ್ಪರ್ಧಾತ್ಮಕವಾಗಿ ಮಾಡಲು ಬರಬೇಕಾಯಿತು.

ಸೌರವ್ ಉತ್ತಮ ಬ್ಯಾಟ್ಸ್​ಮನ್, ಅದಕ್ಕಿಂತಲೂ ಅದ್ಭುತ ನಾಯಕ. ಅಗ್ರೆಸ್ಸಿವ್ ನೇಚರ್ ಇತ್ತು. ಗವಾಸ್ಕರ್ ಮತ್ತು ಕಪಿಲ್ ದೇವ್ ನಾಯಕತ್ವಕ್ಕಿಂತ ಸೌರವ್ ನಾಯಕತ್ವ ಸಖತ್ ಆಗಿತ್ತು. ಆತ ಗೆಲುವಿಗಾಗಿ ಆಡುತ್ತಿದ್ದ. ಸೌರವ್ ನಾಯಕತ್ವಕ್ಕೆ ಅದ್ಭುತ ಬ್ಯಾಟಿಂಗ್ ಲೈನ್ ಅಪ್ ಸಿಕ್ಕಿತ್ತು. ಸೆಹ್ವಾಗ್ ಹಾರ್ಡ್ ಹಿಟ್ಟರ್ ಆಗಿದ್ದರೆ, ರಾಹುಲ್ ದ್ರಾವಿಡ್ ಗೋಡೆಯಾಗಿ ನಿಲ್ಲುತ್ತಿದ್ದರು. ಸಚಿನ್ ಮತ್ತು ಲಕ್ಷ್ಮಣ್ ರನ್ ಬೇಟೆಗೆ ನಿಂತ್ರೆ ಸಾಟಿಯೇ ಇರಲಿಲ್ಲ. ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ರಂತಹ ವಿಶ್ವ ದರ್ಜೆಯ ಸ್ಪಿನ್ನರ್​ಗಳಿದ್ರು. ಜಾವಗಲ್ ಶ್ರೀನಾಥ್ ಮತ್ತು ಜಹೀರ್ ಖಾನ್​ರಂತಹ ವೇಗಿಗಳ ಸಹಾಯ ಸೌರವ್​ಗೆ ಇತ್ತು. ಆದ್ರೆ ಸೌರವ್ ತಂಡಕ್ಕೆ ಸ್ಟಿವ್ ವ್ಹಾ ಮತ್ತು ರಿಕಿ ಪಾಂಟಿಂಗ್ ತಂಡಕ್ಕಿಂತ ಕೆಳ ದರ್ಜೆಯಲ್ಲಿ ಕಾಣಿಸುತ್ತಿತ್ತು. ಸೌರವ್ ತಂಡಕ್ಕೆ ಕ್ವಾಲಿಟಿ ಆಲ್​ರೌಂಡರ್​ಗಳ ಕೊರತೆ ಕಾಡುತ್ತಿತ್ತು.

ಮಹೇಂದ್ರ ಸಿಂಗ್ ಧೋನಿಯ ನಾಯಕತ್ವ ಭಾರತೀಯ ಕ್ರಿಕೆಟ್ ತಂಡವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ಆ ಹಂತದಲ್ಲಿ ಆಸ್ಟ್ರೇಲಿಯಾದ ಪಾರುಪತ್ಯ ಕೊನೆಗೊಳ್ಳುವ ಹಂತಕ್ಕೆ ಬಂದಿದ್ರೂ ಕಾಂಗರೂ ತಂಡ ಬಲಿಷ್ಟವಾಗಿಯೇ ಇತ್ತು. ಧೋನಿ ಒಬ್ಬ ಅದ್ಭುತ ನಾಯಕ. ತಾನೇ ಮುಂದೆ ನಿಂತು ಪಂದ್ಯವನ್ನು ಗೆದ್ದುಕೊಡುತ್ತಿದ್ದರು. ಕ್ಯಾಪ್ಟನ್ ಕೂಲ್ ಅನ್ನುವ ಪಟ್ಟ ಪಡೆದುಕೊಂಡ್ರು. ಟಿ20 ಮತ್ತು ಐಪಿಎಲ್​ನಲ್ಲಂತೂ ಧೋನಿಯದ್ದೇ ಆರ್ಭಟ. ಭಾರತೀಯ ಕ್ರಿಕೆಟ್ ಟೆಸ್ಟ್, ಏಕದಿನ ಮತ್ತು ಟಿ20ಯಲ್ಲಿ ಚಾಂಪಿಯನ್ ತಂಡವಾಗಿತ್ತು. ಚೊಚ್ಚಲ ಟಿ20 ವಿಶ್ವಕಪ್ ಕೂಡ ಭಾರತ ಗೆದ್ದಿತ್ತು. ಏಕದಿನ ವಿಶ್ವಕಪ್ ಕೂಡ ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಒಲಿದಿತ್ತು. ಆದ್ರೂ ಭಾರತೀಯರ ಬೌಲಿಂಗ್ ವಿಶ್ವ ದರ್ಜೆಯದ್ದಾಗಿರಲಿಲ್ಲ. ಕ್ವಾಲಿಟಿ ಆಲ್​ರೌಂಡರ್​ನ ಕೊರತೆ ಧೋನಿಗೂ ಕಾಡಿತ್ತು. ಆಯ್ಕೆಗಳು ಕಡಿಮೆ ಇದ್ರೂ ಧೋನಿ ಅದನ್ನು ಸರಿದೂಗಿಸಿಕೊಂಡು ತಂಡವನ್ನು ಮುನ್ನಡೆಸಿದ್ರು.

ಧೋನಿಯಂತೆ ವಿರಾಟ್ ಕೂಡ ಆತ್ಮವಿಶ್ವಾದ ಮೂಲಕವೇ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಾನೇ ಮುಂದೆ ನಿಂತು ಪಂದ್ಯವನ್ನು ಗೆಲ್ಲಿಸುತ್ತಿದ್ದಾರೆ. ಗಂಗೂಲಿಯಂತೆ ಅಕ್ರಮಣಕಾರಿ ಗುಣ ವಿರಾಟ್ ನಾಯಕತ್ವದಲ್ಲಿದೆ. ಸೌರವ್ ಮತ್ತು ಧೋನಿಗಿಂತ ವಿರಾಟ್ ಉತ್ತಮ ಬ್ಯಾಟ್ಸ್​ಮನ್. ಸಚಿನ್ ಮತ್ತು ಗವಾಸ್ಕರ್ ಬ್ಯಾಟಿಂಗ್​ನಲ್ಲಿದ್ದ ಶಕ್ತಿ ಕೊಹ್ಲಿ ಬ್ಯಾಟಿಂಗ್​ನಲ್ಲಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ವರ್ಷವೊಂದರಲ್ಲೇ 3 ದ್ವಿಶತಕ ಸಿಡಿಸಿದ ಭಾರತದ ಏಕೈಕ ನಾಯಕ ಅನ್ನುವ ಖ್ಯಾತಿ ಕೂಡ ವಿರಾಟ್​ಗಿದೆ. ಚೇಸಿಂಗ್​ನಲ್ಲಂತೂ ವಿರಾಟ್ ಸಚಿನ್​ಗಿಂತ ಸಾಕಷ್ಟು ಮುಂದಿದ್ದಾರೆ. ಸಚಿನ್ಗಿಂತ ವಿರಾಟ್ ಅದ್ಭುತ ಆಟಗಾರ. ಸಚಿನ್ಗೆ ನಾಯಕತ್ವದ ಕೊರತೆ ಇತ್ತು. ಆದ್ರೆ ವಿರಾಟ್ ಅವರೆಲ್ಲರಿಗಿಂತಲೂ ಪರಿಪೂರ್ಣ ಆಟಗಾರ ಮತ್ತು ನಾಯಕ.

ಸೌರವ್ ನಾಯಕತ್ವದಲ್ಲಿದ್ದ ಆಟಗಾರರಿಗಿಂತಲೂ ಅದ್ಭುತ ಆಟಗಾರರು ವಿರಾಟ್ ತಂಡದಲ್ಲಿದ್ದಾರೆ. ವಿರಾಟ್​ರನ್ನು ಸಚಿನ್​ಗೆ ಹೋಲಿಕೆ ಮಾಡಿದರೆ, ಪೂಜಾರರನ್ನು ದ್ರಾವಿಡ್​ಗೆ ಹೋಲಿಕೆ ಮಾಡಬಹುದು. ಲಕ್ಷ್ಮಣ್ ಸ್ಥಾನವನ್ನು ರಹಾನೆ ತುಂಬಬಹುದು. ವಿಜಯ್, ಧವನ್ ಮತ್ತು ಕೆ.ಎಲ್. ರಾಹುಲ್, ಸೆಹ್ವಾಗ್ ಮತ್ತು ಗಂಭೀರ್ ಸ್ಥಾನವನ್ನು ತುಂಬಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಜೋಡಿ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್​ಗಿಂತ ಹೆಚ್ಚು ಪಂದ್ಯಗಳನ್ನು ಬೌಲಿಂಗ್ ಮೂಲಕ ಗೆಲ್ಲಿಸಿಕೊಟ್ಟಿದ್ದಾರೆ. ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ ಪ್ರಿತ್ ಬುಮ್ರಾ, ಭುವನೇಶ್ವರ್ ಕುಮಾರ್ ಗಂಟೆಗೆ 140 ಕಿಲೋಮೀಟರ್​ಗಿಂತ ಹೆಚ್ಚು ವೇಗದಲ್ಲಿ ಬೌಲಿಂಗ್ ನಡೆಸುವಷ್ಟು ತಾಕತ್ತು ಹೊಂದಿದ್ದಾರೆ.

ಸೌರವ್ ಮತ್ತು ಧೋನಿಯ ತಂಡಕ್ಕಿಂತ ವಿರಾಟ್ ತಂಡ ಮೂರು ವಿಭಾಗಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುತ್ತದೆ. ವಿರಾಟ್ ತಂಡದಲ್ಲಿರುವ ಆಟಗಾರರು ಅದ್ಭುತ ಫೀಲ್ಡರ್​ಗಳು. ಆದ್ರೆ ಗಂಗೂಲಿ ಮತ್ತು ಧೋನಿಯ ತಂಡದಲ್ಲಿ ಉತ್ತಮ ಫೀಲ್ಡರ್​ಗಳು ಮಾತ್ರ ಇದ್ರು. ಆದ್ರೆ ವಿರಾಟ್ ತಂಡದಲ್ಲಿ ಅತ್ಯುತ್ತಮ ಫೀಲ್ಡರ್​ಗಳಿದ್ದಾರೆ.

ಅಶ್ವಿನ್ ಮತ್ತು ಜಡೇಜಾ ರೂಪದಲ್ಲಿ ವಿಶ್ವದರ್ಜೆಯ ಎರಡು ಅತ್ಯುತ್ತಮ ಆಲ್​ರೌಂಡರ್​ಗಳಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಅಶ್ವಿನ್ ಮತ್ತು ಜಡೇಜಾ ಅದ್ಭುತ. ಈಗ ಜಯಂತ್ ಯಾದವ್ ಕೂಡ ಇವರ ಜೊತೆ ಸೇರಿಕೊಳ್ಳಬಲ್ಲರು. ಭಾರತೀಯ ತಂಡದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ. ಆಡುವ 11 ಆಟಗಾರರ ಪೈಕಿ 9 ಆಟಗಾರರು ಶತಕ ಸಿಡಿಸಿದ ಆಟಗಾರರಾಗಿದ್ದಾರೆ. ಈ ಹಿಂದಿನ ತಂಡಗಳಲ್ಲಿ ಈ ರೀತಿಯ ಆಟಗಾರರು ಇರಲಿಲ್ಲ. ಇದು ವಿಶ್ವ ಕ್ರಿಕೆಟ್​ನಲ್ಲೇ ವಿಭಿನ್ನ.

ವಿರಾಟ್ ತಂಡದ ಬೆಂಚ್ ಸ್ಟ್ರೆಂಗ್ತ್ ಉತ್ತಮವಾಗಿದೆ. ಪ್ರತಿಯೊಂದು ಸ್ಥಾನಕ್ಕೂ ಎರಡರಿಂದ ಮೂರು ಆಟಗಾರರು ಮೀಸಲಿದ್ದಾರೆ. ಶಿಖರ್ ಗಾಯಗೊಂಡರೆ, ರಾಹುಲ್ ಮತ್ತು ಪಾರ್ಥಿವ್ ಆ ಜಾಗವನ್ನು ತುಂಬುತ್ತಾರೆ. ರಹಾನೆ ಇಲ್ಲದೇ ಇದ್ರೆ ಕರುಣ್ ನಾಯರ್ ಖಾಲಿ ಇರುವ ಜಾಗದ ಬಗ್ಗೆ ಉಸಿರೆತ್ತಲು ಕೂಡ ಬಿಡುವುದಿಲ್ಲ. ರೋಹಿತ್ ಶರ್ಮಾರಂತಹ ಕ್ವಾಲಿಟಿ ಆಟಗಾರರೂ ಕೂಡ ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಟ ನಡೆಸುತ್ತಿದ್ದಾರೆ. ವೃದ್ಧಿಮಾನ್ ಸಾಹಾ ಗಾಯಗೊಂಡರೆ ಪಾರ್ಥಿವ್ ಕೀಪಿಂಗ್ ಮತ್ತು ಬ್ಯಾಟಿಂಗ್ ಗ್ಲೌಸ್ ಇಟ್ಟುಕೊಂಡು ಸಜ್ಜಾಗುತ್ತಾರೆ. ವೇಗದ ಬೌಲಿಂಗ್​ನಲ್ಲೂ ಸಮಸ್ಯೆ ಇಲ್ಲ. ಅಶ್ವಿನ್, ಜಡೇಜಾ, ಜಯಂತ್ ಮತ್ತು ಮಿಶ್ರಾ ಸ್ಪಿನ್ ಬೌಲಿಂಗ್ ಜಾಗವನ್ನು ತುಂಬುತ್ತಾರೆ. ಅಶ್ವಿನ್ ಮತ್ತು ಜಡೇಜಾ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಎರಡು ಸ್ಥಾನ ಪಡೆದುಕೊಂಡಿದ್ದಾರೆ ಅನ್ನುವುದು ಅವರ ಕ್ವಾಲಿಟಿಗೆ ಹಿಡಿದ ಕೈಗನ್ನಡಿ.

ನನಗೆ ಗೊತ್ತು ನಾನೀಗ ಹಲವು ಟೀಕೆಗಳನ್ನು ಎದುರಿಸಲಿದ್ದೇನೆ. ಆದ್ರೆ ನಾನು ಕೇಳುವ ಪ್ರಶ್ನೆ ಒಂದೇ. ಯಾವ ಭಾರತೀಯ ತಂಡ ಇಂಗ್ಲೆಂಡ್ ತಂಡವನ್ನು 4-0ಯಿಂದ ಸೋಲಿಸಿದೆ. ಇಂಗ್ಲೆಂಡ್ ಕಳಪೆ ತಂಡವೇನಲ್ಲ. ಆ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಆದ್ರೆ ವಿರಾಟ್ ತಂಡದಲ್ಲಿರುವ ಶಕ್ತಿ ಇಂಗ್ಲೆಂಡ್ ತಂಡದಲ್ಲಿಲ್ಲ. ಒಟ್ಟಿನಲ್ಲಿ ವಿರಾಟ್ ಮುನ್ನಡೆಸುತ್ತಿರವ ಈ ಯುವ ತಂಡ ಹೀಗೆಯೇ ಆಡಲಿ ಅನ್ನೋದು ನನ್ನ ಹಾರೈಕೆ.

ಲೇಖಕರು: ಅಶುತೋಷ್​

ಇದನ್ನು ಓದಿ:

1. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

2. ಬೀದಿನಾಯಿಗಳ ಪಾಲಿನ “ದೇವರು”- 700ಕ್ಕೂ ಹೆಚ್ಚು ಬೀದಿನಾಯಿಗಳ ಪಾಲಿಗೆ ಆಶ್ರಯದಾತ ಸಾಫ್ಟ್ಎಂಜಿನಿಯರ್..!

3. ಕ್ಯಾಶ್​ಲೆಸ್​ ವಹಿವಾಟಿನಲ್ಲೂ ಮಿಂಚಿದ ಬಿಎಂಟಿಸಿ - ಪ್ರಯಾಣಿಕರಿಗೆ ತಟ್ಟಿಲ್ಲ ಪ್ರಯಾಣದ ಬಿಸಿ

    Share on
    close