ಓಲಾ ಕಾರ್ ಆಯ್ತು.. ಈಗ ಓಲಾ ಕಫೆ ಬಂತು.!

ಕೃತಿಕಾ

ಓಲಾ ಕಾರ್ ಆಯ್ತು.. ಈಗ ಓಲಾ ಕಫೆ ಬಂತು.!

Sunday December 13, 2015,

2 min Read

ಎಲ್ಲಾದ್ರೂ ಹೋಗ್ಬೇಕು ಅಂದ್ರೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಥವಾ ಆಟೋಗಳನ್ನೇ ಅವಲಂಬಿಸಬೇಕಿತ್ತು. ಆದ್ರೆ ಈ ಮಾತನ್ನು ಓಲಾ ಕ್ಯಾಬ್ ಕಂಪನಿ ಸುಳ್ಳು ಮಾಡಿ ಹಲವು ವರ್ಷಗಳೇ ಕಳೆದುಹೋಗಿವೆ. ಈಗ ಅದೇ ಓಲಾ ಕಂಪನಿ ಈಗ ನಿಮ್ಮ ಮನೆ ಬಾಗಿಲಿಗೆ ಕಾರ್ ನಲ್ಲೇ ಊಟ ತಂದುಕೊಡುವ ಸೇವೆ ಆರಂಭಿಸಿದೆ. ದೇಶದ ಕೆಲವೇ ನಗರಗಳಲ್ಲಿ ಈ ಸೇವೆ ಆರಂಭವಾಗಿದ್ದು ಬೆಂಗಳೂರಿನಲ್ಲೂ ಇದು ಲಭ್ಯವಿದೆ.

image


ಮೊದಲೆಲ್ಲ ಓಲಾ ಕಾರಲ್ಲಿ ಹೋಗಿ ಊಟ ಮಾಡ್ಕೊಂಡು ಬರಬಹುದಿತ್ತು. ಆದ್ರೆ ಇನ್ನು ಮುಂದೆ ಕಾರ್ ನಲ್ಲೇ ಊಟ ಮನೆ ಬಾಗಿಲಿಗೆ ಬರಲಿದೆ. ಹೌದು ಇದೆಲಾ ಓಲಾ ಕಾರ್ ನ ಮಹಿಮೆ. ಓಲಾ ಕ್ಯಾಬ್ಸ್ ಸೇವೆ ಆರಂಭಿಸಿದ ಎರೆಡೇ ವರ್ಷಕ್ಕೆ ಸಂಸ್ಥೆ ಈ ಹೊಸ ಸೇವೆ ಒದಗಿಸುತ್ತಿದೆ.

ಹೌದು, ಓಲಾ ಈಗ ಓಲಾ ಕೆಫೆ ಶುರುಮಾಡಿದೆ. ನಿಮಗೆ ಬೇಕಾದ ತಿಂಡಿಯನ್ನು ನಿಮಗೆ ಬೇಕಾದ ಹೋಟೆಲಿನಿಂದ ಇಪ್ಪತ್ತು ನಿಮಿಷದ ಒಳಗೆ ನೀವಿರೋ ಕಡೆಗೆ ತರಿಸಿಕೊಳ್ಳಬಹುದು ಎನ್ನುತ್ತೆ ಓಲಾ ಕಫೆ. ಇನ್ನು ಮುಂದೆ ರುಚಿಕರ ಊಟಕ್ಕಾಗಿ ಹೊಟೇಲ್ ಅನ್ನು ನೀವೇನು ಹುಡುಕಿಕೊಂಡು ಹೋಗಬೇಕಿಲ್ಲ. ಓಲಾ ಆ್ಯಪ್ ಡೌನ್ ಲೋಡ್ ಮಾಡಿಕೊಂಡರೆ ಸಾಕು. ನಿಮ್ಮ ಮನೆಗೆ ಕೇವಲ ಇಪ್ಪತ್ತು ನಿಮಿಷಗಳಲ್ಲಿ ನಿಮಗೆ ಬೇಕಾದ ಊಟ ಬಂದು ತಲುಪುತ್ತೆ. ನೀವು ಅಡುಗೆ ಮಾಡೋಕೆ ಎರೆಡು ಗಂಟೆ ಸಮಯ ಹಿಡಿಯಬಹುದು. ಆದ್ರೆ ಓಲಾ ಕಫೆಯಲ್ಲಿ ಊಟ ಬುಕ್ ಮಾಡುದ್ರೆ 20 ನಿಮಿಷದಲ್ಲೇ ನಿಮ್ಮ ಮನೆ ಬಾಗಿಲಿಗೆ ಊಟ ಬರುತ್ತದೆ.

ಸದ್ಯಕ್ಕೆ ದೇಶದ ನಾಲ್ಕು ನಗರಗಳಲ್ಲಿ ಈ ಸೇವೆಯನ್ನು ಓಲಾ ಆರಂಭಿಸಿದೆ. ಆ ನಗರಗಳ ಪಟ್ಟಿಯಲ್ಲೆ ಬೆಂಗಳೂರಿಗೆ ಸ್ಥಾನ ಇದ್ದೇ ಇರುತ್ತದೆ. ಅಂದ ಹಾಗೆ ಸದ್ಯಕ್ಕೆ ಓಲಾ ಕೆಫೆಯಲ್ಲಿ ಬ್ರೇಕ್​​ಫಾಸ್ಟ್ ಇಲ್ಲ. ಲಂಚ್, ಸ್ನಾಕ್ಸ್ ಮತ್ತು ಡಿನ್ನರ್ ಮಾತ್ರ ಲಭ್ಯ. ಮಧ್ಯಾಹ್ನ 12 ರಿಂದ 3 ಗಂಟೆಯ ತನಕ ಊಟ. 2 ರಿಂದ ರಾತ್ರಿ 8ರ ತನಕ ಸ್ನಾಕ್ಸ್, ತಿಂಡಿ ಮತ್ತು ರಾತ್ರಿ 8 ರಿಂದ 10 ರ ತನಕ ಡಿನ್ನರ್ ಅನ್ನು ಮನೆ ಬಾಗಿಲಿಗೆ ತಂದು ಕೊಡುವ ವ್ಯವಸ್ಥೆ ಆರಂಭವಾಗಿದೆ.

image


ಸದ್ಯ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಆರಂಭಿಕ ಹಂತವಾಗಿ ಈ ಯೋಜನೆ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ನಗರಕ್ಕೆ ಈ ಸೇವೆ ವಿಸ್ತರಿಸಲಾಗುತ್ತಿದೆ. ನಗರದ ಕೆಲವು ಆಯ್ದ ಸ್ಥಳಗಳಲ್ಲಿ ಈಗ ಓಲಾ ಕೆಫೆ ಬರುತ್ತೆ. ಮುಂದಿನ ದಿನಗಳಲ್ಲಿ ಎಲ್ಲೆಡೆಯೂ ಈ ಸೇವೆ ಲಭ್ಯವಾಗಲಿದೆ. ಸದ್ಯಕ್ಕೆ ಅಂಥ ತಾಣಗಳೆಂದರೆ ಇಂದಿರಾನಗರ, ಕೋರಮಂಗಲ, ಜೆಪಿನಗರ, ಎಂಜಿ ರಸ್ತೆ, ವೈಟ್​​ಫೀಲ್ಡ್​​​ , ಬಿಟಿಎಂ ಲೇ ಔಟ್​​, ಜಯನಗರ, ಇಲೆಕ್ಟ್ರಾನಿಕ್ ಸಿಟಿ, ಹೆಚ್​​​ಎಸ್​​ಆರ್ ಲೇ ಔಟ್​​​. ಇದರಿಂದಾಗಿ ಹೊಟೇಲ್ ಊಟವನ್ನೇ ನೆಚ್ಚಿಕೊಂಡಿರುವ ಐಟಿ ಬಿಟಿ ಮಂದಿಗೆ ಓಲಾ ಕಫೆ ಸಹಕಾರಿಯಾಗಲಿದೆ.

ಓಲಾ ಕಫೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ, ರುಚಿಕರ ಊಟವನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ ನಾವು ಬೆಂಗಳೂರಿನ ಕೆಲವು ಪ್ರತಿಷ್ಠಿತ ಹೊಟೇಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಜನರಿಗೆ ಹೊರೆಯಾಗದಂತೆ ಅವರ ಮನೆ ಬಾಗಿಲಿಗೆ ಊಟ ತಲುಪಿಸುವ ಸವಾಲು ನಮ್ಮ ಮುಂದಿದೆ. ಒಂದು ಊಟ 99 ರೂ ಗೆ ನೀಡುವ ಮೂಲಕ ನಾವು ಕಡಿಮೆ ಬೆಲೆಗೆ ಈ ಸೇವೆ ಆರಂಭಿಸಿದ್ದೇವೆ. ಉಳಿದಂತೆ ಗ್ರಾಹಕರ ಆಯ್ಕೆ ಆಧಾರದ ಮೇಲೆ ಅವರಿಗೆ ಬೇಕಾದ ಊಟಗಳನ್ನು ನೀಡುತ್ತೇವೆ ಅಂತಾರೆ ಓಲಾ ಮಾರುಕಟ್ಟೆ ವಿಭಾಗದ ಅಧಿಕಾರಿ ವಿಲಾಸ್ ನಾಯಕ್.

ನಿಮ್ಮ ಮನೆ ಬಾಗಿಲಿಗೆ ಓಲಾ ಕ್ಯಾಬ್ ನಲ್ಲಿ ಊಟ ಬರಬೇಕು ಅಂದ್ರೆ ನೀವ್ ಮಾಡವೇಕಿರೋದು ಇಷ್ಟೇ. ಓಲಾ ಕ್ಯಾಬ್ಸ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಈಗಾಗಲೇ ನಿಮ್ಮ ಫೋನಲ್ಲಿ ಆ್ಯಪ್ ಇದ್ರೆ ಅದನ್ನು ಅಪ್ ಡೇಟ್ ಮಾಡಿಕೊಳ್ಳಿ. ಅಲ್ಲಿ ಓಲಾ ಕೆಫೆ ಸೆಲೆಕ್ಟ್ ಮಾಡಿ, ನಿಮಗೆ ಬೇಕಾದ ತಿಂಡಿ, ಎಷ್ಟು ಬೇಕು ಅನ್ನೋದನ್ನು ಒತ್ತಿದ್ದರೆ ಇಪ್ಪತ್ತೇ ನಿಮಿಷದಲ್ಲಿ ತಿಂಡಿಯ ಪರಿಮಳ ನಿಮ್ಮ ಮೂಗಿಗೆ ಬಡಿಯುತ್ತದೆ.