4 ದಶಕಗಳ ಹಿಂದೆಯೇ ಸ್ವಚ್ಛ ಭಾರತದ ಕನಸು- ಇದು"ಸುಲಭ" ಸಾಧಕನ ಕಥೆ..!

ಟೀಮ್​ ವೈ.ಎಸ್​. ಕನ್ನಡ

4 ದಶಕಗಳ ಹಿಂದೆಯೇ ಸ್ವಚ್ಛ ಭಾರತದ ಕನಸು-  ಇದು"ಸುಲಭ" ಸಾಧಕನ ಕಥೆ..!

Friday November 11, 2016,

3 min Read

"ಆಗ ನಾನಿನ್ನೂ ಪುಟ್ಟ ಬಾಲಕ. ಅವತ್ತು ಮನೆಗೆ ಕೆಲಸದ ಹೆಂಗಸೊಬ್ಬಳು ಬಂದು ಕೆಲ ಬಿದಿರಿನ ವಸ್ತುಗಳನ್ನು ಕೊಟ್ಟು ಹೋದಳು. ಆಕೆ ಮನೆಯಿಂದ ಹೊರಬಿದ್ದ ತಕ್ಷಣ ನನ್ನ ಅಜ್ಜಿ ಲಘುಬಗೆಯಿಂದ ಮನೆಯನ್ನೆಲ್ಲ ಪವಿತ್ರ ಜಲದಿಂದ ಶುದ್ಧಿಗೊಳಿಸಿದಳು. ನನಗೆ ಆಶ್ಚರ್ಯ, ನಮ್ಮ ಮನೆಗೆ ಅನೇಕರು ಬಂದು ಹೋಗಿ ಮಾಡುತ್ತಿದ್ದರು. ಆದರೆ ಎಲ್ಲ ಸಲವೂ ಅಜ್ಜಿಯ ವರ್ತನೆ ಹೀಗೆ ಇರುತ್ತಿರಲಿಲ್ಲ. ಕುತೂಹಲದಿಂದ ಆಕೆಯನ್ನು ಕೇಳಿದೆ. ಯಾಕಜ್ಜಿ ಹೀಗೆ ಅಂತಾ. ಆಗ ಅಜ್ಜಿ ಹೇಳಿದಳು ಆ ಹೆಂಗಸು ಕೆಳಜಾತಿ, ಆಕೆಯನ್ನು ಮುಟ್ಟಿದರೆ ಮೈಲಿಗೆಯಾಗುತ್ತೆ ಅಂತಾ. ನನ್ನ ಕುತೂಹಲ ಇನ್ನಷ್ಟು ಹೆಚ್ಚಾಯಿತು. ಮಾರನೇ ದಿನ ನಾನು ಬೇಕಂತಲೇ ಆಕೆಯನ್ನು ಮುಟ್ಟಿದೆ. ಆದ್ರೆ ನನ್ನ ದೇಹದಲ್ಲಿ ಬದಲಾವಣೆಯೇನೂ ಆಗಿಲ್ಲ. ಆದರೆ ನನ್ನ ಮನೆಯಲ್ಲಿ ಮಾತ್ರ ದೊಡ್ಡ ರಾದ್ಧಾಂತವೇ ನಡೆದುಹೋಯಿತು. ಅಜ್ಜಿ ಅತ್ತು ಕರೆದು ಮಾಡಿದಳು. ಮನೆಗೆ ಪುರೋಹಿತರೂ ಬಂದಾಯ್ತು. ಪಂಡಿತರ ಸಲಹೆಯಂತೆ ನಾನು ಗೋಮೂತ್ರ ಸೇವಿಸಿ, ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಶುದ್ಧಿಯಾದೆ. "

ಇದೇ ಘಟನೆ ಮುಂದೊಂದು ದಿನ ದೇಶದಲ್ಲಿ ಅತಿದೊಡ್ಡ ಬದಲಾವಣೆಗೆ ಕಾರಣವಾಯ್ತು. ಅಂದಹಾಗೆ ಆ ಬಾಲಕ ಬೇರ್ಯಾರೂ ಅಲ್ಲ. ಡಾ.ಬಿಂದೇಶ್ವರ ಪಾಠಕ್.

ಇಂದಿನ ದಿನಮಾನದಲ್ಲಿ ನಗರ, ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ಸುಲಭ ಶೌಚಾಲಯಗಳು ಕಾಣಸಿಗುತ್ತವೆ. ಆದ್ರೆ ಈ ವ್ಯವಸ್ಥೆಯ ಹಿಂದಿರುವ ಬದಲಾವಣೆಯ ಹರಿಹಾರನ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಅವರೇ ಡಾ.ಬಿಂದೇಶ್ವರ ಪಾಟಕ್. 2 ನೇ ಏಪ್ರಿಲ್ 1943 ರಂದು ಜನಿಸಿದ್ದು ಬಿಹಾರದ ರಾಂಪುರದಲ್ಲಿ. ಇವು ನಾಲ್ಕು ದಶಕಗಳ ಹಿಂದೆಯೇ ಸಾಮಾಜಿಕ ಬದಲಾವಣೆಗೆ ಶ್ರೀಕಾರ ಹಾಕಿದವರು. ಅಸ್ಪ್ರಶ್ಯತೆ, ಮಲಹೊರುವ ಪದ್ಧತಿಗಳ ವಿರುದ್ಧ ಹೋರಾಡಿದವರು. ಸುಲಭ ಶೌಚಾಲಯ ನಿರ್ಮಿಸಿ ಇಡೀ ಭಾರತವಷ್ಟೇ ಅಲ್ಲ, ಜಗತ್ತಿನ ಗಮನ ಸೆಳೆದವರು.

ಬಯಸಿದ್ದೊಂದು, ಆಗಿದ್ದು ಮತ್ತೊಂದು ..!

ಅಂದಹಾಗೆ ಡಾ.ಬಿಂದೇಶ್ವರ ಪಾಠಕ್ ಅವರು ಬಯಸ್ಸಿದ್ದು ಉಪನ್ಯಾಸಕ ವೃತ್ತಿಯನ್ನು. ಇದಕ್ಕಾಗಿ ಕಾಲೇಜಿನಲ್ಲಿ ಅಪರಾಧ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು ಅಭ್ಯಸಿಸಿದರು. ಆದರೆ ಅದೇ ವಿಷಯದಲ್ಲಿ ಕಡಿಮೆ ಅಂಕಗಳ ಬಂದ ಕಾರಣ ಉಪನ್ಯಾಸಕ ಹುದ್ದೆ ಸಿಗಲಿಲ್ಲ.ಕೊನೆಗೆ ಪ್ರೌಢಶಾಲೆಯ ಶಿಕ್ಷಕನಾಗಿ ಸೇರಿಕೊಂಡರೂ ತಿಂಗಳಿಗೆ ಕೇವಲ 2 ಡಾಲರ್ ಸಂಬಳವಾದ್ದರಿಂದ ಅದನ್ನೂ ತೊರೆದರು. ಬಳಿಕ 1967 ರಲ್ಲಿ ಸರ್ವೋದಯ ಸದಸ್ಯರಾದ ರಾಜೇಂದ್ರ ಲಾಲ್ ದಾಸ್ ಅವರು ಸಮಾನತೆ ಬಗೆಗಿನ ಗಾಂಧೀಜಿ ಕನಸನ್ನು ಪ್ರಸ್ತಾಪಿಸಿದರು. ಕೆಳಜಾತಿ, ದಲಿತರನ್ನು ಮೇಲೆ ತರಲು ಅವರನ್ನು ಶಿಕ್ಷಣವಂತರನ್ನಾಗಿಸಲು ಪ್ರೇರೇಪಿಸಿದರು. ಇದನ್ನು ಒಪ್ಪಿದ ಪಾಠಕ್, ತಾವು ಮೇಲ್ವರ್ಗದವರಾಗಿ ಬಿಹಾರದ ದಲಿತರ ಕಾಲೋನಿಯಲ್ಲಿ ಉಳಿದುಕೊಂಡು ಬದಲಾವಣೆಗೆ ಶ್ರೀಕಾರ ಹಾಕಿದರು. 60 ರ ದಶಕದಲ್ಲಿ ಬ್ರಾಹ್ಮಣರಾದ ಡಾ. ಪಾಠಕ್ ದಲಿತರ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದುದು ಅಂದಿನ ಪಾಲಿಗೆ ದೊಡ್ಡ ಅಪರಾಧವೇ ಆಗಿತ್ತು. ಆದ್ರೆ ಇದೇ ಮುಂದೊಂದು ಮಹತ್ಕಾರ್ಯಕ್ಕೆ ಮುನ್ನುಡಿಯಾಯ್ತು.

ಡಾ.ಪಾಠಕ್ ವಾಸಿಸುತ್ತಿದ್ದ ದಲಿತರ ಕಾಲೋನಿಯಲ್ಲಿ ಜನರ ಪರಿಸ್ಥಿತಿ ಹೀನವಾಗಿತ್ತು. ಯಾರೂ ಅವರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಕೆಲಸಕ್ಕೆ ಕರೆಯುತ್ತಿರಲಿಲ್ಲ. ಶೌಚಾಲಯ ಸ್ವಚ್ಛಮಾಡುವುದು .. ಮಲ ಹೊರುವುದು ಇಂಥ ಕೆಲಸಕ್ಕೆ ಮಾತ್ರ ಕೆಳಜಾತಿಯವರು ಬೇಕಾಗುತ್ತಿದ್ದರು. ಬೇರೆ ಉದ್ಯೋಗ ಮಾಡುವುದೂ ಕೂಡಾ ಈ ಜನರಿಗೆ ಕನಸಿನ ಮಾತಾಗಿತ್ತು. ಇದನ್ನು ಕಂಡ ಡಾ.ಪಾಠಕ್, ಈ ಕೆಟ್ಟ ಪರಿಸ್ಥಿತಿಯಿಂದ ಇಲ್ಲಿನ ಜನರನ್ನು ಹೇಗಾದರೂ ಮುಕ್ತಿಗೊಳಿಸಿ, ಗಾಂಧೀಜಿ ಕನಸನ್ನು ನನಸು ಮಾಡಬೇಕೆಂದು ಪಣತೊಟ್ಟರು. ಮಲ ಹೊರುವ ಪದ್ಧತಿ ದೂರವಾದರೆ ತನ್ನಿಂದ ತಾನೇ ಜನರ ಪರಿಸ್ಥಿತಿ ಸುಧಾರಿಸುತ್ತೆ ಎಂದು ತಿಳಿದ ಪಾಟಕ್, ಸುಲಭ ಶೌಚಾಲಯ ವ್ಯವಸ್ಥೆ ಕಂಡುಹಿಡಿದರು.

image


ಈ ಸುಲಭ ತಂತ್ರಜ್ಞಾನ ಅತ್ಯಂತ ಕಡಿಮೆ ಖರ್ಚಿನದು. ಶೌಚಾಲಯದ ಪಕ್ಕದಲ್ಲಿ ಎರಡು ದೊಡ್ಡದಾದ ಹೊಂಡಗಳನ್ನು ಮಾಡಿಕೊಂಡು ಅದಕ್ಕೆ ಗಟ್ಟಿಯಾದ ಹಾಗೂ ಬಿಗುವಾದ ಮುಚ್ಚಳ ಮುಚ್ಚಬೇಕು. ಒಂದು ತುಂಬಿದ ಬಳಿಕ ಇನ್ನೋದು ಹೊಂಡಕ್ಕೆ ತ್ಯಾಜ್ಯ ಹೋಗುವ ಹಾಗೆ ನೋಡಿಕೊಳ್ಳಬೇಕು. ಹೀಗಾದಲ್ಲಿ ಎರಡು ವರ್ಷಗಳ ಬಳಿಕ ಈ ಮಾನವ ತ್ಯಾಜ್ಯ ಅತ್ಯುತ್ತಮ ಗೊಬ್ಬರ ಅಥವಾ ಜೈವಿಕ ಗ್ಯಾಸ್ ಆಗಿಯೂ ಬಳಸಬಹುದು ಎಂಬುದು ಡಾ.ಪಾಟಕ್ ಅವರ ಆವಿಷ್ಕಾರವಾಗಿತ್ತು.

ಮೊಟ್ಟ ಮೊದಲ ಬಾರಿಗೆ 1973 ರಲ್ಲಿ ಬಿಹಾರದ ಅರಾಹ್ ಎಂಬ ಪಟ್ಟಣ ಪಂಚಾಯತ್ ಕಾಂಪೌಂಡ್​ನೊಳಗೆ ಎರಡು ಸುಲಭ ಶೌಚಾಲಯ ನಿರ್ಮಿಸಲು 500 ರೂ. ನೀಡಿತ್ತು. ಇದು ಯಶಸ್ವಿಯಾದ ಬಳಿಕ ಬಿಹಾರ ಸರ್ಕಾರ ಕೂಡಾ ಸುಮಾರು 200 ಸುಲಭ ಶೌಚಾಲಯ ನಿರ್ಮಿಸಲು ಡಾ.ಪಾಟಕ್ ಅವರಿಗೆ ಹೇಳಿತು. ನಂತರದಲ್ಲಿ ಸುಲಭ ಶೌಚಾಲಯ ಬಿಹಾರ ಮಾತ್ರವಲ್ಲದೇ ಇಡೀ ದೇಶದಲ್ಲೇ ಸುದ್ದಿ ಮಾಡಿತು. ಬೇರೆ ಬೇರೆ ರಾಜ್ಯಗಳೂ ಸುಲಭ ಶೌಚಾಲಯ ನಿರ್ಮಿಸಲು ಮುಂದೆ ಬಂದವು. ಯುಎನ್ಡಿಪಿ (ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ) ಈ ಕುರಿತಂತೆ ವಿಸ್ಕ Ø ತ ವರದಿಯನ್ನೂ ಸಿದ್ಧಪಡಿಸಿತು. ಈ ಕುರಿತು 2002 ರಲ್ಲಿ ಜೊಹಾನ್ಸ್ಬರ್ಗ್ನಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲೂ ಚರ್ಚೆ ನಡೆಯಿತು. ಅಲ್ಲದೇ 2015 ರ ಅಂತ್ಯದೊಳಗೆ ಜಗತ್ತಿನಲ್ಲಿ 2.6 ಬಿಲಿಯನ್ ಶೌಚಾಲಯವನ್ನು ಒದಗಿಸುವ ನಿರ್ಣಯ ಕೈಗೊಳ್ಳಲಾಯ್ತು.

ಗಾಂಧೀಜಿ ಹಾಗೂ ಅಂಬೇಡ್ಕರರ ಮಾರ್ಗದಲ್ಲಿ ಹೆಜ್ಜೆಯೂರಿದ ಡಾ.ಪಾಟಕ್ ಅವರ ಶ್ರಮ ವ್ಯರ್ಥವಾಗಲಿಲ್ಲ. ಸುಲಭ ಶೌಚಾಲಯ ಸ್ಥಾಪನೆ ಬಳಿಕ ದಲಿತರ ಸ್ಥಿತಿಗತಿ ಕ್ರಮೇಣ ಬದಲಾಗತೊಡಗಿತು. ಈವರೆಗೆ ದೇಶದಲ್ಲಿ ಸುಮಾರು 1.3 ಮಿಲಿಯನ್ ಸುಲಭ ಶೌಚಾಲಯಗಳ ದೇಶದಲ್ಲಿ ನಿರ್ಮಾಣಗೊಂಡಿವೆ. ಅಲ್ಲದೇ ಇದರಿಂದ ವರ್ಷವೊಂದಕ್ಕೆ ಸುಮಾರು 49056 ಮಿಲಿಯನ್ ಲೀಟರ್ ನೀರು ಉಳಿತಾಯವಾಗುತ್ತೆ.

ಈ ಮಹಾನ್ ಸಾಧಕನಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಪದ್ಮಭೂಷಣ, ಅಂತಾರಾಷ್ಟ್ರೀಯ ಸೇಂಟ್ ಫ್ರಾನ್ಸಿಸ್ ಪ್ರಶಸ್ತಿ ಸೇರಿದಂತೆ 46 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೇ 8 ಫೆಲೋಶಿಪ್ಗಳನ್ನೂ ಕೂಡಾ ಇವರು ಪಡೆದಿದ್ದಾರೆ. ಡಾ.ಪಾಟಕ್ ಅವರ ಪ್ರಕಾರ ಜನರಿಗೆ ಶಿಕ್ಷಣ ಅನ್ನೋದು ಬಹಳ ಮುಖ್ಯವಾಗಿದೆ. ಶಿಕ್ಷಣ ಇದ್ದರೆ ಸಮಾನತೆ, ವೈಚಾರಿಕತೆ ಬೆಳೆಯುತ್ತದೆ. ಇಂದಿನ ದಿನಮಾನದಲ್ಲಿ ದೇಶದಲ್ಲಿ ಹಲವಾರು ಬದಲಾವಣೆಗಳಾಗಿವೆ. ಇದಕ್ಕೆ ಮೊದಲ ಮೆಟ್ಟಿಲಾಗಿ ಸುಲಭ ಶೌಚಾಲಯವೆಂಬ ಆವಿಷ್ಕಾರವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಈ ಸಾಮಾಜಿಕ ವಿಜ್ಞಾನಿಗೆ ಹ್ಯಾಟ್ಸಾಪ್.

ಇದನ್ನು ಓದಿ:

1. ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

2. ಆಸ್ಟ್ರೇಲಿಯಾದ ವರ್ಷದ ಉದ್ಯಮಿ ಭಾರತದ ಈ 'ಚಾಯ್​ವಾಲಿ'

3. ವಯಸ್ಸು ಜಸ್ಟ್​ 59- ಆದ್ರೆ 400 ಕಂಪನಿಗಳ ಮಾಲೀಕ..!