ಸೋಲಿಗೆ ಸೋಲದೇ ಯಶಸ್ವಿಯಾದ ಸಾಹಸಿ-ಮರಳಿ ಯತ್ನವ ಮಾಡಿ ಗೆದ್ದ ಉದ್ಯಮಿ

ಟೀಮ್ ವೈ.ಎಸ್

0

ಫ್ಯಾಷನ್ ಫ್ಯಾಷನ್ ಫ್ಯಾಷನ್...ಈಗ ಜಗತ್ತಿನೆಲ್ಲೆಡೆ ಫ್ಯಾಷನ್ ಟ್ರೆಂಡ್ ಜೋರಾಗಿದೆ. ಪ್ರತಿ ದಿನವೂ ಹೊಸ ಬಗೆಯ ಸ್ಟೈಲ್ ಕಮಾಲ್ ಮಾಡುತ್ತಿದೆ. ಹಾಗಾಗಿಯೇ ಫ್ಯಾಷನ್ ದುನಿಯಾದತ್ತ ಉದ್ಯಮಿಗಳು ಚಿತ್ತ ನೆಟ್ಟಿದ್ದಾರೆ. ಫ್ಯಾಷನ್ ಲೋಕಕ್ಕೆ ಬಂಡವಾಳವೂ ಜೋರಾಗಿಯೇ ಹರಿದು ಬರುತ್ತಿದೆ. ಈಗೇನಿದ್ರೂ ಆನ್‍ಲೈನ್ ಶಾಪಿಂಗ್ ಭರಾಟೆ. ಹಾಗಾಗಿ ಬರೀ ರೀಟೇಲ್ ಮಾತ್ರವಲ್ಲ ಹೋಲ್‍ಸೇಲ್ ಮಾರಾಟ ಕೂಡ ಆನ್‍ಲೈನ್‍ನಲ್ಲಿಯೇ ನಡೆಯುತ್ತಿದೆ. ಅದ್ರಲ್ಲೂ ಉಡುಪುಗಳ ಉದ್ಯಮಗ ಭಾರೀ ಯಶಸ್ಸು ಗಳಿಸ್ತಾ ಇದೆ. ಎಂಬ್ರಾಯಡರಿ ಮಟೀರಿಯಲ್ಸ್ ಡಾಟ್ ಕಾಮ್ ಕೂಡ ಜನಪ್ರಿಯತೆಯ ಉತ್ತುಂಗದಲ್ಲಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಜನಪ್ರಿಯತೆಯ ಸಾಲಿನಲ್ಲಿ ಅತಿ ವೇಗವಾಗಿ ಎಂಟ್ರಿ ಪಡೆದ ಸಂಸ್ಥೆ ಅದು. 2013ರಲ್ಲಿ ಶುರುವಾದ ಇ-ಕಾಮರ್ಸ್ ವಿಭಾಗ ಇದು. ಅಂದಿನಿಂದ ಇಂದಿನವರೆಗೂ ಎಂಬ್ರಾಯಡರಿ ಮಟೀರಿಯಲ್ಸ್ ಡಾಟ್ ಕಾಮ್ ಹಿಂದಿರುಗಿ ನೋಡಿಲ್ಲ. ನಷ್ಟ ಎಂಬ ಪದ ಸಂಸ್ಥೆಯ ಹತ್ತಿರಕ್ಕೂ ಸುಳಿದಿಲ್ಲ.

ಉಡುಪುಗಳ ಉದ್ಯಮಕ್ಕೆ ಸಾಥ್ ಕೊಡುತ್ತಿರುವ ಕಂಪನಿ ಇದು. ವೆರೈಟಿ ವೆರೈಟಿ ಮಣಿಗಳು, ಅಲಂಕಾರಿಕ ಹವಳಗಳು, ಹರಳುಗಳು ಹೀಗೆ ಕಸೂತಿಗೆ ಬೇಕಾದ ಎಲ್ಲ ಅಲಂಕಾರಿಕ ವಸ್ತುಗಳು ಇಎಂಸಿಯಲ್ಲಿ ಸಿಗುತ್ತವೆ. ಚಿಕ್ಕ ಬುಟಿಕ್‍ಗಳಂತೂ ಇಎಂಸಿಯ ಉತ್ಪನ್ನಗಳಿಗೆ ಮಾರುಹೋಗಿವೆ. ಅಷ್ಟೇ ಅಲ್ಲ ಇಎಂಸಿಯ ಉತ್ಪನ್ನಗಳು ವಿದೇಶಗಳಿಗೂ ರಫ್ತಾಗುತ್ತಿವೆ. ಅಂತರಾಷ್ಟ್ರೀಯ ಮಟ್ಟದ ಡಿಸೈನ್‍ಗಳು ಕೂಡ ಇಲ್ಲಿ ಲಭ್ಯವಿವೆ.

ಇಎಂಸಿಯ ಎಂಡಿ ವರುಣ್ ಕುಮಾರ್ ಮಹಿಳೆಯರ ಉಡುಪುಗಳ ಎಕ್ಸ್‍ಪೋರ್ಟ್ ಹೌಸ್ ಒಂದರಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಉತ್ಪಾದನಾ ವಿಭಾಗದ ಜವಾಬ್ಧಾರಿ ಅವರ ಮೇಲಿತ್ತು. ವೇಗವಾಗಿ ಹಾಗೂ ಯಾವುದೇ ಅಡೆತಡೆಯಿಲ್ಲದೆ ಪ್ರೊಡಕ್ಷನ್ ವಿಭಾಗ ಕೆಲಸ ಮಾಡುವಂತೆ ವರುಣ್ ಕುಮಾರ್ ನೋಡಿಕೊಳ್ಳುತ್ತಿದ್ದರು. ಒಮ್ಮೆ ಸಭೆ ಸೇರಿದ್ದಾಗ ವರುಣ್ ಅವರಿಗೆ ಸ್ವ ಉದ್ಯಮ ಆರಂಭಿಸುವ ಆಲೋಚನೆ ಬಂದಿತ್ತು.

ಇದಕ್ಕೂ ಮೊದಲೇ ಆಧುನಿಕ ಸ್ಟೈಲ್, ಲೇಟೆಸ್ಟ್ ಟ್ರೆಂಡ್‍ಗೆ ತಕ್ಕಂತೆ ಸಿದ್ಧ ಉಡುಪುಗಳ ಮಳಿಗೆಯೊಂದನ್ನು ವರುಣ್ ಆರಂಭಿಸಿಯೇಬಿಟ್ರು. ಸಿದ್ಧ ಉಡುಪುಗಳ ತಯಾರಿಕೆಯ ಉದ್ಯಮದಲ್ಲಿ ವರುಣ್ ಕುಮಾರ್ ಕೈಸುಟ್ಟುಕೊಂಡಿದ್ದು ನಿಜ. ಹೋಟೆಲ್ ಸಮವಸ್ತ್ರದಿಂದ ಹಿಡಿದು ಡಿಸೈನರ್ ಸ್ಟೋರ್‍ಗಳಿಗೆ ಕೂಡ ಧಿರಿಸುಗಳನ್ನು ವರುಣ್ ಪೂರೈಸುತ್ತಿದ್ದರು. ವಿದೇಶಗಳಿಗೂ ಬಟ್ಟೆಯನ್ನು ರಫ್ತು ಮಾಡುತ್ತಿದ್ದರು. ನೂರು ಮಂದಿ ನೌಕರರಿಗೆ ಸಂಬಳ, ಉಳಿದ ಖರ್ಚು, ವೆಚ್ಚ ಇವನ್ನೆಲ್ಲ ತೂಗಿಸಿಕೊಂಡು ಹೋಗುವುದು ವರುಣ್‍ಗೆ ಸಾಧ್ಯವಾಗಲಿಲ್ಲ. ಹಾಗಾಗಿ ಮಳಿಗೆಯನ್ನು ಮಾರಾಟ ಮಾಡಿದ ವರುಣ್ ಕುಮಾರ್ ಸಲಹೆಗಾರರಾಗಿ ಕೆಲಸ ಆರಂಭಿಸಿದ್ದರು.

2013ರ ಎಪ್ರಿಲ್‍ನಲ್ಲಿ ತಮ್ಮ ಹುಟ್ಟುಹಬ್ಬದ ದಿನದಂದೇ ವರುಣ್ ಕುಮಾರ್ ಕೆಲಸಕ್ಕೆ ಗುಡ್‍ಬೈ ಹೇಳಿದರು. ಅದೇ ವರ್ಷ ಜೂನ್‍ನಲ್ಲಿ ಏಕಾಂಗಿಯಾಗಿ ಒಬ್ಬಂಟಿಯಾಗಿಯೇ ಎಂಬ್ರಾಯಡರಿ ಮಟೀರಿಯಲ್ಸ್ ಡಾಟ್ ಕಾಮ್ ಆರಂಭಿಸಿದರು. ಬಳಿಕ ಅವರ ಪತ್ನಿ ಸಿಮಿ ಬಿಸ್ವಾಸ್ ಹಾಗೂ ಸ್ನೇಹಿತ ಭೂಪಿಂದರ್ ಸಿಂಗ್ ಕೂಡ ವರುಣ್‍ಗೆ ಸಾಥ್ ನೀಡಿದರು. ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲು ವರುಣ್ ಕುಮಾರ್ ಹೂಡಿಕೆದಾರರ ಹುಡುಕಾಟದಲ್ಲಿದ್ದಾರೆ. ಸದ್ಯ ಅವರ ಕಂಪನಿಗೆ ಒಂದು ಮಿಲಿಯನ್ ಡಾಲರ್ ಬಂಡವಾಳದ ಅವಶ್ಯಕತೆಯಿದೆ. ಎಸ್ಟಿ ಡಾಟ್ ಕಾಮ್, ದವಾಂದಾ ಡಾಟ್ ಕಾಮ್‍ನಂತಹ ಸಂಸ್ಥೆಗಳಿಂದ ಇಎಂಸಿಗೆ ಭಾರೀ ಪೈಪೋಟಿ ಎದುರಾಗುತ್ತಿದೆ.

ವರುಣ್ ಕುಮಾರ್ ಒಳ್ಳೆಯ ಗುಣಮಟ್ಟದ ಹಾಗೂ ಲೇಟೆಸ್ಟ್ ಸ್ಟೈಲ್‍ಗೆ ತಕ್ಕಂಥ ವಸ್ತುಗಳನ್ನೇ ಗ್ರಾಹಕರಿಗೆ ಒದಗಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಆಭರಣಗಳ ಲೇಟೆಸ್ಟ್ ಟ್ರೆಂಡ್ ಬಗ್ಗೆ ಅವರು ತಿಳಿದುಕೊಳ್ತಾರೆ. ಅದಕ್ಕೆ ಅನುಗುಣವಾಗಿ ಮೆಟೀರಿಯಲ್‍ಗಳನ್ನು ಗ್ರಾಹಕರಿಗೆ ಪೂರೈಸುತ್ತಾರೆ. ವಿಶೇಷ ಅಂದರೆ ವರುಣ್ ಅವರ ಇಎಂಸಿಯಿಂದ ಜಪಾನ್, ಚೀನಾ, ಜೆಕ್ ಗಣರಾಜ್ಯದ ಕಾರ್ಖಾನೆಗಳಿಗೆ ಕೂಡ ಅಲಂಕಾರಿಕ ವಸ್ತುಗಳು ಪೂರೈಕೆಯಾಗುತ್ತವೆ. ಭಾರತದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಕ್ಯಾಶ್ ಆನ್ ಡೆಲಿವರಿ ಮೂಲಕ ಗ್ರಾಹಕರು ಖರೀದಿ ಮಾಡಬಹುದು. ಒಮ್ಮೆ ಸ್ವಂತ ಉದ್ದಿಮೆ ಆರಂಭಿಸಿ ಯಶಸ್ವಿಯಾಗದೇ ಇದ್ದರೂ ಎದೆಗುಂದದೆ, ಹತಾಶರಾಗದೇ ಮರಳಿ ಯತ್ನವ ಮಾಡಿ ಯಶಸ್ವಿಯಾದ ವರುಣ್ ಕುಮಾರ್ ಯುವಜನತೆಗೆ ಮಾದರಿಯಾಗುತ್ತಾರೆ.

Related Stories