ಎರಡು ವರ್ಷಗಳಲ್ಲಿ ಬದುಕನ್ನೇ ಬದಲಾಯಿಸಿದ ಉದ್ಯಮ

ಟೀಮ್​​ ವೈ.ಎಸ್​​. ಕನ್ನಡ

ಎರಡು ವರ್ಷಗಳಲ್ಲಿ ಬದುಕನ್ನೇ ಬದಲಾಯಿಸಿದ ಉದ್ಯಮ

Tuesday December 01, 2015,

4 min Read

ಉದ್ಯಮಿ ಪ್ರದೀಪ್ ಗೋಯಲ್ ತಮ್ಮ ಪಯಣವನ್ನು `ಯುವರ್‍ಸ್ಟೋರಿ'ಯಲ್ಲಿ ಬಿಚ್ಚಿಟ್ಟಿದ್ದಾರೆ. ಬ್ಯುಸಿನೆಸ್ ಜರ್ನಿಯ ಆರಂಭದಲ್ಲೇ ಅವರು ಎಡವಿದ್ದು ಯಾಕೆ? ಸುಧಾರಿಸಿಕೊಂಡು ಮುನ್ನಡೆದಿದ್ದು ಹೇಗೆ? ಬದುಕಿನ ಪಾಠ ಕಲಿತಿದ್ದು ಯಾರಿಂದ? ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಅವರ ಅನುಭವಗಳ ಬಗ್ಗೆ ಅವರೇ ಬರೆದ ಲೇಖನ ಇಲ್ಲಿದೆ ನೋಡಿ.

ಸರಿಯಾಗಿ ಎರಡು ವರ್ಷಗಳ ಹಿಂದಿನ ಮಾತು, ನಾನು ನನ್ನ ಮೊದಲ ಉದ್ಯಮದಿಂದ್ಲೇ ಶ್ರೀಮಂತನಾಗುವ ಕನಸು ಕಂಡಿದ್ದೆ. ಅರೆ ಬೆಂದ ಉತ್ಪನ್ನಗಳ ಮೂಲಕ ನಾವು ಅರ್ಹ ಗ್ರಾಹಕರನ್ನು ತಲುಪುತ್ತಿದ್ದೇವೆಂಬ ಭಾವನೆ ನನ್ನಲ್ಲಿತ್ತು. ಆದ್ರೆ ಮೊದಲ ಸಂಸ್ಥೆ ಸೋಲಿನ ಹಾದಿ ಹಿಡಿದಿತ್ತು. ಆಗ ಅದನ್ನು ಕೈಬಿಟ್ಟು ನಾನು ಎರಡನೇ ಉದ್ಯಮದತ್ತ ಚಿತ್ತ ಹರಿಸಿದ್ದೆ. ಉದ್ಯಮದ ಹೊಸ ಜಗತ್ತಿನ ಬಾಗಿಲು ನನಗಾಗಿ ತೆರೆದುಕೊಂಡಿತ್ತು. ಸಹ-ಸಂಸ್ಥಾಪಕರು ಹಾಗೂ ಸಲಹೆಗಾರರಿಂದ ನಾನು ಪಾಠ ಕಲಿತಿದ್ದೆ. ಸಂಸ್ಥೆಗೆ ಹೊರಗಿನಿಂದ ಬಂಡವಾಳ ಸಂಗ್ರಹಿಸಲು ನಾವು ಮುಂದಾಗಿದ್ವಿ. ಜೊತೆಗೆ ನಾನು ಕೂಡ ಬೇರೆ ಬೇರೆ ಕಂಪನಿಗಳಲ್ಲಿ ಫ್ರೀಲಾನ್ಸರ್ ಮಾರ್ಕೆಟರ್ ಆಗಿ ಕೆಲಸ ಮಾಡಲಾರಂಭಿಸಿದೆ. ಈ ಜರ್ನಿ ನನ್ನ ಜೀವನ ಶೈಲಿ ಹಾಗೂ ಚಿಂತನ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಿತ್ತು.

image


`ವೈಫಲ್ಯ' ಬದುಕಿನ ಒಂದು ಭಾಗ...

ಸೋಲಿನಿಂದ ಪಾಠ ಕಲಿತು, ಆ ಮೂಲಕ ನಮ್ಮನ್ನು ನಾವು ಸುಧಾರಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ನನ್ನ ಮೊದಲ ಉದ್ಯಮದ ಸೋಲಿನ ಬಳಿಕ ನಾನು ಪ್ರಯತ್ನವನ್ನೇನೂ ಕೈಬಿಡಲಿಲ್ಲ. ಸಹಸಂಸ್ಥಾಪಕನಾಗಿ ಮತ್ತೊಂದು ಸಂಸ್ಥೆಯನ್ನು ಸೇರಿಕೊಂಡೆ. ಉತ್ಪನ್ನ ಸಿದ್ಧವಾಗಿದ್ದಿದ್ರಿಂದ ಮಾಲೀಕತ್ವ ಹಾಗೂ ಮಾರ್ಕೆಟಿಂಗ್ ಬಗ್ಗೆ ಗಮನಹರಿಸಿದೆ. ಕೆಲವೇ ತಿಂಗಳುಗಳಲ್ಲಿ ಹೂಡಿಕೆಗೂ ನಾವು ಸಿದ್ಧವಾಗಿದ್ದೆವು. ಅದ್ಭುತವಾದ ಸಲಹೆಗಾರರು ಹಾಗೂ ಬಂಡವಾಳಗಾರರು ನಮ್ಮೊಂದಿಗಿದ್ದರು. ನಮ್ಮ ಉತ್ಪನ್ನ, ತಂಡವನ್ನೆಲ್ಲ ನೋಡಿ ಹೂಡಿಕೆದಾರರು ಪ್ರಭಾವಿತರಾಗಿದ್ರು. ಆದ್ರೂ ನಮ್ಮಿಂದ ನಿಧಿ ಸಂಗ್ರಹ ಸಾಧ್ಯವಾಗಲಿಲ್ಲ. ಯಾಕಂದ್ರೆ ಹೂಡಿಕೆದಾರರ ಇಚ್ಛೆಯಂತೆ ಉತ್ಪನ್ನದಲ್ಲಿ ಬದಲಾವಣೆ ಮಾಡಲು ನಾವು ಸಿದ್ಧರಿರಲಿಲ್ಲ. ಹೂಡಿಕೆ ಮಾಡುವ ಹಣ ಅವರದ್ದಾಗಿದ್ರಿಂದ ಹೂಡಿಕೆದಾರರ ದೃಷ್ಟಿಕೋನ ಸರಿಯಾಗಿತ್ತು, ಉತ್ಪನ್ನ ನಮ್ಮದೇ ಆಗಿದ್ರಿಂದ ನಮ್ಮ ದೃಷ್ಟಿಕೋನವೂ ತಪ್ಪಾಗಿರಲಿಲ್ಲ. ಪರಿಣಾಮ ಒಪ್ಪಂದ ಮುರಿದುಬಿದ್ದಿತ್ತು.

ಹಾಗಂತ ನಾವೇನು ವಿಷಾಧಪಡಲಿಲ್ಲ, ನಮ್ಮಲ್ಲಿ ಉತ್ಸಾಹವೇನೂ ಕಡಿಮೆಯಾಗಲಿಲ್ಲ. ನಮ್ಮ ಪ್ರಕಾರ ಉದ್ಯಮ ಯಶಸ್ವಿಯಾಗಿತ್ತು, ಆದ್ರೆ ಜಗತ್ತಿನ ದೃಷ್ಟಿಯಲ್ಲಿ ಅದೊಂದು ಸೋಲು. ಶಿಕ್ಷಣದಲ್ಲಿ ನಾವು ತರಲು ಹೊರಟಿರುವ ಬದಲಾವಣೆ ಪರಿಣಾಮಕಾರಿಯಲ್ಲ ಅನ್ನೋದು ಕೊನೆಗೂ ನಮಗೆ ಅರ್ಥವಾಗಿತ್ತು. ಅಂಕಗಳು ಮತ್ತು ರ್ಯಾಂಕ್‍ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಮತ್ತೊಂದು ಕಂಪನಿಯಂತಾಗಲು ನಮಗೆ ಇಷ್ಟವಿರಲಿಲ್ಲ.

ಉದ್ಯಮ ಮತ್ತು ಹಣ...

ವಾಣಿಜ್ಯೋದ್ಯಮ ಬದುಕಿನ ಒಂದು ಮಾರ್ಗ. ನೀವು ಉದ್ಯಮಿಯಾಗಿರಲಿ ಅಥವಾ ಉದ್ಯೋಗಿಯಾಗಿರ್ಲಿ, ನಿಮ್ಮದೇ ಆದ ನಿಯಮಗಳ ಅನುಸಾರ ಜೀವನ ನಡೆಸುವುದು ಅನಿವಾರ್ಯ. ನೀವು ಕಂಪನಿಯ ಸಂಸ್ಥಾಪಕರಾಗಿದ್ದು, ಹೂಡಿಕೆದಾರರ ಮಂಡಳಿ ನಿಮಗೆ ನಿಯಮಗಳನ್ನು ವಿಧಿಸಿದರೆ, ನಿಮ್ಮ ಉತ್ಸಾಹ ಕುಗ್ಗಿ ಹೋಗುತ್ತೆ. ತಿಂಗಳ ಸಂಬಳ ಕೈತಪ್ಪುವ ಭಯದಲ್ಲಿ ಕೆಲಸ ಮಾಡುವ ನೌಕರನಿಗೂ ನಿಮಗೂ ಆಗ ಯಾವುದೇ ವ್ಯತ್ಯಾಸವಿರುವುದಿಲ್ಲ. ನಿಮ್ಮ ಕನಸಿನ ಸಂಸ್ಥೆಯ ಉದ್ದೇಶಕ್ಕಿಂತ ಹಣವೇ ಮುಖ್ಯ ಎನಿಸಿಕೊಂಡ್ರೂ ನೀವಿನ್ನೂ ರೇಸ್‍ನಲ್ಲಿರುತ್ತೀರಾ. ಕಾರ್ಪೊರೇಟ್ ಉದ್ಯೋಗದಲ್ಲಿನ ರೇಸ್ ಪ್ರಮೋಷನ್ ಹಾಗೂ ವೇತನದಲ್ಲಿನ ಹೆಚ್ಚಳಕ್ಕಾಗಿ ನಡೆದ್ರೆ, ಉದ್ಯಮದಲ್ಲಿನ ರೇಸ್ ಹೂಡಿಕೆಗಾಗಿ ನಡೆಯುತ್ತೆ. ಅಂದ್ಮೇಲೆ ಜೀವನ ಶೈಲಿಯಲ್ಲಿ ಏನಿದೆ ಬದಲಾವಣೆ? ಹಣ ಅನ್ನೋದು ಜೀವನ ಹಾಗೂ ಉದ್ಯಮದ ಒಂದು ಭಾಗ. ಆದ್ರೆ ನೀವು ಆ ರೇಸ್‍ನಿಂದ ಹೊರಬೀಳಬೇಕಷ್ಟೆ. ನಾನು ಆ ರೇಸ್‍ನ ಭಾಗವಾಗಬಾರದೆಂದು ನಿರ್ಧರಿಸಿದ್ದೇನೆ. ಉದ್ಯಮಗಳ ಜೊತೆ ಕೈಜೋಡಿಸುವ ಮೂಲಕ ಸಂತೋಷವಾಗಿ ಬದುಕುತ್ತಿದ್ದೇನೆ.

ಕೊಡುವ ಸಂಸ್ಕೃತಿ ಅಳವಡಿಸಿಕೊಳ್ಳುವಿಕೆ...

"ಯಾವುದೇ ನಿರೀಕ್ಷೆಯಿಲ್ಲದೆ ನೀವು ಜಗತ್ತಿಗೆ ಏನಾದ್ರೂ ಕೊಡುಗೆ ನೀಡಬೇಕು, ಆಗ ವಿಶ್ವವೇ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತದೆ'' ಅನ್ನೋದು ನಾನು ಸಲಹೆಗಾರರಿಂದ ಕಲಿತ ಪಾಠ. `ಅರವಿಂದ್ ಐಕೇರ್' , `ಸರ್ವಿಸ್ ಸ್ಪೇಸ್'ನಂತಹ ಸಂಸ್ಥೆಗಳು ಕೂಡ ಮಾಡುತ್ತಿರುವುದು ಇದನ್ನೇ. ಈ ನಿಟ್ಟಿನಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿದ್ದೇನೆ. `ಅನ್‍ಕರ್ಮಾ ಡಾಟ್ ಇನ್'ನ ಪ್ರಾಜೆಕ್ಟ್ ಭಾಗವಾಗಿದ್ದೇನೆ. ವಿಶ್ವದ ಆಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ನಾವು ವಿಷಯ ಬರೆದುಕೊಡುವ ಅಂದ್ರೆ ಕಂಟೆಂಟ್ ರೈಟಿಂಗ್ ಮಾಡಿಕೊಡುತ್ತಿದ್ದೇವೆ.

image


ಆರೋಗ್ಯಕರ ಆಹಾರ, ನಿದ್ದೆ ಮತ್ತು ಧ್ಯಾನ...

ಊಟ ಹಾಗೂ ನಿದ್ದೆಯ ಬಗ್ಗೆ ನಾನ್ಯಾವತ್ತೂ ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ನಾನು ಭೋಜನ ಪ್ರಿಯ, ನಿದ್ದೆ ಮಾಡೋದು ಅಂದ್ರೆ ನಂಗಿಷ್ಟ. ಆಗಾಗ ಧ್ಯಾನ ಮಾಡುವುದೂ ಉಂಟು. ಆದ್ರೆ ಅದನ್ನೆಲ್ಲ ಈಗ ವ್ಯವಸ್ಥಿತವಾಗಿ ಮಾಡುತ್ತಿದ್ದೇನೆ. ಜನರೇ ಈಗ ಫಾಸ್ಟ್ ಫುಡ್, ಸಕ್ಕರೆ ಹಾಗೂ ಪ್ಯಾಕ್ ಮಾಡಿದ ಆಹಾರಗಳಿಂದ ದೂರ ಸರಿಯುತ್ತಿದ್ದಾರೆ. ಸಾವಯವ ಆಹಾರ, ನೈಸರ್ಗಿಕ ಸಿಹಿಯಾದ ಬೆಲ್ಲ , ಜೇನುತುಪ್ಪ ಮತ್ತು ತಾಜಾ ತಿನಿಸುಗಳತ್ತ ಆಕರ್ಷಿತರಾಗುತ್ತಿದ್ದಾರೆ. ನನಗೆ ಬೆಳಗ್ಗೆ ಬೇಗ ಎದ್ದು ಅಭ್ಯಾಸವೇ ಇರಲಿಲ್ಲ. ಆದ್ರೆ ಉದ್ಯಮ ನನ್ನ ಜೀವನ ಶೈಲಿಯನ್ನು ಬದಲಾಯಿಸಿದೆ. ಈಗ ನಾನು ರಾತ್ರಿ 9 ಗಂಟೆಗೆ ಮಲಗಿ ಬೆಳಗ್ಗೆ ಬೇಗ ಏಳುತ್ತೇನೆ. ಇದರ ಜೊತೆಜೊತೆಗೆ ನಿಯಮಿತವಾಗಿ ಧ್ಯಾನ ಮಾಡಲು ಕೂಡ ಪ್ರಯತ್ನಿಸುತ್ತಿದ್ದೇನೆ. ಸರಿಯಾದ ಆಹಾರ, ನಿದ್ದೆ ಮತ್ತು ಧ್ಯಾನ ನಿಮ್ಮನ್ನು ಆರೋಗ್ಯವಂತರನ್ನಾಗಿ ಮತ್ತು ಚುರುಕಾಗಿರಿಸುತ್ತದೆ.

ಮಗನಿಗೆ ಶಾಲೆ ರಹಿತ ಕಲಿಕೆ ...

ಸಾಂಪ್ರದಾಯಿಕ ಶಾಲೆಗೆ ಮಕ್ಕಳನ್ನು ಕಳುಹಿಸದೇ ಇರುವವರನ್ನು ಭೇಟಿಯಾದಾಗಿನಿಂದ ಶಿಕ್ಷಣದ ಬಗ್ಗೆ ಹೊಸ ಆಯಾಮ ನನ್ನಲ್ಲಿ ತೆರೆದುಕೊಂಡಿದೆ. ಪುಸ್ತಕಗಳನ್ನು ಓದುವ ಒತ್ತಡ ಹಾಗೂ ಪರೀಕ್ಷೆಯ ಭಯವಿಲ್ಲದೆ ಮಕ್ಕಳು ತಮ್ಮನ್ನು ಅನ್ವೇಷಿಸಿಕೊಳ್ಳುವಂತಹ ಶಿಕ್ಷಣದ ಕನಸು ನನ್ನದು. ದಕ್ಷಿಣ ಭಾರತ ಹಾಗೂ ವಿದೇಶಿ ಪೋಷಕರಿಗೆ ಶಾಲೆ ರಹಿತ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವಿದೆ. ಅನ್‍ಸ್ಕೂಲಿಂಗ್ ಅನ್ನೋದು ಒಂದು ಶಿಕ್ಷಣ ವಿಧಾನ ಹಾಗೂ ತತ್ವಶಾಸ್ತ್ರ. ಇಲ್ಲಿ ಚಟುವಟಿಕೆಗಳ ಮೂಲಕವೇ ಮಕ್ಕಳು ಪಾಠ ಕಲಿಯುತ್ತಾರೆ. ಚಂಡೀಗಢದಲ್ಲಿ `ಕೋವೇದಾ' ಹೆಸರಿನ ಇಂಥದ್ದೇ ಸಂಸ್ಥೆಯಿದೆ. ಅನ್‍ಸ್ಕೂಲಿಂಗ್ ಸಮುದಾಯದ ಪೋಷಕರ ಜೊತೆ ನಾನೂ ಕೈಜೋಡಿಸಿರುವುದು ಖುಷಿ ತಂದಿದೆ.

ಶೇ.40ರಷ್ಟು ಸಮಯ ಹಣಗಳಿಕೆಗೆ, ಶೇ.60ರಷ್ಟು ಸಮಯ ಸ್ವಯಂ-ಅನ್ವೇಷಣೆಗೆ...

ಉದ್ಯಮದಲ್ಲಿ ಸೋಲು ಅನುಭವಿಸದೇ ಇದ್ದಿದ್ರೆ ಈ ಪಾಠಗಳನ್ನು ನಾನು ಕಲಿಯುತ್ತಿರಲಿಲ್ಲ. ಹಣದ ಬೇಟೆಗೆ ಹೆಚ್ಚು ಸಮಯ ಮೀಸಲಿಡದೆ ಸ್ವಯಂ ಬೆಳವಣಿಗೆಯತ್ತ ಗಮನಹರಿಸುವಂತೆ ಮೆಂಟರ್‍ಗಳು ನನಗೆ ಸಲಹೆ ನೀಡಿದ್ದಾರೆ. ಅದು ನನ್ನ ಪಾಲಿಗೆ ವರ್ಕೌಟ್ ಆಗಿದೆ. ಬದುಕಲು ಬೇಕಾದಷ್ಟು ಹಣ ಗಳಿಸುತ್ತೇನೆ, ಉಳಿದ ಸಮಯವನ್ನು ಓದಲು, ಬರೆಯಲು, ಕಲಿಯಲು ಮೀಸಲಾಗಿಡುತ್ತೇನೆ.

ಮಿನಿ ನಿವೃತ್ತಿ...

ಶ್ರೀಮಂತ ಎನಿಸಿಕೊಂಡು ಸಾಯುವ ಸಲುವಾಗಿ ಹಣ ಗಳಿಸುವುದು ನನಗಿಷ್ಟವಿಲ್ಲ. ನಿಮ್ಮ ಜೀವನಕ್ಕೆ ಬೇಕಾದಷ್ಟು ಹಣ ಗಳಿಸಿದ ಮೇಲೆ ಅದನ್ನು ನಿಲ್ಲಿಸಿಬಿಡಬೇಕು. ಜೀವನ ಪೂರ್ತಿ ಯಂತ್ರದಂತೆ ಕೆಲಸ ಮಾಡಿದ್ರೆ ಲೈಫ್ ಎಂಜಾಯ್ ಮಾಡುವುದು ಅಸಾಧ್ಯ. ನಿವೃತ್ತಿಗಾಗಿ ಹಣ ಉಳಿಸುವ ಸಲುವಾಗಿ ಶೋಚನೀಯ ಬದುಕು ನಡೆಸುವುದು, ವೃದ್ಧಾಪ್ಯಕ್ಕಾಗಿ ಲೈಂಗಿಕತೆಯನ್ನು ಉಳಿಸಿಕೊಂಡಂತೆ. ಹಾಗಾಗಿ ಜೀವನದುದ್ದಕ್ಕೂ ಒಂದೆರಡು ಬಾರಿಯಾದ್ರೂ ಮಿನಿ ನಿವೃತ್ತಿ ಪಡೆಯಬೇಕು. ನಿಮ್ಮ ಬದುಕಿನ ಅವಸ್ಮರಣೀಯ ಘಟನೆಗಳು 10ಕ್ಕಿಂತಲೂ ಕಡಿಮೆ ಎಂದಾದಲ್ಲಿ ನೀವು ನಿಮ್ಮ ಬದುಕಿನ ಉದ್ದೇಶವನ್ನು ಪ್ರಶ್ನಿಸಿಕೊಳ್ಳಬೇಕು. ಆಗ ವರ್ಷಕ್ಕೊಮ್ಮೆಯಾದ್ರೂ ಮಿನಿ ನಿವೃತ್ತಿ ತೆಗೆದುಕೊಳ್ಳಬೇಕೆಂದು ನಿಮಗೇ ಅನಿಸುತ್ತೆ. ನಿವೃತ್ತಿ ಅಂದ್ರೆ ನೀವು ಕೆಲಸ ಮಾಡಬಾರದೆಂದಲ್ಲ, ನಿಮಗೆ ಬೇಕೆನಿಸಿದಾಗ ಮಾತ್ರ ಕೆಲಸ ಮಾಡಬಹುದು ಎಂದರ್ಥ.

ಪ್ರಜ್ಞಾಪೂರ್ವಕ ಬದುಕಿನ ರೀತಿ...

ಅಂತಿಮವಾಗಿ ನಾವು ಕಲಿಯಬೇಕಾದ ಪಾಠ ಅಂದ್ರೆ ಪ್ರಜ್ಞಾಪೂರ್ವಕ ಬದುಕಿನ ರೀತಿ. ಜವಾಬ್ಧಾರಿಯ ಪ್ರಜ್ಞೆ ಇಟ್ಟುಕೊಂಡು ನೀವು ಏನನ್ನಾದರೂ ಮಾಡಬಹುದು. ಆರೋಗ್ಯಕರ ಆಹಾರ ಸೇವಿಸಿದ್ರೆ, ಅತ್ಯಂತ ಕಡಿಮೆ ತ್ಯಾಜ್ಯ ಉತ್ಪಾದಿಸಿದ್ರೆ, ನಿಮ್ಮ ಸುತ್ತಮುತ್ತಲಿನವರ ಬಗ್ಗೆ ಕಾಳಜಿ ತೆಗೆದುಕೊಂಡ್ರೆ ಯಾರೂ ನಿಮ್ಮನ್ನು ಟೀಕಿಸುವುದಿಲ್ಲ. ಇನ್ನಷ್ಟು ಜಾಗೃತರಾದ್ರೆ ನೀವು ನಿಮ್ಮ ಉದ್ಯಮ ಹಾಗೂ ವೈಯಕ್ತಿಕ ಬದುಕಿನಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬಹುದು. ನೀವು ನಿಮ್ಮ ಸುತ್ತ ಇರುವವರನ್ನು ಪ್ರೀತಿಸಿದ್ರೆ ಅವರು ಕೂಡ ನಿಮ್ಮನ್ನು ಪ್ರೀತಿಸುತ್ತಾರೆ.

ಲೇಖಕರು: ಪ್ರದೀಪ್​​ ಗೊಯೆಲ್​​​

ಅನುವಾದಕರು: ಭಾರತಿ ಭಟ್​​​​