ಈ ಶತಮಾನದ ಮಾದರಿ ಮಹಿಳೆಯರ ಬುಲೆಟ್ ಸವಾರಿ

ಪಿ.ಅಭಿನಾಷ್​​

0

ಹೆಣ್ಣುಮಕ್ಕಳು ಟೂವೀಲ್ಹರ್ ಓಡಿಸ್ತಾರೆ ಅಂದ್ರೆ ಅದು ಸಾಮಾನ್ಯದ ಸಂಗತಿ ಬಿಡಿ. ಆದ್ರೆ, ರಾಯಲ್ ಎನ್‍ಫೀಲ್ಡ್ ಏರಿ ಸಾವಿರಾರು ಕಿಲೋಮೀಟರ್​​​ ಸಂಚರಿಸ್ತಾರೆ ಅಂದ್ರೆ ಅದಕ್ಕೊಂದು ಶಹಬ್ಬಾಸ್‍ಗಿರಿ ಧಕ್ಕಲೇ ಬೇಕು. ಹೌದು, ಗೇರ್ ಗಾಡಿಗಳನ್ನ ಓಡಿಸೋದು ಇಂದಿಗೂ ಹೆಣ್ಣುಮಕ್ಕಳಿಗೆ ಸವಾಲಿನ ಸಂಗತಿ. ಹೆಚ್ಚು ಸಿಸಿ ಗಾಡಿಗಳನ್ನ ಮೈಂಟೇನ್ ಮಾಡೋದು ಅಷ್ಟೇ ಕಷ್ಟ. ಕ್ಲಿಷ್ಟಕರ ಸಂದರ್ಭಗಳಲ್ಲಿ ಗಾಡಿಯನ್ನ ಎತ್ತಬೇಕು, ಗಜಗಾತ್ರದ ಬುಲೆಟ್‍ಗೆ ಡಬ್ಬಲ್ ಸ್ಟ್ಯಾಂಡ್ ಹಾಕಬೇಕು , ಹೀಗೆ ಬುಲೆಟ್ ಸವಾರಿಯಲ್ಲಿ ಹಲವು ಸವಾಲುಗಳೂ ಇರತ್ವೆ. ಈ ಎಲ್ಲಾ ಸವಾಲುಗಳನ್ನ ಮೆಟ್ಟಿ ನಿಂತು, ಬುಲೆಟ್‍ನಲ್ಲೇ ಸಾಗ್ತಾರೆ 'ಹಾಪ್ ಆನ್ ಗರ್ಲ್ಸ್​​ '.

'ಹಾಪ್ ಆನ್ ಗರ್ಲ್ಸ್​​​ ' ಕ್ಲಬ್ ಆರಂಭವಾಗಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ಈ ಕ್ಲಬ್‍ನಲ್ಲಿ ಐವತ್ತಕ್ಕೂ ಹೆಚ್ಚು ಸದಸ್ಯರಿದ್ದಾರೆ. ಹೆಣ್ಣುಮಕ್ಕಳಿಗೆ ಬುಲೆಟ್ ಓಡಿಸೋದನ್ನ ಕಲಿಸಬೇಕು. ಅದ್ರಲ್ಲೂ ರಾಯಲ್ ಎನ್‍ಫೀಲ್ಡ್ ಬಗ್ಗೆ ತರಬೇತಿ ನೀಡಬೇಕು ಅಂತಾ ಈ ಕ್ಲಬ್ ಆರಂಭವಾಯ್ತು. ಬಿಂದು ರೆಡ್ಡಿ ಈ ಕ್ಲಬ್‍ನ ಸ್ಫಾಪಕಿ. ಅಂದು ಕೇವಲ ರೈಡಿಂಗ್ ಕ್ಲಾಸ್‍ಗಾಗಿ ಆರಂಭವಾದ ಕ್ಲಬ್ ಇಂದು ಅದೆಷ್ಟೋ ಹುಡುಗಿಯರ ಬುಲೆಟ್ ಓಡಿಸುವ ಕನಸನ್ನ ನನಸು ಮಾಡಿದೆ. ವಾಟ್ಸ್​​ಆ್ಯಪ್ ಹಾಗೂ ಫೇಸ್‍ಬುಕ್‍ನಲ್ಲಿ ಆಕ್ಟಿವ್ ಆಗಿರುವ ಈ ತಂಡ, ಆಗೊಮ್ಮೆ ಈಗೊಮ್ಮೆ ಜಾಲಿ ರೈಡ್ಸ್ ಹೋಗ್ತಾರೆ. ತಿಂಗಳಿಗೊಮ್ಮೆಯೋ ಅಥವಾ ಬೇಕೆನಿಸಿದಾಗ ಹುಡಗಿಯರು ರಾಯಲ್ ಎನ್‍ಫೀಲ್ಡ್ ಏರಿ ದೂರ ಸಾಗ್ತಾರೆ.

ಗೋವಾ ಪಯಣ

ಕಳೆದ ತಿಂಗಳು ಇದೇ ಕ್ಲಬ್‍ನ ಮೂವರು ಹಡುಗಿಯರು ಗೋವಾದಲ್ಲಿ ನಡೆದ ಶೋ ಒಂದಕ್ಕಾಗಿ ಬೆಂಗಳೂರಿನಿಂದ ಗೋವಾದ ವರೆಗೂ ಬೈಕ್‍ನಲ್ಲೇ ಸಾಗಿದ್ದಾರೆ. ಬೆಳಗ್ಗೆ ಹೊರಟ ಮೂವರ ತಂಡ ರಾತ್ರ್ರಿ ಹೊತ್ತಿಗೆ ಗೋವಾ ತಲುಪಿದ್ದರು. ಮೂರು ದಿನಗಳ ಕಾಲ ಶೋನಲ್ಲಿ ಪಾಲ್ಗೊಂಡು ಹಿಂದಿರುಗಿದ್ದಾರೆ. ಬರೋಬ್ಬರಿ 1300 ಕಿಮೀ ಸುತ್ತಾಡಿ ಸೈ ಎನಿಸಿಕೊಂಡಿದ್ದಾರೆ. ನಂದಿಹಿಲ್ಸ್, ಮೈಸೂರು ರಸ್ತೆ, ಬನ್ನೇರುಘಟ್ಟ, ಸಕಲೇಶಪುರ, ಕೂರ್ಗ್, ಚಿಕ್ಕಮಗಳೂರು, ಬಾಬ ಬುಡನ್‍ಗಿರಿ ಬಿಡದಿ ಹೀಗೆ ಹತಾರು ಮಂದಿ ಒಟ್ಟಿಗೆ ಸೇರಿ ಜಾಲಿ ರೈಡ್ ಹೋಗ್ತಾರೆ. ಸಂಡೇ ಬ್ರೇಕ್‍ಫಾಸ್ಟ್​​​ಗಾಗಿ, ಅಥವಾ ಕೆಲವೊಮ್ಮೆ ಸಂಜೆಯ ಸ್ನ್ಯಾಕ್ಸ್​​​ಗಾಗಿ ರಾಯಲ್ ಎನ್​ಫೀಲ್ಡ್ ಹತ್ತಿ ಹೊರಡ್ತಾರೆ.

ನಮ್ಮನ್ನು ನೋಡಿ, ಶಿಳ್ಳೆ ಚಪ್ಪಾಳೆ ಹೊಡೆದದ್ದೂ ಇದೆ...!

ಬೆಂಗಳೂರಿಗರಿಗೆ ಹುಡುಗೊರು ಬೈಕ್ ಓಡಿಸೋದು ಕಾಮನ್ ಇರಬಹುದು. ಆದ್ರೆ, ನಗರದಿಂದ ಹೊರಹೋಗ್ತಿದ್ದಂತೆ, ಜನ ಬುಲೆಟ್ ಓಡಿಸುವ ಹುಡುಯರನ್ನ ಬೆಕ್ಕಸ ಬೆರಗಾಗಿ ನೋಡ್ತಾರೆ. ಹೆಣ್ಣುಮಕ್ಕಳೂ ಹೀಗೆ, ಟೀಶರ್ಟ್, ಜೀನ್ಸ್ ಧರಿಸಿ, ಜುಮ್ ಅಂತಾ ಹೊರಟಾಗ ಹಲವು ಬಗೆಯ ಪ್ರತಿಕ್ರಿಯೆ ಲಭ್ಯವಾಗಿದೆ. 'ನಾವು ಬೈಕ್‍ನಲ್ಲಿ ಸಾಗ್ತಾ ಇದ್ರೆ, ನಮ್ಮನ್ನ ನೋಡಿದವರು ಶಿಳ್ಳೆ ಚಪ್ಪಾಳೆ ಹಾಕ್ತಾರೆ, ಆಶ್ಚರ್ಯದಿಂದ ಬಿಟ್ಟಕಣ್ಣು ಬಿಟ್ಟಂತೆ ನೋಡ್ತಿರ್ತಾರೆ. ಜೊತೆಗೆ ಪ್ರೋತ್ಸಾಹದ ನೋಟವನ್ನೂ ಬೀರುತ್ತಾರೆ' ಅಂತಾರೆ ಈ ಕ್ಲಬ್‍ನ ಸದಸ್ಯೆ ಸ್ನೇಹಾ.

ಮಕ್ಕಳನ್ನೂ ಕರೆತರುತ್ತಾರೆ..!

ಈ ತಂಡದಲ್ಲಿ ಎಲ್ಲಾ ವಯೋಮಾನದವರೂ ಇದ್ದಾರೆ. ಗೃಹಿಣಿಯರು, ವಿದ್ಯಾರ್ಥಿನಿಯರು, ಕೆಲಸಮಾಡುವ ಮಹಿಳೆಯರು, ತಾಯಂದಿರು ಕೂಡ. ಕೆಲವೊಮ್ಮೆ, ಬೈಕ್ ರೈಡ್ ಹೋಗುವಾಗ ತಮ್ಮ ಮಕ್ಕಳನ್ನೂ ಕರೆತರುವುದುಂಟು. 'ಬೈಕ್ ಓಡಿಸೋಕೆ ಮನೆಯವರ ಪ್ರೋತ್ಸಾವಂತೂ ಬೇಕೆ ಬೇಕು. ಅದ್ರಲ್ಲೂ ಲಾಂಗ್ ಡ್ರೈವ್ ಹೋಗೋಕೆ ಮನೆಯವರಿಂದ ಪರ್ಮಿಷನ್ ತೆಗೆದುಕೊಳ್ಳೋದೆ ಕಷ್ಟ. ಆದ್ರೂ, ಬೈಕ್ ಹತ್ತಿ ಲಾಂಗ್ ಡ್ರೈವ್ ಹೋಗೋದು ಅಂದ್ರೆ ಒಂಥರಾ ಖುಷಿ' ಅಂತಾರೆ ವರ್ಷ.

ನೀವು ಬೈಕ್ ಕಲಿಯಬಹುದು

ನಿಮಗೂ ಗೇರ್ ಗಾಡಿಗಳನ್ನ ಓಡಿಸಬೇಕು ಅನ್ನೋ ಮನಸಿದ್ರೆ ಖಂಡಿತವಾಗ್ಲೂ ಕಲಿಯಬಹುದು. ಕೇವಲ ಎರಡರಿಂದ ಮೂರು ಕ್ಲಾಸ್‍ಗಳಲ್ಲೇ ಬೈಕ್ ಓಡಿಸೋದು ಹೇಗೆ ಅಂತಾ ಹೇಳಿಕೊಡಲಾಗತ್ತೆ. ನಂತ್ರ ನಿಮಗೆ ಆಸಕ್ತಿ ಇದ್ರೆ ಕ್ಲಬ್‍ನ ಮೆಂಬರ್ ಆಗಬಹುದು.

ಬೈಕ್ ಓಡಿಸಿದ್ರೆ ಆತ್ಮ ವೀಶ್ವಾಸ ಹೆಚ್ಚಾಗತ್ತೆ. ಲಾಂಗ್ ಡ್ರೈವ್ ಹೋಗಿ ಬಂದ್ರೆ, ಮನಸಿಗೆ ಖುಷಿಯಾಗತ್ತೆ. ಅದ್ರಲ್ಲೂ ಸಾಕಷ್ಟು ಹೆಣ್ಣುಮಕ್ಕಳು ಜೊತೆ ಸೇರೋದ್ರಿಂದ, ಅದೊಂದು ಜಾಲಿ ಟ್ರಿಪ್ ಆಗಿರತ್ತೆ ಅಂತಾರೆ ಬುಲೆಟ್ ಏರುವ ಬೆಡಗಿಯರು. ಒಟ್ಟಿನಲ್ಲಿ, ಬೈಕ್ ಓಡಿಸಬೇಕು ಎನ್ನುವ ಹಲವಾರು ಮಹಿಳೆಯರಿಗೆ ಈ ಬುಲೆಟ್ ಬೆಡಗಿಯರೇ ಸ್ಪೂರ್ತಿ.