ಐಎಎಸ್​​​​​​​​​ ಅಧಿಕಾರಿಯ ಸಜಾಜಸೇವೆ..!

ವಿಶ್ವಾಸ್​ ಭಾರಾಧ್ವಾಜ್​​

0

ಲೋಕಸೇವಾ ಆಯೋಗದ ದೊಡ್ಡ ಹುದ್ದೆಯಲ್ಲಿರುವ ಒಬ್ಬ ಸರ್ಕಾರಿ ಅಧಿಕಾರಿ ಭಾರತದಲ್ಲಿ ಕೋಟಿಗಳ ಲೆಕ್ಕದಲ್ಲಿ ಬಾಳ್ತಾನೆ. ಅದೇ ಕಲೆಕ್ಟರ್, ಅಂಬಾಸಡರ್​ಗಳಾಗಿಬಿಟ್ಟರೆ ಅವರನ್ನು ಮಾತಾಡಿಸೋದೆ ಕಷ್ಟ. ಅವರೆಲ್ಲರ ಮಧ್ಯೆ ಇಲ್ಲೊಬ್ಬರು ಡಿ.ಸಿ. ವಿಶಿಷ್ಟ ಸ್ಥಾನದಲ್ಲಿ ನಿಲ್ತಾರೆ. ಏಕೆಂದರೆ ಇವರು ಮಾಡಿರೋ ಸಾಧನೆಯೇ ಅಂತದ್ದು. ಹಿಂದುಳಿದ ಸಮುದಾಯದಲ್ಲಿ ಹುಟ್ಟಿ, ಕಷ್ಟದ ಪರಿಸ್ಥಿತಿಯಲ್ಲಿ ಓದಿ, ಉನ್ನತ ಪದವಿ ಹೊಂದಿದ ಈ ಅಧಿಕಾರಿ ಸಾಮಾಜಿಕವಾಗಿ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಮಹತ್ತರ ಜವಬ್ದಾರಿ ಹೊತ್ತ ಒಬ್ಬ ಸರ್ಕಾರಿ ಅಧಿಕಾರಿಯಾದ ಇವರು ತಮ್ಮ ಸ್ವಂತ ಆಸಕ್ತಿಯಿಂದ ಹಾಗೂ ಗ್ರಾಮಸ್ಥರ ಸಹಭಾಗಿತ್ವದಿಂದ ರಸ್ತೆಯೊಂದನ್ನು ನಿರ್ಮಿಸಿದ್ದಾರೆ.

ಸರ್ಕಾರದ ಕಿಂಚಿತ್ತೂ ನೆರವು ಪಡೆಯದೆ 100 ಕಿಮೀ ರಸ್ತೆ ಮಾಡಿಸುವುದು ಅಂದರೆ ಸಾಧಾರಣ ವಿಷಯವಲ್ಲ. ಈ ವಿಚಾರವನ್ನು ಸತ್ಯವನ್ನಾಗಿಸಿರೋ ಅವರು, ಸರ್ಕಾರಿ ಕೆಲಸ ಮಾಡುವ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿ. ಆರ್ಮ್​ಸ್ಟ್ರಾಂಗ್ ಪೇಮ್ ಅನ್ನುವ ಮಹತ್ವಕಾಂಕ್ಷಿ ಯುವ ಜಿಲ್ಲಾಧಿಕಾರಿಯೇ ಈ ಸಾಧನೆ ಮಾಡಿದ ಸಾಧಕ. ಇದಕ್ಕಾಗಿ ಆರ್ಮ್​ಸ್ಟ್ರಾಂಗ್ ಪೇಮ್ ತಮ್ಮ ಮಹತ್ವದ ಸಮಯ, ತಮ್ಮದೇ ಸಂಬಳ ಹಾಗೂ ದಾನಿಗಳಿಂದ ದೇಣಿಗೆ ಸಂಗ್ರಹ ಮಾಡಿ ವಿನಿಯೋಗಿಸಿದ್ದಾರೆ. 100 ಕಿಲೋ ಮೀಟರ್ ರಸ್ತೆ ನಿರ್ಮಾಣದ ಹಿಂದೆ ಈ ಯುವ ಜಿಲ್ಲಾಧಿಕಾರಿಯ ಅವಿರತ ಶ್ರಮ, ಅಪಾರ ಆಸಕ್ತಿ ಹಾಗೂ ಅವರ್ಣನೀಯ ಬದ್ಧತೆಯಿದೆ. ಹಿಂದುಳಿದಿದ್ದ ಮಣಿಪುರಿ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬೇಕು ಅನ್ನುವ ಉದಾತ್ತ ಇಚ್ಛೆಯೇ ಅವರ ಈ ಸಮಾಜಮುಖಿ ಕಾರ್ಯಕ್ಕೆ ಮುಖ್ಯ ಕಾರಣ.

ಮಣಿಪುರಿಯ ಟೌಸೆಮ್ ಉಪಪಟ್ಟಣದ ವಲಯದ ವ್ಯಾಪ್ತಿಗೆ ಸೇರುವ ಟೆಮೆಂಗ್ಲಾಂಗ್ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆರ್ಮ್​ಸ್ಟ್ರಾಂಗ್ ಪೇಮ್. ನಾಗಾ ಮೂಲದ ಐಎಎಸ್ ಅಧಿಕಾರಿ ಆರ್ಮ್​ಸ್ಟ್ರಾಂಗ್ 2005ರಲ್ಲಿ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಪದವಿ ಪಡೆದ ಪ್ರತಿಭಾವಂತ. ಮಣಿಪುರಿಯ ಜೀಮೀ ಬುಡಕಟ್ಟು ಜನಾಂಗದ ಮೊಟ್ಟ ಮೊದಲ ಐಎಎಸ್ ಆಫೀಸರ್ ಅನ್ನಿಸಿಕೊಂಡವರು ಅರ್ಮ್​ಸ್ಟ್ರಾಂಗ್. ಕಡುಬಡತನದಲ್ಲಿ ಹುಟ್ಟಿದ ಅರ್ಮ್​ಸ್ಟ್ರಾಂಗ್ ಪೇಮ್ ಅತ್ಯಂತ ಕಷ್ಟದಲ್ಲಿ ಸ್ಕಾಲರ್​ಶಿಪ್​​ಗಳ ನೆರವಿನೊಂದಿಗೆ ತಮ್ಮ ವಿದ್ಯಾಭ್ಯಾಸ ಮುಗಿಸಿದವರು. ಅವರ ಊರಿನಲ್ಲಿ ಸುಗಮ ಸಂಪರ್ಕಕ್ಕೆ ರಸ್ತೆಗಳೇ ಇರಲಿಲ್ಲ. ಕಾಡುದಾರಿಯಲ್ಲಿ ನಡೆದುಕೊಂಡು ಹೋಗಬೇಕಿದ್ದ ದುರ್ಗಮ ಪರಿಸ್ಥಿತಿಯಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದವರು ಪೇಮ್. ಪ್ರಾಯಶಃ ತಮ್ಮೂರಿಗೊಂದು ರಸ್ತೆ ಮಾಡಿಕೊಡಬೇಕು ಅನ್ನುವ ಹೆಬ್ಬಯಕೆ ಮೂಡಲು ಇದೂ ಒಂದು ಕಾರಣವಿರಬೇಕು. ಆದರೆ ಪೇಮ್ ಲೋಕಸೇವಾ ಆಯೋಗದ ಪರೀಕ್ಷೆ ತೆಗೆದುಕೊಂಡಿದ್ದ ಮಾತ್ರ, ಹಿಂದುಳಿದ ಪ್ರದೇಶಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿಕೊಡುವ ಏಕಮಾತ್ರ ಉದ್ದೇಶದಿಂದ.

ಮಣಿಪುರದಿಂದ ನಾಗಾಲ್ಯಾಂಡ್ ಹಾಗೂ ಅಸ್ಸಾಂ ರಾಜ್ಯಗಳನ್ನು ಸಂಪರ್ಕಿಸುವ ಲಿಂಕ್ ರಸ್ತೆ ನಿರ್ಮಿಸಬೇಕು ಅನ್ನೋದು ಅರ್ಮ್​ಸ್ಟ್ರಾಂಗ್ ಯೋಜನೆಯಾಗಿತ್ತು. ಕಾಕತಾಳಿಯವೆಂಬಂತೆ 1982ರಲ್ಲಿ ಕೇಂದ್ರ ಸರ್ಕಾರ 100 ಕಿಮಿ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ 101 ಕೋಟಿ ರೂಗಳ ಅನುಧಾನ ಘೋಷಣೆ ಮಾಡಿತು. ಆದರೆ ದುರದೃಷ್ಟವಶಾತ್ ಆ ಘೋಷಣೆ ಕಾರ್ಯ ರೂಪಕ್ಕೆ ಬರಲೇ ಇಲ್ಲ. ಸಾಕಷ್ಟು ವರ್ಷ ನಿರೀಕ್ಷೆಯ ಬಳಿಕ ಹತಾಶಗೊಂಡ ಅರ್ಮ್​ಸ್ಟ್ರಾಂಗ್ ಸರ್ಕಾರದ ನೆರವು ಪಡೆಯದೇ 100 ಕಿಮೀ ರಸ್ತೆ ನಿರ್ಮಾಣದ ಸಂಕಲ್ಪ ಮಾಡಿಬಿಟ್ಟರು.

ಪೇಮ್ ರಸ್ತೆ ನಿರ್ಮಿಸಬೇಕು ಅಂತ ಉದ್ದೇಶಿಸಿದ್ದ ಪ್ರದೇಶದಲ್ಲಿ ಸುಮಾರು 6 ದಶಕಗಳಿಂದ ಅವರ ಕುಟುಂಬ ಉತ್ತಮ ಸಂಪರ್ಕ ವ್ಯವಸ್ಥೆ ಇಲ್ಲದೆ ಬವಣೆ ಅನುಭವಿಸಿತ್ತು. ಅರ್ಮ್​ಸ್ಟ್ರಾಂಗ್​​ರ ಸಂಕಲ್ಪ ದೃಢವಾಗಲು ಇದೇ ಮುಖ್ಯ ಕಾರಣ. ಶತಾಯಗತಾಯ ರಸ್ತೆ ನಿರ್ಮಾಣ ಮಾಡಿಯೇ ತೀರಬೇಕು ಅಂತ ತೀರ್ಮಾನಿಸಿದ ಅರ್ಮ್​ಸ್ಟ್ರಾಂಗ್ ತನ್ನ 5 ತಿಂಗಳ ವೇತನವನ್ನೇ ಮೂಲ ಧನವನ್ನಾಗಿಸಿ ಕಾರ್ಯಾರಂಭ ಮಾಡಿದರು. ಅವರ ಈ ಸಮಾಜಮುಖಿ ಕಾರ್ಯಕ್ಕೆ ಸಹಕರಿಸಿದ ಅಲ್ಲಿನ ನಿವೃತ್ತ ಶಾಲಾ ಶಿಕ್ಷಕರೊಬ್ಬರು ತಮ್ಮ ರಿಟೈರ್ಡ್​ಮೆಂಟ್ ಹಣವಾದ 4 ಲಕ್ಷ ರೂಪಾಯಿ ನೀಡಿದ್ದರು.

ಇದೇ ರೀತಿ ಅರ್ಮ್​ಸ್ಟ್ರಾಂಗ್​​ನ ಬಂಧು ಬಳಗ, ಸ್ನೇಹಿತರು, ಹಿತೈಷಿಗಳಿಂದಲೂ ಉದಾರ ಆರ್ಥಿಕ ನೆರವು ಹರಿದು ಬಂದಿತು. ಟೆಮೆಂಗ್ಲಾಂಗ್​​ನ ನಿವಾಸಿಗಳು, ಸರ್ಕಾರಿ ನೌಕರರು ಹಾಗೂ ಇತರೆ ಉದ್ದಿಮೆದಾರರು ತಮ್ಮ ಕೈಲಾದಷ್ಟು ನೆರವು ನೀಡಿದರು. ಇಷ್ಟಾದ ನಂತರವೂ ಸುಮ್ಮನೆ ಕೂರದ ಅರ್ಮ್​ಸ್ಟ್ರಾಂಗ್ ಸಾಮಾಜಿಕ ಜಾಲತಾಣ ಫೇಸ್​​ಬುಕ್​​ನಲ್ಲೂ ತಮ್ಮ ಯೋಜನೆಗೆ ಧನ ಸಂಗ್ರಹಕ್ಕೆ ಮನವಿ ಮಾಡಿಕೊಂಡರು. ಅರ್ಮ್​ಸ್ಟ್ರಾಂಗ್ ಪೇಮ್​​ರ ನಿಸ್ವಾರ್ಥ ಕಳಕಳಿಗೆ ಎಲ್ಲೆಡೆಯಿಂದ ಪ್ರಶಂಸೆಯ ಜೊತೆ ಆರ್ಥಿಕ ನೆರವೂ ಲಭಿಸತೊಡಗಿತು. ದೆಹಲಿ, ಪೂನಾ, ಬೆಂಗಳೂರು, ಚೆನ್ನೈ, ಗುವಾಹಟಿ, ಶಿಲ್ಲಾಂಗ್, ಧಿಮಾಪುರ್​​ಗಳ ಅಧಿಕಾರಿಗಳು ಹಾಗೂ ಕೆನಡಾ, ಅಮೇರಿಕಾ ಹಾಗೂ ಲಂಡನ್​​ಗಳ ಎನ್ಆರ್​​ಐಗಳಿಂದಲೂ ವ್ಯಾಪಕ ಹಣದ ನೆರವು ಹರಿದು ಬಂದಿತು.

ಆದರೆ ಇಂತಹ ಕೆಲಸಗಳಿಗೆ ಅತಿ ಹೆಚ್ಚು ಸಹಕಾರ ಸಿಗುವುದು ಗ್ರಾಮದ ನಿವಾಸಿಗಳಿಂದ. ತಮ್ಮ ಗ್ರಾಮದ ಉದ್ದಾರಕ್ಕಾಗಿ ತಮ್ಮದೇ ಪ್ರದೇಶದ ಅಧಿಕಾರಿಯೊಬ್ಬರ ಉತ್ಸುಕತೆಯಿಂದ ಉತ್ತೇಜಿತರಾದ ಗ್ರಾಮಸ್ಥರು ರಸ್ತೆ ಕೆಲಸಗಾರರು, ಕೂಲಿ ಕಾರ್ಮಿಕರಿಗೆ ಹಾಗೂ ರೋಡ್ ರೋಲರ್ ಡ್ರೈವರ್​​ಗಳಿಗೆ ಉಚಿತವಾಗಿ ಊಟ ವಸತಿ ಉಪಚಾರ ನೋಡಿಕೊಂಡರು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ರಸ್ತೆ ನಿರ್ಮಾಣಕ್ಕೆ ಬೇಕಿದ್ದ ಎಲ್ಲಾ ಸೌಕರ್ಯ ಹಾಗೂ ಪರಿಕರಗಳನ್ನು ಖಾಸಗಿಯಾಗಿ ಪಡೆದು ರಸ್ತೆ ನಿರ್ಮಾಣಕ್ಕೆ ಪೇಮ್ ಮುಂದಾಗಿದ್ದರು. ಅವರು ಇಷ್ಟೆಲ್ಲಾ ಕಷ್ಟಪಡುತ್ತಿದ್ದಾಗಲೂ ಸರ್ಕಾರದಿಂದ ಯಾವ ಉತ್ತೇಜನವೂ ಸಿಗಲಿಲ್ಲ. ಆದರೆ ಪೇಮ್ ಹಿಂದೆ ಸರಿಯುವ ಜಾಯಮಾನದವರೇ ಅಲ್ಲ. ಹೀಗೆ ಸಂಗ್ರಹವಾದ ಹಣದಿಂದ ಹಾಗೂ ಗ್ರಾಮಸ್ಥರ ಒತ್ತಾಸೆಯಿಂದ ನೋಡ ನೋಡುತ್ತಿದ್ದಂತೆ ನಿರ್ಮಾಣಗೊಂಡಿತು ಟಮಾಂಗ್ಲಾಂಗ್-ಹಾಫ್ಲಾಂಗ್ 100 ಕಿಮೀ ಉದ್ದದ ಸಂಪರ್ಕ ರಸ್ತೆ.

ಕೈಯಲ್ಲಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡು ಲಂಚಭಾಕರಾಗಿರುವ ಅಧಿಕಾರಿಗಳ ನಡುವೆ, ತಮ್ಮ ವೇತನವನ್ನೇ ಮೂಲಧನವನ್ನಾಗಿಸಿ, ಸಮುದಾಯದ ನೆರವು ಪಡೆದು ಸರ್ಕಾರಕ್ಕೆ ಸವಾಲು ಹಾಕಿ ಬರೋಬ್ಬರಿ 100 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡಿದ ಅರ್ಮ್​ಸ್ಟ್ರಾಂಗ್ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ.

ಯಾವುದೇ ವ್ಯಕ್ತಿ ತನಗೆ ಸಮಾಜ ಏನು ಮಾಡಿದೆ ಎಂದು ಪ್ರಶ್ನೆ ಮಾಡುವ ಬದಲು, ತಾನು ಸಮಾಜಕ್ಕೆ ಏನು ಮಾಡಿದ್ದೇನೆ. ತನ್ನಿಂದ ಸಮುದಾಯಕ್ಕೆ ಸಿಕ್ಕ ಕೊಡುಗೆಯೇನು ಎನ್ನುವುದನ್ನು ಆಗಾಗ ಕೇಳಿಕೊಳ್ಳಬೇಕು ಎನ್ನುವುದು ಅರ್ಮ್​ಸ್ಟ್ರಾಂಗ್ ಪೇಮ್​​ರ ಪಾಲಿಸಿ. ಅರ್ಮ್​ಸ್ಟ್ರಾಂಗ್​​ರಂತಹ ಅಧಿಕಾರಿಗಳು ನಮ್ಮ ಮುಂದಿನ ಯುವ ಪೀಳಿಗೆಯ ಐಎಎಸ್ ಅಧಿಕಾರಿ ವಲಯಕ್ಕೇ ಮಾದರಿ.

Related Stories

Stories by Vishwas Bharadwaj