ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಜೊತೆಗಿದೆ "ವಿದ್ಯಾರ್ಥಿಭವನ್"

ವಿಶ್ವಾಸ್​​ ಭಾರಾಧ್ವಾಜ್​​

0

ಬೆಂಗಳೂರಿನ ಗಾಂಧಿ ಬಜಾರ್​​ನಲ್ಲಿರುವ ವಿದ್ಯಾರ್ಥಿ ಭವನದ ಹೆಸರು ಕೇಳಿದರೆ ಅಲ್ಲಿನ ಮಸಾಲೆ ದೋಸೆಯ ನೆನಪಾಗಿ ಬಾಯಲ್ಲಿ ನೀರೂರುವುದು ಗ್ಯಾರಂಟಿ. ಇಲ್ಲಿನ ತುಪ್ಪ ಮಸಾಲೆ ದೋಸೆಯ ಕೀರ್ತಿ ಸಪ್ತ ಸಾಗರದಾಚೆಗೂ ಹಬ್ಬಿದೆ. ದಶಕಗಳ ಇತಿಹಾಸ ಹೊಂದಿರುವ ವಿದ್ಯಾರ್ಥಿ ಭವನ್, ಕನ್ನಡ ಸಾಹಿತ್ಯದಲ್ಲೂ ಪ್ರಸ್ತಾಪ ಹೊಂದಿದೆ. ಬೆಂಗಳೂರಿನ ಬೆಳವಣಿಗೆಯ ಜೊತೆಗೆ ಉದ್ಯಾನ ನಗರಿಯ ಸಂಸ್ಕೃತಿಯೊಂದಿಗೆ ತಳಕುಹಾಕಿಕೊಂಡ ತಿನಿಸುತಾಣ ವಿದ್ಯಾರ್ಥಿ ಭವನ್. ಸ್ವಾತಂತ್ರ್ಯ ಚಳುವಳಿ ಹಾಗೂ ಕನ್ನಡದ ಏಕೀಕರಣದಂತಹ ಹೋರಾಟದ ಜೊತೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ವಿದ್ಯಾರ್ಥಿ ಭವನ್ ತನ್ನದೇ ವಿಶಿಷ್ಠ ಕೊಡುಗೆ ನೀಡಿದೆ.

ಬೆಂಗಳೂರಿನ ತಿನಿಸು ಪ್ರಿಯರಿಗೆ ಮರೆಯಲಾಗದ ಕೆಲವೇ ಹೆಸರುಗಳಲ್ಲಿ ವಿದ್ಯಾರ್ಥಿ ಭವನ್ ಕೂಡ ಒಂದು. ಗಾಂಧಿ ಬಜಾರ್​​ನಲ್ಲಿರುವ ವಿದ್ಯಾರ್ಥಿ ಭವನ್​​​ನ ರುಚಿರುಚಿಯಾದ ಮಸಾಲೆ ದೋಸೆ ವಿಶ್ವವಿಖ್ಯಾತವಾದದ್ದು. ಬೆಂಗಳೂರಿನ ಮೂಲೆ ಮೂಲೆಗಳಿಂದ ಇಲ್ಲಿಗೆ ಕೇವಲ ಮಸಾಲೆ ದೋಸೆ ತಿನ್ನಲೆಂದೇ ಬರುವ ಗ್ರಾಹಕರಿಗೇನೂ ಕಡಿಮೆಯಿಲ್ಲ. ವಿದ್ಯಾರ್ಥಿ ಭವನ ದಶಕಗಳಿಂದ ಕೈಗೆಟಕುವ ದರದಲ್ಲಿ ಗ್ರಾಹಕರ ನಾಲಿಗೆಗೆ ಸವಿರುಚಿ ಉಣಬಡಿಸ್ತಿದೆ.

1938ರಲ್ಲಿ ಪ್ರಾರಂಭವಾದ ವಿದ್ಯಾರ್ಥಿ ಭವನ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಚಳುವಳಿಕಾರರು, ಕಮ್ಯೂನಿಸ್ಟ್ ನಾಯಕರು ಹಾಗೂ ಸಾಹಿತಿಗಳ ನೆಚ್ಚಿನ ವಿರಾಮ ತಾಣವಾಗಿತ್ತು. ಮೊದಲು ಸಣ್ಣದಾಗಿ ಆರಂಭವಾದ ಈ ಹೋಟೆಲ್ ಈಗಿನ ನವೀಕರಿಸಲ್ಪಟ್ಟಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು 1948ರಲ್ಲಿ ಅನ್ನುವ ಮಾಹಿತಿಯಿದೆ. ನವ್ಯ ಹಾಗೂ ನವೋದಯ ಕನ್ನಡ ಸಾಹಿತ್ಯಕ ಪರಂಪರೆಯ ಬಹಳಷ್ಟು ಬರಹಗಳಲ್ಲಿ ವಿದ್ಯಾರ್ಥಿ ಭವನ್ ದೋಸೆಯ ಪ್ರಸ್ತಾಪವಿದೆ. ಬೆಂಗಳೂರಿಗೆ ಬರುವ ಯಾವುದೇ ಕ್ಷೇತ್ರದ ಗಣ್ಯರಾದರೂ ವಿದ್ಯಾರ್ಥಿ ಭವನ್ ಪಾಕಶಾಲೆಯ ಸವಿ ಅನುಭವಿಸಲೇಬೇಕು. ವಿದ್ಯಾರ್ಥಿ ಭವನ್ ಸೇವೆಯ ಕುರಿತಾಗಿ ಕನ್ನಡದ ಎಲ್ಲಾ ಪತ್ರಿಗಳ ಜೊತೆಗೆ ಕೆಲವು ರಾಷ್ಟ್ರೀಯ ಪತ್ರಿಕೆಗಳೂ ವರದಿ ವಿಶೇಷ ವರದಿ ಮಾಡಿವೆ. ಘಟಾನುಘಟಿಗಳು ಇಲ್ಲಿ ತಮ್ಮ ನಾಲಿಗೆ ಚಪಲ ಪರಿಹರಿಸಿಕೊಂಡು ತೃಪ್ತಿಪಟ್ಟುಕೊಂಡಿದ್ದರ ಬಗ್ಗೆ ಫೋಟೋ ಸಾಕ್ಷಿ ಸಿಗುತ್ತದೆ. ಹೊಟೇಲ್​ನ ಗೋಡೆಗಳಲ್ಲಿ ವಿದ್ಯಾರ್ಥಿ ಭವನ್ ತಿಂಡಿ ತಿನ್ನುತ್ತಿರುವ ಸೆಲೆಬ್ರಿಟಿಗಳ ಚಿತ್ರಗಳನ್ನು ನೋಡಬಹುದು.

ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳಾದ ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತರು ಇಲ್ಲಿನ ಮಾಮೂಲಿ ಗ್ರಾಹಕರಾಗಿದ್ದರು. ಕನ್ನಡದ ಹೆಸರಾಂತ ಪತ್ರಕರ್ತ ಪಿ.ಲಂಕೇಶ್, ವೈಎನ್​​ಕೆ ಸಹ ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದರಂತೆ. ಇನ್ನು ವರನಟ ಡಾ.ರಾಜ್​​ಕುಮಾರ್, ಹಾಸ್ಯ ಚಕ್ರವರ್ತಿ ನರಸಿಂಹರಾಜು, ಭಾರತೀಯ ಚಿತ್ರರಂಗದ ಸೂಪರ್​​ಸ್ಟಾರ್ ರಜನೀಕಾಂತ್, ಕಮಲ್ ಹಾಸನ್​ರಂತಹ ತಾರೆಯರಿಗೂ ವಿದ್ಯಾರ್ಥಿ ಭವನದ ದೋಸೆ ಪರಮಪ್ರಿಯವಾಗಿತ್ತು. ಅಷ್ಟೇ ಏಕೆ ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಟೇಲ್, ಎಸ್ ಎಂ ಕೃಷ್ಣ, ಯಡಿಯೂರಪ್ಪ, ಸಿದ್ಧರಾಮಯ್ಯರಂತಹ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಅನೇಕರು ವಿದ್ಯಾರ್ಥಿ ಭವನದ ರುಚಿಗೆ ಮನಸೋತಿದ್ದರು.

ಕೇವಲ ಮಸಾಲೆ ದೋಸೆ ಮಾತ್ರವಲ್ಲ, ಇದರ ಜೊತೆ ಬೇರೆ ತಿನಿಸುಗಳಾದ ಉಪ್ಪಿಟ್ಟು, ಪೊಂಗಲ್ ಹಾಗೂ ಬಿಸಿಬೇಳೆಬಾಬ್​​​ಗಳಿಗೂ ಗ್ರಾಹಕರಿಂದ ಸಾಕಷ್ಟು ಡಿಮ್ಯಾಂಡ್ ಇದೆ. ವಿದ್ಯಾರ್ಥಿ ಭವನದ ಪ್ರತಿಯೊಂದು ತಿನಿಸೂ ಅದ್ಭುತ ರುಚಿ ಹೊಂದಿದೆ. ಆಧುನಿಕ ನಳ ಮಹರಾಜ ಬಾಣಸಿಗರು ಇಲ್ಲಿನ ಪಾಕಶಾಲೆಯಲ್ಲಿ ಗ್ರಾಹಕರನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಸಾರ್ಥಕ ಪ್ರಯತ್ನ ಮುಂದುವರೆಸಿದ್ದಾರೆ. ಇಲ್ಲಿನ ಪಾಕಶಾಲೆ ಹಾಗೂ ಗ್ರಾಹಕರು ಕೂರುವ ಹಾಲ್​​ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಇದೆ. ಸಮವಸ್ತ್ರ ಧರಿಸಿ ಬಡಿಸುವ ಪರಿಚಾರಕರು ಈ ಕೆಲಸವನ್ನು ಸೇವೆಯ ಜೊತೆಗೆ ಕಲೆಯಂತೆ ನಿರ್ವಹಿಸುತ್ತಾ ಬಂದಿದ್ದಾರೆ.

ಬೆಳಗ್ಗೆ ಮತ್ತು ಸಂಜೆ ಮಾತ್ರ ವ್ಯವಹರಿಸುವ ಈ ಹೊಟೇಲ್​​ನಲ್ಲಿ ತಿಂಡಿ ತಿನ್ನಲು ಗ್ರಾಹಕರು ಸಾಲುಗಟ್ಟಿ ಕಾದಿರುತ್ತಾರೆ. ಕೇವಲ ತಿಂಡಿಗಳನ್ನು ಮಾತ್ರ ಒದಗಿಸುವ ವಿದ್ಯಾರ್ಥಿ ಭವನ್​​ನಲ್ಲಿ ಊಟದ ಸೌಲಭ್ಯವಿಲ್ಲ. ಇಲ್ಲಿ ತಿಂಡಿ ತಿನ್ನಬೇಕಾದರೆ ಹೊರಗೆ ಕನಿಷ್ಠ ಅರ್ಧ ಗಂಟೆಯಾದರೂ ಕಾಯಬೇಕು ಅನ್ನುವ ಸಂಗತಿಯನ್ನು ಗಮನಿಸಿದಾಗಲೇ ಈ ಹೊಟೇಲ್​​ನ ಜನಪ್ರಿಯತೆ ಅರಿವಾಗುತ್ತದೆ. ಈ ಭಾಗದಲ್ಲಿ ಯಾವುದೇ ಚಲನಚಿತ್ರಗಳು ಚಿತ್ರೀಕರಣ ನಡೆದರೂ ತಿಂಡಿ ತಿನಿಸುಗಳು ಈ ಹೊಟೇಲ್​​ನಿಂದಲೇ ಪೂರೈಕೆಯಾಗಬೇಕು. ಬೆಂಗಳೂರಿಗೆ ಬರುವ ಯಾವುದೇ ಕ್ಷೇತ್ರದ ದಿಗ್ಗಜರಿಗೂ ವಿದ್ಯಾರ್ಥಿ ಭವನ್ ದೋಸೆ ಪೂರೈಕೆಯಾದಾಗಲೇ ಅವರ ಬೆಂಗಳೂರು ಭೇಟಿ ಅರ್ಥಪೂರ್ಣವಾಗುತ್ತದೇ ಅನ್ನುವುದು ಒಂದು ನಾಣ್ಣುಡಿಯೇ ಆಗಿ ಹೋಗಿದೆ. ಸೇವೆ ಹಾಗೂ ವ್ಯವಹಾರದಲ್ಲಿ ಶಿಸ್ತನ್ನು ಕಾಪಾಡಿಕೊಂಡು ಬಂದಿರುವ ವಿದ್ಯಾರ್ಥಿ ಭವನ್ ಒಂದರ್ಥದಲ್ಲಿ ಬಸವನಗುಡಿ ನಿವಾಸಿಗಳ ವಾರಾಂತ್ಯದ ಪ್ರವಾಸಿ ತಾಣವೂ ಹೌದು.

Related Stories

Stories by Vishwas Bharadwaj