ಫುಡ್‌ಟೆಕ್ ಉದ್ಯಮದ ಆಗುಹೋಗುಗಳ ಬಗ್ಗೆ ಕುಮಾರ್‌ಸೇತು ಅವರ ದೃಷ್ಟಿಕೋನ

ಟೀಮ್​ ವೈ.ಎಸ್​. ಕನ್ನಡ

ಫುಡ್‌ಟೆಕ್ ಉದ್ಯಮದ ಆಗುಹೋಗುಗಳ ಬಗ್ಗೆ ಕುಮಾರ್‌ಸೇತು ಅವರ ದೃಷ್ಟಿಕೋನ

Saturday December 19, 2015,

5 min Read


ಖರಗ್‌ಪುರ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿದ ಕುಮಾರ್ ಸೇತು, ಪೀಟೂ.ಇನ್ ಸಂಸ್ಥೆಯ ಸಹಸಂಸ್ಥಾಪಕರು. ಇವರು ಆಫರ್ಸ್ ಫಾರ್ ಶಾಪರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಅಧ್ಯಯನ ನಡೆಸುವ ನ್ಯೂಕ್ಲಿ ಮಾರ್ಕೆಟಿಂಗ್ ಸಂಸ್ಥೆಯ ಸಂಸ್ಥಾಪಕರೂ ಹೌದು. ನ್ಯೂಕ್ಲಿ ಮಾರ್ಕೆಟಿಂಗ್ ಸಂಸ್ಥೆಯ ಸಿಇಓ ಆಗಿ ಅವರು 6 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗೆ ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ಮಂದಿ ಗ್ರಾಹಕರಿದ್ದಾರೆ. ಒಂದು ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಸ್ವಯಂಚಾಲಿತ, ಪ್ರಾತಿನಿಧಿಕ ಮತ್ತು ಹೊರಗುತ್ತಿಗೆಯೇ ಘೋಷವಾಕ್ಯ ಹಾಗೂ ಮಂತ್ರ ಎಂಬುದು ಇವರ ನಿಲುವು. ಕುಮಾರ್ ಸೇತು ಅವರು ಸದ್ಯದ ಫುಡ್‌ಟೆಕ್ ಉದ್ಯಮದ ಏರಿಳಿತಗಳನ್ನು ಗಮನಿಸುತ್ತಲೇ ಬಂದಿದ್ದಾರೆ. ಹೀಗಾಗಿ ಫುಡ್‌ಟೆಕ್ ಉದ್ಯಮಗಳ ಕುರಿತು ಒಂದು ವಿಮರ್ಶಾತ್ಮಕ ಚರ್ಚೆಯನ್ನು ಅವರು ನಮ್ಮ ಮುಂದಿಟ್ಟಿದ್ದಾರೆ. ಹಾಗಾದರೆ ಫುಡ್‌ಟೆಕ್ ಉದ್ಯಮದ ಬಗ್ಗೆ ಅವರೇನು ಹೇಳುತ್ತಾರೆ, ನೋಡೋಣ ಬನ್ನಿ

ಕುಮಾರ್ ಸೇತು ಅವರ ದೃಷ್ಟಿಯಂತೆ ಫುಡ್‌ಟೆಕ್ ಉದ್ಯಮ

ಫುಡ್‌ಟೆಕ್ ಸಂಸ್ಥೆಗಳ ಬಗ್ಗೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿದೆ. ದುರಂತ ಎಂದರೆ ನಕಾರಾತ್ಮಕ ಅಂಶಗಳಿಂದಲೇ ಉದ್ಯಮ ಚರ್ಚೆಗೀಡಾಗುತ್ತಿದೆ. ಈ ಚರ್ಚೆಯ ಪ್ರಕಾರ ಉದ್ಯಮ ಮುಳುಗುವ ಹಡಗು ಎಂದು ಹೇಳಲಾಗ್ತಿದೆ. ಕಡಿಮೆ ನೌಕರರು, ಅಸಮರ್ಪಕ ಕಾರ್ಯಾಚರಣೆಗಳು ಅಥವಾ ಇದ್ದಕ್ಕಿದ್ದಂತೆ ಉದ್ಯಮವನ್ನೇ ನಿಲ್ಲಿಸಿಬಿಡುವುದು ಇವುಗಳು ನಕಾರಾತ್ಮಕ ಚರ್ಚೆಗೆ ಇನ್ನಷ್ಟು ಪುಷ್ಟಿ ನೀಡುತ್ತಿವೆ.

image


ಫುಡ್‌ಟೆಕ್ ಉದ್ಯಮಗಳು ಈಗಾಗಲೇ ಬಹಳಷ್ಟು ಸವಾಲುಗಳನ್ನು ಎದುರಿಸುತ್ತಾ, ಸುದ್ದಿಯನ್ನೂ ಮಾಡುತ್ತಿದೆ. ಅಂಥದ್ದರಲ್ಲಿ ಈ ರೀತಿಯ ನಕಾರಾತ್ಮಕ ಚರ್ಚೆಗಳು ಉದ್ಯಮ ಎದುರಿಸುವ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಿವೆ. ಜನ ಫುಡ್‌ ಟೆಕ್ ಉದ್ಯಮಗಳನ್ನು ನೀರ ಮೇಲೆ ನಿಂತಿರುವ ಗುಳ್ಳೆಗಳಂತೆ ಪರಿಗಣಿಸುತ್ತಿದ್ದಾರೆ. ನೀರ ಮೇಲಿನ ಗುಳ್ಳೆಗಳು ಯಾವಾಗ ಬೇಕಾದರೂ ಒಡೆಯಬಹುದು. ಹಾಗೆಯೇ ಫುಡ್‌ಟೆಕ್‌ ಉದ್ಯಮಗಳು ಸಹ ಎಷ್ಟು ದಿನಗಳ ಕಾಲ ನಡೆಯುವವೋ ಹೇಳಲಾಗದು ಎಂಬ ನಿರ್ಧಾರಕ್ಕೆ ಜನರು ಬಂದಿದ್ದಾರೆ. ಹೀಗಾಗಿ ಬಿಲಿಯನ್‌ ಡಾಲರ್‌ಗಳು ಸುರಿಯಲ್ಪಡುತ್ತಿರುವ ಈ ಉದ್ಯಮ ಕ್ಷೇತ್ರ ಇನ್ನೂ ಸರಿಯಾಗಿ ಟೇಕ್ ಆಫ್ ಆಗಿಲ್ಲ ಎಂದೇ ಹೇಳಬಹುದಾಗಿದೆ. ಆಹಾರದೊಂದಿಗೆ ಸೂಕ್ಷ್ಮವಾಗಿ ಬೆಸೆದುಕೊಂಡಿರುವ ಬಹುತೇಕ ಎಲ್ಲಾ ಕಂಪನಿಗಳೂ ಸಹ ಫುಡ್‌ಟೆಕ್ ಉದ್ಯಮವಾಗಿ ಬದಲಾಗಿದೆ.

ಉದಾಹರಣೆಗೆ, ಫುಡ್ ಪಾಂಡಾ, ಸ್ವಿಗ್ಗೀ ಮತ್ತು ಟಿನಿಓಲ್ ನಂತಹ ಸಂಸ್ಥೆಗಳು ಮಾರುಕಟ್ಟೆಯಲ್ಲಿರುವುದೇ ಆದರೂ ಇವುಗಳು ರೆಸ್ಟೋರೆಂಟ್‌ಗಳ ಆಹಾರಕ್ಕೆ ಆನ್‌ಲೈನ್‌ ಮಾರುಕಟ್ಟೆ ಒದಗಿಸುತ್ತಿವೆ. ಆದರೆ ಈ ಸಂಸ್ಥೆಗಳಿಗೆ ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ವಿತರಿಸುವ ಆಹಾರದ ಜೊತೆ ನೇರ ಸಂಪರ್ಕವಿಲ್ಲ. ಆಹಾರ ಉದ್ಯಮ ಕ್ಷೇತ್ರದಲ್ಲಿ ಸ್ವಿಗ್ಗೀ ಸಂಸ್ಥೆ ವಿತರಣೆ ಮತ್ತು ವ್ಯವಸ್ಥಾಪಕ ಸಂಸ್ಥೆಯಾಗಿ ಏಕೆ ಸಂಪೂರ್ಣವಾಗಿ ಬದಲಾಗಬಾರದು? ಅಥವಾ ಫುಡ್ ಪಾಂಡಾ ಮತ್ತು ಟಿನಿಓಲ್ ಸಂಸ್ಥೆಗಳು ತಂತ್ರಜ್ಞಾನ ಆಧಾರಿತ ಮಾರ್ಕೆಟಿಂಗ್ ಸಂಸ್ಥೆಯಾಗಿ ಏಕೆ ಇರಬಾರದು?

ವಾಸ್ತವವಾಗಿ ಫುಡ್‌ ಟೆಕ್ ಕ್ಷೇತ್ರ ಬಹಳ ದುರುಪಯೋಗಕ್ಕೊಳಗಾಗುತ್ತಿದೆ. ತೂಕ ನಿಯಂತ್ರಣ ಆಹಾರ ತಯಾರಿಸುವ ಸಂಸ್ಥೆಗಳೂ ಕೂಡ ಫುಡ್‌ ಟೆಕ್ ಸಂಸ್ಥೆ ಎಂಬ ಲೇಬಲ್ ಅಂಟಿಸಿಕೊಂಡಿವೆ. ಈ ಸಂಸ್ಥೆಗಳು ಯಾವ ಆಹಾರಗಳನ್ನು ತೆಗೆದುಕೊಳ್ಳುವುದು ಸೂಕ್ತ, ಯಾವುದು ಅಲ್ಲ ಎಂಬ ವಿಚಾರವನ್ನು ಹೇಳುವ ತೂಕ ಕಡಿಮೆ ಮಾಡುವಂತಹ ಆಹಾರಗಳ ಸಂಸ್ಥೆಯೂ ಸಹ ಫುಡ್‌ಟೆಕ್ ಉದ್ಯಮವಾಗಿ ಗುರುತಿಸಿಕೊಂಡಿವೆ. ಆಹಾರ ಉತ್ಪಾದನೆ ಅಥವಾ ಆಹಾರ ತಯಾರಿಕೆಯಲ್ಲಿ ತೊಡಗಿಕೊಳ್ಳದ ಸಂಸ್ಥೆಯೊಂದು ಹೇಗೆ ತನ್ನನ್ನು ತಾನು ಫುಡ್‌ಟೆಕ್ ಉದ್ಯಮ ಎಂದು ಗುರುತಿಸಿಕೊಳ್ಳಬಹುದು? ಇಂತಹ ಸಣ್ಣ ಸಣ್ಣ ವಿಚಾರಗಳೇ ಫುಡ್‌ಟೆಕ್ ಉದ್ಯಮ ವೈಫಲ್ಯ ಅನುಭವಿಸಲು ಕಾರಣವಾಗಿದೆ. ಫುಡ್‌ ಟೆಕ್‌ ಉದ್ಯಮದಲ್ಲಿ ಸ್ಪೂನ್‌ ಜಾಯ್, ಡಾಝೋ ಸಂಸ್ಥೆಗಳು ವೈಫಲ್ಯ ಅನುಭವಿಸಿ ತಮ್ಮ ಸಂಸ್ಥೆಯನ್ನು ಮುಚ್ಚಿಬಿಟ್ಟಿವೆ. ಇದಕ್ಕೆ ಸಣ್ಣ ಸಣ್ಣ ವಿಚಾರಗಳೇ ಕಾರಣವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಆ ಸಂಸ್ಥೆಗಳು ಮುಚ್ಚಲು ನಮಗೆ ತಿಳಿಯದ ಅನೇಕ ಕಾರಣಗಳಿವೆ. ಈ ಸಂಸ್ಥೆಗಳು ವೈಫಲ್ಯ ಹೊಂದಲು ಕೆಲ ಮೂಲಭೂತ ನ್ಯೂನ್ಯತೆಗಳೇ ಕಾರಣ.

ಈಗ ಕೆಲ ಉದ್ಯಮದ ಮೂಲಭೂತ ಮಾಪನಗಳ ಬಗ್ಗೆ ತಿಳಿದುಕೊಳ್ಳೋಣ. ಆಗ ಉದ್ಯಮಗಳದಲ್ಲಿ ಎಲ್ಲಿ ತಪ್ಪಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

1.ಫುಡ್‌ಪಾಂಡಾ, ಟಿನಿಓಲ್ ಸಂಸ್ಥೆಗಳು ತಮಗೆ ಬರುವ ಬೇಡಿಕೆಯಲ್ಲಿ ಶೇ.10ರಷ್ಟನ್ನು ಕಮಿಷನ್ ಆಗಿ ಪಡೆದುಕೊಳ್ಳುತ್ತವೆ. ಸರಾಸರಿ ಬೇಡಿಕೆಯ ಮೌಲ್ಯ 250 ರೂ.ಗಳಾದರೆ, ಅದರಲ್ಲಿ ಅವರಿಗೆ ಸಿಗುವುದು ಕೇವಲ 25 ರೂ. ಮಾತ್ರ.

ಗ್ರಾಹಕರ ಗಳಿಕೆಯ ವೆಚ್ಚ: 300ರೂ. (ಆರಂಭದಲ್ಲಿ ಅವರು ರಿಯಾಯಿತಿ ದರಗಳನ್ನು ನೀಡಿದರೂ ನಂತರ ಈ ದರಗಳು ಏರಿಕೆಯಾಗುತ್ತವೆ.)

ಗ್ರಾಹಕರ ಬೆಂಬಲ ಬೆಲೆ: ಪ್ರತಿ ಬೇಡಿಕೆಗೂ 20 ರೂ.(ಅವರ ಬೆಂಬಲ ಬೆಲೆ ತುಂಬಾ ಹೆಚ್ಚಾಗಿರುತ್ತವೆ. ಏಕೆಂದರೆ ಅವರು ತಮ್ಮ ಆರ್ಡರ್‌ಗಳ ಸ್ಟೇಟಸ್ ತಿಳಿದುಕೊಳ್ಳಲು ತುಂಬಾ ಕರೆಗಳನ್ನು ಗ್ರಾಹಕರಿಂದ ಸ್ವೀಕರಿಸುತ್ತಾರೆ. ಅವರು ಡೆಲಿವರಿ ವಿಭಾಗದ ಯಜಮಾನರಾಗಿರದಿರುವ ಕಾರಣ ಅವರು ಸಮರ್ಪಕ ಉತ್ತರ ನೀಡುವುದು ಅಸಾಧ್ಯ. )

ಇದರರ್ಥ ಅವರು ಪಡೆಯುವ ಪ್ರತಿ ಆರ್ಡರ್‌ಗಳಿಂದಲೂ ಅವರು 25.ರೂಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಅವರು ಇದಕ್ಕಾಗಿ ವ್ಯಯಿಸುವುದು 320 ರೂ.ಗಳು. ಮರು ಬೇಡಿಕೆ ಪಡೆಯಲು ರಿಯಾಯಿತಿ ದರಗಳನ್ನು ನೀಡುತ್ತಲೇ ಹೋದರೆ ಅವರ ಗ್ರಾಹಕರ ಗಳಿಕೆಯ ವೆಚ್ಚ ಕಡಿಮೆಯಾಗಲು ಸಾಧ್ಯವೇ ಇಲ್ಲ. ಇದರರ್ಥ ಒಬ್ಬ ಗ್ರಾಹಕ ತಿಂಗಳಿಗೆ 10 ಬಾರಿ ಈ ವೆಬ್‌ಸೈಟ್‌ಗಳ ಮೂಲಕ ಆರ್ಡರ್ ಮಾಡಿದರೆ ಸಂಸ್ಥೆ ಹಣ ಮಾಡುವುದು ಸಾಧ್ಯವೇ ಇಲ್ಲ.

ಇಂತಹ ಕೆಟ್ಟ ಆರ್ಥಿಕ ಘಟಕಗಳು ಉದ್ಯಮದಲ್ಲಿ ಹೇಗೆ ಲಾಭದಾಯಕವಾಗಿರಲು ಸಾಧ್ಯ ಅಥವಾ ನಿರಂತರ ಫಂಡಿಂಗ್ ಇಲ್ಲದೇ ಹೇಗೆ ಸಂಸ್ಥೆಯೊಂದು ಉಳಿದುಕೊಳ್ಳಲು ಸಾಧ್ಯ?

2.ಫುಡ್ ಟೆಕ್ ಕಂಪನಿಗಳು ದೈನಂದಿನ ಊಟದ ವಿತರಣೆಗಾಗಿ ಬೇಡಿಕೆ ಪಡೆಯುವಲ್ಲಿ ಪ್ರಾವೀಣ್ಯತೆ ಹೊಂದಿವೆ. ಉದಾಹರಣೆಗೆ ಸ್ಪೂನ್ ಜಾಯ್ ಸರಾಸರಿ 100ರೂ. ಮೌಲ್ಯದ ಬೇಡಿಕೆ ಪಡೆಯುತ್ತಿವೆ. ಈಗ ಅವರ ಆರ್ಥಿಕ ಘಟಕಗಳ ಬಗ್ಗೆ ತಿಳಿದುಕೊಳ್ಳೋಣ.

ಆಹಾರದ ಮೌಲ್ಯ: 30 ರೂ.ಗಳು(ಮೆನು ದಿನವೂ ಬದಲಾಗುತ್ತಿದ್ದರೆ ಅವರ ವೇಸ್ಟೇಜ್ ಕೂಡ ಹೆಚ್ಚಾಗುತ್ತದೆ. ನಂತರ ಇದರ ಮೌಲ್ಯ ಹೆಚ್ಚಾಗುತ್ತದೆ.)

ವಿತರಣಾ ದರ: 80 ರೂ.ಗಳು(ಒಮ್ಮೆ ವಿತರಣಾ ವಿಧಾನದಲ್ಲಿ ಹೊಂದಾಣಿಕೆಯಾದರೆ ಈ ದರ 50 ರೂ.ಗೆ ಇಳಿಯುತ್ತದೆ ಮತ್ತು ಸ್ಥಿರ ಸ್ಥಿತಿಗೆ ತಲುಪುತ್ತದೆ. ಸಂಸ್ಥೆ ಈ ದರ ಮಾಪನವನ್ನು ಏರಿಕೆ ಮಾಡಿದರೆ ಅದು 80 ರಿಂದ 100 ರೂ.ಒಳಗಿರುತ್ತವೆ. ಏಕೆಂದರೆ ವಿತರಣೆ ಮಾಡುವ ಹುಡುಗರ ಸಂಬಳಕ್ಕೆ ಅನುಗುಣವಾಗಿ ಸಮರ್ಥಿಸಿಕೊಳ್ಳಲು ಅವರ ಬಳಿ ಸಮರ್ಪಕ ಮಾದರಿಯ ಮಾಪನ ಇರುವುದಿಲ್ಲ)

ಪ್ಯಾಕೇಜಿಂಗ್ ದರ: 20 ರೂ.

ನಾವಿನ್ನೂ ಗ್ರಾಹಕರ ಗಳಿಕೆಯ ವೆಚ್ಚವನ್ನು ಸೇರಿಸಿಲ್ಲ ಮತ್ತು ನಾವು 100 ರೂ. ಮತ್ತು 130 ರೂ. ವೆಚ್ಚಕ್ಕೆ ಆದಾಯದ ಕುರಿತು ನೋಡುತ್ತಿದ್ದೇವೆ ಎಂಬುದು ನಿಮ್ಮ ಗಮನದಲ್ಲಿರಲಿ. ಇಲ್ಲವಾದರೆ ನಾವು ಉದ್ಯಮ ಮಾದರಿಯ ಕುರಿತು ಮತ್ತೆ ಕಾರ್ಯನಿರ್ವಹಿಸಬೇಕಾಗುತ್ತದೆ ಮತ್ತು ಡೆಲಿವರಿ ಮತ್ತು ಪ್ಯಾಕೇಜಿಂಗ್ ದರಗಳನ್ನು ಕೈಬಿಡಬೇಕಾಗುತ್ತದೆ. ಏನೇ ಆದರೂ ಈ ಮಾದರಿ ಲಾಭದಾಯಕವಾಗಿರಲು ಸಾಧ್ಯವಿಲ್ಲ.

ಹಾಗಾದರೆ ಫುಡ್ ಟೆಕ್ ಕ್ಷೇತ್ರದಲ್ಲಿ ಯಾವುದೇ ಲಾಭದಾಯಕ ಉದ್ಯಮ ನಡೆಸುವುದು ಸಾಧ್ಯವಿಲ್ಲವೇ?

ನೀವು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದರತ್ತ ಗಮನಹರಿಸುವುದರಿಂದ ಮತ್ತು ಆರ್ಥಿಕ ಘಟಕವನ್ನು ಮನಸ್ಸಿನಲ್ಲಿಟ್ಟುಕೊಂಡು ಸಮರ್ಪಕ ಉದ್ಯಮ ಮಾದರಿಯನ್ನು ರೂಪಿಸುವುದರಿಂದ ಈ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು.

ನೀವು ಗ್ರಾಹಕನ ದೈನಂದಿನ ಊಟದ ಸಮಸ್ಯೆಯನ್ನು ಬಗೆಹರಿಸುತ್ತೀರೋ ಅಥವಾ ಗ್ರಾಹಕರ ಅಗತ್ಯದ ಬೇಡಿಕೆಯ ಸಮಸ್ಯೆಯನ್ನು ಪರಿಹರಿಸುವುದರತ್ತ ಗಮನಹರಿಸುತ್ತೀರೋ ಎಂಬುದರ ಬಗ್ಗೆ ನೀವು ಖಚಿತ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದರಿಂದ ಸಾಕಷ್ಟು ಬದಲಾವಣೆ ತರುವುದು ಸಾಧ್ಯವಿದೆ.

ಗ್ರಾಹಕರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವುದರ ಮೂಲಕ ಸಮರ್ಪಕ ಫುಡ್ ಟೆಕ್ ಸಂಸ್ಥೆಯೊಂದನ್ನು ಹೇಗೆ ಬೆಳೆಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಅ) ದೈನಂದಿನ ಊಟದ ಸಮಸ್ಯೆ

ಜನರ ದೈನಂದಿನ ಊಟದ ಅಗತ್ಯಗಳನ್ನು ಬಗೆಹರಿಸುವಲ್ಲಿ ನೀವು ಹೇಗೆ ಸಹಕರಿಸಬಲ್ಲಿರಿ?

ಈ ಗ್ರಾಹಕರಿಗೆ ಸಂಬಂಧಿಸಿದಂತೆ 2 ಪ್ರಮುಖ ಸಮಸ್ಯೆಗಳಿವೆ

1) ಕಡಿಮೆ ವೆಚ್ಚ- ಗ್ರಾಹಕರು 100 ರೂ. ಒಳಗೆ ಏನನ್ನಾದರೂ ಬಯಸುತ್ತಾರೆ .

2) ರುಚಿಯಲ್ಲಿ ವೈವಿಧ್ಯತೆ- ಒಂದೇ ರುಚಿಯ ಆಹಾರವನ್ನು ಪದೇ ಪದೇ ಸೇವಿಸಲು ಗ್ರಾಹಕರು ಇಚ್ಛಿಸುವುದಿಲ್ಲ.

ಇಲ್ಲಿ ಗ್ರಾಹಕರು ಆಹಾರಕ್ಕೆ ಚೆಂದದ ಪ್ಯಾಕೇಜಿಂಗ್ ಇರುವುದು ಅಗತ್ಯವೆಂದು ಭಾವಿಸುವುದಿಲ್ಲ. ಹೀಗಾಗಿ ಇಲ್ಲಿ ನೀವು ಕಡಿಮೆ ದರದಲ್ಲಿ ವೈವಿಧ್ಯಮಯ ರುಚಿಯ ಆಹಾರವನ್ನು ನೀಡುವುದರತ್ತ ಮಾತ್ರ ನೀವು ಗಮನ ಹರಿಸಬೇಕು. ಇದಕ್ಕಾಗಿ ನೀವು ಫ್ಯಾನ್ಸಿ ಬಾಕ್ಸ್‌ಗಳ ಪ್ಯಾಕೇಜಿಂಗ್ ಬಳಸಬೇಕೆಂದಿಲ್ಲ(ಈ ಮೂಲಕ ನೀವು ಪ್ರತಿ ಬೇಡಿಕೆಯ ಮೇಲೆ 10ರೂ.ಗಳನ್ನು ಉಳಿಸಬಹುದು).

ಬೇಡಿಕೆ ಆಧಾರಿತ ಆರ್ಡರ್‌ಗಳನ್ನು ನೀವು ನಿರ್ಲಕ್ಷಿಸಬೇಕು ಮತ್ತು ಗ್ರಾಹಕರು ತಮ್ಮ ಬೇಡಿಕೆಯನ್ನು ಮುಂಚಿತವಾಗಿ ಕಾಯ್ದಿರಿಸುತ್ತಾರೆಯೋ ಅಥವಾ ಊಟದ ಚಂದಾದಾರರಾಗುತ್ತಾರೆಯೋ ಎಂಬುದನ್ನು ಗ್ರಾಹಕರನ್ನು ಕೇಳುವುದರ ಮೂಲಕ ವಿವಿಧ ಬೇಡಿಕೆಗಳನ್ನು ಒಟ್ಟುಗೂಡಿಸಿಕೊಳ್ಳಬಹುದು.(ಇದರಿಂದ ನಿಮ್ಮ ವಿತರಣಾದರಗಳು ಪ್ರತಿ ಬೇಡಿಕೆಗೂ 10 ರೂ.ಗಳಿಗಿಂತಲೂ ಕಡಿಮೆಯಾಗಬಹುದು. ಇದರಿಂದ ಆರ್ಥಿಕತೆ ಸುಧಾರಿಸಬಹುದು.)

ಆ) ಬೇಡಿಕೆ ಆಧಾರಿತ ಅಗತ್ಯಗಳು

ನೀವು ಬೇಡಿಕೆ ಆಧಾರದ ಮೇಲೆ ಗ್ರಾಹಕರ ಅಗತ್ಯಗಳನ್ನು ಪೂರೈಸಬೇಕೆಂದಿದ್ದರೆ(ಗ್ರಾಹಕ ಮೀಟಿಂಗ್‌ಗಳಿಗಾಗಿ ಆರ್ಡರ್ ಮಾಡುತ್ತಿದ್ದಾರೋ, ಯಾವುದಾದರೂ ನಿಗದಿತ ಸಂದರ್ಭಗಳಿಗಾಗಿ ಆರ್ಡರ್ ಮಾಡುತ್ತಿದ್ದಾರೋ ಅಥವಾ ವಿಭಿನ್ನ, ವಿಶೇಷ ಆಹಾರವನ್ನು ಸೇವಿಸಬೇಕೆಂದಿದ್ದಾರೋ ಎಂದು ವಿಚಾರಿಸಿಕೊಳ್ಳಬೇಕು) ಗ್ರಾಹಕರ ಅಗತ್ಯಗಳೇನೆಂದು ತಿಳಿದುಕೊಂಡು ವಿತರಣೆ ಮಾಡಬೇಕು.

1. ಗ್ರಾಹಕರಿಗೆ ಅದ್ಭುತವಾದ ಅನುಭವ ನೀಡುವುದು(ಆರ್ಡರಿಂಗ್, ಪ್ಯಾಕೇಜಿಂಗ್ ಮತ್ತು ವಿತರಣಾ ಸಮಯದ ವಿಚಾರಗಳು ಇದರಲ್ಲಿ ಒಳಗೊಂಡಿರುತ್ತದೆ)

2. ಸ್ಥಿರವಾದ ಅದ್ಭುತವಾದ ರುಚಿ(ದೈನಂದಿನ ಊಟದ ಸೆಗ್ಮೆಂಟ್‌ಗೆ ವಿರುದ್ಧವಾಗಿ ಇಲ್ಲಿ ಗ್ರಾಹಕ ಯಾವುದೇ ಸರ್‌ಪ್ರೈಸ್‌ಗಳಿರಬೇಕೆಂದು ಬಯಸುವುದಿಲ್ಲ. ಅವರು ಹಿಂದೆ ಆರ್ಡರ್ ಮಾಡಿದ್ದಾಗ ಸಿಕ್ಕಿದ ಅದ್ಭುತವಾದ ರುಚಿಯನ್ನಷ್ಟೇ ಬಯಸುತ್ತಾರೆ)

3. ಬೇಡಿಕೆ ಆಧಾರದ ವಿತರಣೆ. ನೀವು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಗ್ರಾಹಕರು ಬಯಸಿದ ಆಹಾರವನ್ನು ವಿತರಿಸಬೇಕು. ಇಲ್ಲಿ ನೀವು ಗ್ರಾಹಕರು ಬೇಡಿಕೆಯನ್ನು ಮುಂಚಿತವಾಗಿ ಕಾಯ್ದಿರಿಸಬೇಕು ಅಥವಾ ಆಹಾರಕ್ಕೆ ಚಂದಾದಾರರಾಗಬೇಕೆಂದು ಬಯಸಬಾರದು.

ಇಂತಹ ಸಂದರ್ಭಗಳಲ್ಲಿ ಗ್ರಾಹಕರು 200 ರೂ.ಗಳಿಗಿಂತಲೂ ಹೆಚ್ಚು ಹಣ ಪಾವತಿಸಲು ಸಿದ್ಧರಿರುತ್ತಾರೆ. ಮೇಲ್ಕಂಡ ಎಲ್ಲವನ್ನೂ ಸಾಧಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಆದರೆ ಇದನ್ನೆಲ್ಲಾ ನಾವು ಪೀಟೂ ಸಂಸ್ಥೆಯಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ.

ಅದ್ಭುತವಾದ ರುಚಿಯನ್ನು ಸ್ಥಿರವಾಗಿರಿಸಿಕೊಳ್ಳಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ವಿತರಣಾ ವ್ಯವಸ್ಥೆ ಮತ್ತು ಕೊನೆಗೊಳ್ಳದ ಹೊಸ ಪ್ರಯತ್ನಗಳಿಂದ ಗ್ರಾಹಕರಲ್ಲಿ ಅದ್ಭುತವಾದ ಅನುಭವ ಮೂಡಿಸುವುದು ಸಾಧ್ಯವಿದೆ.

ಒಮ್ಮೆ ನೀವು ಯಾವ ಸಮಸ್ಯೆಯನ್ನು ಪರಿಹರಿಸಲು ಯತ್ನಿಸುತ್ತಿದ್ದೀರಿ ಎಂಬುದು ನಿಮಗೇ ತಿಳಿದರೆ ವಿಚಾರಗಳು ಬಹಳ ಸರಳವಾಗುತ್ತದೆ. ಅವ್ಯವಸ್ಥೆಯ ಅಲೆಗಳೇ ಅಪ್ಪಳಿಸಿದರೂ ನೀವೆಂದಿಗೂ ನಿಮ್ಮ ಗಮನ, ಏಕಾಗ್ರತೆಯನ್ನು ಕಳೆದುಕೊಳ್ಳಬಾರದು.

ಫುಡ್ ಟೆಕ್ ಉದ್ಯಮಕ್ಕೆ ಭಾರತದಲ್ಲಿ ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಲಾಗಿದೆ. ಈ ಉದ್ಯಮದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಒಳ್ಳೆಯ ಸಮಯ ಬೇರೆ ಸಿಗುವುದು ಸಾಧ್ಯವೇ ಇಲ್ಲ. ನಿಮ್ಮ ಉದ್ಯಮದ ಮಾದರಿ ಸಮರ್ಪಕವಾಗಿದೆ, ಆರ್ಥಿಕ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಉತ್ತಮ ತಂಡವನ್ನು ನೀವು ಹೊಂದಿದ್ದೀರಿ ಎಂಬ ನಂಬಿಕೆ ನಿಮಗಿದ್ದರೆ ಫುಡ್‌ ಟೆಕ್ ವಿಭಾಗದಲ್ಲಿ ಖಂಡಿತವಾಗಿಯೂ ಹೂಡಿಕೆ ಮಾಡಲು ಇದು ಸರಿಯಾದ ಸಮಯವಾಗಿದೆ.

ಆಹಾರ ವಿತರಣಾ ಮಾರುಕಟ್ಟೆ ಈಗಷ್ಟೇ ವಿಸ್ತಾರಗೊಳ್ಳುತ್ತಿದೆ ಮತ್ತು ಕೆಲವೇ ವರ್ಷಗಳಲ್ಲಿ ಫುಡ್‌ಟೆಕ್ ಕ್ಷೇತ್ರದಲ್ಲಿ 5 ಯುನಿಕಾರ್ನ್ ಗಳು ಇರುತ್ತವೆ ಎಂದು ಹೇಳಲಾಗುತ್ತಿದೆ.


ಅನುವಾದಕರು: ವಿಶ್ವಾಸ್​