ಈಕೆ ವಿಕಲಚೇತನರ ಬದುಕಿನ ‘ಮಧು’ಮಿತಾ...!

ಟೀಮ್​​ ವೈ.ಎಸ್​. ಕನ್ನಡ

ಈಕೆ ವಿಕಲಚೇತನರ ಬದುಕಿನ ‘ಮಧು’ಮಿತಾ...!

Sunday December 20, 2015,

3 min Read

ದೇಶದೆಲ್ಲೆಡೆ ದೇವಸ್ಥಾನಗಳಲ್ಲಿ ದೇವರಿಗೆ ಇಂದು ಹಾಕಿದ ಹೂವನ್ನು ಮಾರನೇ ದಿನ ಮುಂಜಾನೆ ತೆಗೆದು ಹೊಸ ಹೂವಿನ ಅಲಂಕಾರ ಮಾಡುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಅದೇ ದೇಗುಲದಲ್ಲಿ ಎಸೆದ ಹೂವಿನಿಂದ ವ್ಯಾಪಾರ ಪ್ರಾರಂಭಿಸಿ ಯಶಸ್ವಿಯಾದ ಉದ್ದಿಮೆಯ ಕತೆ ಇಲ್ಲಿದೆ.

ಅದು ನವದೆಹಲಿಯಲ್ಲಿರುವ ಸಣ್ಣ ದೇವಸ್ಥಾನ. ಅಲ್ಲಿ ಪ್ರತಿನಿತ್ಯವೂ ಅರ್ಚಕರು ದೇವರಿಗೆ ಅಲಂಕಾರ ಮಾಡಿದ ಹೂವನ್ನು ತೆಗೆದು ಸ್ವಚ್ಛಗೊಳಿಸಿ ಹೊಸ ಹೂವಿನ ಅಲಂಕಾರ ಮಾಡುತ್ತಿದ್ದರು. ಇದರಲ್ಲಿ ವಿವಿಧ ವಿನ್ಯಾಸದ ಹಾರಗಳು, ಬಗೆ ಬಗೆಯ ಪುಷ್ಪಗಳೂ ಸೇರಿರುತ್ತಿದ್ದವು. ದೇಗುಲದ ಆಡಳಿತ ಮಂಡಳಿಯು ಈ ಹೂವಿನ ತ್ಯಾಜ್ಯಗಳನ್ನೆಲ್ಲ ಪಕ್ಕದಲ್ಲಿದ್ದ ಯಮುನಾ ನದಿಯಲ್ಲಿ ಎಸೆದು ಬರಲು ಒಬ್ಬ ಕೆಲಸಗಾರನನ್ನು ನೇಮಿಸಿದ್ದರು. ಆದರೆ ಆತ ಶುದ್ಧ ಸೋಮಾರಿ. ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಬದಲಿಗೆ ನಿತ್ಯವೂ ಸಂಗ್ರಹವಾಗುವ ಹೂವನ್ನು ದೇವಸ್ಥಾನದಲ್ಲಿರುವ ಮೂಲೆಯೊಂದರಲ್ಲಿ ಎಸೆದು ಬಿಡುತ್ತಿದ್ದ. ವಾರಕ್ಕೊಮ್ಮೆಯೋ ಅಥವಾ ಹದಿನೈದು ದಿನಗಳಿಗೊಮ್ಮೆಯೋ ಈ ಹೂವಿನ ತ್ಯಾಜ್ಯಗಳನ್ನೆಲ್ಲ ತೆಗೆದುಕೊಂಡು ಹೋಗಿ ನದಿಯಲ್ಲಿ ಎಸೆದು ಬರುತ್ತಿದ್ದ. ಹೀಗೆ ಸಂಗ್ರಹಿಸಿಟ್ಟ ಹೂವಿನ ತ್ಯಾಜ್ಯಗಳಿಂದ ಸುತ್ತಲಿನ ಪರಿಸರವೆಲ್ಲ ದುರ್ನಾತದಿಂದ ಕೂಡಿರುತ್ತಿತ್ತು. ಸ್ಥಳೀಯರು ಎಷ್ಟು ಬಾರಿ ಮನವಿ ಮಾಡಿಕೊಂಡರೂ ಆತ ಮಾತ್ರ ತನ್ನ ಕೆಲಸವನ್ನು ಸೂಕ್ತವಾಗಿ ನಿರ್ವಹಿಸುತ್ತಿರಲಿಲ್ಲ.

image


ಹೀಗಾಗಿ ಸ್ಥಳೀಯರಿಗೆ ಇದ್ದಿದ್ದು ಕೇವಲ ಎರಡೇ ದಾರಿಗಳು. ಮೊದಲನೆಯದು, ಅವರೆಲ್ಲರೂ ಆ ದುರ್ನಾತದ ನಡುವೆಯೇ ಜೀವನ ಸಾಗಿಸುವುದು ಅಥವಾ ತಾವೇ ಮುಂದೆ ಬಂದು ಅಲ್ಲಿರುವ ಕೊಳೆತ ಹೂವಿನ ರಾಶಿಯನ್ನು ಕ್ಲೀನ್ ಮಾಡುವುದು ಅನಿವಾರ್ಯವಾಗಿತ್ತು.

ವಿಶೇಷ ಎಂದರೆ ಇದರ ನಡುವೆಯೂ ಅವರಿಗೆ ಮತ್ತೊಂದು ಸುವರ್ಣಾವಕಾಶವೊಂದು ಒದಗಿತು. ‘ಅವಸಾಯಂ’ ಎನ್ನುವ ಅಭಿವೃದ್ಧಿಶೀಲ ಯೋಜನೆಯೊಂದರ ಬಗೆಗೆ ಮಾಹಿತಿ ತಿಳಿಯಿತು. ಅವಸಾಯಂ ಎನ್ನುವುದು ಸಂಸ್ಕೃತದ ಶಬ್ದವಾಗಿದ್ದು, ಹೂವುಗಳನ್ನು ಒಗ್ಗೂಡಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಅದೇ ರೀತಿಯಲ್ಲಿ ಅಲ್ಲಿನ ನಿವಾಸಿಗಳು ಮಾಡಿದರು. ಅಂದರೆ ದೇವಸ್ಥಾನದಲ್ಲಿ ಎಸೆದ ಒಣಗಿದ ಹೂವುಗಳನ್ನು ಒಟ್ಟುಗೂಡಿಸಿ ನದಿಗೆ ಎಸೆಯುವ ಬದಲು ಅದರ ಮರು ಸಂಸ್ಕರಣೆ ಮಾಡಲು ಮುಂದಾದರು. ಒಣಗಿದ ಹೂವುಗಳಿಂದ ಸಾವಯವ ಹಾಗೂ ವೈವಿಧ್ಯಮಯವಾದ ಬಣ್ಣಗಳನ್ನು ಅಲ್ಲಿನ ಜನ ತಯಾರಿಸಲು ಪ್ರಾರಂಭಿಸಿದರು. ಇವುಗಳನ್ನು ಬಟ್ಟೆಗಳಿಗೆ, ರಂಗೋಲಿ, ಹೋಳಿ ಮತ್ತಿತರ ಹಬ್ಬಗಳಲ್ಲಿ ಬಳಸಲಾಗುತ್ತದೆ. ಈ ಬಣ್ಣಗಳಿಗೆ ದೇವಸ್ಥಾನದಲ್ಲಿ ದೇವರಿಗೆ ಅಲಂಕಾರಿಕವಾಗಿ ನಿತ್ಯವೂ ಉಪಯೋಗಿಸುವ ಹೂವು ಪ್ರಮುಖ ಕಚ್ಚಾಪದಾರ್ಥವಾಗಿದೆ. ಅದರಲ್ಲೂ ದೇವಸ್ಥಾನಗಳಲ್ಲಿ ಹೂವುಗಳನ್ನು ಪ್ರಸಾದದ ರೀತಿಯಲ್ಲಿ ಬರುವ ಭಕ್ತರಿಗೆ ಕೊಡುತ್ತಾರೆ ಎಂದು ಬಣ್ಣ ತಯಾರಿಸುವ ಉದ್ದಿಮೆಗೆ ಕಾರಣೀಕರ್ತರಾದ ಮಧುಮಿತಾ ಪುರಿ ಅವರು ವಿವರಿಸುತ್ತಾರೆ.

‘ಅವಸಾಯಂ’ ತಯಾರಿಸುವ ವಿಧಾನ

ಈ ವಿಧಾನದಲ್ಲಿ ಬಣ್ಣ ತಯಾರಿಸುವ ಮೊದಲು ಹೂವುಗಳನ್ನು ಪ್ರತ್ಯೇಕಿಸಬೇಕಾಗುತ್ತದೆ. ಬಳಿಕ ಕತ್ತರಿಸಿ, ಒಣಗಿಸಿ, ಪುಡಿ ಮಾಡಿ ನೈಸರ್ಗಿಕವಾದ ಬಣ್ಣವನ್ನು ಉತ್ಪಾದಿಸಬೇಕಾಗುತ್ತದೆ. ಅಂದರೆ ಸುಮಾರು 100 ಕೆಜಿ ಹೂವುಗಳಿಗೆ 1 ಕೆಜಿಯಷ್ಟು ಒಣಗಿದ ಪುಡಿ ಸಿಗುತ್ತದೆ. ಇದರಲ್ಲಿ ಹೂವಿನ ಸುವಾಸನೆ ಕಳೆದುಕೊಳ್ಳುತ್ತದೆ. ಆದರೆ ಅದರ ನೈಸರ್ಗಿಕ ಬಣ್ಣ ಹಾಗೇ ಉಳಿಯುತ್ತದೆ. ಅಲ್ಲದೆ ಇದರಲ್ಲಿ ವೈವಿಧ್ಯಮಯವಾದ ಬಣ್ಣದ ಪುಡಿಗಳನ್ನೂ ತಯಾರಿಸಬಹುದಾಗಿದೆ. ಅದನ್ನು ವಿಭಿನ್ನ ಗಾತ್ರದಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ.

ಈ ಅವಸಾಯಂ ಎನ್ನುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು 2004ರಲ್ಲಿ ಪ್ರಾರಂಭಿಸಲಾಯಿತು. ಬಳಿಕ ಹಲವು ಪ್ರಯೋಗ, ಪರೀಕ್ಷೆಗಳನ್ನು ಮಾಡಿ ಇದರಿಂದ ಸಮುದಾಯದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಪ್ರಮಾಣೀಕರಿಸಲಾಯಿತು. ಅಲ್ಲದೆ 2008ರಲ್ಲಿ ಇದರ ಯಶಸ್ಸಿಗೆ ಸಹಕಾರಿ ತತ್ವವನ್ನು ಅಳವಡಿಸಲಾಯಿತು.

ನಮಗೆಲ್ಲ ಅಚ್ಚರಿಯಾಗುತ್ತದೆ. ಈ ಕಾರ್ಯವಿಧಾನದಲ್ಲಿ ಸಾಕಷ್ಟು ಧನಾತ್ಮಕ ಅಂಶಗಳಿವೆ. ನೈಸರ್ಗಿಕ ಬಣ್ಣ ತಯಾರಿಕಾ ವಿಧಾನದಲ್ಲಿ ಹಾಗೂ ಯಂತ್ರಗಳಿಗೆ ಕಡಿಮೆ ವೆಚ್ಚವಾಗುತ್ತದೆ. ಅಲ್ಲದೆ ಇದು ಸುಸ್ಥಿರ ಮತ್ತು ಮರುಬಳಕೆ ಮಾಡಬಹುದಾಗಿದೆ. ಈ ಬಣ್ಣ ತಯಾರಿಸಲು ಬೇಕಾಗುವ ಕಚ್ಚಾ ಪದಾರ್ಥವು ದೇವಸ್ಥಾನಗಳು, ಹೊಟೇಲ್ ಮೊದಲಾದ ಸ್ಥಳಗಳಿಂದ ವರ್ಷ ಪೂರ್ತಿ ಲಭ್ಯವಾಗುತ್ತದೆ. ಹಬ್ಬದ ಸಮಯಗಳಲ್ಲಿ, ಮುಖ್ಯವಾಗಿ ಜನ್ಮಾಷ್ಟಮಿ ಮತ್ತು ಮದುವೆಯ ಕಾಲದಲ್ಲಿ ಯತೇಚ್ಛವಾಗಿ ಹೂವು ದೊರೆಯುತ್ತದೆ. ಇದರ ಹೊರತಾಗಿ ಉಳಿದ ಋತುಗಳಲ್ಲಿ ಅವು ದೊರೆಯುವ ಪ್ರಮಾಣ ಕಡಿಮೆಯಾಗಿರುತ್ತದೆ ಎಂದು ಮಧುಮಿತಾ ಮಾಹಿತಿ ನೀಡುತ್ತಾರೆ.

ಮಾರುಕಟ್ಟೆಯಲ್ಲಿರುವ ಔಟ್ಲೆಟ್ಗಳು ಪರಿಸರ ಸಚಿವಾಲಯಕ್ಕೆ ಧನಾತ್ಮಕ ವರದಿ ನೀಡಿವೆ. ಅಲ್ಲದೆ ಸರಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ದಿಲ್ಲಿ ಹಾತ್ನಲ್ಲಿ ಮಾರಾಟ ಮಾಡಲು ದೆಹಲಿ ರಾಜ್ಯ ಪರಿಸರ ಇಲಾಖೆಯು ಅನುಮತಿ ನೀಡಿದೆ. ಜೊತೆಯಲ್ಲಿ ಈ ವಿಧಾನದ ಮೂಲಕ ಕಸ ವಿಲೇವಾರಿಯಿಂದ ಪರಸರದ ಮೇಲಾಗುತ್ತಿದ್ದ ತೊಂದರೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ವಿವರಿಸುತ್ತಾರೆ.

ಅವಸಾಯಂ ವಿಧಾನದ ಮೂಲಕ ಬಣ್ಣ ತಯಾರಿಸಲು ಸದ್ಯ ಮಧುಮಿತಾ ಅವರ ಜೊತೆಯಲ್ಲಿ ಸುಮಾರು 40 ಯುವಕರು, ಬೌದ್ಧಿಕ ನ್ಯೂನತೆಯುಳ್ಳವರು, ಪಾರ್ಶ್ವವಾಯು ಪೀಡಿತರು, ಮನೋವಿಕಲರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಉತ್ತರ ದೆಹಲಿಯಲ್ಲಿರುವ ವಿವಿಧ ದೇವಸ್ಥಾನಗಳು, ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ 5-ಸ್ಟಾರ್ ಹೊಟೇಲ್ಗಳಿಂದ ಹೂವುಗಳನ್ನು ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ಹೂವುಗಳನ್ನು 45 ಜನ ಅಂಗವಿಕಲರು ವಿವಿಧ ವಿಧಾನಗಳ ಮೂಲಕ ಬಣ್ಣ ತಯಾರಿಸುತ್ತಾರೆ. ಇದೇ ಹೂವುಗಳಿಂದ 15 ಮಂದಿ ದೃಷ್ಟಿ ಕಳೆದುಕೊಂಡಿರುವವವರ ಕೈಯಲ್ಲಿ ಮಾಡಿದ ಊದಿನ ಕಡ್ಡಿಯನ್ನು ತಯಾರಿಸುತ್ತಾರೆ.

image


ಮಧುಮಿತಾ ಅವರ ಸಮಾಜಮುಖಿ ಕಾರ್ಯಕ್ಕೆ ದೆಹಲಿಯ 6 ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿದ್ದು, ವಿವಿಧ ಹೊಟೇಲ್ ಹಾಗೂ ದೇವಸ್ಥಾನಗಳು ಸ್ವಯಂಪ್ರೇರಣೆಯಿಂದ ಹೂವಿನ ತ್ಯಾಜ್ಯಗಳನ್ನು ಇವರಿಗೆ ನೀಡುತ್ತಿವೆ.

ಅವಸಾಯಂ ಸಂಸ್ಥೆಯು ಮಾಡುತ್ತಿರುವ ಕೆಲಸವನ್ನು ಕೇಂದ್ರ ಪರಿಸರ ಸಚಿವಾಲಯ ಗುರುತಿಸಿ ಗೌರವಿಸಿದೆ. ಅಲ್ಲದೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಏಷ್ಯಾ-ಪೆಸಿಫಿಕ್ ವಿಭಾಗವು 2013ರ ಡಿಸೆಂಬರ್ನಲ್ಲಿ ಮಧುಮಿತಾ ಅವರಿಗೆ ‘ವಾರ್ಷಿಕ ವಿಕಲಚೇತನರನ್ನೊಳಗೊಂಡ ವ್ಯಾಪಾರೋದ್ಯಮ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಲೇಖಕರು: ಬೈಶಾಲಿ ಮುಖರ್ಜಿ

ಅನುವಾದಕರು: ಎಸ್.ಡಿ.