ಎ.ಸಿ. ಬಸ್​​ ಪ್ರಯಾಣ ಆರಾಮ..! ಇಂಜಿನಿಯರ್​​​ ಸ್ಟೂಡೆಂಟ್​​ಗಳಿಂದ ಫೈರ್​ ಎಗ್ಸಿಟ್​ ಪ್ಲಾನ್​​​

ಪಿ ಅಭಿನಾಷ್​​

ಎ.ಸಿ. ಬಸ್​​ ಪ್ರಯಾಣ ಆರಾಮ..! ಇಂಜಿನಿಯರ್​​​ ಸ್ಟೂಡೆಂಟ್​​ಗಳಿಂದ ಫೈರ್​ ಎಗ್ಸಿಟ್​ ಪ್ಲಾನ್​​​

Friday October 09, 2015,

3 min Read

ಏರ್​​ ಕಂಡಿಷನ್ಡ್​ ಬಸ್​​ಗಳಲ್ಲಿ ಹೋಗಬೇಕು ಅನ್ನೋದು ಆಸೆ. ಆದ್ರೆ ಸಾಲು ಸಾಲು ಎ.ಸಿ ಬಸ್​​ಗಳ ಅಪಘಾತದ ನಂತ್ರ, ಎ.ಸಿ ಬಸ್​​ಗಳನ್ನ ಹತ್ತೋಕೆ ಸ್ವಲ್ಪ ಭಯ ಆಗತ್ತೆ. ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡ್ರೆ ಅನ್ನೋದನ್ನ ನೆನೆಸಿಕೊಂಡ್ರೆನೇ ದಿಗಿಲುಂಟಾಗತ್ತೆ. ಅವಘಡ ಸಂಭವಿಸಿದ್ರೆ, ಪಾರಾಗಲು, ಹಲವು ದಾರಿ ಇದೆ ಅಂತಾ ಹೇಳಿದ್ರೂ , ತುರ್ತು ನಿರ್ಗಮನಗಳು ವೈಜ್ಞಾನಿಕವಾಗಿಲ್ಲ. ಹೀಗಾಗಿ, ಎ.ಸಿ ಬಸ್​​ಗಳನ್ನ ಮತ್ತಷ್ಟು ಸೇಫ್ ಮಾಡೋಕೆ, ವಿಮಾನದಲ್ಲಿ ಬಳಸುವಂತ ಕಾಂನ್ಸೆಪ್ಟ್​​​ ರೆಡಿ ಮಾಡಿದ್ದಾರೆ ಸಿಲಿಕಾನ್ ಸಿಟಿಯ ಇಬ್ಬರು ವಿದ್ಯಾರ್ಥಿಗಳು.

image


ನಿಖಿಲ್, ನಿಟ್ಟೆ ಮೀನಾಕ್ಷಿ ಇನ್ಸ್​​ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೂರನೇ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಇನ್ನು ಪ್ರೀತಮ್ ಏಟ್ರಿಯಾ ಇನ್ಸ್​ಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಸ್ಟೂಡೆಂಟ್. ಈ ಇಬ್ಬರು ಸ್ನೇಹಿತರು ಅಭ್ಯಾಸದ ಜೊತೆಗೆ ಪ್ರಾಕ್ಟೀಕಲ್​​ಗಳನ್ನು ತಮ್ಮದೇ ಆಸಕ್ತಿಯಿಂದ ಮಾಡಿದ್ದಾರೆ. ಇನ್ನೂ ಪದವಿ ಪೂರೈಸದೇ ಇದ್ರೂ ಮುಂದೇನು ಮಾಡ್ತಿವಿ ಅನ್ನೋದರ ಬಗ್ಗೆ ಚಿಕ್ಕ ಝಲಕ್​​ ನೀಡಿದ್ದಾರೆ

ಎ.ಸಿ ಬಸ್​​ಗಳಲ್ಲಿ ಬೆಂಕಿ ಕಾಣಿಸಿಕೊಂಡ್ರೆ ಪಾರಾಗೋದು ಹೇಗೆ..? ಮೊದಲಿಗೆ ಕಿಟಿಕಿಯ ಗಾಜುಗಳನ್ನ ಪುಡಿ ಮಾಡಿ ಹೊರಬರಬಹುದು. ಆದ್ರೆ, ಎಂಟು ಅಡಿ ಎತ್ತರದಿಂದ ಕೆಳಗೆ ಧುಮುಕುವುದು ಕಷ್ಟ ಸಾದ್ಯ. ಇನ್ನು ಬಸ್​​ನ ಮೇಲ್ಚಾವಣಿಯಲ್ಲಿರುವ ನಿರ್ಗಮನದ ಮೂಲಕ ಹೊರಹೋಗುವ ಸೌಲಭ್ಯ ಇದ್ರೂ ಕೂಡ, ಆ ಸಮಯದಲ್ಲಿ ಎಷ್ಟು ಮಂದಿ ಹೊರಹೋಗಲು ಸಾಧ್ಯವಾಗತ್ತೆ ಹೇಳಿ..? ಜೊತೆಗೆ ತುರ್ತು ನಿರ್ಗಮದ ದ್ವಾರಗಳು ಬಲಗಡೆ ಇರತ್ತೆ. ಆದ್ರೆ, ಬಲಗಡೆಯಿಂದ ಮತ್ತೊಂದು ವಾಹನ ಸಂಚರಿಸುವಾಗ ಹೊರಗೆ ಜಂಪ್ ಮಾಡಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಅಂದಮೇಲೆ, ಎ.ಸಿ ಬಸ್ ಎಷ್ಟು ಸೇಫ್..? ಹೀಗಂತ ಯೋಚಿಸಿದ್ದು, ನಗರದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಹೌದು, ಇತ್ತೀಚೆಗೆ ಬಿಎಂಟಿಸಿ ಸೇರಿದಂತೆ ಕೆಎಸ್ಆರ್​ಟಿಸಿಯ ಹವಾನಿಯಂತ್ರಿತ ಬಸ್​​ಗಳಲ್ಲಿ ಬೆಂಕಿ ಕಾಣಿಸಿಕೊಳ್ಳೋದು ಹೆಚ್ಚಾಗಿದೆ. ಹಾಗಾಗೇ ವಿಮಾನದಲ್ಲಿ ಬಳಸಲಾಗುವ ಕಾಂನ್ಸೆಪ್ಟ್​​ನ್ನು ಬಸ್​ನಲ್ಲೂ ಬಳಸಬಹುದು ಅಂತಾ ತೋರಿಸಿಕೊಟ್ಟಿದ್ದಾರೆ ಇಬ್ಬರು ವಿದ್ಯಾರ್ಥಿಗಳು. 

ಪ್ರಶಸ್ತಿ ಸ್ವೀಕರಿಸುತ್ತಿರುವ ನಿಖಿಲ್​ ಮತ್ತು ಪ್ರೀತಂ

ಪ್ರಶಸ್ತಿ ಸ್ವೀಕರಿಸುತ್ತಿರುವ ನಿಖಿಲ್​ ಮತ್ತು ಪ್ರೀತಂ


ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡ್ರೆ ಕೆಲವೇ ಸೆಕೆಂಡ್​ಗಳಲ್ಲಿ ಬಸ್​​ನಿಂದ ಹೊರಜಿಗಿಯಲು ಹೊಸದೊಂದು ಮಾರ್ಗ ಕಂಡುಹಿಡಿದಿದ್ದಾರೆ. ಇನ್ನೋವೇಷನ್ ಸೇಫ್ಟಿ ಆಫ್ ಹೆವಿ ಪ್ಯಾಸೆಂಜರ್ ವೆಹಿಕಲ್ ಎನ್ನುವ ಕಾಂಸೆಪ್ಟ್ ಇದು. ಅಕಸ್ಮಾತ್ ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡ್ರೆ, ಬಸ್​​ನ ಎಡಭಾಗದಲ್ಲಿರುವ ಸೈಡ್ ವಾಲ್ ತೆರೆದುಕೊಳ್ಳುವಂತೆ ಬಸ್​​ ಡಿಸೈನ್ ಮಾಡಲಾಗತ್ತೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸುಮಾರು ಮೂರು ಮೀಟರ್ ಅಗಲಕ್ಕೆ ಬಸ್​​ನ ವಾಲ್ ತೆರೆದುಕೊಳ್ಳತ್ತೆ. ಆ ಮೂಲಕ ಒಂದೇ ಬಾರಿಗೆ ಸುಮಾರು ನಾಲ್ಕು ಮಂದಿ ಜೊತೆಗೆ ಹೊರ ಬರಬಹುದು. ಅಂದ್ರೆ, ಬಸ್​​ನಲ್ಲಿ ಸುಮಾರು 45 ಪ್ರಯಾಣಿಕರಿದ್ರೆ, ಒಂದು ನಿಮಿಷದಲ್ಲಿ ಎಲ್ಲರೂ ಸೇಫ್ ಆಗಿ ಬಸ್​ನಿಂದ ಕೆಳಗಿಳಿಯಬಹುದು. " ಕಡಿಮೆ ವೆಚ್ಚದಲ್ಲಿ ಮಾಡಬಹುದಾತಂತದ ಸ್ಲೈಡ್ ಇದು, ಬಟನ್ ಒತ್ತಿದ್ರೆ ಸಾಕು, ಸ್ಲೈಡ್ ಹಾಗೂ ಟಾಪ್ ತೆರೆದುಕೊಳ್ಳತ್ತೆ. ಬಸ್​​ನಲ್ಲಿ ಬೆಂಕಿಕಾಣಿಸಿಕೊಂಡಾಗ ಬರುವ ಹೊಗೆಯಿಂದಾಗಿ ಕಣ್ಣು ಕಾಣಿಸದಂತಾಗತ್ತೆ, ಉಸಿರಾಡಲು ಸಾಧ್ಯವಾಗೋದಿಲ್ಲ. ಆಗ ತಕ್ಷಣವೇ ಬಾಗಿಲು ತೆರೆದುಕೊಳ್ಳೋದ್ರಿಂದ ಒಂದು ನಿಮಿಷದಲ್ಲಿ ಎಲ್ಲ ಪ್ರಯಾಣಿಕರು ಹೊರಬರಬಹುದು" ಅಂತ ವಿಶ್ವಾಸದಿಂದ ಹೇಳುತ್ತಾರೆ ನಿಖಿಲ್​​​.

ಇದ್ರ ಜೊತೆಗೆ ರೂಫ್ ತೆರೆದುಕೊಳ್ಳುವಂತೆಯೂ ಡಿಸೈನ್ ಮಾಡಲಾಗಿದೆ. ಅಂದ್ರೆ, ಒಂದೇ ಬಾರಿಗೆ ಬಸ್​​ನ ಮೇಲ್ಚಾವಣಿ ಹಾಗೂ ಸೈಡ್ ವಾಲ್ ತೆರೆದುಕೊಳ್ಳೋದ್ರಿಂದ, ಪ್ರಯಾಣಿಕರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳೋದಿಲ್ಲ. ಎಮೆರ್ಜೆನ್ಸಿ ಬಟನ್​​ಗಳನ್ನ ಡ್ರೈವರ್ ಹಾಗೂ ಪ್ಯಾಸೆಂಜರ್ ಸೀಟ್ ಬಳಿ ಹಾಕಲಾಗಿರತ್ತೆ. ಬಟನ್ ಪ್ರೆಸ್ ಮಾಡಿದ್ರೆ ಎಲ್ಲಾ ಬಾಗಿಲುಗಳು ತೆರೆದುಕೊಳ್ಳತ್ತೆ. ಈಗ ಚಾಲ್ತಿಯಲ್ಲಿರುವ ಸುರಕ್ಷತಾ ಕ್ರಮಗಳು ಅವೈಜ್ಞಾನಿಕವಾಗಿದ್ದು, ಈ ಇಬ್ಬರು ವಿದ್ಯಾರ್ಥಿಗಳು ಡಿಸೈನ್ ಮಾಡಿರುವ ಕಾಂಸೆಪ್ಟ್ ಹೆಚ್ಚು ಅನುಕೂಲಕರವಾಗಿರಲಿದೆ. ಈ ವರ್ಷಾರಂಭದಲ್ಲಿ ಪೂನಾದಲ್ಲಿ ನಡೆದ ಸಿಂಪೋಸಿಯಮ್ ಆನ್ ಇಂಟರ್​​ನ್ಯಾಷನಲ್ ಆಟೋಮೇಟಿವ್ ಟೆಕ್ನಾಲಜಿ ಎಕ್ಸಪೋನಲ್ಲಿ 80 ಕಾಲೇಜುಗಳ ಜೊತೆಗೆ ಸ್ಪರ್ಧಿಸಿದ್ದ ಬೆಂಗಳೂರಿನ ವಿದ್ಯಾರ್ಥಿಗಳು ಎಕ್ಸಪೋನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. "ಈಗಾಗಲೇ ಸಂಚಾರ ಶುರುಮಾಡಿರುವ ಬಸ್​​ಗಳಿಗೂ ಸ್ಲೈಡ್ ವಾಲ್​​ನ್ನು ಅಳವಡಿಸಬಹುದು. ಒಂದು ಬಸ್​​ಗೆ ಸುಮಾರು ಎರಡು ಲಕ್ಷ ಖರ್ಚಾಗಬಹುದು. ಹಲವು ಕಾಲೇಜು ವಿದ್ಯಾರ್ಥಿಗಳನ್ನ ಹಿಂದಿಕ್ಕಿ ಪ್ರಶಸ್ತಿ ಗಳಿಸಿದ್ದು ಖುಷಿ ತಂದಿದೆ." ನಮ್ಮ ಪ್ರಾಜೆಕ್ಟ್​​ಗಳು ಇಷ್ಟೊಂದು ಯಶಸ್ವಿಯಾಗುತ್ತೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ ಅನ್ನೋದು ಪ್ರೀತಂ ಮಾತು.

image


ನಿಖಿಲ್​​ ಮತ್ತು ಪ್ರೀತಮ್​​ ಸುಮಾರು ನಾಲ್ಕು ತಿಂಗಳುಗಳ ಕಾಲ ಅಧ್ಯಯನ ನಡೆಸಿ, ಈ ಮಾಡೆಲ್ ಸಿದ್ದಗೊಳಿಸಿದ್ದಾರೆ. ಬಸ್ ನಿರ್ಮಾಣ ಹಂತದಲ್ಲಿರುವಾಗಲೇ ಕಾಂನ್ಸೆಪ್ಟ್​ ಉಪಯೋಗಿಸಿಕೊಳ್ಳಬಹುದು. ಹಾಗೇ ಈಗಿರುವ ಬಸ್​​ಗಳಿಗೂ ಹೆಚ್ಚುವರಿ ಬಾಗಿಲನ್ನ ಅಳವಡಿಸುವುದು ಸಾದ್ಯವಿದೆ. ಆದ್ರೆ, ಹಣದ ಕೊರತೆ ಇರೋದ್ರಿಂದ ಈ ವಿದ್ಯಾರ್ಥಿಗಳು ಇನ್ನೂ ನೇರವಾಗಿ ಬಸ್ ಮೇಲೆ ಪ್ರಯೋಗ ಮಾಡಿಲ್ಲ. ಈ ವಿದ್ಯಾರ್ಥಿಗಳು ಓದುವ ಜೊತೆಗೆ, ತಮ್ಮ ಬಸ್ ಸೇಫ್ಟಿ ಬಗ್ಗೆಯೂ ಇಂತಾ ಯೋಜನೆ ಸಿದ್ದಗೊಳಿಸಿರುವುದು ಸಾಧನೆಯೇ ಸರಿ.