ರೈತರಿಗೆ ನೆರವಾಗಲಿದೆ ವಿದ್ಯಾರ್ಥಿಗಳ ಆವಿಷ್ಕಾರ

ಟೀಮ್​ ವೈ.ಎಸ್​. ಕನ್ನಡ

0

ಭಾರತ ಕೃಷಿ ಆಧಾರಿತ ರಾಷ್ಟ್ರ. ಇಲ್ಲಿ ಕೃಷಿಯೇ ಮುಖ್ಯ ಕಸುಬು ಎಂದೆಲ್ಲಾ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಲೆಕ್ಚರ್ ಹೊಡೆಯುತ್ತಾರೆ ಆದರೆ ರೈತರಿಗಾಗಿ ಏನನ್ನು ಮಾಡುವುದಿಲ್ಲ ಆದರೆ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ತಂಡವೊಂದು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ತಗಲುವ ರೋಗವನ್ನು ಪತ್ತೆ ಹಚ್ಚುವ ‘ಕ್ರಾಪ್ ಅನಾಲಿಸಿಸ್ ರೋಬೋಟ್’ ಮಾದರಿಯನ್ನು ತಯಾರಿಸುವ ಮೂಲಕ ರೈತರಿಗೆ ನೆರವಾಗಿದ್ದಾರೆ.

ನಮ್ಮ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇದನ್ನರಿತ ದಯಾನಂದ ಸಾಗರ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ವಿಜಯ್ ರಾಘು ತನ್ನ ಸ್ನೇಹಿತರಾದ ಕೆ.ಆರ್. ಸುರೇಶ್, ಸೈನ್ ಸಾಬ್, ತೇಜಸ್ ಎಂಬ ವಿದ್ಯಾರ್ಥಿಗಳು ಸತತ ಮೂರು ತಿಂಗಳ ಪರಿಶ್ರಮದಿಂದ ರೈತರಿಗೆ ಉಪಯುಕ್ತವಾದ ರೋಬೋಟ್ ಅನ್ನು ಆವಿಷ್ಕರಿಸಿದ್ದಾರೆ. ‘ಕ್ರಾಪ್ ಅನಾಲಿಸಿಸ್ ರೋಬೋಟ್’ ಸಾಕಷ್ಟು ಗಮನ ಸೆಳೆದಿದೆ.

ಇದು ಕಾರ್ಯನಿರ್ವಹಸುವ ಬಗೆ?

ಯಾವುದೋ ಒಂದು ಗಿಡಕ್ಕೆ ಯಾವುದಾದರು ರೋಗ ತಗುಲಿದರೆ, ಅದು ರೈತರ ಗಮನಕ್ಕೆ ಬರುವಷ್ಟರಲ್ಲಿ ಬಹುತೇಕ ಗಿಡಗಳಿಗೆ ಅದು ಆವರಿಸುತ್ತಿದೆ. ಅಷ್ಟೇ ಅಲ್ಲ ಇಡೀ ಬೆಳೆಯನ್ನು ನಾಶ ಮಾಡುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ‘ಕ್ರಾಪ್ ಅನಾಲಿಸಿಸ್ ರೋಬೋಟ್’ ರೋಗ ತಡೆಯುವಲ್ಲಿ ನೆರವಾಗುತ್ತದೆ. ಅತ್ಯಾಧುನಿಕ ಕ್ಯಾಮರಾ ಹೊಂದಿರುವ ಈ ರೋಬೋಟ್ ಒಂದು ಬಾರಿ ತೋಟದಲ್ಲಿ ಸುತ್ತು ಹಾಕಿದರೆ ಸಾಕು, ಯಾವ ಗಿಡಕ್ಕೆ ಮತ್ತು ಗಿಡದಲ್ಲಿನ ಯಾವ ಎಲೆಗೆ ರೋಗ ತಗುಲಿದೆ ಎಂಬ ಮಾಹಿತಿಯನ್ನು ಸೆರೆಹಿಡಿಯುತ್ತದೆ. ಈ ಕ್ಯಾಮರದಲ್ಲಿ ಚಿತ್ರಿತವಾಗುವ ಚಿತ್ರಗಳನ್ನು ನೋಡಿ ರೈತರು ಆ ಗಿಡಕ್ಕೆ ಅಗತ್ಯ ಔಷಧ ಸಿಂಪಡಿಸಬಹುದು. ಈ ರೋಬೊದಿಂದ ತಿಳಿಯುವ ಮಾಹಿತಿಯಿಂದ ಇಡೀ ತೋಟಕ್ಕೆ ಆವರಿಸಲಿರುವ ರೋಗವನ್ನು ಆರಂಭದಲ್ಲೇ ತಡೆಯಬಹುದು. ಇದರಿಂದ ರೋಗ ಹರಡುವುದು ಕಡಿಮೆಯಾಗುತ್ತದೆ. ರಾಸಾಯನಿಕಯುಕ್ತ ಔಷಗಳ ಸಿಂಪಡನೆಯೂ ಬೇಕಾಗುವುದಿಲ್ಲ. ಇದರಿಂದ ಆರೋಗ್ಯಕ್ಕೆ ಪೂರಕವಾದ ಉತ್ತಮ ಹಣ್ಣು-ತರಕಾರಿಗಳು ಸಿಗುತ್ತವೆ. ರೈತರಿಗೆ ಔಷಗಳ ಖರ್ಚು ಕೂಡ ಉಳಿಯುತ್ತದೆ.

‘‘ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪ್ರವೀಣ್. ಡಿ. ಜಾಧವ್ ತಮಗೆ ಮಾರ್ಗದರ್ಶನ ನೀಡಿದ್ದು, ಪ್ರಿನ್ಸಿಪಾಲ್ ಸಿ.ಪಿ.ಎಸ್. ಪ್ರಕಾಶ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಹೆಚ್ಒಡಿ ಆರ್. ಕೇಶವಮೂರ್ತಿಯವರ ನೆರವಿನಿಂದ ಈ ರೋಬೋಟ್ ತಯಾರಿಸಲಾಗಿದೆ. ರೈತರು ಈ ರೋಬೋಟ್​ನ ಸಹಾಯ ಪಡೆಯಬಹುದು. ಅವರ ಅಗತ್ಯಕ್ಕೆ ತಕ್ಕಂತೆ ನಾವು ಮತ್ತಷ್ಟು ಮಾದರಿಗಳನ್ನು ತಯಾರಿಸಿಕೊಡಲು,’’ ಸಿದ್ಧ ಎನ್ನುತ್ತಾರೆ ವಿಜಯ್ ರಾಘು ಮತ್ತು ತಂಡ.

ಅಂದ ಹಾಗೆ ರೋಬೋಟ್​​ನಲ್ಲಿ ಕ್ಯಾಮೆರಾ, ಮೈಕ್ರೋ ಕಂಪ್ಯೂಟರ್ ಬೋರ್ಡ್, ಇಮೇಜ್ ಪ್ರೊಸೆಸಿಂಗ್ ಟೂಲ್, ಮೂವಿಂಗ್ ವೆಹಿಕಲ್ ಮತ್ತಿತರ ಸಾಮಗ್ರಿಗಳನ್ನು ಅಳವಡಿಸಲಾಗಿರುತ್ತದೆ. ಈ ರೋಬೋಟ್ ತೋಟದಲ್ಲಿ ಬೆಳೆಯ ಪ್ರತಿ ಸಾಲಿನಲ್ಲೂ ಸಾಗುತ್ತಾ ಪ್ರತಿಯೊಂದು ಗಿಡವನ್ನೂ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತದೆ. ನಂತರ ಅದನ್ನು ವೀಕ್ಷಿಸಿ ಬೆಳೆಯ ರೋಗಬಾಧೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವಲ್ಲಿ ಈ ರೋಬೋಟ್ ರೈತರಿಗೆ ನೆರವಾಗುತ್ತದೆ.

ಇದನ್ನು ಓದಿ:

1. ಸ್ವಚ್ಛ,ಸುಂದರ ಬೆಂಗಳೂರಿಗಾಗಿ 'ಜರ್ಮನ್​ ಡಸ್ಟ್​ಬಿನ್​'..!

2. ಆಹಾರೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಯನಕ್ಕೆ ನಾಂದಿ ಹಾಡಿದ ರಾಜು ಭೂಪತಿ

3. ಹೈ-ಫೈ ಸ್ಪಾದಲ್ಲಿ ಮೆರುಗಲಿದೆ ಕೈ ಕಾಲುಗಳು


Related Stories