ಪ್ರತಿನಿತ್ಯ 100 ನಿರಾಶ್ರಿತರಿಗೆ ಫ್ಲೈ ಓವರ್ ಕೆಳಗೆ ಊಟ ಹಾಕುವ ಅನ್ನದಾತ

ಟೀಮ್​​ ವೈ.ಎಸ್​. ಕನ್ನಡ

ಪ್ರತಿನಿತ್ಯ 100 ನಿರಾಶ್ರಿತರಿಗೆ ಫ್ಲೈ ಓವರ್ ಕೆಳಗೆ ಊಟ ಹಾಕುವ ಅನ್ನದಾತ

Wednesday December 09, 2015,

2 min Read

ಅಜರ್ ಮಕ್ಸುಸಿ, 36 ವರ್ಷ ವಯಸ್ಸಿನ ಇವರು ಹೈದ್ರಾಬಾದ್ ಮೂಲದವರು. ಪ್ರತಿನಿತ್ಯ 100 ರಿಂದ 150 ಮಂದಿ ಪುರುಷರು, ಮಹಿಳೆಯರು, ಮಕ್ಕಳಿಗೆ ಊಟ ಹಾಕುತ್ತಾರೆ. ಹಾಗಂತ ಇವರೇನು ಶ್ರೀಮಂತರಲ್ಲ. ಬಡವರ ಪಾಲಿಗೆ ಅನ್ನದಾತರಾಗಿರುವ ಅಜರ್ ಓಲ್ಡ್ ಹೈದ್ರಾಬಾದ್​​ನ ದಬೀಪುರ ಫ್ಲೈ ಓವರ್ ಅಡಿಯಲ್ಲಿ ಕಳೆದ 3 ವರ್ಷಗಳಿಂದ ನಿರಾಶ್ರಿತರ ಹಸಿದ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ಸ್ಪೂರ್ತಿಗೆ ಕಾರಣವೇನೆಂದು ಟಿವಿ ಚಾನೆಲ್​​ ಒಂದು ಕೇಳಿದಾಗ ಅಜರ್ ಉತ್ತರ ‘‘ ಸ್ವತಃ ನನಗೆ ಹಸಿವು ಏನೆಂಬುದು ತಿಳಿದಿದೆ, ಯಾರು ಕೂಡ ಅಂತಹ ಪರಿಸ್ಥಿತಿಯನ್ನ ಎದುರಿಸಬಾರದೆಂಬುದು ನನ್ನ ಗುರಿ.’’

image


ಪ್ಲಾಸ್ಟರ್ ಆಫ್ ಪ್ಯಾರಿಸ್ ಇಂಟೀರಿಯಲ್ ಬ್ಯುಸಿನೆಸ್ ಮಾಡುತ್ತಿರುವ ಅಜರ್, ಮೂರು ವರ್ಷದ ಹಿಂದೆ ರೈಲ್ವೇ ಸ್ಟೇಷನ್ ಬಳಿ ವಿಕಲಚೇತನ ಮಹಿಳೆ ಲಕ್ಷ್ಮೀ, ಎಂಬುವರನ್ನ ನೋಡಿದಾಗಿನಿಂದ ಬಡವರಿಗೆ ಊಟ ಹಾಕಲು ಪ್ರಾರಂಭಿಸಿದ್ರಂತೆ. ಆ ಮಹಿಳೆ ಅನ್ನ ಸೇವಿಸಿ ದಿನಗಳೇ ಕಳೆದು ಹೋಗಿದ್ದವು. ಡೆಕನ್ ಕ್ರೋನಿಕಲ್ ಸಂದರ್ಶನದಲ್ಲಿ ಹಳೆಯದನ್ನ ನೆನಪು ಮಾಡಿಕೊಳ್ಳುವ ಅಜರ್ ‘‘ ಒಂದು ದಿನ ನನ್ನ ಪತ್ನಿ ಸುಮಾರು 15 ಜನರಿಗೆ ಆಗುವಷ್ಟು ಆಹಾರ ತಯಾರಿಸಿದ್ದಳು, ಆ ಊಟವನ್ನ ನಾನು ಫ್ಲೈ ಓವರ್ ಕೆಳಗೆ ವಾಸಿಸುವ ನಿರಾಶ್ರಿತರಿಗೆ ಹಂಚಿದೆ.’’ ಹೀಗೆ ಕೆಲವೇ ದಿನಗಳಲ್ಲಿ ಅಜರ್ ಪ್ರತಿನಿತ್ಯ ನಿರಾಶ್ರಿತರ ಹಸಿವನ್ನ ಇಂಗಿಸಲು ಪ್ರಾರಂಭಿಸಿದ್ರು. ಇಂದು ಅವರು ಪ್ರತಿನಿತ್ಯ 1500 ರಿಂದ 1700 ರಷ್ಟು ಹಣವನ್ನ ಅನ್ನದಾನಕ್ಕಾಗಿ ಖರ್ಚು ಮಾಡುತ್ತಾರೆ. ಬಹುತೇಕ ಹಣ ಅವರ ಜೇಬಿನಿಂದಲೇ ಖರ್ಚಾಗುತ್ತಿದ್ದು, 25 ಕೆಜಿ ಅಕ್ಕಿ, 2 ಕೆಜಿ ಧಾನ್ಯಗಳು, 1 ಲೀಟರ್ ಆಯಿಲ್ ಮತ್ತು ಸಾಂಬಾರು ಪದಾರ್ಥಗಳನ್ನ ಖರೀದಿಸಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

ಅಜರ್​​ರ ಈ ಸಾಮಾಜಿಕ ಸೇವೆಗೆ ಸ್ನೇಹಿತರು ಕೈ ಜೋಡಿಸಿರೋದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ. ದಿ ನ್ಯೂಸ್ ಮಿನ್ಯುಟ್ ಸಂದರ್ಶನದಲ್ಲಿ ಹೇಳುವಂತೆ ‘‘ಅನೇಕ ಜನರು ನನಗೆ ಕೈ ಜೋಡಿಸಿದ್ರು ಮತ್ತು ನನಗೆ ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ರು, ಆದ್ರೆ ಹಣದ ಮೂಲಕ ಸಹಾಯ ಮಾಡುವವರನ್ನ ನಿರಾಕರಿಸಿದೆ.’’ ಯಾಕಂದ್ರೆ ನಿರಾಶ್ರಿತ ಜನರು ಊಟವಿಲ್ಲದೆ, ಬಟ್ಟೆಯಿಲ್ಲದೆ ಪರದಾಡುತ್ತಿರುತ್ತಾರೆ, ಅಂತವರಿಗೆ ಹಣ ನೀಡುವುದು ಸರಿಯಲ್ಲ. ಹಣ ನೀಡಿದ್ದೇ ಆದಲ್ಲಿ ಕುಡಿತದ ಚಟಕ್ಕೆ ಬಳಸುತ್ತಾರೆ. ಹೀಗಾಗಿಯೇ ಅಜರ್ ನಿರಾಶ್ರಿತ ಜನರಿಗೆ ಪ್ರತಿನಿತ್ಯವೂ ಅನ್ನ ಸಂತರ್ಪಣೆ ಮುಂದಾಗಿದ್ದಾರೆ. ಮತ್ತು ಅವರ ಬಳಿ ಯಾರೇ ಹಸಿವು ಅಂತಾ ಬಂದರು ಒಂದು ಹೊತ್ತಿನ ಊಟವನ್ನಾದ್ರು ಕೊಟ್ಟು ಕಳುಹಿಸುತ್ತಾರೆ.

image


ಅಜರ್ ಮಕ್ಸುಸಿರ ಈ ಸಾಮಾಜಿಕ ಸೇವೆ ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ವಿಭಿನ್ನವಾಗಿ ಯೋಚಿಸುವ ಮೂಲಕ ಬಡವರಿಗೆ, ನಿರಾಶ್ರಿತರಿಗೆ ನೆರವು ಒದಗಿಸಿ ಸಮಾಜಕ್ಕೆ ಸ್ಪೂರ್ತಿಯಾಗಿದ್ದಾರೆ.

ಅನುವಾದಕರು : ಎಪಿಎಸ್

    Share on
    close