ಒಂದೇ ರಾತ್ರಿ ಊರಿಗೆ ಊರೇ ಮಾಯ..!

ವಿಶಾಂತ್​

ಒಂದೇ ರಾತ್ರಿ ಊರಿಗೆ ಊರೇ ಮಾಯ..!

Thursday May 12, 2016,

3 min Read

ಒಂದೇ ರಾತ್ರಿಯಲ್ಲಿ ನೂರಾರು ಮನೆಗಳಿರುವ ಒಂದು ಊರಿನ ಜನರೇ ನಾಪತ್ತೆಯಾಗಿಬಿಡುತ್ತಾರೆಂದರೆ? ಎಂಥವರಲ್ಲೂ ಆಶ್ಚರ್ಯ ಮೂಡದೇ ಇರದು. ಆದರೆ ರಾಜಸ್ಥಾನದ ಜೈಸಲ್ಮೇರ್ ಸಮೀಪದ ಕುಲ್‍ಧಾರಾ ಎಂಬ ಗ್ರಾಮ ಇಂತಹ ಘಟನೆಗೆ ಸಾಕ್ಷಿಯಾಗಿದೆ. ಹಾಗಾದರೆ ಅದಕ್ಕೆ ಕಾರಣವೇನು? ಆ ಊರಿನ ಜನ ಏನಾದರು? ಎಲ್ಲಿಗೆ ಹೋದರು? ಈಗ ಆ ಗ್ರಾಮದಲ್ಲಿ ಯಾರಿದ್ದಾರೆ? ಹೀಗೆ, ಈ ಎಲ್ಲ ವಿಷಯಗಳ ಬೆನ್ನು ಹತ್ತಿದಾಗ ಹಲವು ವಿಷಯಗಳು ತೆರೆದುಕೊಳ್ಳುತ್ತವೆ.

image


ಇದರ ಹಿಂದಿದೆ ಒಂದು ಮದುವೆ ಕಥೆ – ವ್ಯಥೆ

ಕುಲ್‍ಧಾರಾ, ಈಗ್ಗೆ 500 ವರ್ಷಗಳ ಹಿಂದೆ ಪಲಿವಾಲ್ ಬ್ರಾಹ್ಮಣರು ವಾಸಿಸುತ್ತಿದ್ದ ಊರು. ಆದರೆ ಒಂದು ಕರಾಳ ರಾತ್ರಿ ಕುಲ್‍ಧಾರಾ ಮತ್ತು ಅದರ ಸುತ್ತಮುತ್ತಲಿನ 83 ಹಳ್ಳಿಗಳನ್ನು ಜನ ರಾತ್ರೋರಾತ್ರಿ ತೊರೆದಿದ್ದರು. ಎಲ್ಲಿಗೆ ಹೋದರು ಅನ್ನೋದೂ ಯಾರಿಗೂ ಗೊತ್ತಾಗಲಿಲ್ಲ. ಈ ನಿಗೂಢತೆಯ ಸುತ್ತ ಹಲವು ಕಥೆಗಳು ಹರಿದಾಡುತ್ತಿವೆ. ಆದರೆ ಅವುಗಳಲ್ಲೊಂದು ಏನೆಂದರೆ, ರಾಜಸ್ಥಾನವನ್ನಾಳುತ್ತಿದ್ದ ಮಹಾರಾವಲ್ ಮೂಲರಾಜ 2 ಆಡಳಿತದಲ್ಲಿ ಹಿಂದೆ ಬಿದ್ದಿದ್ದನಂತೆ. ಆ ಸಮಯದಲ್ಲಿ ಮೊಘಲರ ಆಳ್ವಿಕೆ ಕೊನೆಯ ಹಂತದಲ್ಲಿದ್ದರೆ, ಬ್ರಿಟಿಷರು ಆಗಷ್ಟೇ ಭಾರತಕ್ಕೆ ಆಗಮಿಸಿದ್ದರು. ರಾಜ ಹೆಚ್ಚಾಗಿ ತನ್ನ ರಾಜ್ಯದ ಕಡೆ ಗಮನ ಕೊಡದ ಕಾರಣ ಆಗಾಗ ಸುತ್ತಮುತ್ತಲಿನ ಮುಸ್ಲಿಂ ಡಕಾಯಿತರು ಜೈಸಲ್ಮೇರ್ ಸುತ್ತಮುತ್ತಲಿನ ಗ್ರಾಮಗಳನ್ನು ಕೊಳ್ಳೆ ಹೊಡೆಯುತ್ತಿದ್ದರಂತೆ. ಜೊತೆಗೆ ರಾಜನ ಆಸ್ಥಾನ ಮಂತ್ರಿಯೊಬ್ಬ ತುಂಬ ದುಷ್ಟನಾಗಿದ್ದನಂತೆ. ಆತನ ಕಣ್ಣು ಕುಲಧಾರಾ ಗ್ರಾಮದ ಮುಖಂಡನ ಮಗಳ ಮೇಲೆ ಬಿದ್ದು, ಆಕೆಯನ್ನು ಮದುವೆ ಮಾಡಿಕೊಡಿ ಎಂದು ಅವರ ಹಿಂದೆ ಬಿದ್ದನಂತೆ. ಕೊನೆಗೆ ಅವನ ಕಾಟ ತಾಳಲಾರದೇ ಮೂರು ದಿನಗಳ ಗಡುವು ಕೇಳಿದ ಮುಖಂಡ, ತನ್ನ ಗ್ರಾಮಸ್ಥರ ಜೊತೆ ಚರ್ಚಿಸಿ ಊರನ್ನೇ ಬಿಡಲು ತೀರ್ಮಾನಿಸಿದನಂತೆ. ಇನ್ನು ಊರಿನ ಮುಖಂಡನೇ ಊರು ತೊರೆದರೆ, ಆ ಮಂತ್ರಿ ನಮ್ಮನ್ನೆಲ್ಲಾ ಕೊಂದುಬಿಡುತ್ತಾನೆ ಎಂಬ ಭಯದಲ್ಲಿ ಗ್ರಾಮಸ್ಥರೂ ತಾವೂ ಕೂಡ ಆತನೊಂದಿಗೆ ರಾತ್ರೋರಾತ್ರಿ ಊರು ತೊರೆದರೆ ಎನ್ನಲಾಗಿದೆ. ಈ ವಿಷಯ ತಿಳಿದಿ ಸುತ್ತಮುತ್ತಲಿನ ಗ್ರಾಮಗಳಲ್ಲಿದ್ದ ಪಲಿವಾಲ್ ಬ್ರಾಹ್ಮಣರೂ, ಈ ಕುಲ್‍ಧಾರಾ ಜನ ಸಿಗಲಿಲ್ಲವೆಂದರೆ ಆ ಮಂತ್ರಿ ನಮಗೆ ಉಪಟಳ ನೀಡೋದರಲ್ಲಿ ಸಂದೇಹವಿಲ್ಲ ಎಂದು ಹೆದರಿ, ತಾವೂ ತಮ್ಮ ಗ್ರಾಮಗಳನ್ನು ತೊರೆದರಂತೆ. ಅಂದಿನಿಂದ ಇಂದಿನವರೆಗೂ ಕುಲ್‍ಧಾರಾ ಹಾಗೂ ಅದರ ಸುತ್ತಮುತ್ತಲಿನ 83 ಹಳ್ಳಿಗಳಲ್ಲಿ ಯಾರೂ ವಾಸಿಸುತ್ತಿಲ್ಲ. ಅಲ್ಲದೇ ಭೂತ- ಪ್ರೇತಗಳ ಆವಾಸಸ್ಥಾನವಾಗಿದೆ ಅನ್ನೋದು ಸುತ್ತಮುತ್ತಲಿನ ಜನರ ನಂಬಿಕೆ.

image


ಹೇಗಿದೆ ಗೊತ್ತಾ ಕುಲಧಾರಾ?

ಕುಲಧಾರಾ ಒಂದು ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ನಿರ್ಮಿಸಿರುವ ಗ್ರಾಮ. ಮೋರಿ ವ್ಯವಸ್ಥೆ, ಸುಸಜ್ಜಿತ ಕಟ್ಟಡಗಳು, ಮಂದಿರಗಳು, ಅಗಲವಾದ ಬೀದಿಗಳು, ರಸ್ತೆಗಳು... ಎಲ್ಲವನ್ನೂ ನೋಡಿದರೆ ಜನರಿದ್ದಾಗ ಈ ಗ್ರಾಮ ಹೇಗೆ ಕಳೆಕಟ್ಟಿರುತ್ತಿತ್ತು, ಗಿಜಿಗುಡುತ್ತಿತ್ತು ಎಂಬುದನ್ನು ಊಹೆ ಮಾಡಿಕೊಳ್ಳಬಹುದು.

ಆದರೆ ನೂರಾರು ವರ್ಷಗಳಿಂದ ಈ ಮನೆಗಳಲ್ಲಿ ಯಾರೂ ವಾಸವಿಲ್ಲದ ಕಾರಣ ಮಳೆ, ಗಾಳಿಗೆ ಛಾವಣಿಗಳು ಕುಸಿದಿವೆ. ಗೋಡೆಗಳು ಬಿರುಕುಬಿಟ್ಟಿವೆ, ಗಿಡಗಂಟೆಗಳು ಬೆಳೆದು ಹಾಳಾಗಿವೆ. ಹೀಗಾಗಿಯೇ ಈ ಪಾಳು ಬಿದ್ದ ಗ್ರಾಮ ಸದ್ಯ ಟೂರಿಸ್ಟ್ ಸ್ಪಾಟ್ ಆಗಿ ಬದಲಾಗಿದೆ. ಆದರೂ ಸಂಜೆಯಾಗುತ್ತಿದ್ದಂತೆಯೇ ಎಲ್ಲರೂ ಜಾಗ ಖಾಲಿ ಮಾಡಬೇಕು. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

ಕತ್ತಲೆಯಾಗುತ್ತಲೇ ತೆರೆದುಕೊಳ್ಳುತ್ತಂತೆ ಕರಾಳ ಲೋಕ!

ಹೌದು, ಸ್ಥಳೀಯರು ಹೇಳುವ ಪ್ರಕಾರ ಇಲ್ಲಿ ಭೂತ - ಪ್ರೇತಗಳ ಕಾಟ ಹೆಚ್ಚಂತೆ. ಹೀಗಾಗಿಯೇ ಸಂಜೆಯಾಗುತ್ತಲೇ ಎಲ್ಲರೂ ಇಲ್ಲಿಂದ ಹೊರಟುಬಿಡುತ್ತಾರೆ. ಹಾಗೇ ದೂರದ ಊರುಗಳಿಂದ ಈ ಪಾಳು ಗ್ರಾಮವನ್ನು ನೋಡಲು ಬರುವವರನ್ನೂ ಹೊರಡಿಸಿಬಿಡುತ್ತಾರೆ. ಸೂರ್ಯಾಸ್ತವಾಗುತ್ತಲೇ ವಿಚಿತ್ರ ಪ್ರಾಣಿಗಳ ಕೂಗು, ಯಾರೋ ಓಡಾಡುವ ಶಬ್ದಗಳ ಜೊತೆಗೆ ಅಲ್ಲಿದ್ದವರ ಮೇಲೆ ದಾಳಿಯೂ ನಡೆಯುತ್ತಂತೆ.

ಕೆಲವರ ಪ್ರಕಾರ ಈ ಕುಲಧಾರಾ ಗ್ರಾಮದಲ್ಲಿರುವ ಪಾಳು ಬಿದ್ದ ಮನೆಗಳಲ್ಲಿ ಚಿನ್ನವನ್ನು ಹುದುಗಿಡಲಾಗಿದೆಯಂತೆ. ಅದನ್ನರಿತ ಇಬ್ಬರು ಜರ್ಮನ್ ಪ್ರಜೆಗಳು ಸೂರ್ಯ ಮುಳುಗಿದ ಮೇಲೂ ಇಲ್ಲೇ ಕದ್ದು ಕುಳಿತು, ನಂತರ ಹಳೆಯ ಮನೆಯೊಂದನ್ನು ಒಡೆದರಂತೆ. ಅಗೆಯುತ್ತಿದ್ದಾಗ ಅವರಿಗೆ ಚಿನ್ನವೇನೋ ದೊರೆಯಿತಂತೆ. ಆದರೆ ಅದನ್ನು ವಾಪಸ್ ಹೊತ್ತು ತರುವಾಗ ಏನಾಯಿತೋ ಗೊತ್ತಿಲ್ಲ, ಒಬ್ಬ ಸತ್ತನಂತೆ. ಮತ್ತೊಬ್ಬನನ್ನು ಪೊಲೀಸರು ಬಂಧಿಸಿದರು ಎಂಬ ಕಥೆಯೂ ಇದೆ.

image


ಆದರೆ ಈ ಕಥೆಗಿಂತ ಹೆಚ್ಚಾಗಿ ಸದ್ಯ ಹೆಚ್ಚು ಸುದ್ದಿ ಮಾಡುತ್ತಿರುವ ವಿಷಯ ಎಂದರೆ, ಕೆಲ ಧೈರ್ಯಶಾಲಿ 15 ಮಂದಿ ಯುವಕರ ತಂಡ, 15 ಮಂದಿ ಸ್ಥಳೀಯರ ಸಹಾಯದೊಂದಿಗೆ ಕುಲಧಾರಾದಲ್ಲಿ ಒಂದು ರಾತ್ರಿ ತಂಗಿದ್ದರಂತೆ. ಅವರಿಗಾದ ಅನುಭವಗಳನ್ನು, ನೂತನ ತಂತ್ರಜ್ಞಾನಗಳುಳ್ಳು ಉಪಕರಣಗಳ ಮೂಲಕ ದಾಖಲೆ ಮಾಡಿಕೊಂಡಿದ್ದಾರವರು. ಒಂದು ಜಾಗದಲ್ಲಿ 41 ಡಿಗ್ರೀ ಸೆಲ್ಶಿಯಸ್ ಉಷ್ಣತೆ ತೋರಿಸಿದರೆ, ಕೇವಲ ಆರೇಳು ಅಡಿ ಮುಂದೆ ಹೋದರೆ ಅದು 30 ಡಿಗ್ರೀ ಸೆಲ್ಶಿಯಸ್ ಕುಸಿದಿತ್ತಂತೆ. ಹಾಗೇ ಕೆಲವರಿಗೆ ಯಾರೂ ತಮ್ಮನ್ನು ಹಿಂಬಾಲಿಸುತ್ತಿರುವ ಹಾಗೂ ಭುಜದ ಮೇಲೆ ಕೈ ಹಾಕಿದ, ಮುಟ್ಟಿದ ಅನುಭವವಾದರೆ, ಇನ್ನು ಕೆಲವರು ಮಕ್ಕಳು ಓಡಾಡುವುದನ್ನು ನೋಡಿದರಂತೆ. ಆದೃಶ್ಯಾಕಾರಗಳನ್ನು ನೋಡಿದ, ಕತ್ತಲೆಯಲ್ಲೂ ನೆರಳು ನೋಡಿದ ಅನುಭವವಾಗಿದೆ. ಬಹುತೇಕ ಎಲ್ಲರಿಗೂ ಮಕ್ಕಳು, ಮಹಿಳೆಯರು ಕಿರುಚುವ ವಿಕಾರ ಶಬ್ದಗಳು, ಯಾರ್ಯಾರೋ ಮಾತನಾಡುವ ಮಾತುಗಳು, ವಿಚಿತ್ರ ಪ್ರಾಣಿ - ಪಕ್ಷಿಗಳ ಕೂಗು ಕೇಳಿಸಿತಂತೆ. ಹೀಗೆ ಕುಲಧಾರಾ ಗ್ರಾಮ ಅನೇಕ ನಿಗೂಢಗಳನ್ನು ತನ್ನೊಡಲಲಲ್ಲಿ ಬಚ್ಚಿಟ್ಟುಕೊಂಡು ಒಂದು ನಿಗೂಢವಾಗಿಯೇ ಉಳಿದಿದೆ.