ದೇಶದ ಮೊದಲ ಬ್ರೈಲ್ ರೈಲ್ವೇ ಸ್ಟೇಷನ್ ಖ್ಯಾತಿ ಮೈಸೂರಿಗೆ...!

ಕೃತಿಕಾ

0

ಹಲವು ಹೆಗ್ಗಳಿಕೆಗಳಿಗೆ ಪಾತ್ರವಾಗಿರೋ ಮೈಸೂರಿಗೆ ಎದೆತಟ್ಟಿ ಹೇಳಿಕೊಳ್ಳುವಂತಹ ಮತ್ತೊಂದು ಹೆಗ್ಗಳಿಗೆ ಸಿಕ್ಕಿದೆ. ಈ ಹೆಗ್ಗಳಿಕೆಗೆ ಕಾರಣವಾಗಿರೋದು ಮೈಸೂರಿನ ರೈಲ್ವೇ ನಿಲ್ದಾಣ. ಇದೀಗ ಮೈಸೂರು ನಿಲ್ದಾಣ ಅಂಧಸ್ನೇಹಿ ‘ಬ್ರೈಲ್ ಮಾರ್ಗಸೂಚಿ’ಯನ್ನು ಅಳವಡಿಸಿ ಹೊಸ ಮೈಲುಗಲ್ಲು ನಿರ್ಮಿಸಿದೆ.ಬ್ರೈಲ್ ಲಿಪಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡ ದೇಶದ ಮೊದಲ ರೈಲ್ವೇ ಸ್ಟೇಷನ್ ಅನ್ನೋ ಖ್ಯಾತಿಗೆ ಮೈಸೂರು ರೈಲ್ವೇ ನಿಲ್ದಾಣ ಪಾತ್ರವಾಗಿದೆ. ದೃಷ್ಟಿಹೀನರ ಶ್ರೇಯೋಭಿವೃದ್ಧಿಗಾಗಿಯೇ ಶ್ರಮಿಸುತ್ತಿರುವ ‘ಅನುಪ್ರಯಾಸ್‌ ಟ್ರಸ್ಟ್‌’ ಎಂಬ ಸ್ವಯಂ ಸೇವಾ ಸಂಸ್ಥೆ ಇಂತದ್ದೊಂದು ಅಪರೂಪದ ಕೆಲಸ ಮಾಡಿದೆ. ಸಹನಾ, ಪಂಚಮ್‌ ಕಜ್ಲಾ, ಗೌತಮ್‌ ಕಣ್ಣನ್‌, ಶಕ್ತಿ ಸಿಯಾರಾ, ಕುಮಾರ್‌ ಮೋಹಿತ್‌ ಮತ್ತು ಶ್ವೇತಾ ಅವರ ತಂಡ ಮೈಸೂರು ರೈಲ್ವೇ ನಿಲ್ದಾಣವನ್ನು ದೇಶದ ಮೊದಲ ಬ್ರೈಲ್ ರೈಲ್ವೇ ನಿಲ್ದಾಣವನ್ನಾಗಿಸಿದವರು.

ಅಂಧರು ಸ್ವತಂತ್ರವಾಗಿ ವ್ಯವಹರಿಸಲು, ಸೇವೆ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ‘ಟಿಕೆಟ್‌ ಕೌಂಟರ್‌’, ‘ಪ್ಲಾಟ್‌ಫಾರಂ’, ರೈಲುಗಳ ವೇಳಾಪಟ್ಟಿ, ಪ್ರತೀಕ್ಷಣಾಲಯ, ಶೌಚಾಲಯ, ಉಪಾಹಾರ ಗೃಹ ಸೇರಿದಂತೆ ನಿಲ್ದಾಣದ ಸಮಗ್ರ ಚಿತ್ರಣ ಬ್ರೈಲ್ ಲಿಪಿಯ ಮೂಲಕ ನೀಡುವ ವ್ಯವಸ್ಥೆ ಮೈಸೂರು ರೈಲ್ವೇ ನಿಲ್ದಾಣದಲ್ಲಿದೆ.. ಹೋಟೆಲ್, ಕುಡಿಯವ ನೀರಿನ ಜಾಗ, ಪ್ರತೀಕ್ಷಣಾಲಯ, ಶೌಚಾಲಯ ಎಲ್ಲಿದೆ, ಅಲ್ಲಿಗೆ ತಲುಪಲು ಎಷ್ಟು ದೂರ ಕ್ರಮಿಸಬೇಕು ಎಂಬ ಮಾಹಿತಿ ನಿಲ್ದಾಣದಲ್ಲಿ ಸಿಗುತ್ತದೆ.. ‘ಎಚ್‌’ (ಹೋಟೆಲ್), ‘ಡಬ್ಲ್ಯು’ (ವಾಟರ್‌), ‘ಡಬ್ಲ್ಯುಎಲ್‌’ (ವೇಯ್ಟಿಂಗ್‌ ರೂಂ), ‘ಟಿಆರ್‌’ (ಟಾಯ್ಲೆಟ್‌ ರೂಂ) ಸಂಕೇತ ಬಳಸಿ ವಿವರಿಸಲಾಗಿದೆ. ಹೋಟೆಲ್ ಗಳಲ್ಲಿ ಲಭ್ಯ ಇರುವ ಪಾನೀಯ, ತಿಂಡಿ ಇತ್ಯಾದಿಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುವಂತೆ ‘ಬ್ರೈಲ್‌ ಮೆನು ಕಾರ್ಡ್‌’ ಇಡಲಾಗಿದೆ.

ಮೈಸೂರು ನಿಲ್ದಾಣದ ರೈಲುಗಳ ವೇಳಾಪಟ್ಟಿಯನ್ನು ಬ್ರೈಲ್ ಲಿಪಿಯಲ್ಲಿ ಅಳವಡಿಸಲಾಗಿದೆ, ಅದರಲ್ಲಿ ಗಾಡಿ ಸಂಖ್ಯೆ, ಹೆಸರು, ಆಗಮನದ ಮತ್ತು ನಿರ್ಗಮನದ ಸಮಯವನ್ನು ನಮೂದಿಸಲಾಗಿದೆ. ಟಿಕೆಟ್‌ ಕೌಂಟರ್‌ ಯಾವ ದಿಕ್ಕಿಗೆ ಮತ್ತು ಎಷ್ಟು ದೂರ ಇದೆ. ಪ್ಲಾಟ್‌ ಫಾರಂಗಳಿಗೆ ತಲುಪುವುದು ಹೇಗೆ, ಮೇಲ್ಸೇತುವೆ ಯಾವ ಭಾಗದಲ್ಲಿದೆ ಎಂಬ ಮಾಹಿತಿಯನ್ನು ಬ್ರೈಲ್ ಲಿಪಿಯ ಮೂಲಕ ಕೊಡಲಾಗಿದೆ. ಮೆಟ್ಟಿಲು ಮಾರ್ಗದ ಅಕ್ಕಪಕ್ಕದಲ್ಲಿ ಲೋಹದ ಪ್ಲೇಟ್‌ನಲ್ಲಿ ಪ್ಲಾಟ್ ಪಾರಂ ನಂಬರ್ ಗಳನ್ನು ಬ್ರೈಲ್ ನಲ್ಲಿ ಹಾಕಲಾಗಿದೆ. ಇದರ ಜೊತೆಗೆ ಸಂಖ್ಯೆಗಳನ್ನು ಬ್ರೈಲ್‌ನಲ್ಲಿ ಹಾಕಲಾಗಿದೆ. ಇದರ ಜೊತೆಗೆ ಪ್ರವೇಶ ದ್ವಾರಗಳು ಎಲ್ಲೆಲ್ಲಿವೆ ಎಂಬುದನ್ನುಕೂಡ ಬ್ರೈಲ್ ಮೂಲಕ ವಿವರಿಸಲಾಗಿದೆ.

ಒಂದನೇ ಪ್ಲಾಟ್‌ಫಾರಂನ ಪ್ರವೇಶ ದ್ವಾರದ ಬಳಿಯ ಗೋಡೆಗೆ ಈ ‘ಸ್ಪರ್ಶ ಸಂವೇದಿ ನಕ್ಷೆ’ಯನ್ನು ಅಳವಡಿಸಲಾಗಿದೆ. ಬ್ರೈಲ್‌ ಲಿಪಿ ಬಲ್ಲವರು ನಿಲ್ದಾಣದಲ್ಲಿನ ಸೌಲಭ್ಯಗಳನ್ನು ಗ್ರಹಿಸಲು ಇದು ದಾರಿದೀಪವಾಗಿದೆ. ನಕ್ಷೆಯ ಮುಂದೆ ಪ್ರಯಾಣಿಕ ನಿಂತಿರುವ ಜಾಗದಿಂದ ನಿಲ್ದಾಣದ ಯಾವ್ಯಾವ ಭಾಗದಲ್ಲಿ ಏನೇನು ಸೇವೆ, ಸೌಲಭ್ಯಗಳಿವೆ ಎಂಬ ವಿಸ್ತೃತ ವಿವರಣೆಯನ್ನು ಒಳಗೊಂಡಿದೆ.

ಮೈಸೂರು ರೈಲ್ವೇ ನಿಲ್ದಾಣದಲ್ಲಿ ಇತರರ ಸಹಾಯವನ್ನು ಪಡೆಯದೆ ಅಂಧರು ಸ್ವತಃ ನಿಲ್ದಾಣವನ್ನು ಬಳಕೆ ಮಾಡಿಕೊಳ್ಳುವಂತೆ ಮಾರ್ಗಸೂಚಿಯನ್ನು ಸಿದ್ಧಗೊಳಿಸಲಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಮೈಸೂರು ನಿಲ್ದಾಣದಲ್ಲಿ ಈ ಸೌಲಭ್ಯವನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ರೈಲು ನಿಲ್ದಾಣಗಳಿಗೂ ಈ ಸೌಲಭ್ಯ ನೀಡುವ ಗುರಿ ನಮ್ಮ ಸಂಸ್ಥೆಗಿದೆ. ಇಂಥ ಮಾರ್ಗಸೂಚಿ ಸೌಕರ್ಯ ಹೊಂದಿದ ದೇಶದ ಪ್ರಥಮ ನಿಲ್ದಾಣ ಇದಾಗಿದೆ. ಮೈಸೂರು ನಿಲ್ದಾಣದಿಂದ ತಿಂಗಳಿಗೆ ಸರಾಸರಿ 4 ಸಾವಿರ ಅಂಧರು ವಿವಿಧೆಡೆಗಳಿಗೆ ಸಂಚರಿಸುತ್ತಾರೆ. ಅವರಿಗೆಲ್ಲರಿಗೂ ಈ ಬ್ರೈಲ್ ಮಾಹಿತಿಯಿಂದಾಗಿ ಮತ್ತೊಬ್ಬರನ್ನು ಆಶ್ರಯಿಸುವ ಪರಿಸ್ಥಿತಿಯಿಲ್ಲದಂತಾಗಿದೆ ಅಂತಾರೆ ಅನುಪ್ರಯಾಸ್ ಸಂಸ್ಥೆಯ ಸದಸ್ಯೆ ಸಹನಾ.

ಇದೊಂದು ಒಳ್ಳೆ ಸೌಲಭ್ಯ. ನಾವೀಗ ಮೈಸೂರು ರೈಲ್ವೇ ನಿಲ್ದಾಣದಲ್ಲಿ ಮತ್ತೊಬ್ಬರ ಸಹಾಯ ಪಡೆಯುವ ಻ವಶ್ಯಕತೆ ಇಲ್ಲ. ನಮಗೆ ಅನುಕಂಪದ ಅಗತ್ಯವಿಲ್ಲ. ಬ್ರೈಲ್ ಮಾಹಿತಿಯಿರುವುದರಿಂದ ನಮ್ಮ ಪಾಡಿಗೆ ನಾವು ಹೋಗಬೇಕಾದ ಸ್ಥಳ, ಪ್ಲಾಟ್ ಪಾರ್ಮ್, ಹೋಟೆಲ್ ಎಲ್ಲಕಡೆಗೂ ಸ್ವತಂತ್ರವಾಗಿ ಹೋಗುತ್ತೇವೆ. ನಿಲ್ದಾಣದಲ್ಲಿ ಸರಾಗವಾಗಿ ವ್ಯವಹರಿಸಲು ಇದು ದಾರಿ ತೋರುತ್ತದೆ. ಎಲ್ಲ ನಿಲ್ದಾಣಗಳಲ್ಲೂ ಈ ನಕ್ಷೆ ಅಳವಡಿಸಿದರೆ ಅನುಕೂಲವಾಗುತ್ತದೆ. ಮಾರ್ಗಸೂಚಿ ಜೊತೆಗೆ ದ್ವನಿ ಆಧಾರಿತ ಮಾಹಿತಿ ಸೌಕರ್ಯ ಕಲ್ಪಿಸಿದರೆ ಬ್ರೈಲ್‌ ಲಿಪಿ ಗೊತ್ತಿಲ್ಲದ್ದವರೂ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಂಧರಿಗೆ ಈ ಸೌಕರ್ಯ ವರದಾನವಾಗಿದೆ ಅಂತಾರೆ ಮೈಸೂರಿನ ದೃಷ್ಟಿವಿಕಲಚೇತನ ಪ್ರಯಾಣಿಕ ನವೀನ್.

ಮನೆ ಬಿಟ್ಟು ಹೊರಬಂದರೆ ಸಾಕು ಅಂದರು ಮತ್ತೊಬ್ಬರನ್ನು ಆಶ್ರಯಿಸಬೇಕಾದ, ಸಹಾಯ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎಲ್ಲಡೆ ಇರುವಾಗ ಮೈಸೂರು ರೈಲ್ವೇ ನಿಲ್ದಾಣ ಮಾತ್ರ ತಾನು ಎಲ್ಲಕ್ಕಿಂತ ಭಿನ್ನ ಅನ್ನೋದನ್ನ ಸಾಭೀತು ಮಾಡಿದೆ. ಇಂತದ್ದೊಂದು ವಿಶಿಷ್ಟ ಕಾರ್ಯದ ಮೂಲಕ ಅನುಪ್ರಯಾಸ್ ಸಂಸ್ಥೆ ಮಾದರಿಯಾಗಿದೆ. ಇದೇ ರೀತಿಯ ವ್ಯವಸ್ಥೆ ಎಲ್ಲ ರೈಲ್ವೇ ನಿಲ್ದಾಣಗಳು, ಬಸ್ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಅಳವಡಿಸುವ ವ್ಯವಸ್ಥೆಯಾದ್ರೆ ಎಲ್ಲ ಅಂದರೂ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಈ ಅಪೂರ್ವ ಕೆಲಸ ಮಾಡಿರುವ ಅನುಪ್ರಯಾಸ್ ಸಂಸ್ಥೆ ಹಲವರಿಗೆ ಮಾದರಿಯಾಗಿದೆ.

Related Stories