ರಿಕ್ಷಾವಾಲಗಳಿಗಾಗಿಯೇ ಇರೋದು ಆಟೋವಾಲೆ

ಟೀಮ್​​ ವೈ.ಎಸ್​​.

ರಿಕ್ಷಾವಾಲಗಳಿಗಾಗಿಯೇ ಇರೋದು ಆಟೋವಾಲೆ

Thursday October 22, 2015,

4 min Read

ನಿಮಗೆ ಆಟೋ ಬೇಕಾ ? ಜಸ್ಟ್ ಒಂದು ಕಾಲ್ ಮಾಡಿ, ನಿಮ್ಮ ಮನೆ ಗೇಟ್ ಮುಂದೆ ಆಟೋ ಹಾಜರಾಗುತ್ತೆ. ಭಾರತದಲ್ಲಿ ಉಳಿದುಕೊಂಡಿರುವ ಇಂತಹ ಕಂಪನಿಗಳಲ್ಲಿ ಆಟೋವಾಲೆ ಕೂಡಾ ಒಂದು. ಇಂತಹ ಸಾಕಷ್ಟು ಕಂಪನಿಗಳು ಬಂದಷ್ಟೇ ವೇಗದಲ್ಲಿ ಕಣ್ಣುಮುಚ್ಚಿಕೊಂಡಿವೆ. ಆದರೆ ಆಟೋವಾಲೆ, ಕ್ಷೇತ್ರದಲ್ಲಿ ಉಳಿದುಕೊಂಡಿರೋದಷ್ಟೇ ಅಲ್ಲ, ಲಾಭದತ್ತಲೂ ಮುಖ ಮಾಡಿದೆ ಎನ್ನುತ್ತಾರೆ ಆಟೋವಾಲೆ ಸಿಒಒ ಜನಾರ್ದನ್ ಪ್ರಸಾದ್. ಯುವರ್ ಸ್ಟೋರಿಗೆ ಇ-ಮೇಲ್ ಮತ್ತು ದೂರವಾಣಿ ಸಂದರ್ಶನ ನೀಡಿದ ಜನಾರ್ದನ್ ಅವರು ಉದ್ಯಮ ಕುರಿತ ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ. 0.5 ಮಿಲಿಯನ್ ಏಂಜಲ್ ಫಂಡಿಂಗ್ ಪಡೆದ ಸಂಸ್ಥೆ ಪುಣೆಯಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿದೆ. ಬೆಂಗಳೂರಿನಲ್ಲಿ ಪೈಲಟ್ ಯೋಜನೆಯನ್ನೂ ಆರಂಭಿಸಿದೆ. “ನಾವು ಸುಮಾರು 75 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಈವರೆಗೆ ಸೇವೆ ಸಲ್ಲಿಸಿದ್ದೇವೆ. ಲಾಭ ಪಡೆಯುವ ಹಂತದಲ್ಲಿದ್ದೇವೆ. ಇಡೀ ಪ್ರಯಾಣವು ಏಳಿಗೆ-ಕುಸಿತ ಎಲ್ಲವನ್ನೂ ಆಟೋವಾಲೆ ತಂಡಕ್ಕೆ ಕಲಿಸಿಕೊಟ್ಟಿದೆ. ಆದರೆ, ನಾವು ಆಟೋವಾಲೆಯನ್ನು ಭಾರತದಲ್ಲಿ ಲಾಭದಾಯಕ ಉದ್ದಿಮೆಯಾಗಿ ಮಾಡಲು ನಿಶ್ಚಯಿಸಿದ್ದೇವೆ.”

ಉದ್ಯಮಿಯಾಗಿ ನೀವು ಏನೇನು ಪಾಠ ಕಲಿತಿದ್ದೀರಿ?

ಭಿನ್ನ ಭಿನ್ನ ಉದ್ಯಮಗಳು ಭಿನ್ನ ಭಿನ್ನ ಸವಾಲುಗಳನ್ನು ಎದುರಿಸುತ್ತವೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗುವ ತಂತ್ರ, ಮತ್ತೊಂದು ಕ್ಷೇತ್ರದಲ್ಲಿ ಯಶಸ್ಸು ಗಳಿಸಲಾರದು. ಒಬ್ಬ ಉದ್ಯಮಿಯಾಗಿ ಎಲ್ಲರ ಸಲಹೆ ಪಡೆಯಿರಿ, ಆದರೆ ನಿಮ್ಮದೇ ಹಾದಿ ಕಂಡುಕೊಳ್ಳಿ. ನಿಮ್ಮ ಕ್ಷೇತ್ರಕ್ಕೆ ಸರಿಯಾಗಿ ಹೊಂದಿಕೆಯಾಗುವಂತಹ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪ್ರಯೋಗ ಮಾಡುತ್ತಾ ಇರಿ, ತಪ್ಪುಗಳನ್ನು ತಿದ್ದಿಕೊಳ್ಳಿರಿ. ಉದಾಹರಣೆಗೆ, ನಾವು ಪುಣೆ ಮತ್ತು ಬೆಂಗಳೂರಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದೇವೆ. ಆದರೆ, ಅಷ್ಟೇ ಖರ್ಚು ಮಾಡುತ್ತಿದ್ದೇವೆ. ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಕೇವಲ 6 ತಿಂಗಳುಗಳಲ್ಲಿ ಲಾಭದ ಹಾದಿ ಹಿಡಿದಿದ್ದೇವೆ. ನಾವು ಈಗ ನಮ್ಮ ಉದ್ಯಮದ ಬಗ್ಗೆ ಹೆಚ್ಚು ವಿಶ್ವಾಸದಿಂದಿದ್ದೇವೆ.

image


ಬೆಂಗಳೂರಿನಲ್ಲಿ ಪೈಲಟ್ ಯೋಜನೆ ಬಳಿಕ ಹಿಂದೇಟು ಹಾಕಿದ್ದೇಕೆ?

ಪುಣೆಯಲ್ಲಿ ನಾವು ಗಮನಾರ್ಹವಾಗಿ ಬೆಳೆದ ಬಳಿಕ ಬೆಂಗಳೂರಿನಲ್ಲಿ ಪೈಲಟ್ ಯೋಜನೆ ಆರಂಭಿಸಿದೆವು. ಪುಣೆಯಲ್ಲಿ ಅಳವಡಿಸಿದ ತಂತ್ರಗಳು ದೇಶದ ಬೇರೆ ನಗರಗಳಲ್ಲೂ ಯಶಸ್ವಿಯಾಗುತ್ತವಾ ಎಂದು ತಿಳಿದುಕೊಂಡೆವು. ಬೆಂಗಳೂರಿನಲ್ಲೂ ಯಶಸ್ಸು ಸಿಕ್ಕಿತು. ಆದರೆ, ತಕ್ಷಣಕ್ಕೆ ನಾವು ವಾಣಿಜ್ಯ ಉದ್ದೇಶದಿಂದ ಆರಂಭಿಸಲು ಹೋಗಲಿಲ್ಲ. ಬೆಂಗಳೂರಿನಲ್ಲಿ ಸೇವೆ ನೀಡಲು ನಮಗೆ ದೊಡ್ಡ ಮೂಲಸೌಕರ್ಯದ ಅಗತ್ಯವಿತ್ತು. ಮುಂದಿನ ಹಂತದ ಹೂಡಿಕೆ ವೇಳೆ ನಾವು ಅದನ್ನು ಪಡೆದುಕೊಳ್ಳಲಿದ್ದೇವೆ. ಬೆಂಗಳೂರಿನಲ್ಲಿ ಯಶಸ್ವಿ ಪೈಲಟ್ ಯೋಜನೆ ಬಳಿಕ, ನಾವು ಪುಣೆಯಲ್ಲಿ ಲಾಭ ಗಳಿಸುವತ್ತ ಚಿತ್ತ ಹರಿಸಿದೆವು. ಉದ್ಯಮಿಯಾಗಿ ನೀವು ಎಲ್ಲಾ ಕಾಲದಲ್ಲೂ ಪ್ರಯೋಗ ಮಾಡುತ್ತಲೇ ಇರಬೇಕು. ನಮ್ಮಂತಹ ಉದ್ಯಮ ನಡೆಸಬೇಕಾದರೆ, ನಾವು ಖುದ್ದಾಗಿ ನಗರಗಳಲ್ಲಿ ಸುತ್ತಾಡಿ, ನಗರ ಮತ್ತು ಅಲ್ಲಿನ ನಿವಾಸಿಗಳನ್ನು ಅಭ್ಯಾಸ ಮಾಡಲೇ ಬೆಕು.

ಡಯಲ್ ಎ ರಿಕ್ಷಾದ ಕೀಲಿಕೈ ಏನು?

ಭಾರತದಲ್ಲಿ ಮಿಲಿಯನ್​​ಗಟ್ಟಲೆ ರಿಕ್ಷಾಗಳು ರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಇದು ಬಿಲಿಯನ್ ಡಾಲರ್ ವಹಿವಾಟಿನ ಕ್ಷೇತ್ರವಾಗಿದೆ. ನಾವು ಜನರಿಗೆ ಹೆಚ್ಚು ಹೆಚ್ಚು ಸೇವೆ ನೀಡಬೇಕು. ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿ, ಚಾಲಕರನ್ನು ಸರಿಯಾಗಿ ಬಳಸಿಕೊಂಡು, ಖಾಲಿ ಓಡಾಟವನ್ನು ಕಡಿಮೆ ಮಾಡಬೇಕು. ನಾವು ಚಾಲಕರ ಆದಾಯವನ್ನು ಎರಡು ಪಟ್ಟು ಹೆಚ್ಚಿಸಿದ್ದೇವೆ. ಶೇಕಡಾ 20ಕ್ಕೂ ಹೆಚ್ಚು ಚಾಲಕರು ನಮ್ಮ ಮೂಲಕ ಪ್ರತಿ ತಿಂಗಳು 25,000-30,000 ರೂಪಾಯಿ ಆದಾಯಗಳಿಸುತ್ತಿದ್ದಾರೆ. ನಾವು ಖಾಲಿ ಓಡಾಟವನ್ನೂ ಗಮನಾರ್ಹವಾಗಿ ಕಡಿಮೆ ಮಾಡಿದ್ದೇವೆ. ನಮ್ಮ ಖಾಲಿ ಓಡಾಟದ ಪ್ರಮಾಣ 30%. ರೇಡಿಯೋ ಆಧರಿತ ಕ್ಯಾಬ್​​ಗಳ ಖಾಲಿ ಓಡಾಟ ಪ್ರಮಾಣ ಭಾರತದಲ್ಲಿ 40% ಇದೆ ಎನ್ನುವುದನ್ನು ನೆನಪಿಡಿ.

ಹೂಡಿಕೆಯ ಬಳಕೆ

ಇದು ಹೊಸ ವಲಯವಾಗಿದ್ದರಿಂದ ನಾವು ಹೂಡಿಕೆಯನ್ನು ಸುಸ್ಥಿರವಾದ ವ್ಯವಹಾರ ಸ್ಥಾಪಿಸಲು ಬಳಸಿದೆವು. ಕಳೆದ ವರ್ಷ ನಾವು ಬೆಳವಣಿಗೆಯ ಮೇಲೆ ಗಮನಹರಿಸಿದೆವು. ಭಾರೀ ಪ್ರಮಾಣದಲ್ಲಿ ಹಣ ಕಳೆದುಕೊಂಡೆವು. ಈ ವರ್ಷ ನಾವು ಲಾಭದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಆಟೋವಾಲೆಯಲ್ಲಿ ನಾವು ಈಗ ಹಿಂದೆ ಮಾಡಿದ್ದಕ್ಕಿಂತ ಹೆಚ್ಚಿನ ಆದಾಯ ಮಾಡುತ್ತಿದ್ದೇವೆ. ಇದೇ ರೀತಿಯಲ್ಲಿ ಸಾಗಿದರೆ ಮುಂದಿನ ತಿಂಗಳಲ್ಲೇ ನಾವು ಹಾಕಿದ ಬಂಡವಾಳ ಹಿಂಪಡೆದು ಲಾಭದ ಹಾದಿಗೆ ತೆರಳಲಿದ್ದೇವೆ. ಮುಂದಿನ ವಿಸ್ತರಣೆಗೆ ನಾವು ಸಿದ್ಧರಾಗುತ್ತೇವೆ. ಏಂಜಲ್ ಫಂಡ್​​ನಿಂದ ನಾವು ಏನನ್ನು ಮಾಡಲು ಉದ್ದೇಶಿದ್ದೆವೋ ಅದನ್ನು ಮಾಡಿದ್ದೇವೆ.

ನಗರಗಳಲ್ಲಿ ಡ್ರೈವರ್​ಗಳ ಸಂಖ್ಯೆ ಜಾಸ್ತಿ ಆಗಿದೆಯೇ?

ಆಟೋವಾಲೆಗೆ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಬೇಡಿಕೆ ಇದೆ. ಇದು ಹೀಗೆಯೇ ಮುಂದುವರಿಯಬಹುದು. ಮುಂದಿನ ದಿನಗಳಲ್ಲೂ ನಾವು ಎಲ್ಲಾ ಡ್ರೈವರ್​​ಗಳನ್ನು ತಮ್ಮ ವೇದಿಕೆಗೆ ತೆಗೆದುಕೊಳ್ಳಲು ಬಯಸುವುದಿಲ್ಲ. ನಾವು ಕೆಲವೇ ಕೆಲವು ಒಳ್ಳೆಯ ಚಾಲಕರ ಜೊತೆಗೆ ವ್ಯವಹಾರ ನಡೆಸಲು ಇಚ್ಚಿಸುತ್ತೇವೆ. ನಾವು ರಿಕ್ಷಾ ಚಾಲಕರೊಳಗೆ ಇರುವ ಉದ್ಯಮಿ ಜೊತೆ ವ್ಯವಹರಿಸುತ್ತೇವೆ. ನಮ್ಮ ಉದ್ಯಮದ ಗುರಿ ಮತ್ತು ಅವರ ಗುರಿಗಳು ಜೊತೆಯಾಗಿ ಸಾಗುವಂತೆ ನೋಡಿಕೊಳ್ಳುತ್ತೇವೆ. ನಾವು ಬದಲಾವಣೆ ಬಯಸುವ ಮತ್ತು ಬೆಳವಣಿಗೆ ಇಚ್ಚಿಸುವ ಚಾಲಕರ ಜೊತೆ ಕೆಲಸ ಮಾಡುತ್ತೇವೆ.

ರಿಕ್ಷಾ ಚಾಲಕರು ನಿಮ್ಮ ವೇದಿಕೆ ಬಳಸುವುದು ಹೇಗೆ?

ನಾವು ಚಾಲಕರಿಗೆ ಸಂದರ್ಶನ ಏರ್ಪಡಿಸಿ ಅವರ ಕೌಶಲ್ಯ ಮತ್ತು ಉದ್ದೇಶಗಳನ್ನು ತಿಳಿದುಕೊಳ್ಳುತ್ತೇವೆ. ಎಲ್ಲಾ ಚಾಲಕರಿಗೆ ಆರ್​​ಟಿಒ ಪರವಾನಗಿ ಸಿಕ್ಕಿರುತ್ತದೆ. ಲೈಸೆನ್ಸ್, ಪರ್ಮಿಟ್, ಇನ್ಶುರೆನ್ಸ್ ಮತ್ತು ಮೀಟರ್ ಪಾಸಿಂಗ್​​ಗಳನ್ನು ಹೊಂದಿರುತ್ತಾರೆ. ಈ ಮೂಲಕ ನಾವು ನಮ್ಮ ಸೇವೆಯ ಮೇಲೆ ಗ್ರಾಹಕರು ವಿಶ್ವಾಸ ಇಡುವಂತೆ ಮಾಡುತ್ತಿದ್ದೇವೆ. ಯಾವುದೇ ಚಾಲಕರು ನಮ್ಮಿಂದ ಕೆಟ್ಟ ನಿರೀಕ್ಷೆಗಳನ್ನು ಇಟ್ಟುಕೊಳ್ಳದಂತೆ ಗಮನಹರಿಸುತ್ತೇವೆ.

ಸಾಮಾಜಿಕ ಮಾಧ್ಯಮದ ಮೇಲೆ ನಿಮ್ಮ ನಿರೀಕ್ಷೆ

ನಿಮ್ಮ ಸಾಮಾಜಿಕ ಮಾಧ್ಯಮದ ಪುಟವು ಉದ್ಯಮದ ಬ್ರಾಂಡ್, ಮಾರ್ಕೆಟಿಂಗ್, ಮನಿಟೈಸೇಷನ್ ಮೊದಲಾದ ವಿಚಾರಗಳಿಗೆ ಸಹಕಾರಿಯಾಗಿದೆ ಎಂದರೆ, ಅದರ ಮೇಲೆ ಗಮನ ಹರಿಸಿ. ನಿಮ್ಮ ಸಾಮಾಜಿಕ ಮಾಧ್ಯಮದಿಂದ ಹಣಗಳಿಸುವುದು ಸಾಧ್ಯವಾಗದೇ ಹೋದರೆ, ಸಂವಹನದ ಬೇರೆ ಮಾರ್ಗಗಳತ್ತ ಗಮನಹರಿಸಿ. ಆಟೋವಾಲೆಯಲ್ಲೂ ಕೂಡಾ ಒಂದು ಹಂತದಲ್ಲಿ ನಮ್ಮ ಗ್ರಾಹಕರು ಫೇಸ್​​ಬುಕ್​​ನಲ್ಲಿ ಸಕ್ರಿಯರಾಗಿಲ್ಲ ಎನ್ನುವುದು ಗಮನಕ್ಕೆ ಬಂತು. ಸಕ್ರಿಯರಾಗಿದ್ದವರೂ ಸರಿಯಾದ ಪ್ರತಿಕ್ರಿಯೆ ಕೊಡುತ್ತಿಲ್ಲ ಎನ್ನುವುದು ತಿಳಿಯಿತು. ಇ-ಕಾಮರ್ಸ್ ಕಂಪನಿಗಳು ಸಾಮಾಜಿಕ ಮಾಧ್ಯಮದ ಮೇಲೆ ಹೆಚ್ಚು ಗಮನ ಕೊಡಬೇಕು. ಆದರೆ ಆಟೋವಾಲೆಯಂತಹ ಕಂಪನಿಗಳು ಬೇರೆ ರೀತಿಯ ಸಂಪರ್ಕ ಮಾಧ್ಯಮಗಳತ್ತ ಚಿತ್ತಹರಿಸಬೇಕು.

ರಿಕ್ಷಾ ಚಾಲಕರ ಬಗೆಗಿದ್ದ ಅಭಿಪ್ರಾಯ ಏನಾದರೂ ಬದಲಾಗಿದೆಯಾ?

ನಾವು ಆಟೋವಾಲೆ ಆರಂಭಿಸುವಾಗ, ಆಟೋಚಾಲಕರನ್ನು ನಿಭಾಯಿಸುವುದು ಕಷ್ಟ ಎಂದು ಎಲ್ಲರೂ ಹೇಳುತ್ತಿದ್ದರು. ಅವರಲ್ಲಿ ಬಹುತೇಕರು ಅವಿದ್ಯಾವಂತರಾಗಿದ್ದು, ನಂಬಿಕೆಗೆ ಅರ್ಹರಲ್ಲ ಎನ್ನುತ್ತಿದ್ದರು. ಆದರೆ, ನಾವು ಚಾಲಕರ ಜೊತೆ ಮಾತುಕತೆ ಶುರು ಮಾಡಿದೆವು. ಅವರಲ್ಲಿ ಬಹುತೇಕರು ನಂಬಿಕಸ್ಥರು ಮತ್ತು ಜೀವನದಲ್ಲಿ ಮೌಲ್ಯ, ಸಿದ್ಧಾಂತಗಳನ್ನು ಹೊಂದಿದ್ದಾರೆ ಎನ್ನುವುದು ತಿಳಿಯಿತು. ನಾವು ಕುಟುಂಬ ಹೊಂದಿರುವ ಚಾಲಕರ ಜೊತೆ ಹೆಚ್ಚಾಗಿ ಕೆಲಸ ಮಾಡುತ್ತೇವೆ. ನಮ್ಮ ಚಾಲಕರು, ಗೌರವಪೂರ್ಣ, ಮತ್ತು ಕಂಫರ್ಟೇಬಲ್ ಜೀವನ ಸಾಗಿಸಲು ಇಚ್ಚಿಸುತ್ತಾರೆ. ನಾವು ಅವರಿಗೆ ಸರಿಯಾದ ವೇದಿಕೆ ಕಲ್ಪಿಸಿದರೆ, ಅವರು ಒಳ್ಳೆಯ ಕೆಲಸ ಮಾಡುತ್ತಾರೆ.

ಮಾಧ್ಯಮಗಳ ಪಾತ್ರವೇನು?

ಯಾವುದೇ ಉದ್ಯಮಕ್ಕಾದೂ ಮಾಧ್ಯಮದ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಅವರು ಸ್ಫೂರ್ತಿತುಂಬುವ ಲೇಖನಗಳನ್ನು ಬರೆಯುತ್ತಾರೆ. ಎಲ್ಲಾಕಡೆ ಅತ್ಯಂತ ವೇಗವಾಗಿ ಸುದ್ದಿ ತಲುಪಿಸುತ್ತಾರೆ. ಇದು ಪ್ರತಿ ಕಂಪನಿಗೂ ವಿವಿಧ ಹಂತದಲ್ಲಿ ವಿಶ್ವಾಸಾರ್ಹತೆಯನ್ನು ತಂದುಕೊಡುತ್ತದೆ. ಎಲ್ಲಾ ಉದ್ಯಮಗಳೂ ಗ್ರಾಹಕರನ್ನು ಅವಲಂಬಿಸಿಯೇ ನಡೆಯುತ್ತವೆ. ಒಂದೇ ಕ್ಷೇತ್ರದಲ್ಲಿ ಯಾರಾದರೂ ಸೋತರೆ, ಗೆಲ್ಲುತ್ತಿರುವವರನ್ನು ಬೆಂಬಲಿಸಿ ಉದ್ಯಮ ಉಳಿಯುವಂತೆ ನೋಡಿಕೊಳ್ಳುವುದು ಮುಖ್ಯ.