ಒಗ್ಗಟ್ಟಿಗೆ ಒತ್ತು ಕೊಟ್ಟವರು ಸಾತಿ ಹಾತ್ ಬಡಾನಾ ಫೌಂಡೇಶನ್ ಸಂಸ್ಥಾಪಕಿ ಜಾನಕಿ ವಿಶ್ವನಾಥ್

ಟೀಮ್​​ ವೈ.ಎಸ್​​.

ಒಗ್ಗಟ್ಟಿಗೆ ಒತ್ತು ಕೊಟ್ಟವರು ಸಾತಿ ಹಾತ್ ಬಡಾನಾ ಫೌಂಡೇಶನ್ ಸಂಸ್ಥಾಪಕಿ ಜಾನಕಿ ವಿಶ್ವನಾಥ್

Wednesday October 14, 2015,

3 min Read

ಇದು ಯಂತ್ರಗಳ ಯುಗ. ಅತಿ ವೇಗದಲ್ಲಿ ಟೆಕ್ನಾಲಜಿ ಅಭಿವೃದ್ಧಿಯಾಗ್ತಿದೆ. ಮನುಷ್ಯ ಮಾತ್ರ ಕಾಲದ ಜೊತೆ ಓಡಿ ಓಡಿ ಹೈರಾಣವಾಗಿದ್ದಾನೆ. ಒತ್ತಡದ ಜೀವನ ಅವನ ನೆಮ್ಮದಿ ಕೆಡಿಸಿದೆ. ಇಂತವರ ಕೈ ಹಿಡಿದು ನಡೆಸಲು ಹುಟ್ಟಿಕೊಂಡ ಸಂಸ್ಥೆಯೇ ಸಾತಿ ಹಾತ್ ಬಡಾನಾ.

image


ಸಾತಿ ಹಾತ್ ಬಡಾನಾ ಸಂಸ್ಥೆ ಸಂಸ್ಥಾಪಕಿ ಜಾನಕಿ ವಿಶ್ವನಾಥ್ ಉತ್ಸಾಹಿ ಮಹಿಳೆ. ಸದಾ ಹೊಸದನ್ನು ಯೋಚಿಸಿ,ಕಾರ್ಯರೂಪಕ್ಕೆ ತರಲು ಪರಿಶ್ರಮಿಸುತ್ತಿರುವವರು. ಮಕ್ಕಳಾದ ಮೇಲೆ ಎಲ್ಲ ಮುಗೀತು ಅಂತಾ ಮನೆಯಲ್ಲಿ ಕುಳಿತುಕೊಳ್ಳುವ ಮಹಿಳೆಯರಲ್ಲಿ ಅವರು ಭಿನ್ನವಾಗಿ ನಿಲ್ಲುತ್ತಾರೆ.

ಜಾನಕಿ ವಿಶ್ವನಾಥ್ 1988ರಲ್ಲಿ ಟಿಐಎಸ್ಎಸ್ ನಲ್ಲಿ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರದ ಬದುಕು ಹಸನಾಗಿತ್ತು. ಉತ್ತಮ ಕೆಲಸ, ವೃತ್ತಿಗೆ ತಕ್ಕ ಭತ್ಯೆ, ವಿದೇಶಿ ಪ್ರವಾಸ, ವಿವಾಹ ಎಲ್ಲವೂ ಅವರು ಬಯಸಿದಂತೆ ಸಾಗಿತ್ತು. ತಮ್ಮ 33ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಜಾನಕಿ, ಮೂರು ವರ್ಷಗಳ ಕಾಲ ಮಗಳೊಂದಿಗೆ ಮಗುವಾಗಿ ಕಾಲ ಕಳೆದರು.

ಮಗಳನ್ನು ಪ್ಲೇ ಸ್ಕೂಲ್ ಗೆ ಕಳುಹಿಸಿದ ಜಾನಕಿ ಏನಾದರೊಂದು ಸಾಧಿಸಬೇಕೆಂಬ ಛಲದೊಂದಿಗೆ ಮನೆಯಿಂದ ಹೊರಬಂದರು. ಪುಣೆಯ ಔಂದ್ ಎಂಬಲ್ಲಿ ವಾಸ್ತವ್ಯ ಹೂಡಿದ ಅವರಿಗೆ ನೆರವಾಗಿದ್ದು ಪುಸ್ತಕದಂಗಡಿ. ಆಶ್ಚರ್ಯ ಎನ್ನುವಂತೆ ಔಂದ್ ನಲ್ಲಿ ಪುಸ್ತಕದಂಗಡಿಯೇ ಇರಲಿಲ್ಲ. ಇದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡ ಜಾನಕಿ ಅಲ್ಲಿ ಒಂದು ಪುಸ್ತಕದಂಗಡಿ ತೆರೆದರು. ಸತತ 11 ವರ್ಷಗಳ ಕಾಲ ಅಂಗಡಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಜಾನಕಿ ಜೀವನದಲ್ಲಿ ಹೊಸ ತಿರುವು ನೀಡಿದ್ದು ಇ-ಕಾಮರ್ಸ್. ಅದರಿಂದಾಗಿ ಕೇವಲ ಒಂದೇ ವರ್ಷದಲ್ಲಿ ತಮ್ಮ ಅಂಗಡಿಗೆ ಬೀಗ ಜಡಿಯಬೇಕಾಯಿತು. ಸಾತಿ ಹಾತ್ ಬಡಾನಾ ಸಂಸ್ಥೆ ತಲೆ ಎತ್ತಿತು.

ಜಗತ್ತಿನ ಆಗು ಹೋಗುಗಳನ್ನು ಸದಾ ಗಮನಿಸುತ್ತಿದ್ದ ಜಾನಕಿ, ಡಿಜಿಟಲ್ ಲೈಫ್ ಸ್ಟೈಲ್, ಮನುಷ್ಯನನ್ನು ಗುಲಾಮಗಿರಿಗೆ ತಳ್ಳುತ್ತಿದೆ. ಸಮಾಜ ಆಧುನೀಕರಣಗೊಳ್ಳುತ್ತಿದ್ದಂತೆ ಜನರು ನಾಗರೀಕ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ಒತ್ತಡ ಜಾಸ್ತಿಯಾಗುತ್ತಿದೆ ಎಂಬುದನ್ನು ಮನಗಂಡರು. ಕೌಟುಂಬಿಕ ದೌರ್ಜನ್ಯ,ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಕಿರುಕುಳ, ಆತ್ಮಹತ್ಯೆ ಮತ್ತು ಇತರ ಸಾಮಾಜಿಕ ಸಮಸ್ಯೆಗಳು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಪ್ರಭಾವವನ್ನು ಜೀವನದ ಮೇಲೆ ಬೀರುತ್ತಿವೆ ಎಂಬುದನ್ನು ಅರಿತರು. ಜನರ ಒತ್ತಡ ಕಡಿಮೆ ಮಾಡಿ, ನೆಮ್ಮದಿ ನೀಡುವ ಉದ್ದೇಶದಿಂದ ಸಾತಿ ಹಾತ್ ಬಡಾನಾ ಸಂಸ್ಥೆ ಸ್ಥಾಪಿಸಿದರು.

ಎಸ್ ಹೆಚ್ ಬಿ ಸಂಸ್ಥೆ ಒಂದು ಅದ್ವಿತೀಯ ಪರಿಕಲ್ಪನೆ ಹೊಂದಿದೆ. ನೊಂದ ಜನರಿಗೆ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡಿದೆ. ಏಕಾಂಗಿತನ, ಕೆಲಸದಿಂದ ವಜಾ, ಪ್ರೀತಿಪಾತ್ರರ ಸಾವು, ವಿದ್ಯಾರ್ಥಿಗಳು ಎದುರಿಸುವ ಒತ್ತಡ, ಆತಂಕ ಸೇರಿದಂತೆ ಜನರು ತಮ್ಮ ನೋವುಗಳನ್ನು ಇದರಲ್ಲಿ ಹಂಚಿಕೊಳ್ಳಬಹುದು. ಎಸ್ ಹೆಚ್ ಬಿ ನೊಂದವರ ನೋವನ್ನು ಆಲಿಸಲು ತರಬೇತಿ ಪಡೆದ ಕೇಳುಗರನ್ನು ಹೊಂದಿದ್ದು, ಅವರು ನೊಂದವರನ್ನು ಸಂತೈಸುತ್ತಾರೆ..

ಎಸ್ ಹೆಚ್ ಬಿಯ ಮತ್ತಷ್ಟು ಕಾರ್ಯ

ಎಸ್ ಹೆಚ್ ಬಿ ಸಹಾನುಭೂತಿ, ಲಿಂಗ ಸಮಸ್ಯೆ ಮತ್ತು ಜೀವನ ಕಲೆ ಈ ಮೂರು ಮುಖ್ಯ ವಲಯಗಳನ್ನು ಕೇಂದ್ರೀಕರಿಸುತ್ತವೆ.

ಅನುಕಂಪದ ಅಡಿಯಲ್ಲಿ ಜನರ ಸಮಸ್ಯೆ ಆಲಿಸುವ ಕಾರ್ಯಕ್ರಮದ ಜೊತೆಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಕಾರ್ಯಕ್ರಮವೂ ಇದೆ. `ಪಾಲನೆ ಮಾಡುವವರ ಆರೈಕೆ’ ಎಂಬ ಹೆಸರಿನಲ್ಲಿ ಸ್ಮಾರ್ಟ್ ಫೋನ್ ನೆರವು ಕಾರ್ಯಕ್ರಮವನ್ನು ಬುಧವಾರ ನಡೆಸಲಾಗುತ್ತದೆ. ಹಿರಿಯ ನಾಗರಿಕರ ಸಮಸ್ಯೆ ಆಲಿಸುವ ಜೊತೆಗೆ ಅವರು ಒತ್ತಡದಿಂದ ಹೊರಬರುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

image


ಲಿಂಗ ಸಮಸ್ಯೆ ಬಗ್ಗೆ ಶಾಲಾ-ಕಾಲೇಜು, ಕಾರ್ಪೋರೇಟ್ ಕಂಪನಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಶಾಲೆಗಳಲ್ಲಿ, ಶಿಕ್ಷಕರಿಗೆ ಮಕ್ಕಳ ಲೈಂಗಿಕ ಕಿರುಕುಳ ತಡೆಯುವ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಬೋಧಕೇತರ ಸಿಬ್ಬಂದಿಗೆ ಸಹ POCSO ಕಾಯ್ದೆ ಅಡಿ ಅರಿವು ಮಾಡಿಸುತ್ತದೆ. 9ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ಲಿಂಗ, ಲೈಂಗಿಕತೆ, ಅಭಿವ್ಯಕ್ತಿ ಮತ್ತು ವ್ಯಕ್ತಿತ್ವದ ಬಗ್ಗೆ ಅರಿವು ಮೂಡಿಸುತ್ತದೆ. ಕಾರ್ಪೋರೇಟ್ ಸಂಸ್ಥೆಗಳಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ. ಐಟಿಐ ಸೇರಿದಂತೆ ಇತರ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಕ್ತಿತ್ವ ಕೌಶಲ್ಯ ತರಬೇತಿಯನ್ನು ನೀಡುವುದು ಸಂಸ್ಥೆಯ ಮತ್ತೊಂದು ಕಾರ್ಯ.

ಹೊಸ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಎಸ್ ಹೆಚ್ ಬಿ, ಔಂದ್ ಮತ್ತು ಪುಣೆಯಲ್ಲಿ ಪ್ರತಿ ಶನಿವಾರ ವರ್ಕ್ ಶಾಪ್ ನಡೆಸುತ್ತಿದೆ. ಉತ್ತಮ ತರಬೇತುದಾರರಾಗಿರುವ ಜಾನಕಿ ಮತ್ತು ಅವರ ಸಹದ್ಯೋಗಿ ವಿಭಾ ಉಳಿದವರಿಗೆ ಗುರುವಾಗಿದ್ದಾರೆ. ಜಾನಕಿ ಎಲ್ಲ ಕಾರ್ಯಾಗಾರಗಳನ್ನು ಸ್ವಯಂ ಸೇವಕರ ನೆರವಿನಿಂದ ನಡೆಸುತ್ತಾರೆ..

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಮನಸ್ಸು ಹೊಂದಿಕೊಳ್ಳುವುದು ಕಷ್ಟ. ಮಾನಸಿಕ ಹಾಗೂ ಸಾಮಾಜಿಕ ಒತ್ತಡದಿಂದ ಜನ ಬಳಲುತ್ತಿದ್ದಾರೆ. ಸಮಾಜದಲ್ಲಿ ಒಬ್ಬ ವ್ಯಕ್ತಿ ಬದಲಾವಣೆ ತರಲಾರ. ನಾಲ್ಕು ಕೈ ಒಂದಾದರೆ ಮಾತ್ರ ಯಶಸ್ಸು ಸಾಧ್ಯ. ಒಗ್ಗಟ್ಟಿನಲ್ಲಿ ಬಲ ಇದೆ. ಇದೆ ಉದ್ದೇಶದ ಅಡಿಯಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.