ಅರಮನೆ ನಗರದಲ್ಲಿ ಐಟಿ ಕಂಪು

ಟೀಮ್ ವೈ.ಎಸ್.ಕನ್ನಡ

0

ಮೈಸೂರು ಜಿಲ್ಲೆ ಅವಲೋಕನ: ಕರ್ನಾಟಕದ ಸಾಂಸ್ಕತಿಕ ರಾಜಧಾನಿ ಮೈಸೂರು ಐಟಿ ವಲಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರೋ ನಗರ ಹಾಗೂ ರಾಜ್ಯದಲ್ಲಿ ಐಟಿ ರಫ್ತಿನಲ್ಲಿ 2ನೇ ಸ್ಥಾನ ಪಡೆದಿದೆ. ಅರಮನೆ ನಗರ ತನ್ನ ಪಾರಂಪರಿಕ ಸೊಬಗಿನಿಂದ ಈಗಲೂ ದೇಶದ ನಂಬರ್ 1 ಪ್ರವಾಸೋದ್ಯಮ ಸ್ಥಳವಾಗಿ ಗುರುತಿಸಿಕೊಂಡಿದೆ ಮತ್ತು ವಿಶ್ವದಲ್ಲಿ 4ನೇ ಅತ್ಯುತ್ತಮ ಪ್ರವಾಸಿ ನಗರವಾಗಿ ಹೆಸರುಗಳಿಸಿದೆ. ರಾಜ್ಯ ರಾಜಧಾನಿಗೆ ಹತ್ತಿರದಲ್ಲೇ ಇದ್ದು ಜಿಲ್ಲೆಯಲ್ಲಿ ಮೈಸೂರು, ಟಿ.ನರಸೀಪುರ, ನಂಜನಗೂಡು, ಹೆಗ್ಗಡದೇವನಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಿವೆ. ಜಿಲ್ಲೆಯ ಸಾಕ್ಷರತೆ 72.79% ರಷ್ಟಿದೆ.

ಆರ್ಥಿಕ ಸ್ಥಿತಿಗತಿ: ಮೈಸೂರು ಜಿಲ್ಲೆಯ ಒಟ್ಟು ಜಿಡಿಪಿ ರೂ 136.47 ಶತಕೋಟಿಗಳಲ್ಲಿದ್ದು ರಾಜ್ಯದ ಜಿಎಸ್ಡಿಪಿಗೆ 4.5% ಕೊಡುಗೆ ನೀಡುತ್ತಿದೆ. ಇಲ್ಲಿನವರ ತಲಾ ವಾರ್ಷಿಕ ಆದಾಯ 65,759 ರೂಗಳು. ಜಿಡಿಡಿಪಿ ಟ್ರೆಂಡ್ 7% ಸಿಎಜಿಆರ್ ವೇಗದಲ್ಲಿ ಬೆಳೆಯುತ್ತಿದೆ.

ವ್ಯವಸಾಯದೆಡೆ ಗಮನ: ವ್ಯವಸಾಯ ಆರ್ಥಿಕತೆಯಲ್ಲಿ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಜಿಲ್ಲೆಯ ಸುಮಾರು 42% ಭೂಮಿಯಲ್ಲಿ ಉಳುಮೆ ಮಾಡಲಾಗುತ್ತದೆ. ಗೋಧಿ, ರಾಗಿ, ಜೋಳ, ನವಣೆ, ಭತ್ತ ಇಲ್ಲಿನ ಪ್ರಮುಖ ಬೆಳೆಗಳು. ತೊಗರಿ, ಹುರುಳಿ, ಹೆಸರುಕಾಳು, ಅವರೆಯನ್ನು ಬೇಳೆ ಕಾಳುಗಳನ್ನಾಗಿ ಬೆಳೆದ್ರೆ, ವಾಣಿಜ್ಯ ಬೆಳೆಗಳಾಗಿ ಸಕ್ಕರೆ, ಹತ್ತಿ, ತಂಬಾಕು ಬೆಳೆಯಲಾಗುತ್ತದೆ. ಜಿಲ್ಲೆ ಎಪಿಎಂಸಿ ಮತ್ತು ಹಾಲನ್ನು ಸಂಗ್ರಹಿಸಲು ಶೀತಲೀಕರಣ ಘಟನಕಗಳನ್ನು ಹೊಂದಿದೆ.

ಕೈಗಾರಿಕಾ ಭೂ ಮಾಪನ: 26,885 ಸಣ್ಣ ಕೈಗಾರಿಕೆಗಳು, 7515 ಎಂಎಸ್ಎಂಇಗಳು ರೂ 5.20 ಶತಕೋಟಿ ಹೂಡಿಕೆಯಲ್ಲಿ ಮತ್ತು 74 ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು 27.9386 ಶತಕೋಟಿ ರೂಗಳ ಹೂಡಿಕೆಯಲ್ಲಿ ಮೈಸೂರಿನ 6 ಕೈಗಾರಿಕಾ ಎಸ್ಟೇಟ್ ಹಾಗೂ 8 ಕೈಗಾರಿಕಾ ಪ್ರದೇಶಗಳಲ್ಲಿ ನೆಲೆಸಿದೆ. ರಾಜ್ಯದಲ್ಲಿ ಬೆಂಗಳೂರಿನ ನಂತ್ರ ಅತಿಹೆಚ್ಚು ಐಟಿ ರಫ್ತು ಮಾಡುವ ಮೈಸೂರು ಜಿಲ್ಲೆಯಲ್ಲಿ ಪ್ರಸ್ತಾವಿತ ಐಟಿ ಪಾರ್ಕ್ ಬರಲಿದೆ. ಐಟಿ ದೈತ್ಯ ಇನ್ಫೋಸಿಸ್ ಮೈಸೂರಿನ ಕಲಿಕಾ ಕ್ಯಾಂಪಸ್ನಲ್ಲಿ 13,500 ಜನರಿಗೆ ಉದ್ಯೋಗ ಕಲ್ಪಿಸಿದೆ.

ಪ್ರಸ್ತಾವಿತ ಜವಳಿ ಪಾರ್ಕ್ ಕುಶಲಕರ್ಮಿ ಸಮೂಹಕ್ಕೆ ಮತ್ತು ರೇಷ್ಮೆ ನೇಕಾರರಿಗೆ ಅನುಕೂಲ ಮಾಡಿಕೊಡಲಿದೆ ಮತ್ತು ವಿಶ್ವಕ್ಕೆ ಮೈಸೂರು ರೇಷ್ಮೆಯ ಪರಿಚಯ ಮಾಡಿಕೊಡಲಿದೆ. ಕೃಷಿ ಸಂಸ್ಕರಣಾ ಘಟಕಗಳು ಮತ್ತು ಆಹಾರ ಪ್ಯಾಕೇಜಿಂಗ್ ಘಟಕಗಳು ರಫ್ತಿಗೆ ಉತ್ತೇಜನ ನೀಡಲಿದೆ.

ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು

ಭೂಮಿ ಮತ್ತು ಮಣ್ಣು: ಮೈಸೂರಿನಲ್ಲಿ ವ್ಯವಸಾಯ ಮತ್ತು ತೋಟಗಾರಿಕೆಗೆ ಅತ್ಯುತ್ತಮ ಹವಾಗುಣವಿದೆ. ಜಿಲ್ಲೆಯಲ್ಲಿ 6,307 ಚದರ ಕಿಮೀ ಭೂಮಿಯಿದ್ದು 7.88% ಭೂಮಿ ಅರಣ್ಯದಿಂದ ಆವೃತವಾಗಿದೆ. ಅಲ್ಲದೇ 24.37% ವ್ಯವಸಾಯ ಮಾಡದ ಜಮೀನಿದ್ದು, 25.87% ಭೂಮಿಯಲ್ಲಿ ಅತ್ಯುತ್ತಮ ಖನಿಜ ಸಂಪತ್ತಿದೆ.

ಜಲಾಶಯಗಳು: ಮೈಸೂರು ಕಾವೇರಿ ನದಿ ಪಾತ್ರದಲ್ಲಿದೆ. ಜತೆಗೆ ಕಬಿನಿ, ಲಕ್ಷ್ಮಣ ತೀರ್ಥ, ಹಾರಂಗಿ ನದಿಗಳೂ ಇಲ್ಲಿ ಹರಿಯುತ್ತವೆ. ಅಂತರ್ಜಲ ಇಲ್ಲಿ ಮಿತವಾಗಿದೆ. ಹಾಗಿದ್ದೂ ಜಿಲ್ಲೆಯಲ್ಲಿ ನೀರಿಗೆ ಕೊರತೆ ಇಲ್ಲ.

ವಿದ್ಯುತ್ ಸಂಪರ್ಕ: ಜಿಲ್ಲೆಗೆ ಚಾಮುಂಡೇಶ್ವರಿ ಎಲೆಕ್ಟ್ರಿಕಲ್ ಸಪ್ಲೈ ಕಂಪನಿಯಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರೋ ಜನಸಂಖ್ಯೆ ಮತ್ತು ಕೈಗಾರೀಕರಣದಿಂದ ಇಲ್ಲಿನ ನಗರದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಖಾಸಗೀ ಹೂಡಿಕೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಬಯೋಗ್ಯಾಸ್ ಮುಖಾಂತರ ವಿದ್ಯುತ್ ಪೂರೈಕೆಗೆ ಹೆಚ್ಚು ಗಮನ ನೀಡಲಾಗುತ್ತಿದೆ.

ಜ್ಞಾನ ಕ್ಷೇತ್ರ: ಮೈಸೂರಿನಲ್ಲಿ 15 ಡಿಗ್ರಿ ಕಾಲೇಜುಗಳಿವೆ. ಅಲ್ಲದೇ 6 ಎಂಜಿನಿಯರಿಂಗ್ 5 ಮೆಡಿಕಲ್ ಮತ್ತು 2 ಪಾಲಿಟೆಕ್ನಿಕ್ ಕಾಲೇಜುಗಳು ಇವೆ. ಮೈಸೂರು ಯೂನಿವರ್ಸಿಟಿ, ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು, ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ, ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ಎಂಜಿನಿಯರಿಂಗ್, ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ, ಡಿಫೆನ್ಸ್ ಆಹಾರ ಸಂಶೋದನಾ ಲ್ಯಾಬೊರೇಟರಿ ಸೇರಿದಂತೆ ಹತ್ತು ಹಲವು ಪ್ರಮುಖ ಸಂಸ್ಥೆಗಳು ಮೈಸೂರಲ್ಲಿದೆ.

ಆರೋಗ್ಯ ಸಂಪನ್ಮೂಲ: ಜಿಲ್ಲೆಯಲ್ಲಿ ನಾಗರೀಕ ಮೂಲಸೌಕರ್ಯದಡಿ 137 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ವಿವಿಧ ಸೇವೆಗಳನ್ನು ಕೊಡುವ 6 ಆಸ್ಪತ್ರೆಗಳು, 6 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೈಸೂರು ಒಳಗೊಂಡಿದೆ.

ಸಂಪರ್ಕ ವ್ಯವಸ್ಥೆ: ಮೈಸೂರು ನಗರ ಎಲ್ಲ ರೀತಿಯ ಸಂಪರ್ಕಗಳಿಂದ ಕೂಡಿದೆ. 3 ಬ್ರಾಡ್​ಗೇಜ್​ ರೈಲ್ವೆ ಲೇನ್​ಗಳು, ಎನ್ಎಚ್ 212, ರಾಜ್ಯ ಹೆದ್ದಾರಿಗಳಾದ 17 ಮತ್ತು 33 ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಮಂಗಳೂರು ಬಂದರು ಹಾಗೂ ಏರ್​ರ್ಪೋರ್ಟ್, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ತನ್ನದೇ ಸ್ವಂತ ದೇಶೀಯ ವಿಮಾನ ನಿಲ್ದಾಣ ಜಿಲ್ಲೆಗೆ ಅತ್ಯುತ್ತಮ ಸಂಪರ್ಕವನ್ನು ಕೊಟ್ಟಿದೆ.

ಕೊನೆಯ ಮಾತು: ಸಂಪೂರ್ಣ ಕಾರ್ಯೋನ್ಮುಖವಾಗಿರೋ ಎಸ್ಇಝಡ್ನಲ್ಲಿ ಇನ್ಫೋಸಿಸ್ ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಯೂನಿವರ್ಸಿಟಿ ನಿರ್ಮಾಣ ಮಾಡಲಾಗಿದೆ. 337 ಎಕರೆ ವಿಸ್ತಾರದ ಕ್ಯಾಂಪಸ್ನಲ್ಲಿ 400 ಮಂದಿ ಬೋಧಕರಿದ್ದು 200 ತರಗತಿಗಳನ್ನು ಹೊಂದಿದೆ. ಜಿಲ್ಲೆಗೆ ಇದು ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟಿದೆ.