ಮನೆಯಿಂದ ಕೆಲಸ ಮಾಡುವವರಿಗೆ 14 ಸಲಹೆಗಳು

ಟೀಮ್​​ ವೈ.ಎಸ್​. ಕನ್ನಡ

0

ಇದನ್ನು ನೀವು ವರ ಅಂತೀರೋ ಅಥವಾ ಶಾಪ ಅಂತೀರೋ ಗೊತ್ತಿಲ್ಲ, ಆದ್ರೆ ಎರಡರ ಪರವಾಗಿಯೂ ವಾದ - ಪ್ರತಿವಾದಗಳು ಜೋರಾಗಿಯೇ ಇವೆ. ಆದ್ರೆ ಒಂದು ವಿಷಯವಂತೂ ಸತ್ಯ, ಇದು ಇಂದಿನ ಸಂದರ್ಭದಲ್ಲಿ ಅನಿವಾರ್ಯ ಎಂಬಂತಾಗಿದೆ, ಹಾಗೂ ಡಿಜಿಟಲ್‍ಆಗಿ ಕಾರ್ಯನಿರ್ವಹಿಸುವ ಉದ್ಯಮಗಳಿಗೆ ಅತ್ಯಂತ ಹೆಚ್ಚು ಜನಪ್ರಿಯವಾದ ಆಯ್ಕೆಯಾಗಿದೆ. ಬದಲಾವಣೆ ಹೊಂದುತ್ತಿರುವ ಉದ್ಯಮ ಕ್ಷೇತ್ರದಲ್ಲಿ ಇದರ ಪರಿಣಾಮ ಮಹಿಳಾ ಉದ್ಯಮಿಗಳ ಮೇಲೆ ನೇರವಾಗಿ ಬೀರುತ್ತದೆ.

ಹಾಗಂತ ನೀವು ಮನೆಯಲ್ಲೇ ಕುಳಿತು ದಿನದ 24 ತಾಸುಗಳ ಕಾಲ ಕೆಲಸ ಮಾಡಬೇಕು, ಟೇಬಲ್ ಮೇಲಿಟ್ಟ ಆಲೂಗಡ್ಡೆ ಚಿಪ್ಸ್ ತಿನ್ನುತ್ತಾ, ಹಾಲು, ಕಾಫಿ, ಸೋಡಾ ಹೀರುತ್ತಾ, ಸ್ನಾನ ಮಾಡದೇ ಮನೆಯ ರೂಮಿನಲ್ಲಿ ಅಂತ್ಯವೇ ಕಾಣದ ಪ್ರಪಾತದತ್ತ ದಿಟ್ಟಿಸುತ್ತ ಕೆಲಸ ಮಾಡುತ್ತಾ ಕೂರುವುದು ಅಂತಲ್ಲ. ಬದಲಿಗೆ ಇದು ತುಂಬಾ ಸರಳವೂ ಹೌದು.

ಕೆಲ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ಮನೆಯಿಂದಲೇ ಆರಾಮಾಗಿ ಯಾವುದೇ ತಲೆಬಿಸಿಯಿಲ್ಲದೇ ಕೆಲಸ ಮಾಡಬಹುದು. ಇದಕ್ಕೆ ಹೆಚ್ಚು ಶ್ರಮವಹಿಸಬೇಕಿಲ್ಲ, ಕೆಲಸದ ಮಾದರಿಯಲ್ಲಿ ಕೆಲ ಬದಲಾವಣೆಯನ್ನು ಅಳವಡಿಸಿಕೊಂಡರೆ ಸಾಕು...

1. ಸಮಯದ ಅರಿವಿರಲಿ - ನಮಗೆ ಫ್ಲೆಕ್ಸಿಬಲ್ ಎನಿಸುವ, ಹೊಂದಿಕೊಳ್ಳುವ ಸಮಯದಲ್ಲಿ ಕೆಲಸ ಮಾಡುವುದೂ ಒಂದು ರೀತಿಯಲ್ಲಿ ಶಾಪವೇ. ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಸರಿ ಇಲ್ಲದಿದ್ದರೆ, ನೀವು ಕಚೇರಿಗೆ ಹೋಗಿ ಕೆಲಸ ಮಾಡುವುದು ಹಾಗೂ ಮನೆಯಲ್ಲೇ ಕುಳಿತು ಕೆಲಸ ಮಾಡುವುದು ಎರಡಕ್ಕೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಹೀಗಾಗಿಯೇ ಸಮಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಸರಿಯಾಗಿ ಪ್ಲಾನ್ ಮಾಡಿಕೊಳ್ಳಬೇಕು. ಆ ಮೂಲಕ ನಿಮ್ಮ ಸಾಮಾಜಿಕ ಜೀವನಕ್ಕೆ ಬೇಕಾದ ಸಮಯ, ನಿಮಗಾಗಿ ಬೇಕಾದ ಸಮಯ, ರೆಸ್ಟ್ ಪಡೆಯಲು, ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಹಾಗೂ ಅದನ್ನು ರೂಢಿಸಿಕೊಳ್ಳಬೇಕು.

2. ಮಾಡುವ ಕೆಲಸದಲ್ಲಿ ಶಿಸ್ತು ಇರಲಿ - ಕೆಲಸದ ಅವಧಿಯ ಕುರಿತು ನಿಮ್ಮ ಮೇಲಧಿಕಾರಿಯಿಂದ ಮೊದಲೇ ಮಾಹಿತಿ ಪಡೆದಿಟ್ಟುಕೊಳ್ಳಿ. ಆ ಸಮಯವಾಗುತ್ತಿದ್ದಂತೆಯೇ ಮನಸ್ಸು ಗಟ್ಟಿ ಮಾಡಿಕೊಂಡು ಕೆಲಸವನ್ನು ಅಲ್ಲಿಗೇ ನಿಲ್ಲಿಸಿ ಹೊರಟುಬಿಡಿ. ಡೆಡ್‍ಲೈನ್ ಮುಗಿಸಲೇಬೇಕು ಅಂತ ನೀವು ಗಂಟೆಗಟ್ಟಲೆ ಕೆಲಸ ಮಾಡಲು ಹೋದ್ರೆ ಅದರಿಂದ ನಿಮಗೇ ತೊಂದರೆ. ಅರ್ಧಕ್ಕೇ ಕೆಲಸ ಬಿಟ್ಟು ಏಳೋದು ಸಮಾಧಾನ ನೀಡುವುದಿಲ್ಲ ನಿಜ. ಆದ್ರೆ ಅದರಿಂದ ನಿಮಗೇ ತೊಂದರೆ ಅನ್ನೋದನ್ನೂ ಮರೆಯಬೇಡಿ.

3. ಗೆಳೆಯರು ಮತ್ತು ಕುಟುಂಬದವರು ನಿಮ್ಮನ್ನು ಕಾಯುವಂತೆ ನೋಡಿಕೊಳ್ಳಿ – ಯಾರಾದ್ರೂ ಸ್ವಯಂ ಶಿಸ್ತಿನಿಂದ ಸಮಯವಾಗುತ್ತಿದ್ದಂತೆಯೇ, ಗಂಟೆ ಹೊಡೆಯುತ್ತಲೇ ಕೆಲಸವನ್ನು ಅಲ್ಲಿಗೇ ಬಿಟ್ಟು ಹೊರ ನಡೆದರೆ ಅಂಥವರು ನನ್ನ ಅಭಿಪ್ರಾಯದಲ್ಲಿ ಭವಿಷ್ಯದ ಸೈನಿಕರು, ನಿಂಜಾಗಳು, ಬ್ಯಾಟ್‍ಮನ್ ಅಂದ್ರೂ ತಪ್ಪಲ್ಲ. ಇನ್ನೂ ತೆವಳಾಡುವ ಒಂದು ಮಗು ತನಗೆ ಹಸಿವಾದಾಗ ಹೇಗೆ ಅಳುತ್ತಾ ಊಟ ಕೇಳುತ್ತೋ ನಾವೂ ನಮ್ಮ ಸಮಯದ ಬಗ್ಗೆ ಹಾಗೇ ಇರಬೇಕು. ಕಂಪನಿಯವರು ಏನಾದ್ರೂ ಕೆಲಸದ ಒಪ್ಪಂದದ ಕರಾರಿನೊಂದಿಗೆ ‘ನಾನೇ ದೇವರು’ ಎನ್ನುವ ಭ್ರಮೆಯಲ್ಲಿ ನಿಮಗೆ ಕೆಲಸವನ್ನು ನೀಡಲು ಬಂದ್ರೆ, ಅವರ ಬಳಿ ನೀವು ಮೊದಲೇ ನಿರಾಕ್ಷೇಪಣಾ ಪ್ರಮಾಣ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಬೇಕು. ಆ ಮೂಲಕ ಕೆಟ್ಟ ತಂತ್ರಗಳ ಮೂಲಕ ಚಿತ್ರಹಿಂಸೆ ನೀಡುವ, ಕ್ರೂರ ಹಾಗೂ ಹಿಂಸಾನಂದನದ ಅವರ ಯೋಜನೆಗಳಿಗೆ ಕಡಿವಾಣ ಹಾಕಬಹುದು.

4. ಇಲ್ಲದಿದ್ದರೆ, ನಿಮ್ಮ ಕಣ್ಣಮುಂದೆಯೇ ಶುಕ್ರವಾರ ಹಾಳಾಗೋದನ್ನು ನೋಡಿ ಸುಮ್ಮನಿರಿ – ಇದು ಸರಿಯಿಲ್ಲ, ಅದರಿಂದ ಉಂಟಾಗುವ ನೋವು ನಿಮಗೆ ಇಷ್ಟವಾಗುವುದಿಲ್ಲ. ನೀವೇನಾದ್ರೂ ವಾರ ಪೂರ್ತಿ ಕೆಲಸ ಮಾಡದೇ ಮುಂದೂಡುತ್ತಾ ಬರುವ ಸೋಮಾರಿಗಳಾದ್ರೆ, ಹಾಗೂ ಅದರಿಂದ ಉಳಿದ ಕೆಲಸವನ್ನು ಪೂರ್ಣಗೊಳಿಸಲು ನಿಮ್ಮ ವೀಕೆಂಡ್‍ಅನ್ನು ಬಲಿನೀಡುವಂತವರಾಗಿದ್ದರೆ... ಅದರ ಫಲಿತಾಂಶ ನಿಮ್ಮ ಶುಭ ಶುಕ್ರವಾರಗಳನ್ನು ನೀವು ಡೆಡ್‍ಲೈನ್ ದೇವರಿಗೆ ಬಲಿ ಕೊಡಬೇಕಾಗುತ್ತದೆ. ಶುಕ್ರವಾರ ರಾತ್ರಿಯೆಲ್ಲಾ ಕೆಲಸ ಮಾಡಿ ಶನಿವಾರ ಬೆಳಗಿನ ಜಾವ ಮನೆಗೆ ಬಂದು ಮಲಗಿದ್ರೆ, ಇನ್ನು ಏಳುವುದು ಶನಿವಾರ ಸಂಜೆಯೇ. ನಂತರ ಭಾನುವಾರ ಇದ್ಯಲ್ಲಾ ಅಂತ ವೀಕೆಂಡ್‍ನಲ್ಲಿ ರಜೆಯ ಮಜಾವನ್ನು ಮುಂದೂಡಿದ್ರೆ, ಅದಾದ 12 ತಾಸುಗಳಲ್ಲೇ ಸೋಮವಾರ ನಿಮಗಾಗಿ ಕಾಯುತ್ತಿರುತ್ತೆ. ಹೀಗಾಗಿ ಇದೆಲ್ಲಕ್ಕೂ ಅಂತರಸಂಬಂಧವಿದೆ. ಅದನ್ನು ನೀವು ಅರ್ಥ ಮಾಡಿಕೊಂಡ್ರೆ ಸಾಕು.

5. ಕೋಟೆ ನಿರ್ಮಿಸಿಕೊಳ್ಳಿ - ನೀವು ಕೆಲಸ ಸ್ನೇಹೀ ವಾತಾವರಣ ನಿರ್ಮಿಸಬೇಕು, ಮತ್ತು ಕೆಲಸಕ್ಕೆ ಜೀವ ತುಂಬಬೇಕು ಅಂತಿದ್ದರೆ, ಹೊಸದಾಗಿ ಕೆಲಸಕ್ಕೆ ಸೇರಿದವರು ಒಂದು ಬಳಪ ತೆಗೆದುಕೊಂಡು ಪ್ಲ್ಯಾನ್ ಮಾಡಿಕೊಳ್ಳಿ. ಇಲ್ಲದಿದ್ದರೆ ಕಷ್ಟಪಟ್ಟು ಕೆಲಸ ಮಾಡಿ ಜೀವನ ಹಾಳು ಮಾಡಿಕೊಳ್ಳಿ. ಮನೆಯಲ್ಲೇ ಕಚೇರಿಯ ವಾತಾವರಣ ನಿರ್ಮಿಸಿಕೊಳ್ಳಿ. ಒಂದು ಮೇಜು, ಒಂದು ಆರಾಮದಾಯಕವಾದ ಕುರ್ಚಿ, ನಿಮಗೆ ಬೇಸರವಾದಾಗಿ, ಕೆಲಸದಿಂದ ತಲೆಬಿಸಿ ಉಂಟಾದಾಗ ಮತ್ತೆ ಸ್ಫೂರ್ತಿ ತುಂಬುವಂತಹ ಒಂದು ಸಣ್ಣ ಸಸಿಯ ಕುಂಡವನ್ನಿಟ್ಟುಕೊಂಡು ಪಕ್ಕದಲ್ಲಿಟ್ಟುಕೊಂಡು ಕೆಲಸ ಪ್ರಾರಂಭಿಸಿ. ಹಾಗೇನಾದ್ರೂ ನೀವೂ ನನ್ನಂತೆಯೇ ಪತ್ರಕರ್ತರಾಗಿದ್ದರೆ ಟೇಬಲ್ ಮತ್ತು ಹೂಕುಂಡ ಖರೀದಿಸಲು ನಿಮ್ಮ ಬಳಿ ಹಣ ಇರೋದಿಲ್ಲ ಬಿಡಿ. ಆದ್ರೆ ನಿಮಗೆ ಕೆಲಸ ಮಾಡಲು ಪ್ರೇರೇಪಿಸುವಂತಹ ವಾತಾವರಣ ಸೃಷ್ಟಿಸಿಕೊಳ್ಳಿ. ಆ ಮೂಲಕ ಕ್ರಿಯಾತ್ಮಕ ಬರವಣಿಗೆ ಸಾಧ್ಯವಾಗುತ್ತೆ.

6. ಟಿವಿಯಿಂದ ದೂರವಿರಿ – ಅದು ಟಿವಿಯಲ್ಲ, ಬದಲಾಗಿ ರೂಮಿನಲ್ಲಿರುವ ಆನೆ. ಯಾಕಂದ್ರೆ ಟಿವಿ ಮತ್ತು ನಿಮ್ಮ ಕೆಲಸ ಮಾಡುವ ಟೇಬಲ್ ಎರಡೂ ವಿರುದ್ಧಾರ್ಥಕ ಪದಗಳು. ಎರಡೂ ಒಂದೇ ರೂಮಿನಲ್ಲಿ ಇದ್ದರಂತೂ ನಿಮಗೇ ಸಮಸ್ಯೆ. ಎರಡರಲ್ಲಿ ಯಾವುದು ಗೆದ್ದರೂ ನೀವು ಸೋತಂತೆ.

7. ಸ್ನಾನ ಮಾಡಿ, ಚೆನ್ನಾಗಿ ಬಟ್ಟೆ ಧರಿಸಿ - ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದರೇನಂತೆ, ಪ್ರತಿದಿನ ಸ್ನಾನ ಮಾಡಿ. ಒಳ್ಳೆಯ ಬಟ್ಟೆಗಳನ್ನು ಧರಿಸಿ. ಯಾಕಂದ್ರೆ ಈ ಮೂಲಕವಷ್ಟೇ ಮನೆಯಲ್ಲಿ ಕೆಲಸ ವಾತಾವರಣ ಸೃಷ್ಟಿಸಲು ಸಾಧ್ಯ. ಜೊತೆಗೆ ಕೆಲಸದ ವಾತಾವರಣದಲ್ಲಿ ಶುಚಿತ್ವ ಇಲ್ಲದಿದ್ದರೆ ಸರಿಯಾಗಿ ಕೆಲಸ ಮಾಡಲೂ ಆಗುವುದಿಲ್ಲ.

8. ಆಗಾಗ್ಗೇ ದೂರ ನೋಡಿ, ಕಣ್ಣಿಗೆ ರೆಸ್ಟ್ ಕೊಡಿ – ಆರೋಗ್ಯವೇ ಭಾಗ್ಯ. ಏನೇ ಕೆಲಸ ಮಾಡುತ್ತಿದ್ದರೂ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಹೀಗಾಗಿಯೇ ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ, ಕಂಪ್ಯೂಟರ್ ಸ್ಕ್ರೀನ್ ನೋಡಿಕೊಂಡು ಗಂಟೆಗಟ್ಟಲೆ ಕೆಲಸ ಮಾಡಿದರೆ ನಿಮಗೇ ಸಮಸ್ಯೆ. ಹೀಗಾಗಿಯೇ ಪ್ರತಿ 15 ನಿಮಿಷಕ್ಕೊಮ್ಮೆ ಕಿಟಕಿಯಿಂದಾಚೆ ದೃಷ್ಟಿ ಬೀರಿ, 500 ಮೀಟರ್ ದೂರದ ವಸ್ತುವನ್ನು ಒಂದೆರಡು ನಿಮಿಷ ದಿಟ್ಟಿಸಿ ನೋಡಿ, ಆಗ ಕಣ್ಣಿಗೂ ರಿಲೀಫ್ ಸಿಗುತ್ತದೆ. ಅಥವಾ ಒಂದೆರಡು ನಿಮಿಷ ಕಣ್ಣುಮುಚ್ಚಿಕೊಂಡೊ ರೆಸ್ಟ್ ಮಾಡಿದ್ರೂ ಒಳ್ಳೆಯದೇ. ಅಥವಾ ಸತತವಾಗಿ 15 ರಿಂದ 20 ಬಾರಿ ಕಣ್ಣು ಮಿಟುಕಿಸಿ.

9. ಮುಖ ತೊಳೆದುಕೊಳ್ಳಿ – ಕೆಲಸ ಮಾಡಿ ಸುಸ್ತಾಗಿ ನಿದ್ರೆ ಬಂದರೆ ಅಥವಾ ಕಂಪ್ಯೂಟರ್ ಸ್ಕ್ರೀನ್‍ಅನ್ನೇ ಗಂಟೆಗಟ್ಟಲೆ ನೋಡಿ ಸೋತ ಕಣ್ಣುಗಳಲ್ಲಿ ಕೊಂಚ ಹುರುಪು ತುಂಬಲು ಆಗಾಗ ಮುಖ ತೊಳೆದುಕೊಳ್ಳಿ ಅಥವಾ ಕಣ್ಣಿಗೆ ನೀರು ಎರಚಿಕೊಳ್ಳಿ. ಅದರಿಂದ ಕೊಂಚ ರಿಲೀಫ್ ಸಿಗುತ್ತದೆ.

10. ನಡೆಯುತ್ತಾ ಮಾತನಾಡಿ / ವಾಕ್ & ಟಾಕ್ - ನಾನು ಪತ್ರಕರ್ತೆಯಾದ ಕಾರಣ ಫೋನ್‍ನಲ್ಲೇ ಸಂದರ್ಶನ ಮಾಡಬೇಕು. ಕೆಲವೊಮ್ಮೆ ಸುದೀರ್ಘ ಸಮಯದವರೆಗೆ ಫೋನ್‍ನಲ್ಲಿ ಮಾತನಾಡಬೇಕು. ಹೀಗಾಗಿಯೇ ನಾನು ಪ್ರತಿ ಬಾರಿ ಯಾರಿಗಾದ್ರೂ ಕರೆ ಮಾಡಿದಾಗ ಅಥವಾ ನನಗೇ ಯಾರಿಂದಲಾದ್ರೂ ಕರೆ ಬಂದಾಗ, ನಾನು ಓಡಾಡುತ್ತಾ ಮಾತನಾಡುತ್ತೇನೆ. ಈ ಮೂಲಕ ಆಗಲಾದ್ರೂ ಸ್ವಲ್ಪ ದೇಹಕ್ಕೆ ಎಕ್ಸರ್ಸೈಸ್ ಹಾಗೂ ಕಣ್ಣಿಗೂ ರೆಸ್ಟ್ ದೊರೆಯುತ್ತದೆ.

11. ಹೊರಗೆ ಹೋಗಿ – ಹಗಲು, ಇರುಳೆನ್ನದೆ ಮನೆಯಲ್ಲೇ ಇದ್ದು ಕೆಲಸ ಮಾಡೋದಕ್ಕಿಂತ ಕಚೇರಿಗೇ ಹೋಗಿ ಮತಿಗೆಟ್ಟ ಮೇಲಧಿಕಾರಿ, ಭ್ರಮಾನಿರತ ಸಹೋದ್ಯೋಗಿ, ಗ್ರಾಹಕರೊಂದಿಗೆ ಕೆಲಸ ಮಾಡುವುದು ಮೇಲು. ಹೀಗಾಗಿಯೇ ಮನೆಯಲ್ಲೇ ಕುಳಿತು ಕೆಲಸದಲ್ಲಿ ಕೊಳೆಯುವುದಕ್ಕಿಂತ ಪ್ರತಿದಿನ ಒಮ್ಮೆಯಾದ್ರೂ ಶೂ ಧರಿಸಿ ಹೊರಗೆ ಹೋಗಿ. ಸಮೀಪದ ಉದ್ಯಾನ ಅಥವಾ ಮೈದಾನಕ್ಕೆ ಹೋಗಿ ಜಾಗಿಂಗ್ ಅಥವಾ ವಾಕಿಂಗ್ ಮಾಡಿ. ಆರೋಗ್ಯಕ್ಕೆ ಒಳ್ಳೆಯದು.

12. ಮುಖಾಮುಖಿ ಭೇಟಿ ಒಳ್ಳೆಯದು - ನೀವು ನಿಮ್ಮ ಗ್ರಾಹಕರು ಅಥವಾ ಸಂದರ್ಶಿಸುವ ವ್ಯಕ್ತಿಯೊಂದಿಗೆ ಸಮಾಲೋಚನೆ ನಡೆಸಬೇಕು ಅಂದ್ರೆ ಆದಷ್ಟೂ ಮೌಖಿಕವಾಗಿ ಅವರನ್ನು ಭೆಟಿಯಾಗಲು ಪ್ರಯತ್ನಿಸಿ. ಸ್ಕೈಪ್ ಮೂಲಕವೋ ಅಥವಾ ಈಮೇಲ್ ಮೂಲಕವೋ ಅಥವಾ ಕರೆ ಮಾಡಿ ಮಾತನಾಡುವುದಕ್ಕಿಂತ ಅವರನ್ನು ನೇರವಾಗಿ ಭೇಟಿಯಾದ್ರೆ ಅದು ನಿಮಗೆ ಒಂದಲ್ಲಾ ಒಂದು ರೀತಿ ಸಹಾಯವಾಗುತ್ತದೆ.

13. ಗ್ಯಾಜೆಟ್‍ಗಳಿಗೆ ಗುಡ್‍ಬೈ ಹೇಳಿ - ಮನಸ್ಸು ಗಟ್ಟಿ ಮಾಡಿ ಕೆಲಸ ಮುಗಿಯುತ್ತಲೇ ಮೊಬೈಲ್, ಲ್ಯಾಪ್‍ಟಾಪ್, ಟಿವಿ, ಟ್ಯಾಬ್‍ಲೆಟ್, ಕಂಪ್ಯೂಟರ್‍ಗಳನ್ನು ಬಂದ್ ಮಾಡಿ. ಕೆಲಸದ ಸಮಯದಲ್ಲಿ ದಿನಕ್ಕೆ 8 ತಾಸುಗಳ ಕಾಲ ಕಂಪ್ಯೂಟರ್ ಸ್ಕ್ರೀನ್‍ಅನ್ನೇ ದಿಟ್ಟಿಸಿ ನೋಡಿ ನಂತರ ಮನೆಗೆ ಬಂದು ಗಂಟೆಗಟ್ಟಲೆ ಟಿವಿಯನ್ನು ನೋಡಿ ಬಳಿಕ ಮೊಬೈಲ್‍ಗೆ ಅಂಟಿಕೊಂಡರೆ ಆರೋಗ್ಯದ ಕಥೆ ಮುಗೀತು ಅಂತಲೇ ಅರ್ಥ. ಹೀಗಾಗಿಯೇ ಕೆಲಸ ಮುಗಿಯುತ್ತಲೇ ಈ ಎಲ್ಲಾ ಗ್ಯಾಜೆಟ್‍ಗಳನ್ನು ಬಂದ್ ಮಾಡಿ, ನಿಮಗಾಗಿ ಹಾಗೂ ನಿಮ್ಮ ಆರೋಗ್ಯಕ್ಕಾಗಿ ಕೊಂಚ ಸಮಯ ಮುಡಿಪಾಗಿಡಿ.

14. ಇರುವುದೊಂದೇ ಜೀವನ, ಅದನ್ನು ಸದುಪಯೋಗಪಡಿಸಿಕೊಳ್ಳಿ - ನಾನು ಪ್ರತಿದಿನ ನನ್ನ ಅಜ್ಜನೊಂದಿಗೆ ಊಟ ಮಾಡುವುದನ್ನು ಮರೆಯುವುದಿಲ್ಲ. ನಾನೆಷ್ಟೇ ಬ್ಯುಸಿಯಾಗಿದ್ದರೂ ಅದನ್ನು ಎಂದಿಗೂ ತಪ್ಪಿಸುವುದಿಲ್ಲ. ಕೆಲಸದ ಒತ್ತಡದಲ್ಲಿ ಇಂತಹ ಹಲವು ಸಣ್ಣ ಖುಷಿಗಳನ್ನು ಬಿಡಬೇಡಿ. ಇಂತಹ ಪುಟ್ಟ ಅನುಭವಗಳೇ ಒಳ್ಳೆಯ ನೆನಪುಗಳನ್ನು ನೀಡುತ್ತವೆ. ಜೀವನವನ್ನು ಹಸನಾಗಿಸುತ್ತವೆ.

ಲೇಖಕರು: ಬಿಂಜಾಲ್​ ಷಾ
ಅನುವಾದಕರು: ವಿಶಾಂತ್​​