ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿಯಿಂದ ಕಾರ್ಯನಿರ್ವಹಿಸುವ ಶ್ರೀವಿದ್ಯಾ ಶ್ರೀನಿವಾಸನ್ ಅವರ ಉದ್ಯಮದ ಯಶೋಗಾಥೆ

ಟೀಮ್​​ ವೈ.ಎಸ್​​. ಕನ್ನಡ

ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿಯಿಂದ ಕಾರ್ಯನಿರ್ವಹಿಸುವ ಶ್ರೀವಿದ್ಯಾ ಶ್ರೀನಿವಾಸನ್ ಅವರ ಉದ್ಯಮದ ಯಶೋಗಾಥೆ

Tuesday December 01, 2015,

4 min Read

ವಿಚಾರಗಳು ಕೆಲಸ ಮಾಡುವಂತೆ ಮಾಡುವುದು ನನಗೆ ಬಹಳ ಇಷ್ಟವಾದ ಕೆಲಸ. ನಾನು ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡುವ ಏನೇನು ಕಲಿತಿದ್ದೆನೋ ಅದನ್ನೆಲ್ಲಾ ಆಸಕ್ತಿ, ಉತ್ಸಾಹದಿಂದ ಕಲಿತೆ ಎಂದು ಹೇಳಿಕೊಳ್ಳುತ್ತಾರೆ ಅಮ್ಯಾಗಿ ಸಂಸ್ಥೆಯ ಸಹ ಸಂಸ್ಥಾಪಕಿ ಶ್ರೀವಿದ್ಯಾ ಶ್ರೀನಿವಾಸನ್.

ಶ್ರೀವಿದ್ಯಾ ಶ್ರೀನಿವಾಸನ್ ಅವರ ತಂದೆತಾಯಿಯರು ತಮಿಳುನಾಡಿನ ಕೊಯಂಬತ್ತೂರಿನ ಸಣ್ಣ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದವರು. ತಮ್ಮ ಎಲಿಮೆಂಟರಿ ವಿದ್ಯಾಭ್ಯಾಸವನ್ನು ತಮಿಳುನಾಡಿನಲ್ಲಿ ಮುಗಿಸಿದ ಅವರು ನಂತರ ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿ ಅಲ್ಲಿ ವಿದ್ಯಾಭ್ಯಾಸ ಮಾಡಿದರು. ಆರಂಭದಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆ ಕಷ್ಟಕರವಾಗಿ ಕಂಡುಬಂದರೂ ನಿಧಾನವಾಗಿ ಅವರ ಇಂಗ್ಲೀಷ್‌ನಲ್ಲಿ ಸುಧಾರಣೆ ಕಂಡುಬಂತು. ನಂತರ ಕೊಯಂಬತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ವಿದ್ಯಾಭ್ಯಾಸವನ್ನು ಪೂರೈಸಿದರು. “ಕಾಲೇಜು ಸಮಯದಲ್ಲಿ ನಾನು ಸ್ವಯಂ ಕಲಿಕೆಯಲ್ಲಿ ತೊಡಗಿಕೊಂಡಿದ್ದೆ. ಸಾಫ್ಟ್‌ ವೇರ್ ಪ್ರೋಗ್ರಾಮಿಂಗ್, ಆಪರೇಟಿಂಗ್ ಸಿಸ್ಟಮ್, ಡಾಟಾ ಸ್ಟ್ರಕ್ಚರ್ ಮುಂತಾದ ವಿಚಾರಗಳಲ್ಲಿ ಅಪರಿಮಿತ ಆಸಕ್ತಿ ಇತ್ತು” ಎನ್ನುತ್ತಾರೆ ಶ್ರೀವಿದ್ಯಾ.

image


ಪದವಿ ಪೂರೈಸಿದ ಬಳಿಕ ಅವರು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲಾರಂಭಿಸಿದರು. “ನಾನು ಕೆಲಸ ಮಾಡಲು ಇಚ್ಛಿಸುವ ತಂತ್ರಜ್ಞಾನದ ಕುರಿತು ವ್ಯಾಪಕ ವಿವರಣೆ ನೀಡಿದ ಬಳಿಕವಷ್ಟೇ ಆ ಕೆಲಸ ದಕ್ಕಿದ್ದು. 1996ರಲ್ಲಿ ನಾನು ಮೊದಲ ಸಂಬಳದ ಚೆಕ್ 6,000 ರೂ. ಪಡೆದಾಗ ನನಗೆ ಬಹಳ ಹೆಮ್ಮೆಯಾಗಿತ್ತು. ಆ ಸಮಯದಲ್ಲಿ ಅದೊಂದು ದೊಡ್ಡ ಮೊತ್ತದ ಹಣ ಎಂದು ನಾನು ಭಾವಿಸಿದ್ದೆ” ಎಂದು ಅವರು ನೆನೆಸಿಕೊಳ್ಳುತ್ತಾರೆ.

ಓರ್ವ ಸಾಫ್ಟ್​​​ವೇರ್ ಟೂಲ್ ಡಿಸೈನರ್ ಉದ್ಯಮಿಯಾದ ಕಥೆ

ತಮ್ಮ 24ನೇ ವಯಸ್ಸಿನಲ್ಲಿ ಶ್ರೀವಿದ್ಯಾ ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸೇರಿ ಆರಂಭಿಸಿದ ಇಂಪಲ್ಸ್ ಸಾಫ್ಟ್ ಎಂಬ ಸಂಸ್ಥೆಗೆ ಸಹಸಂಸ್ಥಾಪಕರಾದರು. ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಅವರು ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಶನ್ ವಿಭಾಗದಲ್ಲಿ ಅನೇಕ ಸಾಫ್ಟ್ ವೇರ್ ಟೂಲ್ಸ್‌ ಗಳನ್ನು ವಿನ್ಯಾಸಗೊಳಿಸಿದ್ದರು. ತಮ್ಮ ಅನುಭವದ ಸಹಾಯದಿಂದ ತಮ್ಮದೇ ಆದ ಸಾಫ್ಟ್‌ ವೇರ್ ಉತ್ಪನ್ನ ಕಂಪನಿಯೊಂದನ್ನು ಭಾರತದಲ್ಲಿ ಆರಂಭಿಸಬಹುದೆಂದು ಅವರಿಗೆ ಅರಿವಾಯಿತು.

ಹೀಗಾಗಿ 1998ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಶ್ರೀವಿದ್ಯಾ ಮತ್ತವರ ಸ್ನೇಹಿತರು ತಮ್ಮದೇ ಆದ ಇಂಪಲ್ಸ್ ಸಾಫ್ಟ್ ಎಂಬ ಸಂಸ್ಥೆಯನ್ನು ಆರಂಭಿಸಿದರು. “ಕೆಲವು ಸಾಫ್ಟ್ ವೇರ್ ಟೂಲ್‌ಗಳನ್ನು ನಿರ್ಮಿಸಿದ ಬಳಿಕ, ನಾವು ನಮ್ಮದೇ ಆದ ಬ್ಲೂಟೂತ್ ಪ್ರೋಟೋಕಾಲ್ ಸ್ಟಾಕ್ ಸಂಸ್ಥೆಯನ್ನು ನಿರ್ಮಿಸಿ ಅದರಲ್ಲೇ ಮುಂದುವರೆಯಲು ನಿರ್ಧರಿಸಿದೆವು. ಬ್ಲೂಟೂತ್‌ನ ವಿಶೇಷತೆಗಳನ್ನು ಕುರಿತಾಗಿ 1000 ಪುಟಗಳ ಪುಸ್ತಕವನ್ನು ಓದಿ ಮುಗಿಸಿದ ಬಳಿಕ ನಮ್ಮ ಮೊತ್ತ ಮೊದಲ ಪ್ರೋಟೋಕಾಲ್ ಸ್ಟಾಕ್ ಅನ್ನು ನಿರ್ಮಿಸಲು ಆರಂಭಿಸಿದೆವು” ಎನ್ನುತ್ತಾರೆ ಶ್ರೀವಿದ್ಯಾ.

ಇಂಪಲ್ಸ್ ಸಾಫ್ಟ್ ಸಂಸ್ಥೆಯನ್ನು ಆರಂಭಿಸಿದ್ದೇ ಒಂದು ಅದ್ಭುತವಾದ ಅನುಭವ ಎನ್ನುವುದು ಶ್ರೀವಿದ್ಯಾರ ಮಾತು. ಇದರಲ್ಲಿ ಪ್ರತಿಭಾವಂತ ಇಂಜಿನಿಯರ್‌ಗಳನ್ನು ಸಂಸ್ಥೆಗೆ ನೇಮಿಸಿಕೊಳ್ಳುವುದು, ಲಾಜಿಸ್ಟಿಕ್ಸ್ ಗಳ ಬಗ್ಗೆ ಅರ್ಥಮಾಡಿಕೊಳ್ಳುವುದು ಮತ್ತು ಉದ್ಯಮದಲ್ಲಿರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಇತ್ಯಾದಿ ವಿಚಾರಗಳಿದ್ದವು. ಉದ್ಯಮದ ಕಾರ್ಯಚಟುವಟಿಕೆಗಳು ವಿಸ್ತೃತವಾಗಿದ್ದವು. ಸೀಮನ್ಸ್, ಸೋನಿ ಎರಿಕ್ಸನ್, ಮೋಟೋರೋಲಾ ಮತ್ತು ಟೆಕ್ಸಾಸ್ ಇನ್ಸ್ಟ್ರಮೆಂಟ್ಸ್ ನಂತಹ ಅಂತರಾಷ್ಟ್ರೀಯ ಮಟ್ಟದ ಗ್ರಾಹಕರಿಗೆ ಇವರು ಕೆಲಸ ಮಾಡಿದ್ದಾರೆ. ಅಂತಿಮವಾಗಿ 2006ರಲ್ಲಿ ಇಂಪಲ್ಸ್ ಸಾಫ್ಟ್ ಸಂಸ್ಥೆಗೆ ಅನೇಕರು ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬಂದರು. ಅಲ್ಲದೇ, ಇಂಪಲ್ಸ್ ಸಾಫ್ಟ್ ಸಂಸ್ಥೆಯನ್ನು ಎಸ್‌ಐಆರ್‌ಎಫ್‌ ಎಂಬ ಸಂಸ್ಥೆ ಸ್ವಾಧೀನ ಪಡಿಸಿಕೊಂಡಿತು.

ಇಂಪಲ್ಸ್ ಸಾಫ್ಟ್ ಸಂಸ್ಥೆಯನ್ನು ಕಟ್ಟುವಾಗ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾಗಿ ಶ್ರೀವಿದ್ಯಾ ಹೇಳಿಕೊಳ್ಳುತ್ತಾರೆ. ಅವರ ಪ್ರಕಾರ ಹೇಳುವುದಾದರೆ ತಾಂತ್ರಿಕ ವ್ಯತ್ಯಾಸಗಳನ್ನು ಅರಿತುಕೊಳ್ಳುವುದಲ್ಲದೇ ಅವರು ಉದ್ಯಮದ ಹಲವು ಆಯಾಮಗಳನ್ನು ಅಂದರೆ ಡೆಲಿವರಿಂಗ್ ಸೊಲ್ಯುಷನ್‌ಗಳ ಬಗ್ಗೆ ಗಮನಹರಿಸಬಲ್ಲ ಉತ್ತಮ ತಂತ್ರಜ್ಞರ ತಂಡವನ್ನು ಕಟ್ಟುವುದು, ಉದ್ಯಮದ ಮಾದರಿಯನ್ನು ಅಳೆಯುವುದು ಮತ್ತು ಮಾರುಕಟ್ಟೆಯಲ್ಲಿ ಯಶಸ್ವಿ ಉತ್ಪನ್ನ ನಿರ್ಮಿಸುವಲ್ಲಿ ತಾಂತ್ರಿಕ ಡಿಫರೆನ್ಶಿಯೇಟರ್ ಗಳ ಪ್ರಾಮುಖ್ಯತೆಯನ್ನು ಗುರುತಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಅರಿತುಕೊಂಡರು.

ಒಮ್ಮೆ ಉದ್ಯಮಿಯಾದಾತ ಯಾವಾಗಲೂ ಉದ್ಯಮಿಯೇ ಆಗಿರುತ್ತಾನೆ

ಇಂಪಲ್ಸ್ ಸಾಫ್ಟ್ ಸಂಸ್ಥೆ ಸ್ವಾಧೀನಕ್ಕೊಳಪಟ್ಟ ನಂತರ ಈ ತಂಡಕ್ಕೆ ಮತ್ತೆ ಹೊಸತೊಂದನ್ನು ಆರಂಭಿಸುವ ಬಯಕೆ ತೀವ್ರವಾಗತೊಡಗಿತು. ಹೀಗಾಗಿ ಅಮ್ಯಾಗಿ ಎಂಬ ಸಂಸ್ಥೆಯನ್ನು ಮೂರು ಮೂಲಭೂತ ತತ್ವಗಳ ಆಧಾರದ ಮೇಲೆ ನಿರ್ಮಿಸಲು ನಿರ್ಧರಿಸಿದರು.

  • 1) ಭಾರತದಲ್ಲಿ ಟೆಕ್ನಾಲಜಿಕಲ್ ಸೊಲ್ಯುಷನ್‌ಗಳನ್ನು ವಿತರಿಸುವುದು- – ಇಂಪಲ್ಸ್ ಸಾಫ್ಟ್ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದ ಗ್ರಾಹಕರಿಗೆ ಸೇವೆ ಒದಗಿಸಲು ಪರವಾನಿಗೆ ಪಡೆದಿತ್ತು.
  • 2) ಕ್ರಾಂತಿ ಮೂಡಿಸುವ ನಿಟ್ಟಿನಲ್ಲಿ ಉದ್ಯಮ ಮಾಡುವುದು
  • 3) ಭಾರತದ ಹೊರಗೆ ಸಹ ಬಿಲಿಯನ್ ಡಾಲರ್ ಹೂಡಿಕೆಯ ಉದ್ಯಮ ನಿರ್ಮಿಸುವುದು

ಮಾಧ್ಯಮ ತಂತ್ರಜ್ಞಾನಗಳ ಪ್ರಮಾಣವನ್ನು ತಿಳಿದುಕೊಂಡ ಒಂದು ಸಂಸ್ಥೆಯಾಗಿ ಇಲ್ಲಿ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಸವಾಲುಗಳನ್ನು ಎದುರಿಸುವುದು ಸಹ ಆಸಕ್ತಿದಾಯಕ ವಿಚಾರವಾಗಿರುತ್ತದೆ ಎನ್ನುತ್ತಾರೆ ಶ್ರೀವಿದ್ಯಾ. ಇಲ್ಲಿ ಪ್ರಸಾರ ಮಾಧ್ಯಮದ ವಿತರಣೆಯೇ ಉದ್ಯಮದ ಹೃದಯವಾಗಿರುತ್ತದೆ. ಅಮ್ಯಾಗಿಯ ಸಾಫ್ಟ್ ವೇರ್ ಸೊಲ್ಯುಷನ್‌ಗಳು ಪ್ರತಿದಿನ ಮಿಲಿಯನ್‌ಗಟ್ಟಲೆ ಜನರನ್ನು ತಲುಪುತ್ತಿವೆ. ಹೀಗಾಗಿ ನಮ್ಮ ಸಾಫ್ಟ್ ವೇರ್ ಸೊಲ್ಯುಷನ್‌ಗಳಿಂದ ಶೇ.100ರಷ್ಟು ಸಮಸ್ಯೆಗಳ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನು ನೀಡುವ ಅವಶ್ಯಕತೆ ಇರುತ್ತದೆ. ಇದಕ್ಕಾಗಿ 24/7 ಕೆಲಸ ಮಾಡಬೇಕಾಗುತ್ತದೆ.

image


ಮಹಿಳಾ ಉದ್ಯಮಿಗಳು ಎದುರಿಸುವ ಸವಾಲುಗಳು

ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಶ್ರೀವಿದ್ಯಾ ಹೇಳಿಕೊಳ್ಳುತ್ತಾರೆ. ಬಹುವಿಧದ ಕಾರ್ಯಗಳನ್ನು ಮಾಡುವುದು ಮತ್ತು ಸಮಯ ನಿರ್ವಹಣೆ ಅವರಿಗೆ ತುಂಬಾ ಸಮಸ್ಯೆ ಎದುರಾಗಿತ್ತು. ಅಮ್ಯಾಗಿ ಸಂಸ್ಥೆಯ ಆರೋಗ್ಯಕರವಾಗಿ ಬೆಳೆಯಲು ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಎರಡಕ್ಕೂ ಅವರು ಸಮಯವನ್ನು ಮೀಸಲಿಡಬೇಕಾಗಿತ್ತು. ಇದು ಅವರಿಗೆ ಸಾಕಷ್ಟು ಕಷ್ಟವಾಗಿತ್ತು. ಉದ್ಯಮದಲ್ಲಿ ಮಹಿಳೆಯೊಬ್ಬಳ ಪಾತ್ರ ಏನು ಎಂಬುದನ್ನು ತಿಳಿದುಕೊಳ್ಳುವಲ್ಲಿ, ಒಪ್ಪಿಕೊಳ್ಳುವಲ್ಲಿ ಜನ ವಿಫಲರಾಗುತ್ತಾರೆ. ಆದರೆ ಯಾವಾಗ ಮಹಿಳೆಯ ಪಾತ್ರ, ಜವಾಬ್ದಾರಿಯ ಕುರಿತು ಜನರು ಅರ್ಥಮಾಡಿಕೊಳ್ಳುತ್ತಾರೋ ಆಗ ವಿಚಾರಗಳು ಧನಾತ್ಮಕವಾಗಿ ಬದಲಾಗುತ್ತದೆ. ಇಂತಹ ಅನೇಕ ನಿದರ್ಶನಗಳು ನಮ್ಮ ಮುಂದಿವೆ ಎನ್ನುತ್ತಾರೆ ಶ್ರೀವಿದ್ಯಾ. ಆಸಕ್ತಿದಾಯಕ ಮತ್ತು ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸುತ್ತಾ ಶ್ರೀವಿದ್ಯಾ ಅವರು ತಮ್ಮ ಕೆಲಸದಿಂದ ತಮಗೆ ಸಾಕಷ್ಟು ಸಂತೋಷ ದೊರಕುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಅಮ್ಯಾಗಿಗಾಗಿ ಸಾಫ್ಟ್ ವೇರ್ ಸೊಲ್ಯುಷನ್‌ಗಳನ್ನು ನಿರ್ಮಿಸುವುದರ ಕುರಿತು ತಮಗೆ ಸಾಕಷ್ಟು ಹೆಮ್ಮೆ ಇದೆ ಎಂದು ಹೇಳಿಕೊಳ್ಳುವ ಶ್ರೀವಿದ್ಯಾ ತಮ್ಮ ತಂಡದ ಕುರಿತು ಹೆಮ್ಮೆ ಪಡುತ್ತಾರೆ.

ಇಂಜಿನಿಯರಿಂಗ್ ಅನ್ನು ಇಷ್ಟಪಡುವ ಮತ್ತು ತಂತ್ರಜ್ಞಾನದ ಕುರಿತು ಆಸಕ್ತಿಯಿರುವ ಮಹಿಳೆಯರಿಗೆ ಧೈರ್ಯವಾಗಿ ಸಮಸ್ಯೆಗಳನ್ನೆದುರಿಸಿ ಮತ್ತು ಒತ್ತಡಕ್ಕೆ ಎಂದೂ ಒಳಗಾಗಬೇಡಿ ಎಂಬ ಸಲಹೆ ನೀಡುತ್ತಾರೆ ಶ್ರೀವಿದ್ಯಾ. ಮಹಿಳೆಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ಅವರ ಕುಟುಂಬದ ಒತ್ತಡವನ್ನು ನಿರ್ವಹಿಸುವಲ್ಲಿ, ಆಫೀಸ್‌ನಲ್ಲಿ ಮ್ಯಾನೇಜರ್‌ಗಳ ಮತ್ತು ಕೆಲಸದ ಅಸೈನ್‌ಮೆಂಟ್‌ಗಳ ವಿಚಾರದಲ್ಲಿರುವ ಒತ್ತಡವನ್ನು ನಿರ್ವಹಿಸುವಲ್ಲಿ ಅವರು ವಿಫಲರಾಗುವುದೇ ಕಾರಣ. ತಾಳ್ಮೆ ಮತ್ತು ಪರಿಶ್ರಮದಿಂದ ಕಾರ್ಯನಿರ್ವಹಿಸಿದಲ್ಲಿ ಇಂತಹ ಸಮಸ್ಯೆಗಳೆಲ್ಲಾ ಸುಲಭವಾಗಿ ಪರಿಹಾರವಾಗುತ್ತದೆ ಎನ್ನುತ್ತಾರೆ ಶ್ರೀವಿದ್ಯಾ.

ಮಹಿಳೆಯರು ತಮಗೆ ತಾವೇ ಏಕೆ ನಾನಿದನ್ನು ಮಾಡುತ್ತಿದ್ದೇನೆ?, ನಾನೆಲ್ಲಿದ್ದೇನೆ?, ನಾನು ಮಾಡುತ್ತಿರುವ ಕೆಲಸದಿಂದ ನನಗೆ ಸಂತೋಷವಾಗುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಇದಕ್ಕೆಲ್ಲಾ ಉತ್ತರ ದೊರಕಿದಾಗ, ನಿಮ್ಮ ಕೆಲಸದಿಂದ ನಿಮಗೆ ಸಂತೋಷ ದೊರಕಿದಾಗ ನಿಮಗೆ ನಿಮ್ಮ ಸ್ಥಾನ ಲಭಿಸುತ್ತದೆ. ನಂತರ ಕೆಲಸ ಕೆಲಸವಾಗಿ ಮಾತ್ರ ಇರುವುದಿಲ್ಲ. ಅದೇ ಜೀವನವಾಗಿ ಬಿಡುತ್ತದೆ ಎನ್ನುತ್ತಾ ಮಾತು ಮುಗಿಸಿದರು ಶ್ರೀವಿದ್ಯಾ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ವಿಶ್ವಾಸ್​​​